ಕಂಡ ಕಂಡಲ್ಲಿ ಕಳ್ಳತನದ ಅಕೌಂಟ್ ತೆರೆಯುತ್ತಿದ್ದ ಕಳ್ಳ ಪೊಲೀಸರ ಬಲೆಯಲ್ಲಿ

ಪುತ್ತೂರು ಗ್ರಾಮಾಂತರ ವೃತ್ತರವರ ನೇತ್ರತ್ವದ ಅಪರಾಧ ಪತ್ತೆ ದಳ ಮತ್ತು ಉಪ್ಪಿನಂಗಡಿ ಪೊಲೀಸ್ ಠಾಣಾ ಪೊಲೀಸ್ ಉಪನಿರೀಕ್ಷಕರ ಅಪರಾಧ ಪತ್ತೆ ದಳವು ಕುಖ್ಯಾತ ಕಳ್ಳ ಶೌಕತ್ ಅಲಿ (56) ಎಂಬಾತನನ್ನು ಕೊನೆಗೂ ಬಂಧಿಸಿದ್ದಾರೆ.

ಉಪ್ಪಿನಂಗಡಿ ನೆಕ್ಕಿಲಾಡಿ ಗ್ರಾಮದ ನೆಕ್ಕಿಲಾಡಿ ಜಂಕ್ಷನ್ ಎಂಬಲ್ಲಿ  ಈ ಬಂಧನ ನಡೆದಿದೆ.

ಈತ ಬಹಳ ಖತರ್ನಾಕ್ ಕಳ್ಳನಾಗಿದ್ದು, ತಾನು ಹೋದಲ್ಲೆಲ್ಲಾ ಕಳ್ಳತನದ ಅಕೌಂಟ್ ತೆರೆಯುತ್ತಿದ್ದ. ಬೀಗ ಹಾಕಿದ ಮನೆಗಳೇ ಈತನ ಟಾರ್ಗೆಟ್. ಒಂದು ಸಲ ಒಂದು ಮನೆಯ ಸುತ್ತ ತಿರುಗಾಡಿ ಬಂದ ಎಂದರೆ ಫಿನಿಶ್, ಮನೆಯ ಚಿನ್ನ ಬೆಳ್ಳಿ ಮತ್ತು ದುಬಾರಿ ವಸ್ತುಗಳ ಮತ್ತೊಂದು ವಾರದೊಳಗೆ ಈತನ ಕೈಯಲ್ಲಿ ಇರುತ್ತಿದ್ದವು. ಈತನ ಪ್ರಾಯ ಮಧ್ಯ ವಯಸ್ಸು ದಾಟಿದ್ದರೂ, ಕಳ್ಳತನದ ವಿಷಯಕ್ಕೆ ಬಂದಾಗ ಈತ 18ರ ಯುವಕನಂತೆ ಕಾರ್ಯಾಚರಿಸುತ್ತಿದ್ದ.

ಸದರಿ ಆಸಾಮಿಯು ಉಪ್ಪಿನಂಗಡಿ ಪೊಲೀಸ್ ಠಾಣಾ, ಅಧರ್ಶನಗರ, ನೆಕ್ಕಿಲಾಡಿ, ಕಲ್ಲೇರಿ, ಕೆಂಪಿ ಮಜಲು , ಪುತ್ತೂರು ನಗರ ಠಾಣಾ ಸರಹದ್ದಿನ ಅಜೇಯ ನಗರ, ಮುರ , ಬನ್ನೂರು ಹಾರಾಡಿ , ಕೋಡಿಂಬಾಡಿ, ಅರ್.ಟಿ ಓ ಬಳಿಯ ಜೈನರಗುರಿ , ಸಾಲ್ಮರ, ದಾರಂದಕುಕ್ಕು ,  ಬಂಟ್ವಾಳ ನಗರ ಠಾಣಾ ಸರಹದ್ದಿನ ಕಲ್ಲಡ್ಕ ಮೊದಲಾದ ಸ್ಥಳಗಳಲ್ಲಿ ಬೀಗ ಹಾಕಿದ  ಮನೆಗಳಲ್ಲಿ ನಡೆದ  ಕಳವು ಪ್ರಕರಣಗಳಲ್ಲಿ ಆರೋಪಿಯಾಗಿದ್ದ.

ಈತ ಮೂಲತಃ ಚಿಕ್ಕಮಗಳೂರು ಶಂಕರಪುರ ನಿವಾಸಿಯಾಗಿದ್ದು, ಪ್ರಸ್ತುತ ಬಂಟ್ವಾಳ ತಾಲೂಕು, ಮಾಣಿ ಗ್ರಾಮದ ಅಳಿರಾದಲ್ಲಿ ತನ್ನ ಬಿಡಾರ ಹೂಡಿದ್ದ.

ಈತನ ಬಂಧನದಿಂದ 13 ಪ್ರಕರಣಗಳನ್ನು ಪತ್ತೆ ಹಚ್ಚಿ ರೂ ಸುಮಾರು 18 ಲಕ್ಷ ಮೌಲ್ಯದ ಚಿನ್ನ  ಮತ್ತು  ಬೆಳ್ಳಿಯ ಆಭರಣಗಳನ್ನು  ಸ್ವಾಧೀನಪಡಿಸಲಾಗಿದೆ.

Leave A Reply

Your email address will not be published.