ನಿರ್ಭಯಾ ಅತ್ಯಾಚಾರಿಗಳು ನೇಣಿಗೆ ಶರಣು ಬಿದ್ದಿದ್ದಾರೆ

ಶುಕ್ರವಾರ, ಮಾ.20 : ನೀವು ಬೆಳಿಗ್ಗೆ ಎದ್ದು ಇದನ್ನು ಓದುವಷ್ಟರಲ್ಲಿ ನಿರ್ಭಯಾ ಅತ್ಯಾಚಾರಿಗಳು ಗೋಣು ಮುರಿದುಕೊಂಡು ಸತ್ತು ಹೋಗಿರುತ್ತಾರೆ. ದೇಶದ ಸ್ವಾತಂತ್ರೋತ್ತರ ಇತಿಹಾಸದಲ್ಲೇ, ಒಟ್ಟಿಗೆ ನಾಲ್ಕು ಜನರನ್ನು ಗಲ್ಲಿಗೇರಿಸುವುದು ಇದೇ ಮೊದಲು. 7 ವರ್ಷದ ಹಿಂದೆ ಮಾಡಿದ ಅಪರಾಧಕ್ಕೆ ಅವರಿಗೆ ಶಿಕ್ಷೆಯಾಗಿದೆ.

ನಿರ್ಭಯಾ ಅಪರಾಧಿಗಳು ಒಟ್ಟು ಆರು ಜನ. ಮುಖ್ಯ ಆಪಾದಿತ ಒಬ್ಬ ವಿಚಾರಣಾಧೀನ ಖೈದಿಯಾಗಿರುವಾಗಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ. ಉಳಿದ ಒಬ್ಬ ಬಾಲಾಪರಾಧಿಯ ನೆಪದಲ್ಲಿ ಶಿಕ್ಷೆಯಿಂದ ತಪ್ಪಿಸಿಕೊಂಡ. ಉಳಿದವರು ನಾಲ್ಕುಜನ.

ನಮಗೆಲ್ಲರಿಗೆ ಗೊತ್ತಿರುವಂತೆ ಅವತ್ತು 2012 ರ ಡಿಸೇಂಬರ್ 16 ರಂದು ಚಲಿಸುವ ಬಸ್ ನಿಂದ ನಿರ್ಭಯಾಳ ಗೆಳೆಯನನ್ನ ಬಸ್ಸಿನಿಂದ ಹೊರಕ್ಕೆ ತಳ್ಳಿ ಆಕೆಯನ್ನು ಅತ್ಯಾಚಾರ ಮಾಡಲಾಗುತ್ತದೆ. ಆನಂತರ ಆಕೆಯ ಮರ್ಮಾಂಗಕ್ಕೆ ಕಬ್ಬಿಣದ ರಾಡನ್ನು ತೂರಿ ವಿಕೃತಿ ಮತ್ತು ಪೈಶಾಚಿಕತೆ ಮೆರೆಯುತ್ತಾರೆ.

ಬೆಳಿಗ್ಗೆ 5.30 ಅವರು ಗಲ್ಲಿಗೆ ನೇತಾಡಿಕೊಂಡು ಆಗಿದೆ. ನಿರ್ಭಯಾ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದ ನಾಲ್ವರು ಅಪರಾಧಿಗಳಾದ ಮುಕೇಶ್ ಸಿಂಗ್, ವಿನಯ್ ಶರ್ಮಾ, ಅಕ್ಷಯ್ ಠಾಕೂರ್ ಹಾಗೂ ಪವನ್ ಗುಪ್ತ ತಮ್ಮ ವಕೀಲರ ಮೂಲಕ ವಿವಿಧ ಕಸರತ್ತು ನಡೆಸಿದರೂ ಗಲ್ಲು ಶಿಕ್ಷೆಯನ್ನು ತಪ್ಪಿಸಲು ಸಾಧ್ಯವಾಗಲಿಲ್ಲ.

ನಿರ್ಭಯಾ ತಾಯಿಯಾ ಪ್ರಯತ್ನ ಶ್ಲಾಘನೀಯ । ಆರೋಪಿಗಳ ಪರ ವಕೀಲರ ಹರ್ಕ್ಯುಲಿಯನ್ ಪ್ರಯತ್ನಕ್ಕೆ ಸಲಾಂ !

ನಿನ್ನೆ ರಾತ್ರಿ ಕೂಡ ಆರೋಪಿಗಳ ಪರ ವಕೀಲರು ಹೈಕೋರ್ಟಿನಲ್ಲಿ ಅರ್ಜಿ ಹಾಕಿ ಗಲ್ಲಿಗೆ ತಡೆ ಕೋರಿದ್ದರು. ಹೈಕೋರ್ಟು ಅದನ್ನು ತಿರಸ್ಕರಿಸಿತ್ತು. ಅವರು ಮತ್ತೆ ಸುಪ್ರೀಂ ಕೋರ್ಟು ಮೆಟ್ಟಲು ಹತ್ತಿದ್ದರು. ಸುಪ್ರೀಂ ಕೋರ್ಟು ಮಧ್ಯರಾತ್ರಿ ಬಾಗಿಲು ತೆರೆದು ಕೇಸನ್ನು ವಿಚಾರಣೆಗೆ ಕೈಗೆತ್ತಿಕೊಂಡು ಕೇಸು ವಜಾ ಮಾಡುವಾಗ ಮುಂಜಾನೆ 3.30. ಆಗ ಗಲ್ಲು ಕುಣಿಕೆ ಬಿಗಿಯಾದದ್ದು.
ಆರೋಪಿಗಳ ಪರ ವಕೀಲರ ಹರ್ಕ್ಯುಲಿಯನ್ ಪ್ರಯತ್ನಕ್ಕೆ ಸಲಾಂ ! ಹೇಗಾದರೂ ಮಾಡಿ ಜೀವ ಉಳಿಸಬೇಕೆಂದು, ಓರ್ವ ವಕೀಲರಾಗಿ ತಮ್ಮ ಕಕ್ಷಿದಾರರ ಪರ ಅವರು ಪ್ರಯತ್ನಪಟ್ಟಿದ್ದರು. ಆರೋಪಿಗಳು ಎಲ್ಲರೂ ಬಡವರು. ದುಬಾರಿ ಫೀಸು ಕೊಡುವ ಶಕ್ತಿಯಿಲ್ಲದವರು. ಒಂದು ತಾಲೂಕು ಕೋರ್ಟಿನಲ್ಲಿ ನಡೆಯುವ ಮಾಮೂಲಿ ಕೇಸಿನ ಫೀಸು ಕೊಡೋದಿಕ್ಕೆ ಜನ ಪರದಾಡುತ್ತಾರೆ. ಅಂತದ್ದರಲ್ಲಿ ಬಡವರ ಪರ ದುಡ್ಡು ಕಾಸು ಯೋಚನೆ ಮಾಡದೆ ಹಗಲಿರುಳು ಪ್ರಯತ್ನಿಸಿದ ಏ .ಪಿ. ಸಿಂಗ್ ಥರದ ವಕೀಲರ ಕೆಲಸದ ಮೇಲಿನ ಕಮಿಟ್ ಮೆಂಟ್ ಗೆ ಶ್ಲಾಘನೆ ಸಲ್ಲಬೇಕು.
ಮತ್ತೊಂದು ಕಡೆ, ನಿರ್ಭಯಾ ತಾಯಿ ಆಶಾ ದೇವಿ ಗಟ್ಟಿಗಿತ್ತಿಯಾಗಿ, ಸ್ವಲ್ಪವೂ ಕರುಣೆಗೆ ಬೀಳದೆ ತಾನು ಅಂದುಕೊಂಡದ್ದನ್ನು ಸೆರಗು ಸೊಂಟಕ್ಕೆ ಬಿಗಿದು ಹಲ್ಲು ಕಚ್ಚಿ ಸಾಧಿಸಿದ್ದಾರೆ. ನಿರಂತರ ಏಳು ವರ್ಷ ಹೋರಾಡಿ ಮಗಳಿಗೆ ನ್ಯಾಯ ಕೊಡಿಸಿದ್ದಾರೆ. ಗಲ್ಲು ಶಿಕ್ಷೆಯ ನಂತರ ಅವರು ಮಾತನಾಡಿ ಈ ದಿನವನ್ನು ದೇಶದ ಹೆಣ್ಣುಮಕ್ಕಳಿಗೆ ಆರ್ಪಿಸುವುದಾಗಿ ನಿರ್ಭಯಾ ತಾಯಿ ನೀಡಿದ್ದಾರೆ.

ಗಲ್ಲು ಶಿಕ್ಷೆಗೆ ಗುರಿಯಾದವರನ್ನು ಬೆಳಗಿನ ಜಾವವೇ ಎಬ್ಬಿಸಲಾಗುತ್ತದೆ. ಎಬ್ಬಿಸಲು ಅವರು ಮಲಗಿದರೆ ತಾನೇ ? ಹೇಗೆ ತಾನೇ ಗಲ್ಲು ಶಿಕ್ಷೆ ನಾಳೆ ಇದೆ ಎನ್ನುವುದನ್ನು ಮುಂದಿಟ್ಟುಕೊಂಡು ಮಲಗಬಹುದು? ಮಲಗಿದರೂ ನಿದ್ರೆ ಬರುತ್ತದಾ ? ಗಲ್ಲಿಗಿಂತ ಮೊದಲು ಅವರಿಗೆ ಸ್ನಾನ ಮಾಡಿಸಲಾಗುತ್ತದೆ. ತಿಂಡಿ ತಿನ್ನಲು ಕೊಡುತ್ತಾರೆ. ಆದರೆ ಹಸಿವೆ ಎಂಬುದು ಸತ್ತು ಹೋದ ವಿಚಾರ. ಮೊದಲು ಹಸಿವೆ ಸತ್ತು ಹೋಗುವುದು, ಆನಂತರ ಅವರು.

ಗಲ್ಲು ಶಿಕ್ಷೆಗೆ ಮನಿಲಾ ಎಂಬ ಹಗ್ಗವನ್ನು ಬಳಸುತ್ತಾರೆ. ಅದನ್ನು ಜೈಲಿನ ಹಕ್ಕಿಗಳೇ ನೇಯ್ದಿರುತ್ತಾರೆ. ಆ ಹಗ್ಗದ ಉದ್ದ, ದಪ್ಪ ಮುಂತಾದವುಗಳು ಜೈಲಿನ ನಿಯಮಗಳ ಪ್ರಕಾರವೇ ನಡೆಯಬೇಕಿರುತ್ತದೆ. ಹಗ್ಗವನ್ನು ಕೈಯಲ್ಲೇ ನೇಯಬೇಕು. ಅದು ನಿಯಮ.

ಗಲ್ಲು ಶಿಕ್ಷೆಗೆ ಮುನ್ನ, ತೀರಾ ಇನ್ನೇನು ಗಲ್ಲು ಶಿಕ್ಷೆಯಾಗುತ್ತದೆ ಎನ್ನುವುದಕ್ಕೆ ಒಂದೆರಡು ದಿನಗಳ ಮುಂಚೆ ಶಿಕ್ಷೆಗೊಳಗಾಗಲಿರುವ ಖೈದಿಯ ಮನಸ್ಥಿತಿ ಹೇಗಿರುತ್ತದೆ ಎಂಬುದನ್ನು ನಾವು ಊಹಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ. ಆದರೆ ಅವರ ಎದೆ ವಿಪರೀತವಾಗಿ ಹೊಡೆದುಕೊಳ್ಳುತ್ತದೆ. ತಲೆಯಲ್ಲಿ, ಎರಡೂ ಕಿವಿಗಳ ಬಳಿ ಗುಯ್ಯ್ ಅನ್ನುವ ಸದ್ದು ಕೇಳಿಸುತ್ತಲೇ ಇರುತ್ತದೆ. ಹೇಗಾದರೂ ಇದರಿಂದ ತಪ್ಪಿಸಿಕೊಳ್ಳಬೇಕೆಂದು ಅವರು ಚಿಂತಿಸುತ್ತಾರೆ. ಆದರೆ ಅದು ಯಾವುದೇ ಕಾನೂನು ಪ್ರಕ್ರಿಯೆಯಿಂದ ಆಗದೆ ಇದ್ದಾಗ ಅಳುತ್ತಾರೆ. ಕೋಪಗೊಳ್ಳುತ್ತಾರೆ. ಸಹ ಖೈದಿಯ ಮೇಲೆ ಮತ್ತು ಭದ್ರತಾ ಸಿಬ್ಬಂದಿಯ ಮೇಲೆ ಅಟ್ಯಾಕ್ ಕೂಡ ಮಾಡುವ ಸಂಭವವಿರುತ್ತದೆ. ಅದಕ್ಕೆ ಈ ದಿನಗಳಲ್ಲಿ ಅಂತದ್ದಕ್ಕೆ ಅವಕಾಶವನ್ನು ಜೈಲು ಅಧಿಕಾರಿಗಳು ಕೊಡಲ್ಲ. ಸರಿಯಾಗಿ ಕೈಗಳನ್ನು ಬಂಧಿಸಿ ಸೆಲ್ ನಲ್ಲಿ ಇಟ್ಟಾಗ ಅಲ್ಲಿ ಅಟ್ಯಾಕ್ ಮಾಡಲು ಸಾಧ್ಯವಾಗುವುದಿಲ್ಲ. ಪದೇ ಪದೇ ಬಿಕ್ಕುತ್ತಾರೆ. ದೇವರನ್ನು ಬೇಡಿಕೊಳ್ಳುತ್ತಾರೆ. ಎಂತ ಗಡುಸು ಹೃದಯಿಯೂ ಪತರಗುಟ್ಟುತ್ತಾನೆ. ಏನೋ ಒಂದು ಆಗಿ, ಜೀವ ಉಳಿಯಬಹುದಾ ಅಂತ ಕಡೆಯ ಕ್ಷಣದವರೆಗೂ ಆಶಾಭಾವನೆ ಅವರಲ್ಲಿರುತ್ತದೆ. ತಾನು ಮಾಡಿದ ಪಾಪ ಕೃತ್ಯಕ್ಕೆ ಪಶ್ಚಾತಾಪ ಪಡುತ್ತಾನೆ. ಕೋಪ, ತಾಪ, ರೋಷ, ಕರುಣ, ರೌದ್ರ ಹೀಗೆ ಎಲ್ಲ ರೀತಿಯ ಮಾನವೀಯ ಭಾವಗಳು ಅವರ ಮನದಲ್ಲಿ ಕ್ಷಣ ಕ್ಷಣ ಬದಲಾಗುತ್ತಲೇ ಇರುತ್ತದೆ. ಭಾವಗಳ ತಾಕಲಾಟದ ಹಿಂಸೆ ಗಿಂತ ದೊಡ್ಡ ಶಿಕ್ಷೆ ಬೇರೆ ಇಲ್ಲ. ಗಲ್ಲು ಶಿಕ್ಷೆ ಎಂದು ನಿರ್ಧಾರ ಆದ ನಂತರ ಖೈದಿ ಜೀವಚ್ಚವವಾಗಿ ಬದುಕುತ್ತಾನೆ. ಗಲ್ಲು ಶಿಕ್ಷೆಯ ನಂತರ ನಿಮಿಷಗಳಲ್ಲಿ ಜೀವ ಹೋದರೆ, ಅದಕ್ಕೆ ಮೊದಲು ಅವರು ಅನುಭವಿಸುವ ಯಾತನೆ ಯಾವ ಶತ್ರುವಿಗೂ ಬೇಡ.

ಎಲ್ಲ ಸಂದರ್ಭದಲ್ಲಿಯೂ ಹೀಗೆ ಖೈದಿ ಅಧೀರನಾಗುತ್ತಾನೆ ಅನ್ನಲು ಬರುವುದಿಲ್ಲ. ಅವತ್ತು ಪಾಕಿಸ್ತಾನದಲ್ಲಿ ಜುಲ್ಫಿಕರ್ ಅಲಿ ಭುಟ್ಟೋ ಗೆ ( ಬೇನ್ಜೀರ್ ಭುಟ್ಟೋನ ಅಪ್ಪ, ಪಾಕಿಸ್ತಾನದ ಮಾಜಿ ಪ್ರಧಾನಿ ) ಇದೇ ರೀತಿ ಅಂದಿನ ಪಾಕ್ ಅಧ್ಯಕ್ಷ ಮಹಮ್ಮದ್ ಝಿಯಾ ಉಲ್ ಹಕ್ ಎಂಬ ಸರ್ವಾಧಿಕಾರಿ ಸುಳ್ಳು ಕಾರಣಗಳಿಗಾಗಿ ಗಲ್ಲು ಶಿಕ್ಷೆ ಕೊಡಿಸುತ್ತಾನೆ. ಆಗ ಜುಲ್ಫಿಕರ್ ಅಲಿ ಭುಟ್ಟೋ ಕಡೆಯ ಕ್ಷಣದವರೆಗೂ ಸ್ಥಿತಪ್ರಜ್ಞನಾಗಿದ್ದ. ಬೆಳಿಗ್ಗೆ ಬೇಗ ಎದ್ದು, ನೀಟಾಗಿ ಶೇವ್ ಮಾಡಿ, ಸ್ನಾನ ಮುಗಿಸಿ, ಕುರಾನ್ ಪಠಿಸಿ, ಒಂದಷ್ಟು ತಿಂಡಿ ತಿಂದು ನಸುನಗುತ್ತಾ ಗಲ್ಲಿಗೆ ತಲೆಯೊಡ್ಡಿದ್ದ. ಅಂತಹ ಧೈರ್ಯ ಸಾಮಾನ್ಯವಾಗಿ ಯಾರಿಗೂ ಬರುವುದಿಲ್ಲ. ಸಾಮಾನ್ಯವಾಗಿ ನಾಯಕರುಗಳು ಸ್ಥಿತಪ್ರಜ್ಞರಾಗಿರುತ್ತಾರೆ. ಅವರು ಸಾವಿಗೆ ಭಯಪಡುವುದಿಲ್ಲ. ಅದೇ, ಖೈದಿಗಳು ಬಹು ಬೇಗ ಚಂಚಲಗೊಳ್ಳ್ಳುತ್ತಾರೆ. ಅವರಲ್ಲೇ ಆಗುವುದು ಭಾವಗಳ ತಾಕಲಾಟ.

ಗಲ್ಲು ಶಿಕ್ಷೆ ಜಾರಿಯಾದಾಗ ಶಿಕ್ಷೆಗೊಳಗಾದ ವ್ಯಕ್ತಿಯ ಪ್ರಾಣಪಕ್ಷಿ ಸುಮಾರು ಸುಮಾರು 30 ಸೆಕೆಂಡುಗಳೊಳಗಾಗಿ ಹೊರಟುಹೋಗುತ್ತದೆ. ಗಲ್ಲು ಶಿಕ್ಷೆಗೆ ಗುರಿಮಾಡಿದಾಗ ದೇಹ ಒದ್ದಾಡುತ್ತದೆ. ಕೆಲವರಲ್ಲಿ ಸ್ವಲ್ಪ ಮೋಷನ್ ಹೋಗುತ್ತದೆ. ಮತ್ತು ಗಂಡಸರಲ್ಲಿ ಆ ಕೊಸರಾಟ ನಡೆದಾಗ ವ್ಯಕ್ತಿಯ ವೀರ್ಯ ಚೆಲ್ಲಿಕೊಳ್ಳುತ್ತದೆ. ಸಾಯುವಾಗ ಆ ವ್ಯಕ್ತಿ ಖುಷಿಯಲ್ಲೇ ಸಾಯುತ್ತಾನೆ ಎನ್ನುತ್ತಾರೆ ವೈದ್ಯರು. ವೀರ್ಯ ಚೆಲ್ಲಿಕೊಳ್ಳಲು ಹೋದ ಕಾರಣಕ್ಕೇ ಆತ ಇಂದು ಗಲ್ಲು ಶಿಕ್ಷೆ ಅನುಭವಿಸುವುದು ! ಎಂತಹ ವಿಪರ್ಯಾಸ !!

ಬಹುಶಃ ಅದೇ ಪೈಶಾಚಿಕ ಕೃತ್ಯದ ಕಾರಣಕ್ಕಾಗಿ ಅವರಿಗೆ ಇವತ್ತು ಗಲ್ಲು ಆಗಿರುವುದು. ಸಾಮಾನ್ಯವಾಗಿ ಅತ್ಯಾಚಾರಕ್ಕೆ ಗಲ್ಲು ಶಿಕ್ಷೆಯನ್ನು ಕೊಡುವುದಿಲ್ಲ. ಅತ್ಯಾಚಾರ ಪ್ರಕರಣಕ್ಕೆ ಸಾಮಾನ್ಯವಾಗಿ ಕೊಡುವುದು ಗರಿಷ್ಟ 10 ವರ್ಷ ಶಿಕ್ಷೆ. ಇಲ್ಲಿ ಅತ್ಯಾಚಾರದ ಜತೆಗೆ ಗಲ್ಲು ಕೂಡಾ ಆಗಿದೆ. ಆದರೆ ಈ ಪ್ರಕರಣದಲ್ಲಿ ಎಲ್ಲರಿಗೂ ಗಲ್ಲು ಆಗಿರುವುದು ಇದೊಂದು ವಿಶೇಷ ಪ್ರಕರಣವಾದುದರಿಂದ. ಮುಖ್ಯವಾಗಿ, ಇಡೀ ದೇಶದ ಮತ್ತು ಅಂತಾರಾಷ್ಟ್ರೀಯ ಮಾಧ್ಯಮ,ವಿದ್ಯಾರ್ಥಿಗಳು ನಿರ್ಭಯಾ ಅತ್ಯಾಚಾರದ ವಿಷಯವನ್ನು ಬಹು ಚರ್ಚೆಗೆ ಒಳಪಡಿಸಿದ್ದರು. ಕೊನೆಗೂ ಅವರಿಗೆ ಗಲ್ಲು ಶಿಕ್ಷೆ ಆಗಿಯೇ ಬಿಟ್ಟಿದೆ.

ಒಂದು ಚರ್ಚೆ ಈಗಲೂ ನಡೆಯಿತ್ತಿದೆ. ಆರೂ ಜನ ಅತ್ಯಾಚಾರ ಮಾಡಿರುವುದು ಖಚಿತ. ಅದು ಮೆಡಿಕಲಿ ಪ್ರೂವ್ ಆಗಿದೆ. ಆದರೆ ಆ ನಾಲ್ವರಲ್ಲಿ ಎಲ್ಲಾ 6 ಜನರೂ ಕ್ರೂರಿಗಳಾಗಿರೋದಕ್ಕೆ ಸಾಧ್ಯವಿಲ್ಲ. ಯಾರೋ ಒಬ್ಬಿಬ್ಬ ಕಬ್ಬಿಣದ ರಾಡು ಬಳಸಿ ಆಕೆಯನ್ನು ಪೈಶಾಚಿಕ ಗಾಯಗೊಳಿಸಿರಬಹುದು. ಆರೂ ಜನರೂ ಸಮಾನ ಕ್ರೂರಿಗಳಾಗಿರೋದಿಕ್ಕೆ ಸಾಧ್ಯವಿಲ್ಲ. ಹಾಗಿರುವಾಗ ಯಾಕೆ ಎಲ್ಲರಿಗೂ ಸಮಾನ ಶಿಕ್ಷೆ ? ಶಿಕ್ಷೆಯ ಪ್ರಮಾಣದಲ್ಲಿ ವ್ಯತ್ಯಾಸ ಇರಬೇಕು. ಎಲ್ಲರಿಗೂ ಒಂದೇ ಶಿಕ್ಷೆ – ಗಲ್ಲು ಶಿಕ್ಷೆ ಉಚಿತವಲ್ಲ ಎನ್ನುವುದು ಆ ಚಿಂತನೆ. ಅದೇ ಸಂಗತಿಯನ್ನು ಹಿಡಿದುಕೊಂಡು ಅಪರಾಧಿಗಳ ಪರವಾಗಿ ಅವರ ಲಾಯರ್ ಗಳು ಶಕ್ತಿ ಮೀರಿ ಪ್ರಯತ್ನಿಸಿದ್ದರು.

ಮೀಡಿಯಾ ಹೈಪ್ ನೇ ಅವರಿಗೆ ಗಲ್ಲು ಶಿಕ್ಷೆ ಕೊಡಿಸುವಂತೆ ಆಯಿತಾ ಅನ್ನುವ ಪ್ರಶ್ನೆ ಜೀವಂತವಾಗಿದೆ. ಯಾಕೆಂದರೆ ಹಲವು ಕೊಲೆ ಮಾಡಿದವರೂ ಸಾಕ್ಷ್ಯ ಇದ್ದರೂ ಗಲ್ಲಿನಿಂದ ತಪ್ಪಿಸಿಕೊಂಡು ಜೀವಾವಧಿ ಶಿಕ್ಷೆ ಪಡೆದುಕೊಂಡು ಬದುಕುವುದನ್ನು ನಾವು ಕಾಣುತ್ತಿದ್ದೇವೆ. ಹಾಗೊಂದು ವೇಳೆ ಮೀಡಿಯಾ ಹೈಪ್ ನಿಂದ ಶಿಕ್ಷೆಯ ಪ್ರಮಾಣ ಬದಲಾಗುವುದಿದ್ದರೆ, ಅದಕ್ಕಿಂತ ದೊಡ್ಡ ದುರಂತ ಮತ್ತೊಂದಿಲ್ಲ. ಕೊನೆಗೂ, ಈ ಪ್ರಕರಣ 7 ವರ್ಷಗಳ ನಂತರವಾದರೂ ಮುಗಿದು ಹೋಯ್ತಲ್ಲ ಎನ್ನುವುದೇ ಒಂದು ಸಣ್ಣ ಸಮಾಧಾನ.

Leave A Reply

Your email address will not be published.