ಮತ್ತೆ ಮರುಕಳಿಸಿತಾ ಮಂಗನ ಕಾಯಿಲೆ ? | ಶಂಕಿತ ಮಂಗನ ಕಾಯಿಲೆಗೆ ಮತ್ತೊಂದು ಬಲಿ !

ಶಿವಮೊಗ್ಗ, ಮಾ.20 : ಶಂಕಿತ ಮಂಗನ ಕಾಯಿಲೆಯಿಂದ ತಾಲೂಕಿನ ಬಿದರೂರು ಗ್ರಾಮದ ಈಶ್ವರ (65) ಎಂಬವರು ಬುಧವಾರ ಪ್ರಾಣ ಬಿಟ್ಟಿದ್ದಾರೆ.

ಶಂಕಿತ ಮಂಗನ ಕಾಯಿಲೆಗೆ ಮತ್ತೊಂದು ಬಲಿಯಾಗಿದೆ. ನಾಲ್ಕೂವರೆ ವರ್ಷದ ಮಗುವಿಗೂ ಸೋಂಕು ತಗುಲಿದ್ದು ಅದಕ್ಕೆ ಚಿಕಿತ್ಸೆ ನೀಡಲಾಗುತ್ತಿದೆ.

ಮಂಗನ ಕಾಯಿಲೆ ಹರಡಿದೆ ಎಂಬ ಶಂಕೆ ಇದ್ದ ಶಿವಮೊಗ್ಗ ಜಿಲ್ಲೆಯ ವ್ಯಕ್ತಿಯೋರ್ವರು ಮೃತಪಟ್ಟಿದ್ದು, ಇದರಿಂದ ಸಾವಿಗೀಡದವರ ಸಂಖ್ಯೆ ಮೂರಕ್ಕೇರಿದೆ. ಇನ್ನು ಸೋಂಕಿತರ ಸಂಖ್ಯೆ 101 ಕ್ಕೇರಿದೆ.

ನಾಲ್ಕೈದು ದಿನಗಳಿಂದ ತೀವ್ರ ಜ್ವರದಿಂದ ಬಳಲುತ್ತಿದ್ದ ಈಶ್ವರ್‌ ಸಾಗರದಲ್ಲಿ ಚಿಕಿತ್ಸೆ ಪಡೆದು, ಶಿವಮೊಗ್ಗ ಮೆಗ್ಗಾನ್‌ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಅವರು ಬುಧವಾರ ಮೃತಪಟ್ಟಿದ್ದಾರೆ. ಕೂಲಿ ಕೆಲಸ ಮಾಡುತ್ತಿದ್ದ ಇವರಿಗೆ ಕಾಡಿನ ಸಂಪರ್ಕದಿಂದ ಸೋಂಕು ತಗುಲಿತ್ತು. ಇದರಿಂದಾಗಿ ಶಂಕಿತ ಮಂಗನ ಕಾಯಿಲೆಯಿಂದ ಸಾಗರ ತಾಲೂಕಿನಲ್ಲಿ ಮೃತಪಟ್ಟವರ ಸಂಖ್ಯೆ 4 ಕ್ಕೆ ಏರಿದೆ.

ಜೊತೆಗೆ ಮಂಡವಳ್ಳಿ ಗ್ರಾಮದ 50 ವರ್ಷ ಪ್ರಾಯದ ಸುಮಿತ್ರ ಅವರು ಚಿಕಿತ್ಸೆ ಪಡೆದು ಮನೆಗೆ ಹೋಗಿದ್ದರು. ಅವರಿಗೆ ಪುನಃ ಜ್ವರ ಬಂದಿದೆ. ಜ್ವರ ಮರುಕಳಿಸಿದ ಪರಿಣಾಮ ಅವರನ್ನು ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಕಾನೂರು ಗ್ರಾಮದ 25 ವರ್ಷದ ಜಯಕುಮಾರ್‌ ಎಂಬುವವರಲ್ಲಿ ಸಹ ಮಂಗನ ಕಾಯಿಲೆ ವೈರಾಣು ಪತ್ತೆಯಾಗಿದೆ.

ಒಟ್ಟಾರೆ ದಿನದಿಂದ ದಿನಕ್ಕೆ ಮಂಗನ ಕಾಯಿಲೆ ಸೋಂಕಿಗೆ ಸಿಲುಕುತ್ತಿರುವವರ ಸಂಖ್ಯೆ ಜಾಸ್ತಿಯಾಗುತ್ತಿದ್ದು, ಈ ರೋಗ ದಕ್ಷಿಣ ಕನ್ನಡಕ್ಕೆ ಹರಡುವ ಭಯ ಆವರಿಸಿದೆ.
ಎರಡೂವರೆ ದಶಕಗಳ ಹಿಂದೆ ದಕ್ಷಿಣ ಕನ್ನಡ- ಉಡುಪಿಯಲ್ಲಿ ಮಂಗನ ಕಾಯಿಲೆ ಬಂದು ಮಾರಣಹೋಮವೆ ನಡೆದು ಹೋಗಿತ್ತು. ಈಗ ಶಿವಮೊಗ್ಗದ ತುಮರಿಯಲ್ಲಿ ಸಹ ಮಂಗನ ಕಾಯಿಲೆ ಸೋಂಕು ಪತ್ತೆಯಾಗಿದೆ. ಹಲವು ಮಂಗಗಳು ಈಗಾಗಲೇ ಸತ್ತಿವೆ. ಸಾಯುತ್ತಿರುವ ಮಂಗಗಳ ಸಂಖ್ಯೆ ಜಾಸ್ತಿ ಆಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

Leave A Reply

Your email address will not be published.