ವಿವೇಕಾನಂದ ಕಾನೂನು ಮಹಾವಿದ್ಯಾಲಯ | ಅಣಕು ನ್ಯಾಯಾಲಯ ಸ್ಪರ್ಧೆ ಯಶಸ್ವಿ ಪ್ರದರ್ಶನ

” ಅಣಕು ನ್ಯಾಯಾಲಯ ಸ್ಪರ್ಧೆಯು ವಕೀಲ ವೃತ್ತಿಯ ಅನುಭವವನ್ನು ಕೊಡುತ್ತದೆ “

ಅಣಕು ನ್ಯಾಯಾಲಯ ಸ್ಪರ್ಧೆಯು ಕಾನೂನು ವಿದ್ಯಾರ್ಥಿಗಳಿಗೆ, ವಕೀಲ ವೃತ್ತಿಯ ಅನುಭವವನ್ನು ಕೊಡುತ್ತದೆ. ವಿದ್ಯಾರ್ಥಿಗಳು ಇಂತಹ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ವೃತ್ತಿಜೀವನದ ಅನುಭವವನ್ನು ನೀಡುತ್ತದೆ ಎಂದು ಕರ್ನಾಟಕ ರಾಜ್ಯ ಉಚ್ಛ ನ್ಯಾಯಾಲಯದ ಗೌರವಾನ್ವಿತ ನ್ಯಾಯಾಧೀಶರಾದ ಶ್ರೀ ನಟರಾಜ್ ಆರ್. ಹೇಳಿದರು.

ಇವರು ವಿವೇಕಾನಂದ ವಿದ್ಯಾವರ್ಧಕ ಸಂಘ ಮತ್ತು ವಿವೇಕಾನಂದ ಕಾನೂನು ಮಹಾವಿದ್ಯಾಲಯದ ವತಿಯಿಂದ ದಿನಾಂಕ 21 ಫೆಬ್ರವರಿ 2020 ರಂದು ಜರುಗಿದ ಕಾನೂನು ಮಹಾವಿದ್ಯಾಲಯದ ಸಭಾಂಗಣದಲ್ಲಿ ನಡೆದ ರಾಷ್ಟç ಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿ, “ನಾನು ವಿದ್ಯಾರ್ಥಿ ಜೀವನದ ಕೊನೆಯ ಹಂತದಲ್ಲಿ ಅಣಕು ನ್ಯಾಯಾಲಯ ಸ್ಪರ್ಧೆಯಲ್ಲಿ ಭಾಗವಹಿಸಿದ್ದೆ. ಇದರಿಂದ ನನಗೆ ಹಲವು ವಿಚಾರಗಳನ್ನು ತಿಳಿದುಕೊಳ್ಳಲು ಸಹಕಾರಿಯಾಯಿತು” ಎಂದು ಹೇಳಿದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ, ಉಚ್ಛ ನ್ಯಾಯಾಲಯದ ನ್ಯಾಯವಾದಿಗಳಾದ ಶ್ರೀ ವಿವೇಕ್ ಸುಬ್ಬ ರೆಡ್ಡಿ ಮಾತನಾಡಿ, ವಕೀಲ ವೃತ್ತಿಗೆ ಕಾನೂನಿನ ಭಾಷೆ, ಸಮರ್ಪಣ ಮನೋಭಾವ ಮತ್ತು ಕಠಿಣ ಪರಿಶ್ರಮ ಅಗತ್ಯವಾಗಿದೆ. ಈ ಮೂರು ಅಂಶಗಳನ್ನು ಅಳವಡಿಸಿಕೊಂಡರೆ ವಕೀಲ ವೃತ್ತಿಯಲ್ಲಿ ಯಶಸ್ಸನ್ನು ಸಾಧಿಸಬಹುದು ಎಂದು ಹೇಳಿದರು.

ಮತ್ತೋರ್ವ ಅತಿಥಿಯಾದ, ಪುತ್ತೂರು ವಕೀಲರ ಸಂಘದ ಅಧ್ಯಕ್ಷರಾದ ಶ್ರೀ ಮನೋಹರ್ ಕೆ. ವಿ. ಮಾತನಾಡಿ, ವಕೀಲ ವೃತ್ತಿಯು ಈ ಕಾಲಘಟ್ಟದಲ್ಲಿ ಒಂದು ಉದ್ಯಮವಾಗಿ ಬದಲಾಗುತ್ತಿದೆ. ಆದರೆ ವಿದ್ಯಾರ್ಥಿಗಳು, ಮುಂದಿನ ವೃತ್ತಿಜೀವನದಲ್ಲಿ ಕೇವಲ ಹಣವನ್ನು ಸಂಪಾದಿಸುವುದರ ಕಡೆಗೆ ಗಮನಹರಿಸಬಾರದು. ಒಬ್ಬ ಒಳ್ಳೆಯ ವಕೀಲನಾಗುವತ್ತ ಗಮನಹರಿಸಬೇಕು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ ಜೊತೆ ಕಾರ್ಯದರ್ಶಿಗಳಾದ ಶ್ರೀ ಕೃಷ್ಣ ಕುಮಾರ್ ಶೆಟ್ಟಿ ಮಾತನಾಡಿ, ವಿವೇಕಾನಂದ ವಿದ್ಯಾವರ್ಧಕ ಸಂಘವು ತನ್ನ ಹಲವಾರು ವಿದ್ಯಾ ಸಂಸ್ಥೆಗಳಲ್ಲಿ ಉತ್ತಮ ಶಿಕ್ಷಣವನ್ನು ನೀಡುವುದರ ಜೊತೆಗೆ, ರಾಷ್ಟ್ರೀಯ ವಿಚಾರಗಳಿಗೆ ಮಹತ್ವವನ್ನು ನೀಡುತ್ತಿದೆ. ವಿವೇಕಾನಂದ ಕಾನೂನು ಕಾಲೇಜು ಈ ನಿಟ್ಟಿನಲ್ಲಿ ಹಲವು ಕೆಲಸಗಳನ್ನು ಮಾಡುತ್ತಿದೆ ಎಂದು ಹೇಳಿದರು.

ಕಾನೂನು ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ವಿಶ್ವೇಶ್ವರ ಭಟ್ ಬಂಗಾರಡ್ಕ, ಸಂಚಾಲಕರಾದ ಶ್ರೀ ವಿಜಯನಾರಾಯಣ ಕೆ. ಎಂ., ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾಲೇಜಿನ ಕಾನೂನು ಅಧ್ಯಯನ ವಿಭಾಗದ ನಿರ್ದೇಶಕರಾದ ಡಾ. ಬಿ. ಕೆ. ರವೀಂದ್ರ ಸ್ವಾಗತಿಸಿ, ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಅಕ್ಷತಾ ಎ. ಪಿ. ವಂದಿಸಿದರು.

Leave A Reply

Your email address will not be published.