ಮದ್ಯ ಜೀವನಾವಶ್ಯಕ ವಸ್ತು ಹೌದಾ ಅಲ್ವಾ ? । ಸಂಪಾದಕೀಯ

ಡ್ರಿಂಕ್ಸ್ ಜೀವನಾವಶ್ಯಕ ವಸ್ತುವಲ್ಲ. ಆದುದರಿಂದ ದೇಶದಲ್ಲಿ ಲಾಕ್ ಡೌನ್ ಇರುವುದರಿಂದ ಅದರ ಅಂಗಡಿ ತೆರೆಯಬೇಕಾಗಿಲ್ಲ ಎಂಬುದು ಸಾಮಾನ್ಯವಾದ ಅಭಿಪ್ರಾಯ. ಆದರೆ ಈಗ ಒಂದು ಬಾರಿ ಯೋಚಿಸಿ : ಸರಕಾರವೇ ಮದ್ಯದಂಗಡಿಗೆ ಲೈಸನ್ಸ್ ಕೊಟ್ಟು ಅದನ್ನು ಮಾರಾಟ ಮಾಡಿ, ಜನರಿಗೆ ಕುಡಿಯಲು ಪ್ರೇರೇಪಿಸುತ್ತಿದೆ. ವ್ಯಕ್ತಿಗೆ ಒಂದು ಬಾರಿ ಈ ಅಭ್ಯಾಸ ಆದರೆ, ಆತ ಅದಕ್ಕೆ ದಾಸನಾದರೆ, ಒಮ್ಮೆಲೇ ಆ ಅಭ್ಯಾಸವನ್ನು ನಿಲ್ಲಿಸಲು ಆಗುವುದಿಲ್ಲ. ” ಏನು ಕುಡಿಯದಿದ್ದರೆ ಸಾಯ್ತಾರ ?” ಅಂತ ಕುಡುಕರನ್ನು ನಾವು ಬಯ್ಯುವುದಿದೆ. ಸಾಯಲೂ ಬಹುದು !

ಸಾವು ಎರಡು ರೀತಿ ಸಂಭವಿಸಬಹುದು. ಒಂದೇ ಬಾರಿ ಕುಡಿತ ನಿಲ್ಲಿಸಿದರೆ, ಮದ್ಯವ್ಯಸನಿ ದೈಹಿಕವಾಗಿ ಕಂಪಿಸುತ್ತಾನೆ. ಕೈ ನಡುಗುತ್ತದೆ. ಕೆಲವು ಸಂದರ್ಭಗಳಲ್ಲಿ ಸಾವು ಕೂಡಾ ಸಂಭವಿಸಬಹುದು. ಮಾನಸಿಕವಾಗಿ ಸ್ಥಿಮಿತ ಕಳಕೊಂಡ ಆತ ಆತ್ಮಹತ್ಯೆಗೆ ಕೂಡಾ ಮುಂದಾಗಬಹುದು. ಈಗ ಆಗುತ್ತಿರುವುದು ಅದೇ. ರಾಜ್ಯದಲ್ಲಿ ಒಟ್ಟು ಮೂರು ಸಾವು ಈಗಾಗಲೇ ಆಗಿದೆ. ದಕ್ಷಿಣ ಕನ್ನಡದಲ್ಲಿ ಎರಡು ಸಾವು ಕುಡಿಯಲು ಮದ್ಯದ ಮಾರಾಟ ಉಂಟಾದ ಡಿಪ್ರೆಶನ್ ನ ಕಾರಣಕ್ಕೆ ನಡೆದಿದೆ. ಇಷ್ಟೇ ಅಲ್ಲದೆ ಕೌಟುಂಬಿಕ ಜಗಳಗಳು ಜಾಸ್ತಿಯಾಗುತ್ತವೆ, ಕುಡಿಯಲು ಮದ್ಯ ಇಲ್ಲದ ವ್ಯಕ್ತಿ ಮಾನಸಿಕವಾಗಿ ವ್ಯಗ್ರನಾಗಿ ಹೆಂಗಸರ ಮಕ್ಕಳ ಹಿಂಸೆಗೂ ಕಾರಣವಾಗಬಹುದು.

ಕೊರೊನಾ ವೈರಸ್ ಭೀತಿ ಹಿನ್ನೆಲೆ ಭಾರತ 21 ದಿನಗಳ ಕಾಲ ಲಾಕ್‍ಡೌನ್ ಆದ ಪರಿಣಾಮ ಮದ್ಯದ ಅಂಗಡಿಗಲೆಲ್ಲ ಬಂದ್ ಆಗಿವೆ. ಆದರೆ ಎಣ್ಣೆ ಅಭ್ಯಾಸ ಮಾಡಿಕೊಂಡವರು ಈಗ ಎಣ್ಣೆ ಸಿಗದೇ ಕಂಗಾಲಾಗಿದ್ದು ಅವರ ಕಥೆ ಹೇಳತೀರದಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಅವರು ಕೂಡಾ ಕುಡುಕರ ಪರ ಮಾತಾಡಿದ್ದಾರೆ. ನಿಜಕ್ಕೂ ಅದು ಕುಡುಕರ ಪರ ಅಂತ ಅಲ್ಲ. ಅದು ಕಾಮನ್ ಸೆನ್ಸ್ ನ ಮಾತು.

ಎಂದೂ ಕುಡಿಯದ ನಿಮ್ಮಂತ ಒಳ್ಳೆಯವರಿಗೆ (?!) ಮದ್ಯ ಅನ್ನುವುದೊಂದು ವಿಷ. ಹೇಸಿಗೆ. ಆದರೆ ಕುಡಿಯುವ ವ್ಯಕ್ತಿಗಳಿಗೆ, ಅದೊಂದು ಎಂಜೋಯ್ಮೆಂಟ್. ನಿಮಗೆ ದಿನಸಿ, ಹಾಲು, ತರಕಾರಿ ಹಣ್ಣು ಜೀವನಾವಶ್ಯಕವಾಗಿದ್ದರೆ, ಆತನಿಗೆ, ನಿಮ್ಮ ಈ ಲಿಸ್ಟಿನ ಜತೆಗೆ ಮತ್ತೊಂದು ಬಣ್ಣದ ನೀರೂ ಬೇಕು. ಆತನ ಜೀವನಾವಶ್ಯಕ ಪಟ್ಟಿಯಲ್ಲಿ ನಿಮ್ಮದಕ್ಕಿಂತ ಮತ್ತೊಂದು ಐಟಂ ಜಾಸ್ತಿ ಇದೆ ! ಕುಡಿಯುವವನು ಅದನ್ನು ರೂಡಿ ಮಾಡಿಕೊಂಡಿದ್ದಾನೆ. ಅವನಿಗದು ಬೇಕು. ಅದೇ ಒಂದು ವೇಳೆ ಡ್ರಗ್ ಗೆ ವ್ಯಕ್ತಿಯೊಬ್ಬ ದಾಸನಾಗಿದ್ದರೆ, ಆಗಿನ ಸನ್ನಿವೇಶ ಬೇರೆ. ಆತ ಅಭ್ಯಾಸ ಮಾಡಿಕೊಂಡಿರುವುದು ಕಾನೂನು ಬಾಹಿರ ವಸ್ತುವನ್ನು !

ಪ್ರತಿ ರಾಜ್ಯದಲ್ಲಿ ಹೆಚ್ಚುಕಮ್ಮಿ ರಾಜ್ಯದ 15-20 ಪರ್ಸೆಂಟ್ ಆದಾಯವನ್ನು ಗಳಿಸಿಕೊಂಡು ರಾಜ್ಯದ ಬೊಕ್ಕಸಕ್ಕೆ ದುಡ್ಡು ಸೇರಿಸಿಕೊಳ್ಳುವ ಅಬಕಾರಿ ಇಲಾಖೆ ತನ್ನ ಗ್ರಾಹಕರಿಗಾಗಿ ಅಂಗಡಿ ತೆರೆಯಬೇಕಿತ್ತು. ತನ್ನ ಗ್ರಾಹಕರ ಹಿತರಕ್ಷಣೆ ಕಾಯಬೇಕಿತ್ತು. ಕುಡಿತ ಕೆಟ್ಟದ್ದು, ಒಳ್ಳೆಯದಲ್ಲ ಎನ್ನುವುದು ಬೇರೆ ಮಾತು. ಆದರೆ ಅಭ್ಯಾಸ ಮಾಡಿಸಿ, ಈಗ ಸಡನ್ನಾಗಿ ವಾರಗಟ್ಟಲೆ ಮದ್ಯ ಬಂದ್ ಮಾಡುವುದು ಒಳ್ಳೆಯದಲ್ಲ. ಇದು ಯೂಸ್ ಆಂಡ್ ಥ್ರೋ ಮೆಂಟಾಲಿಟಿ. ಕಸ್ಟಮರ್ ಸರ್ವೀಸ್ ದೃಷ್ಟಿಯಿಂದ ನೋಡಿದರೆ, ಅಬಕಾರಿ ಇಲಾಖೆ ಗಳಿಸುವ ಅಂಕಗಳು ಜೀರೋ. ಒಂದು ಇಲಾಖೆ, ತಾನು ಮಾರುವ ವಸ್ತುವಿನ ಮತ್ತು ಅದರ ಲಾಭದ ಆಚೆಗೂ ಕಾಮನ್ ಸೆನ್ಸ್ ಬಳಸಿ ಯೋಚಿಸಬೇಕು. ಸರಕಾರಕ್ಕೆ ದುಡ್ಡು ಮಾಡಲು ಅಬಕಾರಿ ಆದಾಯ ಬೇಕಂತೆ. ಈಗ ಬೇಡ ಅಂದರೆ ಹೇಗೆ ? ಒಂದೊಮ್ಮೆ ಡ್ರಿಂಕ್ಸ್ ನಿಂದ ಕೊರೋನಾ ಹರಡುತ್ತದೆ ಎಂದರೆ, ಆಗ ಟೋಟಲ್ ಬಂದ್ ಅನಿವಾರ್ಯ.

ಆಯನೂರು ಮಂಜುನಾಥ್ ಕುಡುಕರ ಪರವಾಗಿ ಬ್ಯಾಟ್

ಕುಡುಕರ ಸಮಸ್ಯೆಗಳ ಬಗ್ಗೆ ಮಾತನಾಡಲು ಧಮ್ ಬೇಕು. ಕುಡುಕರ ಪರವಾಗಿ ಮಾತನಾಡಿದರೆ, ಒಂಥರಾ ತಾತ್ಸಾರದಲ್ಲಿ ನೋಡುವ ಜನರಿರುವಾಗ ( ಸ್ವತಃ ಕುಡಿಯುವ ಅಕೇಶನಲ್ ಡ್ರಿಂಕರ್ಸ್ ಕೂಡ !!) ಆಯನೂರು ಮಂಜುನಾಥ್ ಅವರು ಬೋಲ್ಡ್ ಆಗಿ ಮಾತನಾಡಿದ್ದಾರೆ. ಶಿವಮೊಗ್ಗದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ಕೊರೊನಾ ವೈರಸ್ ಕುರಿತು ಜಿಲ್ಲಾಡಳಿತ ಕೈಗೊಂಡಿರು ಮುಂಜಾಗ್ರತಾ ಕ್ರಮದ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್ ಈಶ್ವರಪ್ಪ ನೇತೃತ್ವದಲ್ಲಿ ಸಭೆ ಕರೆಯಲಾಗಿತ್ತು. ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಆಯನೂರು ಮಂಜುನಾಥ್ ಅವರು, ಸಿ.ಎಲ್-2 ಅಂಗಡಿಗಳು ತೆರೆಯಲು ಸೂಚನೆ ಇದ್ದರೂ ಅವರು ತೆಗೆಯುತ್ತಿಲ್ಲ. ಇದರ ಪರಿಣಾಮ ಕುಡಿಯುವವರ ಮನೆಯಲ್ಲಿ ಸಮಸ್ಯೆಯಾಗಿದೆ ಎಂದು ಕೇಳಲ್ಪಟ್ಟಿದ್ದೇನೆ. ಎಣ್ಣೆ ಸಿಗದೇ ಪ್ರತಿದಿನ ಕುಡಿಯುವವರು ಹೇಗೇಗೋ ಆಡ್ತಿದ್ದಾರೆ ಎಂದು ಕುಡುಕರ ಸಮಸ್ಯೆ ಬಗ್ಗೆ ಮಾತನಾಡಿದರು.

ಕುಡುಕರ ಪರವಾಗಿ ರಿಷಿ ಕಪೂರ್ ಟ್ವೀಟ್

ಸರ್ಕಾರ ಪ್ರತಿ ಸಂಜೆ ಲೈಸನ್ಸ್ ಹೊಂದಿರುವ ಮದ್ಯದ ಮಳಿಗೆಗಳನ್ನು ತೆರೆಯಲು ಅನುಮತಿ ನೀಡಬೇಕು. ನೀವು ನನ್ನನ್ನು ತಪ್ಪು ತಿಳಿದುಕೊಳ್ಳಬೇಡಿ. ಜನರು ಮನೆಯಲ್ಲಿ ಡಿಪ್ರೆಶನ್ ಮತ್ತು ಗೊಂದಲಗಳ ನಡುವೆ ಬಂಧಿಯಾಗಿದ್ದಾರೆ. ಪೊಲೀಸ್, ವೈದ್ಯರು ಮತ್ತು ಜನರನ್ನು ಡಿಪ್ರೆಶನ್ ನಿಂದ ಮುಕ್ತಿಗೊಳಿಸಲು ಮದ್ಯದ ಅವಶ್ಯಕತೆ ಇದೆ. ನೀವು ಎಷ್ಟೇ ಬಂದ್ ಮಾಡಿದ್ರೂ ಬ್ಲಾಕ್ ನಲ್ಲಿ ಮದ್ಯ ಮಾರಾಟವಾಗುತ್ತಿದೆ. ಹಾಗಾಗಿ ಸರ್ಕಾರವೇ ಪ್ರತಿದಿನ ಸಂಜೆ ಮದ್ಯದಂಗಗಡಿಗಳಿಗೆ ವ್ಯಾಪಾರ ನಡೆಸಲು ಅನುಮತಿ ನೀಡಬೇಕು…..ನೋ ಹಿಪೋಕ್ರಸಿ ಎಂದು ಓಪನ್ ಆಗಿ ಹೇಳಿಕೊಂಡಿದ್ದಾರೆ.

ಸುದರ್ಶನ್ ಬಿ.ಪ್ರವೀಣ್, ಬೆಳಾಲು । 81478 20538

Leave A Reply

Your email address will not be published.