ಷೇರು ಮಾರುಕಟ್ಟೆಯಲ್ಲಿ ರಕ್ತಪಾತ | ಸೆನ್ಸೆಕ್ಸ್ ಮತ್ತು ನಿಫ್ಟಿ ತಲಾ 10 % ಕುಸಿತ !

ಷೇರು ಮಾರುಕಟ್ಟೆಯಲ್ಲಿ ರಕ್ತಪಾತವಾಗಿದೆ. ಸೆನ್ಸೆಕ್ಸ್ ಮತ್ತು ನಿಫ್ಟಿ ತಲಾ 10 % ಗಿಂತಲೂ ಅಧಿಕವಾಗಿ ಬಿದ್ದು ಹೋಗಿದೆ. ಕರಡಿ ಕುಣಿತಕ್ಕೆ ಜನರ ದುಡ್ಡು ಜರ್ಜರಿತ. ಮಾರ್ಕೆಟ್ ಬೀಳುವ ತೀವ್ರತೆಗೆ 45 ನಿಮಿಷ ಶೇರ್ ಟ್ರೇಡಿಂಗ್ ಆನ್ ಬಂದ್ ಮಾಡಲಾಗಿದೆ. ಇಂತಹಾ ಸನ್ನಿವೇಶದಲ್ಲಿ ವಿದೇಶೀ ಸಾಂಸ್ಥಿಕ ಹೂಡಿಕೆದಾರರು ದುಡ್ಡು ಬಾಚಿಕೊಂಡು ಹೋಗುತ್ತಿದ್ದಾರೆ.

ಹೀಗೇ ಆಗುತ್ತದೆ, ಇವತ್ತಿನ ಪ್ರಕ್ಷುಬ್ಧ ಪರಿಸ್ಥಿತಿಯಲ್ಲಿ ಸ್ಟಾಕ್ ಮಾರ್ಕೆಟ್ ನಲ್ಲಿ ಟ್ರೇಡಿಂಗ್ ಮಾಡುವ ಹುಚ್ಚುತನ ಬೇಡ ! ಎಂಬ ಲೇಖನ ವಾರದ ಹಿಂದಷ್ಟೇ ನಾವು ಪ್ರಕಟಿಸಿದ್ದೆವು. ಆ ಪೂರ್ತಿ ಲೇಖನ ಕೆಳಗಿದೆ ಓದಿ.

ಇವತ್ತಿನ ಪ್ರಕ್ಷುಬ್ಧ ಪರಿಸ್ಥಿತಿಯಲ್ಲಿ ಸ್ಟಾಕ್ ಮಾರ್ಕೆಟ್ ನಲ್ಲಿ ಟ್ರೇಡಿಂಗ್ ಮಾಡುವ ಹುಚ್ಚುತನ ಬೇಡ !

ಶೇರ್ ಮಾರುಕಟ್ಟೆ ದಿನಕ್ಕೊಂದು ತಿರುವು ಪಡೆದುಕೊಂಡು ಏರಿಳಿತದ ಹಾದಿಯಲ್ಲಿ ಸಾಗಿದೆ.
ಸಾಮಾನ್ಯ ರಿಟೇಲ್ ವಹಿವಾಟುದಾರ ತನ್ನ ಸಮಸ್ತ ಸಂಪತ್ತನ್ನೂ ಕಳೆದುಕೊಂಡು ಸದ್ಯದಲ್ಲೇ ಹಾಕಿಕೊಳ್ಳಲು ಚಡ್ಡಿ ಕೂಡ ಇಲ್ಲದಂತೆ ಬೆತ್ತಲಾಗಿ ನಿಲ್ಲಬೇಕಾಗುತ್ತದೆ. ಬಹುಶ: ಈಗಾಗಲೇ ಆತ ಎಲ್ಲ ಬಣ್ಣ ಕಳೆದುಕೊಂಡಿರುವ ಸಾಧ್ಯತೆ ಇದೆ.

ಯಾಕೆಂದರೆ ಇಂದು ಷೇರು ಮಾರುಕಟ್ಟೆ. ಅಲ್ಲಿ ದುಡ್ಡಿನದೇ ಆಟ. ದುಡ್ಡು ಇದ್ದವ ಈ ಮಾರ್ಕೆಟ್ ಅನ್ನು ನಿಯಂತ್ರಿಸುತ್ತಾನೆ. ದುಡ್ಡಿದ್ದರೆ ಸಾಲದು, ಅದಕ್ಕಿಂತ ಮುಖ್ಯವಾಗಿ ಬೇಕಾದುದು ಶೇರು ಪೇಟೆಯ ಬಗ್ಗೆ ಸಂಪೂರ್ಣ ಮಾಹಿತಿ, ತಾನು ತೆಗೆದುಕೊಳ್ಳಲಿರುವ ಸ್ಕ್ರಿಪ್ ಬಗ್ಗೆ ( ಕಂಪನಿ) ಯ ವಹಿವಾಟಿನ ಬಗ್ಗೆ ತಿಳುವಳಿಕೆ. ಮತ್ತು ಮುಖ್ಯವಾಗಿ, ಮನಸ್ಸನ್ನು ಉದ್ವೇಗಕ್ಕೆ ಬೀಳಿಸಿಕೊಳ್ಳದ ಮಹಾಮುನಿಯ ತಾಳ್ಮೆ !

ಒಳ್ಳೆಯ ಕಂಪನಿ ನೋಡಿ ಹೂಡಿಕೆ ಮಾಡಿ. ದೀರ್ಘಾವಧಿ ಹೂಡಿಕೆಯಲ್ಲಿ ತೊಡಗಿ ಇವತ್ತು ದಶ ಶತ ಕೋಟಿ ಗಳಿಸಿಕೊಂಡವರಿದ್ದಾರೆ. ಆ ದಿನ 1993 ಯಲ್ಲಿ ₹ 10000 ಮಾಡಿದ ಹೂಡಿಕೆದಾರ 2018 ರಲ್ಲಿ ಆತ 6.44 ಕೋಟ್ಯಾಧಿಪತಿ ! ಅಪರಿಮಿತ ಸಂಪತ್ತು ಗಳಿಸಲು ಶೇರುಪೇಟೆ ಒಂದು ಉತ್ತಮ ಮಾಧ್ಯಮ.
ಆದರೆ ನಮ್ಮ ಮಧ್ಯಮ ವರ್ಗದವರಲ್ಲಿ ಷೇರು ಮಾರುಕಟ್ಟೆಯ ಬಗ್ಗೆ ಜ್ಞಾನದ ಕೊರತೆಯೋ, ಡಿಮ್ಯಾಟ್ ಅಕೌಂಟ್ ನಲ್ಲಿ 5000 ದಿಂದ 10000 ಇಟ್ಟುಕೊಂಡು ದಿನಕ್ಕೆ 5000 ಮಾಡುತ್ತೇನೆ ಎಂಬ ಹುಂಬ ವಿಶ್ವಾಸವಾ ? ಅಥವಾ ನಮ್ಮ ದುಡ್ಡು 5000 ಇದ್ದರೆ, ಅದಕ್ಕೆ ಇನ್ನೂ 20% ದುಡ್ಡನ್ನು ಏಕಪೋಷರ್ ಅಂತ ಟ್ರೇಡಿಂಗ್ ಮಾಡಲು ಟ್ರೇಡಿಂಗ್ ಕಂಪನಿ ಕೊಡುತ್ತದೆ. ಅದೃಷ್ಟ ನೆಟ್ಟಗಿದ್ದರೆ, ಒಂದೆರಡು ಸಾವಿರ ರೂಪಾಯಿ ದುಡಿಯಬಹುದು. ಉದಾಹರಣೆಗೆ ನೂರು ರೂಪಾಯಿ ಮುಖಬೆಲೆಯ 1000 ಶೇರುಗಳನ್ನು ಟ್ರೇಡಿಂಗ್ ಮಾಡುವ ವ್ಯಕ್ತಿಯೊಬ್ಬ ಕೊಂಡುಕೊಂಡ ಅಂದುಕೊಳ್ಳಿ. ಒಟ್ಟು ಹೂಡಿಕೆ 1 ಲಕ್ಷ ರೂಪಾಯಿ. ನಿಮ್ಮ ಬಳಿ 5000 ನೇ ಇರುವುದು. ಟ್ರೇಡಿಂಗ್ ಕಂಪನಿ ನಿಮಗೆ 95000 ರೂಪಾಯಿ ಆ ದಿನಕ್ಕೆ ಆಡಲು ಅವಕಾಶ ಕೊಡುತ್ತದೆ. ನೀವು ನೂರು ರೂಪಾಯಿಗೆ ಕೊಂಡ ಶೇರು 102 ರೂಪಾಯಿಗೆ ಮಧ್ಯಾಹ್ನದ ಹೊತ್ತಿಗೆ ರೇಟ್ ಬಂದರೆ, ನೀವು 2000 ಗಳಿಸುತ್ತೀರಿ. ಅದರಲ್ಲಿ ಬ್ರೋಕರೇಜು ಮತ್ತು ಹತ್ತಾರು ಸ್ಟೇಟ್- ಸೆಂಟ್ರಲ್ ಟ್ಯಾಕ್ಸ್, ಸೆಸ್ ಎಲ್ಲಾ ಕಳೆದು 1500 ರೂಪಾಯಿ ಸಿಕ್ಕೀತು.
ಅದೇ ಎರಡು ರೂಪಾಯಿ ಕಮ್ಮಿ ಆದರೆ ನಿಮಗೆ ಆಗುವ ಲಾಸು 2500 ರೂಪಾಯಿ. ( 2000 ಪ್ಲಸ್ 500 ಟ್ಯಾಕ್ಸ್ ). ಅಂದರೆ, ಬಂದರೆ 1500 ಹೋದರೆ 2500. ರಿಸ್ಕ್ -ರಿವಾರ್ಡ್ ಅನಾಲಿಸಿಸ್ ನಲ್ಲಿ ರಿವಾರ್ಡ್ ಕಮ್ಮಿ. ಆದ್ದರಿಂದ ಇಲ್ಲಿ ದಿನವಹಿ ಟ್ರೇಡಿಂಗ್ ನಲ್ಲಿ ಕಳಕೊಳ್ಳುವುದೆ ಹೆಚ್ಚು.

ಅಷ್ಟೇ ಅಲ್ಲದೆ, ನಾವು ಕೊಂಡ ಸ್ಟಾಕ್ 2 ರೂಪಾಯಿ ಮೇಲೆ ಹೋದರೆ ಸಾಕು : ಆಗ ನಮಗೆ ತಾಳ್ಮೆ ಇರೋದಿಲ್ಲ. ಇನ್ನೊಂದಷ್ಟು ಮೇಲೆ ಹೋಗುವ ಟ್ರೆಂಡ್ ಇದ್ದರೂ ಪ್ರಾಫಿಟ್ ಬುಕ್ ಮಾಡುತ್ತೇವೆ. ಅದೇ ಕೊಂಡ ಸ್ಟಾಕ್ ನ ರೇಟು ಕಮ್ಮಿ ಆಗಿ ಮೈಯಿಂದ ಹೋದ ಹಾಗೆ ಹೋಗುತ್ತಿದ್ದ ಲಾಸ್ ಕಟ್ ಮಾಡಿ ಹೊರ ಬರಲು ಮನಸು ಒಪ್ಪೋದಿಲ್ಲ. ಸ್ಟಾಪ್ ಲಾಸ್ ಹಾಕೋದಿಲ್ಲ. ಹಾಕಿದ ಸ್ಟಾಪ್ ಲಾಸ್ ಅನ್ನು ಪದೇ ಪದೇ ಬದಲಿಸುತ್ತೇವೆ. ಕಡೆಗೆ ಹಾಕಿದ 5000 ಮತ್ತು ಅದರ ಮೇಲೆ ಮತ್ತೊಂದಷ್ಟು ದುಡ್ಡು ಹಾಕಿ ಮನೆಗೆ ಬರುವಾಗ ಇರುವುದು ದುಡ್ಡು ಹೋದ ಟೆನ್ಷನ್ ಮತ್ತು ನಾಳೆ ಮತ್ತೆ ದುಡ್ಡು ಮಾಡಿಯೇ ಮಾಡುತ್ತೇನೆ ಎಂಬ ಜೂಜುಗಾರನ ಆಗದ ಹೋಗದ ಹಠ.

ಟ್ರೇಡಿಂಗ್ ಮಾಡಬಹುದು. ಆದರೆ ಇಂತಹ ಕ್ಷುದ್ರ ಪರಿಸ್ಥಿತಿಯಲ್ಲಿ ಟ್ರೇಡಿಂಗ್ ಬೇಡವೇ ಬೇಡ. ಕಳೆದ ವಾರವಿಡಿ ಬಿದ್ದು ಹೋಗಿದ್ದ ಮಾರ್ಕೆಟ್ ಇವತ್ತು ಮೇಲೆ ಹೋಗಿದೆ. ಅದೇನೇ ಆಗಲಿ, ನೀವು ಕೊರೊನಾ ಕಾರಣ ನೀಡಿ ಟ್ರೇಡಿಂಗ್ ಗೆ ರಜ ಹಾಕಿ. ಕಷ್ಟ ಪಟ್ಟು ಗಳಿಸಿದ ದುಡ್ಡಲ್ಲಿ ಜೂಜು ಬೇಡ. ನಾನು ಎಂತಹಾ ಮಾರ್ಕೆಟ್ ನಲ್ಲಿಯೂ ದುಡ್ಡು ಮಾಡುತ್ತೇನೆಂದು ನೀವು ಹೇಳಿದರೆ, ಅಥವಾ ಅಂತವರು ನಿಮ್ಮ ಗಮನಕ್ಕೆ ಬಂದಿದ್ದರೆ ಅವರನ್ನು ನಮಗೂ ಪರಿಚಯಿಸಿ. ಅಂತವರನ್ನು ನಾವಿನ್ನೂ ಕಂಡಿಲ್ಲ.

Leave A Reply

Your email address will not be published.