ಹಿರಿಯ ಪತ್ರಕರ್ತ,ಸಾಹಿತಿ ‘ಪಾಪು’ ನಿಧನ | ‘ ಪ್ರಪಂಚ ‘ ತ್ಯಜಿಸಿ ಹೋದ ಗಾಂಧಿವಾದಿ

ಹುಬ್ಬಳ್ಳಿ: ಉಸಿರಾಟದ ತೊಂದರೆಯಿಂದ ಬಳಲುತ್ತಿರುವ ಹಿರಿಯ ಪತ್ರಕರ್ತ, ಸಾಹಿತಿ, ಶತಾಯುಷಿ ಪಾಟೀಲ ಪುಟ್ಟಪ್ಪ ಅವರು ಹುಬ್ಬಳ್ಳಿ ಯ ಕಿಮ್ಸ್‌ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 101 ವರ್ಷ ವಯಸ್ಸಾಗಿತ್ತು.

ಒಂದು ತಿಂಗಳಿನಿಂದ ಕಿಮ್ಸ್‌ನ ವಿಶೇಷ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪಾಟೀಲ ಪುಟ್ಟಪ್ಪ ಅವರಿಗೆ, ಗುರುವಾರ ರಾತ್ರಿ ಏಕಾಏಕಿ ರಕ್ತದೊತ್ತಡ ಜಾಸ್ತಿಯಾಗಿತ್ತು. ತಕ್ಷಣ ಅವರನ್ನು ತುರ್ತು ನಿಗಾ ಘಟಕಕ್ಕೆ ಸ್ಥಳಾಂತರಿಸಿ ಚಿಕಿತ್ಸೆ ನೀಡಲಾಗಿತ್ತು.

ರಕ್ತದೊತ್ತಡ ಜಾಸ್ತಿಯಾದ ಕಾರಣ ಅವರಿಗೆ ತುರ್ತು ಚಿಕಿತ್ಸೆ ನೀಡಲಾಗಿ ವೆಂಟಿಲೇಟರ್‌ನಲ್ಲಿ ಇಟ್ಟು ನಿಗಾ ಇಡಲಾಗಿತ್ತು. ಆದರೆ ಚಿಕಿತ್ಸೆ ಫಲಪ್ರದವಾಗದೆ ಮಾ.16ರ ರಾತ್ರಿ ನಿಧನರಾದರು.

1919 ರಲ್ಲಿ ಧಾರವಾಡದಲ್ಲಿ ಜನಿಸಿದ ಪಾಟೀಲ ಪುಟ್ಟಪ್ಪ ಅವರು ಪತ್ರಿಕೋದ್ಯಮ ಮತ್ತು ಸಾಹಿತ್ಯ ಕ್ಷೇತ್ರಕ್ಕೆ ಬರುತ್ತಿದ್ದಂತೆ ‘ಪಾಪು’ ಆದರು. ತನ್ನದೇ ದಿನಪತ್ರಿಕೆ ‘ ಪ್ರಪಂಚ ‘ ಅನ್ನು ಸ್ಥಾಪಿಸಿದರು.

1940-1950 ಸುಮಾರಿಗೆ ಕನ್ನಡ ಮಾತನಾಡುವ ಪ್ರದೇಶಗಳನ್ನು ಒಗ್ಗೂಡಿಸಿ ಕರ್ನಾಟಕವನ್ನಾಗಿಸುವ ಹೋರಾಟ ಶುರು ಮಾಡಿದ ಗಟ್ಟಿಗರು ಪಾಟೀಲ ಪುಟ್ಟಪ್ಪ.
ಆ ಕಾಲಕ್ಕೆ ಮೆಸಾಚುಸೆಟ್ಸ್ ವಿಶ್ವವಿದ್ಯಾಲಯದಿಂದ ಜರ್ನಲಿಸಂ ನಲ್ಲಿ ಸ್ನಾತಕೋತ್ತರ ಪದವಿ ಪಡೆದುಕೊಂಡವರು ಪುಟ್ಟಪ್ಪ ಅವರು. 1970 ರಲ್ಲಿ ಅವರು ಬೆಳಗಾವಿಯಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
ನಾಡಿನ ನೋಬೆಲ್ ಎಂದೇ ಗೌರವಿಸಲ್ಪಡುವ ನಾಡೋಜ ಪ್ರಶಸ್ತಿ ವಿಜೇತರು ನಮ್ಮ ಪಾಟೀಲ ಪುಟ್ಟಪ್ಪ. ಅಷ್ಟೇ ಅಲ್ಲದೆ ನೃಪತುಂಗ ಪ್ರಶಸ್ತಿ ಮತ್ತು ಪ್ರತಿಷ್ಠಿತ ಮೂಡಿ ಪ್ರಶಸ್ತಿಯನ್ನು ಅವರು ಪಡೆದುಕೊಂಡಿದ್ದರು.

ನೇರನುಡಿಯ, ಗಾಂಧಿ ತತ್ವವನ್ನು ನಿಜ ಜೀವನದಲ್ಲಿ ಅಳವಡಿಸಿಕೊಂಡು ಬದುಕಿದ ಕರ್ನಾಟಕದ ಪತ್ರಿಕೋದ್ಯಮ ಮತ್ತು ಸಾಹಿತ್ಯದ ಈ ‘ ಪ್ರಪಂಚ ‘ ಬಿಟ್ಟು ಬೇರೆ ಪ್ರಪಂಚಕ್ಕೆ ಹೊರಟುಹೋಗಿದ್ದಾರೆ.

Leave A Reply

Your email address will not be published.