ಹಿರಿತನಕ್ಕೆ ಮಣೆ | ಮಂಗಳೂರು ಮೇಯರ್ ಆಗಿ‌ ದಿವಾಕರ್

0 5

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಆಗಿ ಬಿಜೆಪಿಯ ಹಿರಿಯ ಸದಸ್ಯ ಕಂಟೋನ್ಮೆಂಟ್ 46ನೇ ವಾರ್ಡ್ ನ ದಿವಾಕರ ಪಾಂಡೇಶ್ವರ ಹಾಗೂ ಉಪ ಮೇಯರ್ ಆಗಿ ಕುಳಾಯಿ 9 ನೇ ವಾರ್ಡ್‌ನ ವೇದಾವತಿ ಅವರು ಆಯ್ಕೆಯಾಗಿದ್ದಾರೆ.

60 ಸದಸ್ಯ ಬಲದ ಮನಪಾ ಚುನಾವಣೆಯಲ್ಲಿ 44 ಸ್ಥಾನ ಗೆಲ್ಲುವ ಮೂಲಕ ಬಿಜೆಪಿ ಭರ್ಜರಿ ಬಹುಮತ ಹೊಂದಿದೆ. ಮೇಯರ್- ಹಿಂದುಳಿದ ವರ್ಗ ಎ ಹಾಗೂ ಉಪಮೇಯರ್ -ಸಾಮಾನ್ಯ ಮಹಿಳೆ ಮೀಸಲು ಹೊಂದಿದೆ. ದಿವಾಕರ ಅವರು ಕಂಟೋನ್ಮೆಂಟ್ ವಾರ್ಡ್‌ನಿಂದ ಮೂರನೇ ಬಾರಿ ಆಯ್ಕೆಯಾದ ಹಿನ್ನೆಲೆಯಲ್ಲಿ ಪಕ್ಷ ಹಿರಿತನಕ್ಕೆ ಮನ್ನಣೆ ನೀಡಿದೆ.

ದಿವಾಕರ್

ಬಿಜೆಪಿಯ ದಿವಾಕರ ಪಾಂಡೇಶ್ವರ ಪರ 46 ಮತಗಳು ಚಲಾವಣೆಯಾದವು.

ಕಾಂಗ್ರೆಸ್ ನ ಕೇಶವ ಪರ 15 ಮತಗಳು ಚಲಾವಣೆಯಾದವು. ಈ ಮೂಲಕ ದಿವಾಕರ ಪಾಂಡೇಶ್ವರ ಮಂಗಳೂರು ಮೇಯರ್ ಆಗಿ ಆಯ್ಕೆಯಾದರು.

ಉಪ ಮೇಯರ್ ಚುನಾವಣೆ

ಉಪ ಮೇಯರ್ ಸ್ಥಾನಕ್ಕೆ ಕಾಂಗ್ರೆಸ್ ನಿಂದ ಝೀನತ್ ಸಂಶುದ್ದೀನ್ ಹಾಗೂ ಬಿಜೆಪಿಯಿಂದ ಜಾನಕಿ ಯಾನೆ ವೇದಾವತಿ ಸ್ಪರ್ಧಿಸಿದ್ದರು.

ಝೀನತ್ ಪರವಾಗಿ 17 (ಎಸ್ ಡಿಪಿಐ ಎರಡು ಮತ ಸೇರಿ) ಮತಗಳು ಹಾಗೂ ಜಾನಕಿ ಯಾನೆ ವೇದಾವತಿ ಪರವಾಗಿ 46 ಮತಗಳು ಚಲಾವಣೆಯಾದವು.

ನೂತನ ಉಪ ಮೇಯರ್ ಆಗಿ ಬಿಜೆಪಿಯ ಜಾನಕಿ ಯಾನೆ ವೇದಾವತಿ ಆಯ್ಕೆಯಾದರು. ಶಾಸಕರಾದ ವೇದವ್ಯಾಸ ಕಾಮತ್ ಹಾಗೂ ಡಾ. ಭರತ್ ಶೆಟ್ಟಿ, ವಿ. ಪರಿಷತ್ ಸದಸ್ಯ ಐವನ್ ಡಿಸೋಜ ಉಪಸ್ಥಿತರಿದ್ದು, ತಮ್ಮ ಪಕ್ಷದ ಅಭ್ಯರ್ಥಿಗಳ ಪರವಾಗಿ ಮತ ಚಲಾಯಿಸಿದರು.

ಸಂಸದ ನಳಿನ್ ಕುಮಾರ್ ಕಟೀಲು ಗೈರುಹಾಜರಾಗಿದ್ದರು. ಮೈಸೂರು ವಿಭಾಗೀಯ ಪ್ರಾದೇಶಿಕ ಆಯುಕ್ತ ವಿ. ಯಶವಂತ್, ಅಪರ ಪ್ರಾದೇಶಿಕ ಆಯುಕ್ತೆ ಕೆ.ಎಂ. ಗಾಯತ್ರಿ, ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್, ಅಪರ ಜಿಲ್ಲಾಧಿಕಾರಿ ರೂಪಾ, ಆಯುಕ್ತ ಅಜಿತ್ ಕುಮಾರ್ ಹೆಗ್ಡೆ ಉಪಸ್ಥಿತರಿದ್ದು ಚುನಾವಣೆ ನಡೆಸಿಕೊಟ್ಟರು.

Leave A Reply