300 ಅಡಿಕೆ ಗಿಡದಿಂದ ವಾರ್ಷಿಕ 3 ಲಕ್ಷ ಉತ್ಪತ್ತಿ । ಎನ್ ಸಿ ರೋಡು ಗಣೇಶ್ ಭಟ್ ರ ರಸಾವರಿ ರಸಗೊಬ್ಬರ ವಿಧಾನ !

ನನ್ನ ಅಪ್ಪ ನನಗೆ ಜಾಸ್ತಿ ಆಸ್ತಿ ಮಾಡಿಟ್ಟಿಲ್ಲ. ನನಗಿರುವುದು ಇನ್ನೂರು ಮುನ್ನೂರು ಅಡಿಕೆ ಮರ ಅಷ್ಟೇ. ಅದರಲ್ಲಿ ಎಷ್ಟು ತಾನೆ ಫಸಲು ಪಡೆಯಲು ಸಾಧ್ಯ? ಅಲ್ಲದೆ ನಮ್ಮದು ಸಾಕಷ್ಟು ನೀರು ಇರುವ ಜಾಗವಲ್ಲ. ಇರೋ ಸ್ವಲ್ಪ ನೀರಿನಲ್ಲಿ ಹೇಗೆ ತಾನೆ ಅಡಿಕೆ ಕೃಷಿ ಮಾಡಲು ಸಾಧ್ಯ? ಎಂದು ನಿಮ್ಮ ಅದೃಷ್ಟವನ್ನು ಮತ್ತು ಮಾತಾ ಪಿತೃಗಳನ್ನು ಒಟ್ಟೊಟ್ಟಿಗೆ ದೂರಲು ಹೊರಟಿದ್ದರೆ ಹೋಲ್ಡ್ ಆನ್ ….

ನಿಮ್ಮಲ್ಲಿರುವ 300 ಅಡಿಕೆ ಗಿಡವೇ ಸಾಕು. ಒಂದು ಫಲವತ್ತಾದ ಕೃಷಿ ನಿಮ್ಮದಾಗಬಹುದು. 300 ಅಡಿಕೆ ಗಿಡ ಗಳಿಂದಲೇ ವಾರ್ಷಿಕ ಮೂರು ಲಕ್ಷ ಆದಾಯ ಗಳಿಸಬಹುದು. ಒಂದು ನೆಮ್ಮದಿಯ ಸಂಸಾರ ಸಾಗಿಸಬಹುದು.

ಇದು ಸಾಧ್ಯಾನಾ?

ಬೆಳ್ತಂಗಡಿಯಿಂದ ಹೊರಟು ಗುರುವಾಯನಕೆರೆಯ ದಾಟಿ ಮಡಂತ್ಯಾರು-ಪುಂಜಾಲಕಟ್ಟೆಯನ್ನು ಹಾಯ್ದು ಮುಂದಕ್ಕೆ ಕೆಲ ಕಿಲೋಮೀಟರ್ಗಳು ಮಂಗಳೂರು ಕಡೆಗೆ ಸಾಗುವ ರಸ್ತೆಯಲ್ಲಿ ಹೋದರೆ ಸಿಗುತ್ತದೆ ಎನ್ ಸಿ ರೋಡು. ಅಲ್ಲಿ ಯಾರನ್ನು ಬೇಕಾದರೂ ಕೇಳಿ ನೋಡಿ ಕೆಮ್ಮಿಂಜೆ ಗಣೇಶ ಭಟ್ಟರ ಮನೆಗೆ ಹೋಗುವ ದಾರಿ ಸಲೀಸು.

ಅವರದು ನಿಜಕ್ಕೂ ಅಡಿಕೆ ತೋಟವಲ್ಲ. ಅದೊಂದು ಸುವಿಶಾಲವಾಗಿ ಹರಡಿಕೊಂಡಿರುವ, ಅಡಿಕೆ- ಕೇವಲ ಅಡಿಕೆಯ ಎಸ್ಟೇಟ್ ! ತಮ್ಮ ಒಟ್ಟು 27 ಎಕರೆ ಜಾಗದಲ್ಲಿ ಬರೋಬ್ಬರಿ 25 ಎಕರೆಯಲ್ಲಿ ಗಣೇಶ ಭಟ್ಟರು ಅಡಿಕೆ ಗಿಡ ನೆಟ್ಟಿದ್ದಾರೆ. ತೋಟದ ಸುತ್ತ ತೆಂಗಿನ ಗಿಡ ನೆಟ್ಟದ್ದು ಬಿಟ್ಟರೆ, ಒಟ್ಟಾರೆ ಇರುವುದು ಅಡಿಕೆಯೊಂದೇ !

ಅದರಲ್ಲೇನಿದೆ ಸ್ಪೆಶಾಲಿಟಿ ? ನೂರಾರು ಎಕರೆ ಅಡಿಕೆ ತೋಟದಗಳಿರುವ ಗಣಿಗಳಿದ್ದಾರೆ. ಆವತ್ತು ಸುಳ್ಯದ ಕುರುಂಜಿ ವೆಂಕಟರಮಣ ಗೌಡರು ಮೊದಲು ಅಡಿಕೆ ಶುರುಮಾಡಿದ್ದೇ 20,000 ಅಡಿಕೆ ಗಿಡಗಳಿಂದ- ಹೀಗೆಲ್ಲಾ ನೀವು ಹೇಳಬಹುದು.

ಇಲ್ಲಿರುವುದೇ ಕೆಮ್ಮಿಂಜೆ ಗಣೇಶ ಸ್ಪೆಶಾಲಿಟಿ. ಸಾವಯವ ಕೃಷಿ, ಸುಸ್ಥಿರ ಅಥವಾ ಅರಣ್ಯ ಮಾದರಿ ಅಥವಾ ಝೀರೋ ಇನ್ ಪುಟ್ ಕೃಷಿ, ಡೆನ್ಸ್ ಫಾರ್ಮಿಂಗ್ ಮುಂತಾದ ಕೃಷಿ ಚಟುವಟಿಕೆಗಳ ಮಧ್ಯೆ ಭಟ್ಟರು ತಮ್ಮದೇ ಆದ ಹೊಸ ವಿಧಾನವನ್ನು ಕಂಡುಕೊಂಡಿದ್ದಾರೆ.

ಏನಿವರ ಸ್ಪೆಷಲಿಟಿ ?

ಭಟ್ಟರ ಸ್ಪೆಶಾಲಿಟಿಯ ಬಗ್ಗೆ ತಿಳಿದುಕೊಳ್ಳುವ ಮೊದಲು, ಅವರಿಲ್ಲಿಗೆ ಬಂದಾಗ ಇದ್ದ ಪರಿಸ್ಥಿತಿಯನ್ನು ತಿಳಿದುಕೊಳ್ಳೋಣ. ಅವರು ಇಲ್ಲಿಗೆ ಕಾಲಿಟ್ಟಾಗ ಈ 27 ಎಕರೆ ಭೂಮಿಯು ಹೆಚ್ಚು ಕಮ್ಮಿ ನೀರಿಲ್ಲದ ಪ್ರದೇಶವಾಗಿತ್ತು. ಆದರೂ ಕೃಷಿ ಫ್ಯಾಮಿಲಿಯಿಂದ ಬಂದ ಗಣೇಶ ಭಟ್ಟರಿಗೆ ಕೃಷಿ ಮಾಡಬೇಕೆಂಬ ತುಡಿತವಿತ್ತು. ಅತ್ಯಂತ ಕಡಿಮೆ ನೀರಿನಲ್ಲಿ ಕೃಷಿ ಮಾಡುವುದು ಹೇಗೆ ಎಂದು ಯೋಚಿಸುತ್ತಾ ಕುಳಿತಾಗ ಅವರಿಗೆ ಕಂಡದ್ದು ಹನಿ ನೀರಾವರಿ ಪದ್ಧತಿ.

ಹನಿ ನೀರಾವರಿ ಪದ್ಧತಿಯ ಜೊತೆಗೆ ಅಲ್ಲಿಲ್ಲಿ ಬಳಕೆಯಲ್ಲಿದ್ದ ನೀರಿನಲ್ಲಿ ಕರಗಿಸಿ ಗೊಬ್ಬರ ನೀಡುವ ಪದ್ಧತಿಯನ್ನು ಮಿಲಿತ ಮಾಡಿಕೊಂಡು ಗಣೇಶ ಭಟ್ಟರು ತಮ್ಮ ತೋಟದಲ್ಲಿ ಹೊಸ ಅಧ್ಯಯನಕ್ಕೆ ಶುರುಮಾಡಿದರು.

ನಾವು ಸಾಂಪ್ರದಾಯಿಕವಾಗಿ ಬಳಸುವ ಕೆಲವು ಗೊಬ್ಬರಗಳು ನೀರಿನಲ್ಲಿ ಕರಗುತ್ತವೆ. ಮತ್ತೆ ಕೆಲವು ಗೊಬ್ಬರಗಳು ನೀರಿನಲ್ಲಿ ಕರಗುವುದಿಲ್ಲ. ಉದಾಹರಣೆಗೆ ರಾಕ್ ಫಾಸ್ಪೇಟ್. ಅದನ್ನು ಕರಗಿಸಲು ಫಾಸ್ಪೇಟ್ ಸಾಲ್ಯುಬಿಲೈಜಿಂಗ್ ಬ್ಯಾಕ್ಟೀರಿಯಾ ಬೇಕಾಗುತ್ತದೆ. ಅದು ನಮ್ಮ ಮಣ್ಣಿನಲ್ಲಿ ಕಡಿಮೆ ಪ್ರಮಾಣದಲ್ಲಿರುತ್ತದೆ. ಮತ್ತು ಅದು ಕರಗಿಸುವ ವೇಗ ತುಂಬಾ ನಿಧಾನವಾಗಿರುತ್ತದೆ. ಅಲ್ಲದೆ ನಾವು ಸಾಂಪ್ರದಾಯಿಕ ರೀತಿಯಲ್ಲಿ ರಸಗೊಬ್ಬರಗಳನ್ನು ನೀಡುವ ಮೂಲಕ ಒಂದೇ ಬಾರಿ ಮಣ್ಣಿಗೆ ರಸಗೊಬ್ಬರವನ್ನು ಸುರಿದಾಗ ಅಲ್ಲಿರುವ ಬ್ಯಾಕ್ಟೀರಿಯಾಗಳು ಸತ್ತುಹೋಗುತ್ತವೆ.

ಈ ಗಿಡಗಳು ಕೂಡ ಮನುಷ್ಯರ ತರನೇ ಅಲ್ಲವೇ ? ಮನುಷ್ಯ ಕೂಡ ಒಂದೇ ಬಾರಿ ಎಷ್ಟು ಊಟ ಮಾಡಿದರೂ ಸಾಕಾಗುವುದಿಲ್ಲ. ಇವತ್ತು ನಾವು ಇರೋ ಬರೋ ಎಲ್ಲಾ ಪೋಷಕಾಂಶಗಳನ್ನು, ವಿಟಮಿನ್ ಟ್ಯಾಬ್ಲೆಟ್ ಗಳನ್ನು ನುಂಗಿದರೂ ಅದರಿಂದ ಏನೂ ಪ್ರಯೋಜನವಿಲ್ಲ. ಹಾಗೆ ಮಾಡುವುದರಿಂದ ಅದು ಆಹಾರವಾಗುವ ಬದಲು ವಿಷವಾಗಿ ಪರಿಣಮಿಸುತ್ತದೆ.

ಇಂತಹ ಎಲ್ಲಾ ಸೂಕ್ಷ್ಮಗಳನ್ನು ಅಧ್ಯಯನ ಮಾಡಿದ ಗಣೇಶ ಭಟ್ಟರು ಈಗ ಬಳಕೆಯಲ್ಲಿರುವ ಹನಿ ನೀರಾವರಿ ಪದ್ಧತಿ ಮತ್ತು ರಸಾವರಿಯ ಮೂಲಕ ಗೊಬ್ಬರ ಉಣಿಸುವ ವಿಧಾನದ ಜತೆಗೇ ತಮ್ಮದೇ ಪ್ರಯೋಗಗಳನ್ನು ಮತ್ತು ಅನ್ವೇಷಣೆಗಳನ್ನು ಕೂಡಿಸಿಕೊಂಡು ಹೊಸ ವಿಧಾನವನ್ನು ಕಂಡು ಹಿಡಿದರು.

ಗಣೇಶ ಭಟ್ಟರು ನಾವು ಸಾಂಪ್ರದಾಯಿಕವಾಗಿ ಗೊಬ್ಬರದ ಅಂಗಡಿಗಳಲ್ಲಿ ತೆಗೆದುಕೊಳ್ಳುವ ಯೂರಿಯಾ, ಪೊಟ್ಯಾಷ್, ಸುಫಲ, ಫ್ಯಾಕ್ಟಂಫಾಸ್  ಮುಂತಾದ ಯಾವುದೇ ರಸಗೊಬ್ಬರಗಳನ್ನು ಬಳಕೆ ಮಾಡುವುದಿಲ್ಲ. ಈ ರಸಗೊಬ್ಬರಗಳಿಗೆ ಕೇಂದ್ರ ಸರಕಾರದ ಸಬ್ಸಿಡಿ ಇದ್ದು ಇವು ಸ್ವಲ್ಪಮಟ್ಟಿಗಿನ ರಿಯಾಯಿತಿಯಲ್ಲಿ ರೈತರಿಗೆ ದೊರಕುತ್ತಿವೆ.
ಆದರೆ ಗಣೇಶ ಭಟ್ಟರು ಬಳಸುವ ರಸಗೊಬ್ಬರಗಳು ಬೇರೆ. ಅದನ್ನವರು ಜರ್ಮನಿಯಿಂದ ತರಿಸಿಕೊಳ್ಳುತ್ತಾರೆ. ಈ ರಸಗೊಬ್ಬರಗಳು ಸಂಪೂರ್ಣವಾಗಿ ನೀರಿನಲ್ಲಿ ಕರಗುತ್ತವೆ. ಮುಖ್ಯ ಪೋಷಕಾಂಶಗಳಾದ ಸಾರಜನಕ, ರಂಜಕ ಪೊಟ್ಯಾಶ್ ಗಳ ಜೊತೆಗೆ ದ್ವಿತೀಯ ದರ್ಜೆಯ ಪೋಷಕಾಂಶಗಳನ್ನು ನೀಡಬಲ್ಲ ಹಲವು ಹೊಸ ಗೊಬ್ಬರಗಳು ಇವರ ಬಳಿ ಇವೆ. ಈ ನೀರಿನಲ್ಲಿಿಿ ಕರಗುವ ರಸಗೊಬ್ಬರಗಳನ್ನು ಹನಿಿಿ ನೀರಾವರಿಯ ಮೂಲಕ ರಸಾವರಿಯಾಗಿ ಅಡಿಕೆ ಗಿಡಗಳಿಗೆ ಸ್ವಲ್ಪಸ್ವಲ್ಪವೇ ಉಣಿಸುತ್ತಾರೆ. ( ಗಣೇಶ್ ಭಟ್ ಅವರು ಈ ರಸಗೊಬ್ಬರಗಳನ್ನು ಕೃಷಿಕರಿಗೆ ಮಾರಾಟ ಕೂಡ ಮಾಡುತ್ತಾರೆ )

ಈ ರಸಗೊಬ್ಬರಗಳ ಬಳಕೆ ಹೇಗೆ ?

ತಮ್ಮ 27 ಎಕರೆ ಅಡಿಕೆ ತೋಟಕ್ಕೆ ಇವರ ಬಳಿ ಇರುವುದು ಕೇವಲ 3 ಕೊಳವೆ ಬಾವಿಗಳು. ಹೆಚ್ಚುಕಡಿಮೆ ಎರಡು ಮೂರಿಂಚು ನೀರು ಈ ಕೊಳವೆ ಬಾವಿಗಳಲ್ಲಿ ದೊರೆಯುತ್ತದೆ. ಕೊಳವೆ ಬಾವಿಗಳ ನೀರನ್ನು ಇವರು ತಮ್ಮ ತೋಟದ ಮೇಲ್ಭಾಗದಲ್ಲಿ ಇರುವ ಸಣ್ಣ ಗುಡ್ಡದ ಮೇಲೆ ಕಟ್ಟಿದ ದೊಡ್ಡ ಟ್ಯಾಂಕಿಗೆ ಹಾಕುತ್ತಾರೆ. ಟ್ಯಾಂಕಿನಲ್ಲಿ ನೀರು ಶೇಖರವಾದ ನಂತರ ಅಲ್ಲಿಂದ ಪಂಪಿನ ಮೂಲಕ ಹನಿ ನೀರಾವರಿಯ ಕಾರ್ಯ ನಡೆಯುತ್ತದೆ.

ಇವರು ಪ್ರತಿ ವಾರಕ್ಕೊಮ್ಮೆ ಅಥವಾ ಹತ್ತು ದಿನಗಳಿಗೊಮ್ಮೆ ತಾವು ಪ್ಲಾನ್ ಮಾಡಿದಂತೆ ಒಂದು ಸಣ್ಣ ಟ್ಯಾಂಕಿನಲ್ಲಿ ತಾವು ರಸಾವರಿಯಾಗಿ ಕೊಡಲು ಉದ್ದೇಶಿಸುವ ಗೊಬ್ಬರವನ್ನು ಸುಮಾರು 200 ಲೀಟರ್ ನೀರಿನಲ್ಲಿ ಹಾಕಿ ಕಲಸುತ್ತಾರೆ. ದೊಡ್ಡ ಟ್ಯಾಂಕಿನ ನೀರನ್ನು ಹನಿ ನೀರಾವರಿ ಯ ಮೂಲಕ ಹರಿಸುವ ಮೊದಲು, ಈ ಕಲೆಸಿದ ರಸಗೊಬ್ಬರವನ್ನು ತಮ್ಮ ಎಂದಿನ ಹನಿ ನೀರಾವರಿ ವ್ಯವಸ್ಥೆಯ ಮತ್ತು ಪಂಪುಗಳ ಮೂಲಕ ಹರಿಸುತ್ತಾರೆ. ಸುಮಾರು ಒಂದು ಒಂದೂವರೆ ಗಂಟೆಗಳಲ್ಲಿ ಹನಿಹನಿಯಾಗಿ ರಸಗೊಬ್ಬರಗಳು ಅಡಿಕೆಯ ಬುಡ ಸೇರುತ್ತದೆ.

ಒಂದೊಮ್ಮೆ ಈ ಕರಗಿದ ರಸಗೊಬ್ಬರಗಳ ಟ್ಯಾಂಕ್ ಖಾಲಿಯಾದ ಕೂಡಲೇ ವಾಲ್ವ್ ಬದಲಿಸಿ ಆನಂತರ ನೀರಿನ ಟ್ಯಾಂಕಿನಿಂದ ಹನಿ ನೀರಾವರಿಯನ್ನು ಶುರುಮಾಡುತ್ತಾರೆ.
ಹೀಗೆ ಗಿಡದ ಬುಡ ಸೇರಿದ ರಸಗೊಬ್ಬರ ಸಣ್ಣ ಪ್ರಮಾಣದಲ್ಲಿದ್ದು ಗಿಡದ ಬುಡಕ್ಕೇ ಯಾವುದೇ ತೊಂದರೆಯನ್ನು ಉಂಟು ಮಾಡುವುದಿಲ್ಲ. ಈ ರಸಗೊಬ್ಬರದ ಸಾಂದ್ರತೆಯು 25 ರಿಂದ 30 ಪಿಪಿಎಂ ( Parts per million) ಇದ್ದು ಇವುಗಳಿಂದ ನವಜಾತ ಬೇರುಗಳಿಗೆ ಮತ್ತು ಗಿಡದ ಬುಡದಲ್ಲಿ ಮತ್ತು ಮಣ್ಣಿನಲ್ಲಿರುವ ಥರಾವರಿ ಬ್ಯಾಕ್ಟೀರಿಯಾಗಳಿಗಾಗಿ ಯಾವುದೇ ತೊಂದರೆ ಇರುವುದಿಲ್ಲ. ಅಲ್ಲದೇ ರಸಗೊಬ್ಬರಗಳು ಆವಿಯಾಗುವ, ಸೂರ್ಯನ ಶಾಖದಿಂದ ಹಾಳಾಗುವ ಮತ್ತು ಮಣ್ಣಿನಲ್ಲಿ ಶೇಖರಗೊಂಡು ಮಣ್ಣು ಹಾಳಾಗುವ ಸಂಭವ ಇರುವುದಿಲ್ಲ.

ಅಡಿಕೆಯಂತಹ ಬೆಳೆಯಲ್ಲಿ ವರ್ಷಪೂರ್ತಿ ವೆಜಿಟೇಟಿವ್ ಗ್ರೋಥ್ ಇರುತ್ತದೆ. ಅಲ್ಲದೆ ಈ ಬೆಳೆಯಲ್ಲಿ ಹೆಚ್ಚುಕಮ್ಮಿ ವರ್ಷಪೂರ್ತಿ ಹೂ ಬಿಡುತ್ತಾ, ಕಾಯಿ ಕಟ್ಟುತ್ತಾ, ಕಚ್ಚಿಕೊಂಡ ಕಾಯಿಗಳು ಬೆಳೆದು ಹಣ್ಣಾಗುವ ಪ್ರಕ್ರಿಯೆ ನಡೆಯುತ್ತಿರುತ್ತದೆ. ಆದುದರಿಂದ ವರ್ಷಪೂರ್ತಿ ಗಿಡದ ಬೆಳವಣಿಗೆಗೆ ಹೂವು ಅರಳಲು, ಕಾಯಿ ಹಚ್ಚಿಕೊಳ್ಳಲು, ಕಚ್ಚಿಕೊಂಡ ಕಾಯಿಗಳು ಬೆಳೆದು ಸಾಕಷ್ಟು ತೂಕದ ಕಾಯಿಗಳಾಗಲು ಹಲವು ಪೋಷಕಾಂಶಗಳು, ಕಾಲಕಾಲಕ್ಕೆ ನೀಡಬೇಕು. ಅವನ್ನು ಹೇಗೆ ನೀಡಬೇಕು, ಎಷ್ಟೆಷ್ಟು ಪ್ರಮಾಣದಲ್ಲಿ ನೀಡಬೇಕು, ಮತ್ತು ಯಾವ ಋತುವಿನಲ್ಲಿ ನೀಡಬೇಕು ಎಂಬುದನ್ನು ನಾವಿಲ್ಲಿ ನಿಮಗೆ ವಿವರಿಸಬಹುದು.

ಇನ್ನಷ್ಟು ತಿಳಿದುಕೊಳ್ಳುವುದು ಹೇಗೆ ?

ಆದರೆ, ನೀವು ಪುಸ್ತಕ ಓದಿ ಲಾರಿ ಓಡಿಸುವುದನ್ನು ಕಲಿಯುವುದು ನಮಗೆ ಇಷ್ಟವಿಲ್ಲ. ನಿಮ್ಮ ಅಮೂಲ್ಯ ಕೃಷಿ ಜಾಗದ ಮಹತ್ವ ನಮಗೆ ಗೊತ್ತು. ನಿಮ್ಮ ಅಮೂಲ್ಯ ಸಮಯ, ನೀವು ಮಗುವಿನ ಥರ ಸಾಕಲಿಚ್ಛಿಸುವ ನಿಮ್ಮ ಬೆಳೆ ಯಾವುದೇ ಕಾರಣಕ್ಕೂ ಟ್ರೈಲ್ ಆಂಡ್ ಎರರ್ ನಿಂದಾಗಿ ಹಾಳಾಗಬಾರದು. ಅದಕ್ಕಾಗೇ ನೀವು ಇನ್ನಷ್ಟು ಮಾಹಿತಿಗೆ ನಿಮ್ಮ ಎಲ್ಲ ಸಂಪನ್ಮೂಲ ವ್ಯಕ್ತಿ ಎಂದರೆ ಅವರು ಗಣೇಶ್ ಭಟ್ಟರು !

ಮಗುವಿನ ಸೌಮ್ಯತೆಯಲ್ಲಿ, ಅನನ್ಯ ತಾಳ್ಮೆಯಲ್ಲಿ, ಕೃಷಿ ಅನುಭವಗಳ ತೂಕದಲ್ಲಿ, ನಿಮ್ಮ ಎಲ್ಲ ಟೆಕ್ನಿಕಲ್- ವ್ಯಾವಹಾರಿಕ ಪ್ರಶ್ನೆಗಳಿಗೂ ಗಣೇಶಭಟ್ಟರು ಸಮರ್ಪಕವಾಗಿ ಉತ್ತರಿಸುತ್ತಾರೆ. ಒಂದು ಭಾನುವಾರ, ಗಾಡಿಗೆ ಒಂದು ಲೀಟರು ಪೆಟ್ರೋಲು, ಜತೆಗೆ ಎಲ್ಲೂ ಕರಕೊಂಡು ಹೋಗುವುದಿಲ್ಲವೆಂದು ಸದಾ ದೂರುವ ಮನೆಯವಳನ್ನೂ ಕಟ್ಟಿಕೊಂಡು ಹೊರಡಿ. ಹೋಗುವ ಮೊದಲು ಅವರಿಗೆ ಕರೆ ಮಾಡಿ ಅವರ ಲಭ್ಯತೆ ಕೇಳಿಕೊಳ್ಳಿ. ನಿಮ್ಮ ಭೇಟಿ ವ್ಯರ್ಥ ಆಗುವುದಿಲ್ಲ. ನಾನು ಗ್ಯಾರಂಟಿ ! ಗಣೇಶ್ ಭಟ್ : 98808 61902

Leave A Reply

Your email address will not be published.