ಇಂದ್ರಪ್ರಸ್ಥ ವಿದ್ಯಾಲಯದಲ್ಲಿ ಗ್ರಾಜ್ಯುಯೇಷನ್ ಡೇ-2020 | ” ಸುಸಂಸ್ಕ್ರತ ವಿದ್ಯಾರ್ಥಿಗಳನ್ನಾಗಿ ಮಾಡಿ ಸಂತೃಪ್ತಿಯಿದೆ ” – ಅಧ್ಯಕ್ಷರಾದ ಯು.ಎಸ್.ಎ ನಾಯಕ್

ಉಪ್ಪಿನಂಗಡಿ : ಇಂದ್ರಪ್ರಸ್ಥ ವಿದ್ಯಾಲಯದ 2019-20 ನೇ ಶೈಕ್ಷಣಿಕ ಸಾಲಿನ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಮಾರ್ಚ್ 12 ರಂದು ವಿದ್ಯಾಲಯದ ಆವರಣದಲ್ಲಿ ‘ಗ್ರಾಜ್ಯುಯೇಷನ್ ಡೇ’ ಯನ್ನು ಆಯೋಜಿಸಲಾಗಿತ್ತು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿಕೊಂಡು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷರಾದ ಶ್ರೀಯುತ ಯು.ಎಸ್.ಎ ನಾಯಕ್ ರವರು, 12 ವರ್ಷಗಳ ಹಿಂದೆ ಅಂಬೆಗಾಲಿಕ್ಕುತ್ತಾ ವಿದ್ಯಾಲಯಕ್ಕೆ ಪಾದಾರ್ಪಣೆ ಮಾಡಿದ ಮುಗ್ಧ ಮಕ್ಕಳನ್ನು ಇಂದು ಸದೃಢ, ಸುಸಂಸ್ಕ್ರತ ವಿದ್ಯಾರ್ಥಿಗಳನ್ನಾಗಿ ಮಾಡಿ ಹೆತ್ತವರ ಮಡಿಲಿಗೆ ಒಪ್ಪಿಸುವ ಹಂತಕ್ಕೆ ತಲುಪಿರುವಲ್ಲಿ ಸಂಸ್ಥೆಯ ಸಾರ್ಥಕತೆಯಿದೆ, ಸಂತೃಪ್ತಿಯಿದೆ ಎಂದು ನುಡಿದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ತಮ್ಮ ಶಾಲಾ ಜೀವನದಲ್ಲಿ ಸಾಗಿ ಬಂದ ದಿನಗಳನ್ನು ಮೆಲುಕು ಹಾಕಿ, ಅನುಭವಗಳನ್ನು ಹಂಚಿಕೊಂಡು, ನೆನಪಿನ ದ್ಯೋತಕವಾಗಿ ಸಂಸ್ಥೆಗೆ ಉತ್ತಮ ಗುಣಮಟ್ಟದ ‘ಲ್ಯಾಪ್‍ಟಾಪ್’ ನ್ನು ಕೊಡುಗೆಯಾಗಿ ನೀಡಿದರು . ಸಂಸ್ಥೆಯ ಶಿಕ್ಷಕರಾದ ಶ್ರೀಮತಿ ಸುಪ್ರೀಯ. ಡಿ, ಸ್ರೀಮತಿ ಶಶಿಕಲಾ ಹಾಗೂ ಸದಾಶಿವ, ಶಿವಗಿರಿ ಕಲ್ಲಡ್ಕ ಇವರು ವಿದ್ಯಾರ್ಥಿಗಳೊಂದಿಗಿನ ತಮ್ಮ ಬಾಂಧವ್ಯ- ಒಡನಾಟಗಳ ಕುರಿತಾಗಿ ಮಾತನಾಡಿದರು. ಇಂದ್ರಪ್ರಸ್ಥ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಹೆಚ್. ಕೆ ಪ್ರಕಾಶ್ ಹಾಗೂ ವಿದ್ಯಾಲಯದ ಪ್ರಾಂಶುಪಾಲರಾದ ಶ್ರೀ ಜೋಸ್ ಎಂ. ಜೆ ಯವರು ವಿದ್ಯಾರ್ಥಿಗಳ ಭವಿಷ್ಯದ ಹೊಣೆಗಾರಿಕೆಯನ್ನು ನೆನಪಿಸಿ ಅವರಿಗೆ ಶುಭ ಹಾರೈಸಿದರು. ಈ ದಿನ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡ 10ನೇ ತರಗತಿ ವಿದ್ಯಾರ್ಥಿಗಳ ಪಾಲಕರು ಹಳ್ಳಿಯ ವಿದ್ಯಾರ್ಥಿಗಳು ದಿಲ್ಲಿಯ ಮಾದರಿಯ ಶಿಕ್ಷಣವನ್ನು ಪಡೆಯುವಂತಾಗುವಲ್ಲಿ ಸಂಸ್ಥೆಯ ಸಂಚಾಲಕರ ಪರಿಶ್ರಮವನ್ನು ಸ್ಮರಿಸಿಕೊಂಡರು.

ಈ ಕಾರ್ಯಕ್ರಮವನ್ನು ಸಂಸ್ಥೆಯ ಶಿಕ್ಷಕರಾದ ಶ್ರೀಮತಿ ವೀಣಾ ಮತ್ತು ಶ್ರೀಮತಿ ಯಶಾಕುಮಾರಿ ನಿರೂಪಿಸಿ, ಶ್ರೀಮತಿ ಎವ್ಲಿನ್ ಪಾಯಸ್ ಸ್ವಾಗತಿಸಿ , ಶ್ರೀಮತಿ ನಿಶಿತಾ ಕೆ.ಕೆ ವಂದಿಸಿದರು.

ಕಾರ್ಯಕ್ರಮದ ಕೊನೆಯಲ್ಲಿ ವಿದ್ಯಾರ್ಥಿಗಳಿಗೆ ಜ್ಞಾನ ಸಂಕೇತವಾಗಿ ಲೇಖನಿ ಮತ್ತು ದೀಪಗಳನ್ನು ನೀಡಿ ಶುಭ ಹಾರೈಸಲಾಯಿತು. ಈ ಕಾರ್ಯಕ್ರಮದಲ್ಲಿ ಇಂದ್ರಪ್ರಸ್ಥ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ನಿರ್ದೇಶಕಿಯಾದ ಶ್ರೀಮತಿ ವಸಂತಿ ನಾಯಕ್ , ಎಲ್ಲಾ ಬೋಧಕ – ಬೋಧಕೇತರ ವೃಂದದವರು, ಪ್ರೌಢ ಶಾಲಾ ವಿದ್ಯಾರ್ಥಿಗಳು, ಪಾಲಕರು ಉಪಸ್ಥಿತರಿದ್ದರು.

Leave A Reply

Your email address will not be published.