‘ ನೇಮ್ ಆಂಡ್ ಶೇಮ್ ‘ ಪೋಸ್ಟರ್ ಅನ್ನು ತಕ್ಷಣ ತೆಗೆಯುವಂತೆ ಅಲಹಾಬಾದ್ ಹೈಕೋರ್ಟ್ ಸೂಚನೆ : ಯೋಗಿ ಆಡಿತ್ಯನಾಥ್ ಸರ್ಕಾರಕ್ಕೆ ಮುಜುಗರ

ಕಳೆದ ಡಿಸೆಂಬರ್ 19 ರಂದು ನಡೆದ ಸಿಎಎ-ಎನ್ ಆರ್ ಸಿ ವಿರುದ್ಧದ ಪ್ರತಿಭಟನೆಯಲ್ಲಿ ಸಾರ್ವಜನಿಕ ಆಸ್ತಿ ಪಾಸ್ತಿ ನಷ್ಟ ಮಾಡಿದ 57 ಜನರ ಹೆಸರು ಭಾವಚಿತ್ರ ಮತ್ತು ವಿಳಾಸವನ್ನುಗೊಂಡ ‘ ನೇಮ್ ಆಂಡ್ ಶೇಮ್ ‘ ಪೋಸ್ಟರ್ ತೆರವುಗೊಳಿಸುವಂತೆ ಅಲಹಬಾದ್ ಹೈಕೋರ್ಟ್ ಉತ್ತರಪ್ರದೇಶ ಸರ್ಕಾರಕ್ಕೆ ಸೂಚಿಸಿದೆ. ಈ ಮೂಲಕ ಯೋಗಿ ಆದಿತ್ಯನಾಥ್ ಸರಕಾರಕ್ಕೆ ಮುಖಭಂಗವಾಗಿದೆ.

” ವಿಶ್ವಸಂಸ್ಥೆಯ ಮೂಲ ಆಶಯವಾದ ಗೌಪ್ಯತೆಯು ವ್ಯಕ್ತಿಯ ಮೂಲಭೂತ ಸ್ವಾತಂತ್ರ್ಯ. ಈ ರೀತಿ ಪೋಸ್ಟರ್ ಹಾಕುವುದರಿಂದ ವ್ಯಕ್ತಿಯ ಗೌಪ್ಯತೆಗೆ ಧಕ್ಕೆ ಉಂಟಾಗುತ್ತದೆ” ಎಂದು ನ್ಯಾಯಮೂರ್ತಿಗಳು ತಮ್ಮ ತೀರ್ಪಿನಲ್ಲಿ ಹೇಳಿದರು.

ಪ್ರಕರಣದ ವಿವರ

ಕಳೆದ ಡಿಸೆಂಬರ್ 19 ರಂದು ನಡೆದ ಸಿಎಎ-ಎನ್ ಆರ್ ಸಿ ವಿರುದ್ಧದ ಪ್ರತಿಭಟನೆಯಲ್ಲಿ ಉತ್ತರಪ್ರದೇಶದ ಪ್ರತಿಭಟನಾಕಾರರು ಸಾರ್ವಜನಿಕ ಆಸ್ತಿಯನ್ನು ನಾಶಪಡಿಸಿದ್ದರು. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಸರಕಾರ ಅಂತಹ ಆಸ್ತಿ ನಾಶ ಮಾಡಿದ ಪ್ರತಿಭಟನಾಕಾರರನ್ನು ಪತ್ತೆಮಾಡಿ ಒಟ್ಟು 57 ಜನರ ವಿರುದ್ಧ ಪ್ರಕರಣ ದಾಖಲು ಮಾಡಿದ್ದಲ್ಲದೆ ಅವರ ಹೆಸರುಗಳನ್ನು ಅವರ ವಿಳಾಸಗಳನ್ನು ಮತ್ತು ಭಾವಚಿತ್ರವನ್ನು ದೊಡ್ಡ ಪೋಸ್ಟರುಗಳಲ್ಲಿ ಮುದ್ರಿಸಿ’ ನೇಮ್ ಆಂಡ್ ಶೇಮ್ ‘ ಎಂಬ ಹೋರ್ಡಿಂಗ್ ಅನ್ನು ಲಕ್ನೋದ ಸಾರ್ವಜನಿಕ ಸ್ಥಳದಲ್ಲಿ ಹಾಕಿದ್ದರು.

ಈ ರೀತಿ ಆಪಾದಿತರ ಭಾವಚಿತ್ರ ವಿಳಾಸವನ್ನು ಸಾರ್ವಜನಿಕ ಸ್ಥಳದಲ್ಲಿ ಹಾಕಿದ್ದಕ್ಕೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ‘ ಸುವೋ ಮೋಟೋ’ ಪ್ರಕರಣ ಕೈಗೆತ್ತಿಕೊಂಡಿದ್ದರು.
” ಈ ರೀತಿ ಹೋಲ್ಡಿಂಗ್ ಹಾಕುವುದು ನಾಗರಿಕರ ಗೌಪ್ಯತೆ, ಗೌರವ ಮತ್ತು ಸ್ವಾತಂತ್ರ್ಯದ ಹರಣ ಆಗುತ್ತದೆ,ಇದು ಕಾನೂನಿಗೆ ವಿರುದ್ದವಾದ ಕ್ರಮ ಆಗುತ್ತದೆ ಎಂದೆನಿಸುತ್ತಿದೆ. ಹೀಗೆ ಮಾಡಬಹುದೆಂದು ಯಾವ ಕಾನೂನಿನಲ್ಲಿದೆ ? ” ಎಂದವರು ಪ್ರಶ್ನಿಸಿದ್ದಾರೆ. ಈ ಬಗ್ಗೆ ನ್ಯಾಯಮೂರ್ತಿಗಳು ಸರ್ಕಾರದ ಪ್ರತಿಕ್ರಿಯೆಯನ್ನು ಕೇಳಿದ್ದರು.

ಮೊನ್ನೆ ಸರ್ಕಾರದ ಕಡೆಯಿಂದ ಈ ರೀತಿ ಆಪಾದಿತರ ಬಗೆಗಿನ ಹೋರ್ಡಿಂಗ್ ಅನ್ನು ಬಲವಾಗಿ ಸಮರ್ಥಿಸಿ ಕೊಳ್ಳಲಾಗಿತ್ತು. ಆಡಳಿತ ವ್ಯವಸ್ಥೆಯ ಪರವಾಗಿ ಸರ್ಕಾರದ ಅಡ್ವಕೇಟ್ ಜನರಲ್ ಅವರು “ಹೀಗೆ ಮಾಡುವುದರಿಂದ ಸಾರ್ವಜನಿಕ ಆಸ್ತಿಪಾಸ್ತಿ ಹಾನಿ ಮಾಡುವವರು ಜಾಗೃತರಾಗಿ, ಮುಂದಕ್ಕೆ ಇಂತಹ ದುಷ್ಕೃತ್ಯ ಎಸಗುವವರಿಗೆ ಇದೊಂದು ಪಾಠ ವಾಗುತ್ತದೆ” ಎಂದು ವಾದಿಸಿದ್ದರು.

ನಿನ್ನೆ ಭಾನುವಾರವಾದ ಕಾರಣ ಕೋರ್ಟ್ ತೀರ್ಪನ್ನು ಇವತ್ತು ಸಂಜೆ ಪ್ರಕಟಿಸುವುದೆಂದು ತಿಳಿಸಿತ್ತು. ಇಂದು ತಕ್ಷಣದಿಂದ ಎಲ್ಲಾ ಹೋರ್ಡಿಂಗ್ ಗಳನ್ನು ತೆಗೆಯಬೇಕೆಂದು ಮತ್ತು ಮಾರ್ಚ್ 16 ರ ಒಳಗೆ ಸ್ಟೇಟಸ್ ರಿಪೋರ್ಟ್ ನೀಡಬೇಕೆ೦ದು ಆದೇಶಿಸಿದೆ.

Leave A Reply

Your email address will not be published.