ಗುತ್ತಿಗಾರು ಮೇರ್ಕಜೆ | ಚಲಿಸುವ ಲಾರಿಯಿಂದಲೇ ಅಡಿಕೆ ಕಳ್ಳತನ | ಸ್ಥಳೀಯ ಯುವಕರ ಮಿಂಚಿನ ಕಾರ್ಯಾಚರಣೆ, ಮೂವರು ಅಂದರ್

ಗುತ್ತಿಗಾರಿನಿಂದ ಒಣ ಅಡಿಕೆಯನ್ನ ಮಾರಲು ಮಂಗಳೂರಿಗೆ ಬೆಳ್ಳಾರೆ ಮಾರ್ಗವಾಗಿ ಒಯ್ಯಲಾಗುತ್ತಿತ್ತು. ಗುತ್ತಿಗಾರಿನಿಂದ ಹೊರಟ ಲಾರಿ ದೊಡ್ಡತೋಟದ ಬಳಿಯ ಮೇರ್ಕಜೆಯ ಚಡಾವಿನಲ್ಲಿ ನಿಧಾನಕ್ಕೆ ಚಲಿಸಿದೆ.

ಆಗ ಲಾರಿ ಹತ್ತಿಕೊಂಡ ಯುವಕರ ತಂಡವನ್ನು ನಾಲ್ಕು ಚೀಲ ಅಡಿಕೆಯನ್ನು ಕೆಳಕ್ಕೆ ಬೀಳಿಸಿದೆ. ಲಾರಿ ಚಾಲಕ ಇದರ ಅರಿವಿಲ್ಲದೆ ತನ್ನ ಪಾಡಿಗೆ ತಾನು ಮುಂದಕ್ಕೆ ಹೋಗಿದ್ದಾನೆ. ಆದರೆ ಸ್ವಲ್ಪದರಲ್ಲೇ ಲಾರಿ ಕೆಟ್ಟು ನಿಂತಿದೆ. ಆಗ ಲಾರಿಯಲ್ಲಿ ಅಡಿಕೆ ಬಿಗಿದ ಹಗ್ಗಗಳು ಕತ್ತರಿಸಿ ಹೋದದ್ದು ಚಾಲಕನ ಗಮನಕ್ಕೆ ಬಂದಿದೆ. ತಕ್ಷಣ ಲಾರಿ ಚಾಲಕ ದೊಡ್ಡತೋಟದ ಅಡಿಕೆ ವ್ಯಾಪಾರಿ ಶ್ರೀಕಾಂತ್ ಮಾವಿನಕಟ್ಟೆಯವರಿಗೆ ಫೋನ್‌ಮಾಡಿ ಎಲ್ಲ ವಿಷಯವನ್ನು ತಿಳಿಸಿದ್ದಾರೆ.

ಬಳಿಕ ಲಾರಿ ಚಾಲಕ ದಾರಿಯಲ್ಲಿ ಬರುತ್ತಿದ್ದ ಯಾವುದೋ ಗಾಡಿ ಹತ್ತಿ ದೊಡ್ಡತೋಟದವರೆಗೆ ಹುಡುಕಿಕೊಂಡು ಹೋಗಿ ದೊಡ್ಡತೋಟದ ದಿನಸಿ ವ್ಯಾಪಾರಸ್ಥ ಸುರೇಶ್ ಎಂಬವರಲ್ಲಿ ಕೂಡಾ ವಿಷಯ ತಿಳಿಸಿದ್ದಾರೆ.

ಸುರೇಶ್ ಅವರು ಅಡಿಕೆ ತಮ್ಮಅಂಗಡಿಯಲ್ಲಿ ಕೆಲಸ ಮಾಡುವ ಹುಡುಗ ಮಾಧವ ಎಂಬವರಿಗೆ ವಿಷಯ ತಿಳಿಸಿ ಮತ್ತೊಬ್ಬ ಹುಡುಗ ಪುನೀತ್ ಮರ್ಗಿಲಡ್ಕ ರವರ ಜೊತೆ ಶ್ರೀಕಾಂತ್ ಅವರು ಸೇರಿ ಗೋಣಿ ಚೀಲ ಹುಡುಕಲು ತಡಮಾಡದೆ ಕಾರ್ಯಪ್ರವೃತ್ತರಾಗಿದ್ದಾರೆ. ಇವರು ದೊಡ್ಡತೋಟ ತಲುಪುತ್ತಿದ್ದಂತೆ ಕಾರೊಂದು ಅತೀ ವೇಗವಾಗಿ ಸುಳ್ಯದ ಕಡೆಗೆ ಹಾದುಹೋಯಿತು. ಇದರಿಂದ ಅನುಮಾನಗೊಂಡ ಶ್ರೀಕಾಂತ್ ರವರು ತಮ್ಮ ಹುಡುಗರನ್ನು ಮುಂದಕ್ಕೆ ಬಿಟ್ಟು ಕಾರನ್ನು ಚೇಸ್ ಮಾಡಿ ಕಾರಿನ ನಂಬರ್ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಆನಂತರ ಲಾರಿ ಚಾಲಕರಿಗೆ ಫೋನ್ ಮಾಡಿ ತಕ್ಷಣ ಬೆಳ್ಳಾರೆ ಪೋಲೀಸ್ ಠಾಣೆಗೆ ದೂರು ನೀಡುವಂತೆ ಹೇಳಿದ್ದಾರೆ ಮತ್ತು ಕಾರಿನ ನಂಬರ್ ಅನ್ನು ತಿಳಿಸಿದ್ದಾರೆ. ಮೌಖಿಕ ದೂರು ಬಂದ ಕೂಡಲೇ ಕಾರ್ಯಪ್ರವೃತ್ತರಾದ ಪೋಲೀಸರು ಕಾರಿನ ನಂಬರ್ ಆಧರಿಸಿ ಶರತ್ ಮತ್ತೊಬ್ಬ ಯುವಕ ತೇಜಸ್ ಮತ್ತು ಗೌರೀಶ ಬೀಮಾಜಿಗೊಡ್ಲು ಎಂಬವರನ್ನು ವಶಕ್ಕೆ ಪಡೆದಿದ್ದಾರೆ.

4 ಚೀಲ ಅಡಿಕೆಯಲ್ಲಿ, 1 ಚೀಲ ಅಡಿಕೆಯನ್ನು ಸುಳ್ಯದ ಅಂಗಡಿಯೊಂದರ ಮುಂದೆ ಇರಿಸಿ ಮಾರಾಟ ಮಾಡುವ ಪ್ರಯತ್ನ ನಡೆಸಿದ್ದರು.

ಉಳಿದ 3 ಚೀಲ ಅಡಿಕೆಯನ್ನು ಮತ್ಯಾರದೋ ತೋಟದಲ್ಲಿ ಬಚ್ಚಿಟ್ಟಿದ್ದರು. ಮಿಂಚಿನ ಕಾರ್ಯಾಚರಣೆ ನಡೆಸಿದ ಸ್ಥಳೀಯ ಯುವಕರ ಬಗ್ಗೆ ಮತ್ತು ಪೊಲೀಸರ ಬಗ್ಗೆ ಶ್ಲಾಘನೆ ಕೇಳಿಬಂದಿದೆ.

Leave A Reply

Your email address will not be published.