ಬ್ಯಾಂಕ್ ಕಸ್ಟಮರ್ ಕೇರ್ ನಿಂದ ಎಂದು ಕರೆ । ಪುತ್ತೂರಿನ ಒಬ್ಬರಿಗೆ 69 ಸಾವಿರದ ಬರೆ !

ಪುತ್ತೂರು : ಮೊನ್ನೆ ಕುದ್ಮಾರು ನಿವಾಸಿ ಶುಭ ಕಿರಣ್ ಪಿ. ಅವರ ಮೊಬೈಲಿಗೆ ಕರೆಯೊಂದು ಬಂದಿತ್ತು. ಅತ್ತ ಕಡೆಯಿಂದ ಕರೆ ಮಾಡಿದ ವ್ಯಕ್ತಿ ” ಸರ್ ಜೀ, ಹಂ ಬ್ಯಾಂಕ್ ಆಫ್ ಬರೋಡಾ ಸೇ ಕಾಲ್ ಕರ್ ರಹಾ ಹೈ ” ಎಂದು ಮಾತು ಪೀಠಿಕೆ ಶುರು ಮಾಡಿದ್ದ.

” ನಾವು ಬ್ಯಾಂಕ್ ಕಸ್ಟಮರ್ ಕೇರ್‌ನಿಂದ ಕರೆ ಮಾಡುತ್ತಿದ್ದು ವಿಜಯಾ ಬ್ಯಾಂಕ್ ಮುಂದಕ್ಕೆ ಬ್ಯಾಂಕ್ ಆಫ್ ಬರೋಡ ಬ್ಯಾಂಕ್ ಜೊತೆ ಲಿಂಕ್ ಆಗಲಿರುವುದರಿಂದ ನಿಮ್ಮ ಅಕೌಂಟನ್ನು ರಿನೀವಲ್ ಮಾಡಲು ಕಾಲ್ ಮಾಡುತ್ತಿದ್ದೇವೆ ” ಎಂದು ಕರೆ ಮಾಡಿದ್ದ ವ್ಯಕ್ತಿ ಎಂಥವರು ಕೂಡ ನಂಬುವಂತೆ ಕಾನ್ಫಿಡೆನ್ಸ್ ನಲ್ಲಿ ಹೇಳಿದ್ದ.

” ಈಗ ನಾವು ನಿಮ್ಮ ಮೊಬೈಲ್‌ಗೆ ಒಟಿಪಿ ಒಂದನ್ನು ಕಳುಹಿಸಿ ಕೊಡುತ್ತೇವೆ. ಅದನ್ನು ನಮಗೆ ತಿಳಿಸಿದರೆ ನಾವು ನಿಮ್ಮ ಅಕೌಂಟ್ ಅನ್ನು ರಿನೇವಲ್ ಮಾಡುತ್ತೇವೆ ” ಎಂದು ಆತ ಹೇಳಿದ್ದನು.

ಕರೆ ಮಾಡಿದ ವ್ಯಕ್ತಿಯನ್ನು ನಂಬಿದ ಶುಭ ಕಿರಣ್ ಅವರು ತಮ್ಮ ಮೊಬೈಲಿಗೆ ಬಂದ ಓಟಿಪಿ ನಂಬರ್ ಅನ್ನು ಕರೆ ಮಾಡಿದ ವ್ಯಕ್ತಿ ಗೆ ತಿಳಿಸಿದರು. ನಿಮಿಷಗಳಲ್ಲಿ ಅವರ ಅಕೌಂಟಿನಿಂದ ಹಣ ಸೋರಿ ಹೋಗಲು ಪ್ರಾರಂಭವಾಯಿತು. ಹಂತಹಂತವಾಗಿ ಅವರ ವಿಜಯ ಬ್ಯಾಂಕ್ ಅಕೌಂಟಿನಿಂದ ದುಡ್ಡು ಹೋಗುತ್ತಿರುವ ಮೆಸೇಜು ಅವರ ಮೊಬೈಲಿಗೆ  ಬರುತ್ತಿತ್ತು.

ತಕ್ಷಣ ಗಾಬರಿಗೊಂಡ ಶುಭ ಕಿರಣ್ ಅವರು ತಾನು ಬ್ಯಾಂಕ್ ಖಾತೆ ಹೊಂದಿರುವ ಕಾಣಿಯೂರಿನ ವಿಜಯ ಬ್ಯಾಂಕ್ ಶಾಖೆಗೆ ವಿಷಯ ತಿಳಿಸಿದ್ದಾರೆ. ಬ್ಯಾಂಕಿನ ಸಿಬ್ಬಂದಿ ಕೂಡಲೇ ಅಕೌಂಟ್ ಬ್ಲಾಕ್ ಮಾಡಿದ್ದಾರೆ. ಆದರೆ ತೂತು ಗೋಣಿ ಮೂಟೆಯಿಂದ ಅಕ್ಕಿ ಸೋರಿ ಹೋದ ಹಾಗೆ ಅಷ್ಟರಲ್ಲಾಗಲೇ 69 ಸಾವಿರ ರೂಪಾಯಿ ದುಡ್ಡು ಖಾಲಿಯಾಗಿ ಹೋಗಿತ್ತು.

ಆನ್ ಲೈನ್ ಮುಖೇನ ಹಣ ವಂಚನೆಯ ಕುರಿತು ಅಪರಿಚಿತ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಅವರು ನೀಡಿದ ದೂರಿನಂತೆ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಾಲು ಸಾಲು ಇಂತಹ ಪ್ರಕರಣಗಳು ನಡೆದರೂ, ಪದೇಪದೇ ವಿದ್ಯಾವಂತರೇ ಇಂತಹ ವಂಚನೆಗಳಿಗೆ ಬಲಿ ಬೀಳುತ್ತಿದ್ದಾರಲ್ಲ ಎಂದು ಪೊಲೀಸರು ತಲೆ ಮೇಲೆ ಕೈಯಿಟ್ಟು ಕೂತಿದ್ದಾರೆ.

Leave A Reply

Your email address will not be published.