ಪ್ರಾಡಕ್ಟ್ಸ್ಆಫ್ VC ಜರ್ನಲಿಸಂ । ವಿದ್ಯಾರ್ಥಿಗಳ ವಿನೂತನ ಪ್ರಯತ್ನದ 2ನೇ ಕಿರುಚಿತ್ರ“ ಟೈಮ್ ಬನ್ನಗ ”| ನಮ್ಮಕುಲೇ ಯಮೆ ಆಪೆರ್ !

ಪ್ರಾಡಕ್ಟ್ಸ್ಆಫ್ VC ಜರ್ನಲಿಸಂ | ವಿವೇಕಾನಂದ ಜರ್ನಲಿಸಂ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಬರೆಯುವ ಅಂಕಣ

ಸಿನಿಮಾ ಅನ್ನೋದೇ ಹಾಗೇ ವಿದ್ಯಾರ್ಥಿಗಳನ್ನು ಕ್ರೀಯಾಶೀಲರನ್ನಾಗಿ ಮಾಡುತ್ತದೆ. ವಿದ್ಯಾರ್ಥಿಗಳನ್ನು ಹಲವು ಸಾಧ್ಯತೆಯೆಡೆಗೆ ಕೊಂಡೊಯ್ಯುತ್ತದೆ. ವೃತ್ತಿ ಜೀವನಕ್ಕೆ ಬೇಕಾದ ಅಗತ್ಯತೆಗಳನ್ನೂ ತಿಳಿಸಿಕೊಡುತ್ತದೆ. ಅದೇ ರೀತಿ ಶ್ರೀ ಅನ್ನಪೂರ್ಣೇಶ್ವರಿ ಕ್ರಿಯೇಶನ್ಸ್ ಅಡಿಯಲ್ಲಿ ಪುತ್ತೂರಿನ ವಿವೇಕಾನಂದ ಕಾಲೇಜಿನ ದ್ವಿತೀಯ ಬಿ.ಎ ವಿದ್ಯಾರ್ಥಿಗಳು ಎರಡನೇ ಬಾರಿ ಕಿರುಚಿತ್ರವನ್ನು ಮಾಡಿ ಬಿಡುಗಡೆಗೊಳಿಸಿದ ಉತ್ಸಾಹದಲ್ಲಿದ್ದಾರೆ. ಇವರೊಂದಿಗೆ ಇತರರೂ ಭಾಗಿಯಾಗಿದ್ದಾರೆ. ಈ ಮೂಲಕ ವಿನೂತನ ಸಾಧನಾ ಪಥದತ್ತ ಸಾಗುತ್ತಿದ್ದಾರೆ ಈ ವಿದ್ಯಾರ್ಥಿಗಳು.

ಹನ್ನೆರಡು ನಿಮಿಷಗಳ ಈ ತುಳು ಕಿರುಚಿತ್ರದ ಶೀರ್ಷಿಕೆ “ಟೈಮ್ ಬನ್ನಗ”. ರಸ್ತೆ ನಿಯಮಗಳನ್ನು ಪ್ರತಿಯೊಬ್ಬರೂ ಪಾಲಿಸಲೇಬೇಕು. ರಸ್ತೆ ನಿಯಮಗಳನ್ನು ಉಲ್ಲಂಘಿಸಿ ಸಾಗಿದರೆ ಏನಾಗುತ್ತದೆ ಎಂಬುದನ್ನು ಈ ಕಿರುಚಿತ್ರವು ತಿಳಿಸಿಕೊಡುತ್ತದೆ. ಈ ಕಿರುಚಿತ್ರವು ರಸ್ತೆ ನಿಯಮಗಳನ್ನು ಪಾಲಿಸಬೇಕು ಎಂಬ ಸಂದೇಶವನ್ನು ನೀಡುತ್ತದೆ. ಮುಖ್ಯವಾಗಿ ಯವಕರಲ್ಲಿ ರಸ್ತೆ ನಿಯಮಗಳ ಬಗ್ಗೆ ಅರಿವು ಮೂಡಿಸುತ್ತದೆ “ಟೈಮ್ ಬನ್ನಗ”.

ಇತ್ತೀಚಿನ ದಿನಗಳಲ್ಲಿ ರಸ್ತೆ ಅಪಘಾತಗಳ ಸಂಖ್ಯೆ ಏರುಮುಖವಾಗಿದೆ. ಅದೆಷ್ಟೋ ಜನರು ತಮ್ಮ ತಪ್ಪಿಲ್ಲದೇ ಪ್ರಾಣವನ್ನು ಕಳೆದುಕೊಂಡರೆ ಇನ್ನೂ ಹಲವರು ಅಂಗಾಂಗಗಳನ್ನು ಕಳೆದುಕೊಂಡು ಬಾಳ್ವೆ ಮಾಡುತ್ತಿರುವುದು ನಿಜವಾಗಿಯೂ ಮನಕಲುಕುವ ವಿಚಾರ. ರಸ್ತೆ ನಿಯಮಗಳು ಜನರ ಒಳಿತಿಗಾಗಿವೆಯೇ ವಿನಃ ಕೆಡುಕಿಗಾಗಿ ಅಲ್ಲ. ರಸ್ತೆ ನಿಯಮಗಳನ್ನು ಪಾಲಿಸುವುದರಿಂದ ಅಮೂಲ್ಯವಾದ ಪ್ರಾಣವನ್ನು ಉಳಿಸಿಕೊಳ್ಳಬಹುದು ಎಂಬ ಎಚ್ಚರಿಕೆಯನ್ನು ನೀಡುವುದೇ ಈ ಕಿರುಚಿತ್ರದ ಮುಖ್ಯ ಉದ್ದೇಶ.

ಕಥೆ, ನಿರ್ದೇಶನ, ಸಂಕಲನ, ಛಾಯಾಗ್ರಹಣ ಎಲ್ಲವನ್ನೂ ವಿದ್ಯಾರ್ಥಿಗಳೇ ಮಾಡಿದ್ದಾರೆ. ಈ ಕಿರುಚಿತ್ರಕ್ಕೆ ಕಾರ್ತಿಕ್ ಕುಮಾರ್ ವಿಟ್ಲರವರ ಕಥೆ, ಸಂಭಾಷಣೆ ಮತ್ತು ನಿರ್ದೇಶನವಿದೆ. ಕೀರ್ತನ್ ರಾಜ್ ಮತ್ತು ದಿನೇಶ್ ಸಿ.ಜೆ.ಯವರ ಛಾಯಾಗ್ರಹಣವಿದ್ದು, ಸಹನಿರ್ದೇಶಕರಾಗಿ ದೀಕ್ಷಿತ್ ವರ್ಮುಡಿ ಹಾಗೂ ಅಚಲ್ ವಿಟ್ಲ ಕೆಲಸ ಮಾಡಿದ್ದಾರೆ. ಕೆ.ಎಸ್.ಕುಲಾಲ್‍ರವರು ನಿರ್ಮಾಪಕರಾಗಿದ್ದಾರೆ. ಶ್ರೀಜಿತ್‍ರವರ ಎಡಿಟಿಂಗ್ ಕರಾಮತ್ತು ಇದರಲ್ಲಿದೆ. ಚೇತನ್ ಕೆ.ವಿಟ್ಲ ಕಿರುಚಿತ್ರಕ್ಕೆ ಸಾಹಿತ್ಯ ಮತ್ತು ಸಂಗೀತ ನೀಡಿದ್ದಾರೆ. ಒಟ್ಟು ಹತ್ತು ಮಂದಿ ವಿದ್ಯಾರ್ಥಿಗಳ ಕೈಚಳಕ ಈ ಕಿರುಚಿತ್ರದಲ್ಲಿರುವುದನ್ನು ಗಮನಿಸಬಹುದು. ವಿಟ್ಲ ಪ್ರದೇಶದಲ್ಲಿ ಚಿತ್ರೀಕರಣವನ್ನು ಮಾಡಲಾಗಿದೆ.

‘ಟೈಮ್ ಬನ್ನಗ’ ಈ ತಂಡದ ಎರಡನೇ ಕಿರುಚಿತ್ರವಾಗಿದೆ. ಇದರಲ್ಲಿ ನಟಿಸಿರುವ ಅಚಲ್ ವಿಟ್ಲ ನಟನೆಯಲ್ಲಿ ಸೈ ಎನಿಸಿಕೊಂಡಿದ್ದು, ಕವನ ಮತ್ತು ಕಥೆಗಳನ್ನೂ ಬರೆಯುತ್ತಾ ಬರವಣಿಗೆ ಕಲೆಯನ್ನೂ ಕರಗತ ಮಾಡಿಕೊಂಡಿದ್ದಾರೆ. ಮಾತ್ರವಲ್ಲದೇ ಕೊಪ್ಪಳದಲ್ಲಿ ನಡೆದ ರಾಜ್ಯಮಟ್ಟದ ತಾಲೀಮ್‍ನಲ್ಲಿ ಭಾಗವಹಿಸಿ ಎರಡನೇ ಸ್ಥಾನವನ್ನು ಗಳಿಸಿದ್ದಾರೆ. ದೀಕ್ಷಿತ್ ವರ್ಮುಡಿಯವರು ಭಾಗವತಿಕೆಯಲ್ಲಿ ನಿಪುಣರಾಗಿದ್ದಾರೆ. ನಿರ್ದೇಶಕರಾಗಿರುವ ಕಾರ್ತಿಕ್ ಕುಮಾರ್ ವಿಟ್ಲ ಖಾಲಿ ಹಾಳೆಗಳ ಮೇಲೆ ಬಣ್ಣದ ಚಿತ್ತಾರ ಮೂಡಿಸುತ್ತಾ ಚಿತ್ರಗಳಿಗೆ ಜೀವಕಳೆ ತುಂಬುವಲ್ಲಿ ಎತ್ತಿದ ಕೈ. ಕ್ಯಾಮರಾದಲ್ಲಿ ಸದಾ ನವೀನತೆಯನ್ನು ಕ್ಲಿಕ್ಕಿಸುತ್ತಾ ಛಾಯಾಗ್ರಹಣದಲ್ಲಿ ಬೆಳಗುತ್ತಿದ್ದಾರೆ ಕೀರ್ತನ್ ರಾಜ್.

ದಿನೇಶ್ ಸಿ.ಜೆ.ಯವರು ಚೆಂಡೆವಾದಕರಾಗಿ ಹಲವರಿಂದ ಪ್ರಶಂಸೆ ಗಿಟ್ಟಿಸಿಕೊಂಡ ಪ್ರತಿಭೆ. ಇತ್ಯಾದಿ ಪ್ರತಿಭಾನ್ವಿತರನ್ನು ಒಳಗೊಂಡಿರುವ ಈ ತಂಡವು ಈ ಮೊದಲು “ಫಾರ್ವರ್ಡ್” ಕಿರುಚಿತ್ರವನ್ನು ಮಾಡಿ ಯಶಸ್ಸು ಪಡೆದಿದ್ದಾರೆ. “ಟೈಮ್ ಬನ್ನಗ” ಕಿರುಚಿತ್ರವು ‘ಅನ್ನಪೂರ್ಣೇಶ್ವರಿ ಕ್ರಿಯೇಶನ್ಸ್’ ಯೂಟ್ಯೂಬ್ ಚಾನೆಲ್‍ನಲ್ಲಿ ಈಗಾಗಲೇ ಬಿಡುಗಡೆಗೊಂಡಿದೆ. ಟೈಮ್ ಬನ್ನಗ ಕಿರುಚಿತ್ರವು ಯುವ ಮನಸ್ಸುಗಳಲ್ಲಿ ಪರಿವರ್ತನೆಯನ್ನು ತರಲಿ. ಟ್ರಾಫಿಕ್ ರೂಲ್ಸ್ ಅನ್ನು ಸ್ಟ್ರಿಕ್ಟ್ ಆಗಿ ಫಾಲೋ ಮಾಡುವಂತಾಗಲಿ. ಮತ್ತು ಮುಖ್ಯವಾಗಿ ಈ ಕಿರುಚಿತ್ರಕ್ಕೆ ನಿಮ್ಮ ಹಾರೈಕೆಯೂ ಇರಲಿ.

ಸೌಜನ್ಯ.ಬಿ.ಎಂ.ಕೆಯ್ಯೂರು
ದ್ವಿತೀಯ ಪತ್ರಿಕೋದ್ಯಮ
ವಿವೇಕಾನಂದ ಪದವಿ ಕಾಲೇಜು, ಪುತ್ತೂರು.
Leave A Reply

Your email address will not be published.