ದೇಶದ ಎಲ್ಲ ಪ್ರಮುಖ ದೇಗುಲಗಳು ಶಟರ್ ಇಳಿಸಿ ಕೂತಿವೆ । ಧರ್ಮಸ್ಥಳದಲ್ಲಿ ಇನ್ನೂ ಜನ ದೇವರ ದರ್ಶನ ನಡೆಯುತ್ತಿದೆ !

ರಾಜ್ಯದ ಎಲ್ಲ ಧಾರ್ಮಿಕ ದತ್ತಿ ಇಲಾಖೆಗಳಿಗೆ ಸೇರಿದ ದೇವಸ್ಥಾನಗಳಲ್ಲಿ ದರ್ಶನದಿಂದ ಹಿಡಿದು ಯಾವುದೇ ಸೇವಾ ಕಾರ್ಯಕ್ರಮವಿರುವುದಿಲ್ಲ. ಎಲ್ಲವನ್ನೂ ನಿಷೇಧಿಸಿ ಕರ್ನಾಟಕ ಸರಕಾರ ಆದೇಶ ಹೊರಡಿಸಿದ್ದು ನಿಮಗೆ ತಿಳಿದೇ ಇದೆ. ಈ ಆದೇಶ ಮಾರ್ಚ್ 20 ನೆಯ ತಾರೀಕಿನಿಂದಲೇ ಜಾರಿಯಲ್ಲಿದೆ. ಮುಂದಿನ ಆದೇಶ ಬರುವವರೆಗೆ ಈ ಆದೇಶ ಮುಂದುವರೆಯುತ್ತದೆ. ಅದರಂತೆ ಕುಕ್ಕೆ ಶ್ರೀ ಸುಬ್ರಮಣ್ಯ, ಪುತ್ತೂರು ಮಹಾಲಿಂಗೇಶ್ವರ, ಸೌತಡ್ಕ ಮಹಾಗಣಪತಿ, ಕಟೀಲು ಮುಂತಾದ ದೇಗುಲಗಳು ಶಟರ್ ಕೆಳಗೆಳೆದಿವೆ. ಕೇವಲ ಪೂಜಾರಿಗಳು ಮಾತ್ರ ಒಳಗೆ ಹೋಗಿ ದೇವರ ದೈನಂದಿನ ಪೂಜೆ ಮಾಡಿ ಬರುತ್ತಿದ್ದಾರೆ.

ದೇಶದ ಇತರ ದೇಗುಲಗಳಾದ ತಿರುಪತಿ, ಮಂತ್ರಾಲಯ ಮುಂತಾದ ಕಡೆಯಲ್ಲಿಯೂ ದರ್ಶನ ಬಂದ್. ಆದರೆ ನಮ್ಮ ಶ್ರೀ ಕ್ಷೇತ್ರ ಧರ್ಮಸ್ಥಳದ ದೇವಾಲಯ ಇನ್ನೂ ಭಕ್ತರ ಪಾಲಿಗೆ ತೆರೆದುಕೊಂಡಿದೆ. ಭಕ್ತಾದಿಗಳು ದೇವಾಲಯದೊಳಕ್ಕೆ ಹೋಗಿ ದರ್ಶನ ಮಾಡಿಕೊಂಡು ಬರುತ್ತಿದ್ದಾರೆ. ತಿರುಪತಿ ಬಿಟ್ಟರೆ ಬಹುಶ ಇನ್ನೊಂದು ದೊಡ್ಡ ಜನ ಜಂಗುಳಿ ಸೇರುವ ದೇವಾಲಯ ಧರ್ಮಸ್ಥಳ. ಇವತ್ತಿಗೂ ಧರ್ಮಸ್ಥಳದಲ್ಲಿ ಯಾವುದೇ ನಿಯಂತ್ರಣ ತೆಗೆದುಕೊಂಡಂತಿಲ್ಲ.

ಈಗ ಹರಡಿರುವ ಇನ್ನೊಂದು ಸುದ್ದಿ ಏನೆಂದರೆ, ಸೋಂಕಿತರ ಕುಟುಂಬಸ್ಥರು, ಕೊರೋನಾ ಸೋಂಕಿತ ವ್ಯಕ್ತಿ ಶೀಘ್ರ ಗುಣಮುಖವಾಗಲೆಂದು ದೇವರ ಹರಕೆ ಹೊತ್ತುಕೊಂಡು ಧರ್ಮಸ್ಥಳಕ್ಕೆ ಬರುವ ಸಂಭವ ಇದೆ ಎನ್ನುವುದು. ಇದು ಎಷ್ಟರ ಮಟ್ಟಿಗೆ ನಿಜವೋ, ಅಥವಾ ಊಹಾಪೋಹವೋ ಗೊತ್ತಿಲ್ಲ ; ಆದರೆ ಹಲವು ಊರುಗಳಿಂದ ಜನ ಸೇರಿ ಕೌಂಟರ್ ಮಿಕ್ಸ್ ಆಗುವ ಧರ್ಮಸ್ಥಳದಂತಹ ಜನಪ್ರವಾಹ ಬರುವ ಕ್ಷೇತ್ರದಲ್ಲಿ ಈಗ ಇರುವ ನಿಯಂತ್ರಣ ಏನೇನೂ ಸಾಲದು. ಜನರ ಮತ್ತು ದೇಶದ ಆರೋಗ್ಯದ ಮುಂದೆ ಎಲ್ಲವೂ ಎರಡನೆಯ ಪ್ರಯಾರಿಟಿ.

ಧಾರ್ಮಿಕ ದತ್ತಿ ಇಲಾಖೆಗಳಿಗೆ ಸೇರಿದ ದೇವಸ್ಥಾನಗಳಲ್ಲಿ ಮಾತ್ರ ಕೊರೋನಾ ಹರಡುತ್ತದೆ ಎಂಬುದು ಸರಕಾರದ ಊಹೆಯಾ ? ರೋಗಗಳು ಶುದ್ಧ ಡೆಮಾಕ್ರೆಟಿಕ್ . ಅದಕ್ಕೆ ಪ್ರೈವೇಟ್ ದೇವಸ್ಥಾನ, ಸರಕಾರೀ ದೇವಸ್ಥಾನ ಎರಡೂ ಒಂದೇ ಅಲ್ಲವೇ ? ನಮ್ಮ ‘ ಡೈನಾಮಿಕ್ ‘ ಶಾಸಕ ಶ್ರೀಯುತ ಹರೀಶ್ ಪೂಂಜಾ ಅವರ ಸೂಕ್ಷ್ಮ ಕಣ್ಣಿಗೆ ಇದು ಬೀಳದೆ ಇದ್ದುದಾದರೂ ಹೇಗೆ ?!

Leave A Reply

Your email address will not be published.