ಬರೆಪ್ಪಾಡಿ : ಶಿಥಿಲಾವಸ್ಥೆಯಲ್ಲಿ ಅವಳಿ ಶಿವ ಸಾನಿಧ್ಯ ; ಜೀರ್ಣೋದ್ದಾರಕ್ಕೆ ಭಕ್ತರ ಚಿಂತನೆ

ಬೆಳಂದೂರು : ಪುರಾಣ ಪ್ರಸಿದ್ದ ಕುದ್ಮಾರು ಗ್ರಾಮದ ಬರೆಪ್ಪಾಡಿ ಶ್ರೀ ಪಂಚಲಿಂಗೇಶ್ವರ ಮತ್ತು ಕೇಪುಳೇಶ್ವರ ದೇವಸ್ಥಾನವು ಶಿಥಿಲಾವಸ್ಥೆಗೆ ತಲುಪಿದ್ದು ,ಜೀರ್ಣೋದ್ದಾರಕ್ಕೆ ಕಾಯುತ್ತಿದೆ. ಸುಮಾರು 800 ವರ್ಷಗಳ ಇತಿಹಾಸವಿದ್ದು ವಿಜಯನಗರ ಅರಸರ ಕಾಲದಲ್ಲಿ ನಿರ್ಮಾಣಗೊಂಡ ದೇವಸ್ಥಾನವಾಗಿರುವ ದೇವಸ್ಥಾನವಾಗಿದ್ದು,ಈ ಕುರಿತು ದೇವಸ್ಥಾನದಲ್ಲಿ ಹಳೆಕನ್ನಡದಲ್ಲಿ ಬರೆದಿರುವ ಶಿಲಾಶಾಸನಗಳಿದ್ದು ,ದೇವಸ್ಥಾನ ನಿರ್ಮಾಣವಾಗಿರುವ ಕುರುಹುಗಳನ್ನು ತಜ್ಞರಿಂದ ಓದಿಸಲಾಗಿದ್ದು ಅವುಗಳಲ್ಲಿ ಈ ಮಾಹಿತಿ ಅಡಕವಾಗಿದೆ.


Ad Widget

Ad Widget

Ad Widget

Ad Widget
Ad Widget

Ad Widget

ಇನ್ನೊಂದು ಮೂಲದ ಪ್ರಕಾರ ಶ್ರೀ ಕೃಷ್ಣನ ಪರಮಭಕ್ತರಾದ ಪಾಂಡವರು ವನವಾಸದ ವೇಳೆಯಲ್ಲಿ ಈ ಊರಿಗೆ ಬಂದಾಗ ತಮ್ಮ ನಿತ್ಯಾರಾಧನೆಗೆ ಈ ಐದು ಲಿಂಗಗಳ ದೇವಾಲಯವನ್ನು ಸ್ಥಾಪಿಸಿದರು.


Ad Widget

ಈ ದೇವಾಲಯದ ಒಂದೇ ಅಂಗಣದಲ್ಲಿ ಎರಡು ದೇವಾಲಯಗಳು ಇವೆ. ಒಂದು ಪಂಚಲಿಂಗೇಶ್ವರ ದೇವಾಲಯ, ಇನ್ನೊಂದು ಕೇಪುಳೇಶ್ವರ ದೇವಾಲಯವಿದೆ. ಒಂದೇ ಅಂಗಣದಲ್ಲಿ ಎರಡು ಗರ್ಭಗುಡಿ ಇರುವ ಶಿವನ ದೇವಸ್ಥಾನ ಇರುವುದು ಇಲ್ಲಿನ ವೈಶಿಷ್ಟ್ಯ.

Theertha Baavi

ಕೇಪುಳೇಶ್ವರ ದೇವಾಲಯದ ಮುಂದುಗಡೆ ತೀರ್ಥ ಬಾವಿಯಿದೆ. ಈ ಬಾವಿಯನ್ನು ಭೀಮಸೇನ ತನ್ನ ಕಿರು ಬೆರಳೂರಿ ನಿರ್ಮಿಸಿದನೆಂದು ಪ್ರತೀತಿ. ಈ ಬಾವಿಯ ತೀರ್ಥ ಸ್ನಾನ ಮಾಡಿದರೆ ಕುದಿಜ್ವರ, ಕೆಡುಗಳು ಗುಣವಾಗುವುದೆಂದೂ ಪ್ರಸಿದ್ದಿ ಇದೆ. ಮಕ್ಕಳಿಲ್ಲದವರು ರಂಗಪೂಜೆ ಹರಕೆ ಹೇಳಿ ಸಂತಾನ ಪ್ರಾಪ್ತಿಯಾದ ನಿದರ್ಶನಗಳಿವೆ. ಇದು ಕುದ್ಮಾರು ಗ್ರಾಮದ ಗ್ರಾಮ ದೇವಸ್ಥಾನವಾಗಿದೆ.

ಈ ತೀರ್ಥಬಾವಿಯ ಹಿಂದೆಯೂ ಇನ್ನೊಂದು ಐತಿಹ್ಯವಿದೆ. ಪಂಚ ಲಿಂಗಗಳನ್ನು ಪ್ರತಿಷ್ಟೆಯ ಸಂದರ್ಭದಲ್ಲಿ ದೇವರ ಪ್ರತಿಷ್ಠಾ ಕಾರ್ಯಗಳಿಗೆ ಪುಣ್ಯಜಲಬೇಕೆಂದು ಪಾಂಡವರು ನಿರ್ಧರಿಸಿ, ಭೀಮ ಸೇನನು ನೀರನ್ನು ತರಲು ಕಾಶಿಯ ಗಂಗಾಜಲ ತರಲು ತೆರಳಿದನು. ಆದರೆ ಭೀಮ ಸೇನ ಗಂಗಾಜಲ ಹಿಡಿದು ಬರುವುದು ತಡವಾಗುವುದನ್ನು ಅರಿತ ಉಳಿದ ಪಾಂಡವರು ದೇವರ ಪ್ರತಿಷ್ಟೆಯ ಪೂಜಾ ಕೈಕಂರ್ಯಗಳನ್ನು ಮಾಡಿ ಮುಗಿಸಿದ್ದರು.

ಶ್ರೀ ಪಂಚಲಿಂಗೇಶ್ವರ

ತಾನು ಬರುವಾಗ ದೇವರ ಪ್ರತಿಷ್ಟೆ ನಡೆದಿರುವುದನ್ನು ಕಂಡು ಸಹೋದರರ ಮೇಲೆ ಕೋಪಗೊಂಡ ಭೀಮನು ತನ್ನ ಕಿರು ಬೆರಳೂರಿ ಭೂಮಿಯ ಮಣ್ಣನ್ನು ಅದುಮಿದಾಗ ಹೊಂಡದ ರೂಪ ಪಡೆದುಕೊಂಡಿತಂತೆ. ಕಾಶಿಯಿಂದ ತಂದ ಗಂಗಾಜಲವನ್ನು ಆ ಹೊಂಡಕ್ಕೆ ಸುರಿದರಂತೆ ಎಂಬ ಪ್ರತೀತಿ ಇದೆ.

ಶಾಸನ

ಕೇವಲ 10 ಫೀಟ್ ಆಳದ ಈ ಬಾವಿಯಲ್ಲಿ ಅಂದಿನಿಂದ ಇಂದಿನವರೆಗೂ ಈ ಬಾವಿಯಲ್ಲಿ ನೀರು ಬತ್ತಿಲ್ಲ. ಕಾವೇರಿ ಸಂಕ್ರಮಣದಂದು ತಲಕಾವೇರಿಯಲ್ಲಿ ತೀರ್ಥೋದ್ಬವವಾಗುವಾಗ ಈ ಬಾವಿಯಲ್ಲೂ ನೀರು ಚಿಮ್ಮುತ್ತದೆ.

ಕೇಪುಲೇಶ್ವರ ದೇವರು

ಇಲ್ಲಿ ನೆಲೆಸಿರುವ ಕೇಪುಲೇಶ್ವರ ದೇವರು ಈಗಿನ ದೇವಸ್ಥಾನದ ಹಿಂದೆ ಇರುವ ತುಳಸಿಗುಡ್ಡೆಯಲ್ಲಿ ಇತ್ತಂತೆ. ಎರಡೂ ದೇವಸ್ಥಾನಗಳಿಗೂ ಒಬ್ಬರೇ ಅರ್ಚಕರು ಪೂಜೆ ಮಾಡುತ್ತಿದ್ದು, ಅರ್ಚಕರ ಪತ್ನಿ ಪೂಜಾ ಸಾಮಾಗ್ರಿ ಹಾಗೂ ಬಿಲ್ವಪತ್ರೆ, ಹೂವುಗಳನ್ನು, ಇತರ ಸುವಸ್ತುಗಳನ್ನು ಜೋಡಿಸಿಕೊಡುತ್ತಿದ್ದರು. ಹೀಗಿರುವಾಗ ಅರ್ಚಕರ ಪತ್ನಿ ತುಂಬು ಗರ್ಬಿಣಿಯಾಗಿದ್ದ ಸಂದರ್ಭದಲ್ಲಿ ತುಳಸಿಗುಡ್ಡೆ ಏರಿ ಕೇಪುಲೇಶ್ವರ ದೇವರ ಸನ್ನಿದಿಗೆ ಹೋಗಲು ಕಷ್ಟಕರವಾದ ಸಂದರ್ಭದಲ್ಲಿ ದೇವರಲ್ಲಿ ನೀ ಕೆಳಗೆ ಇರುತ್ತಿದ್ದರೆ ನಾನು ಮುಂದೆಯೂ ನಿನ್ನ ಪೂಜೆಯಲ್ಲಿ ಪಾಲ್ಗೊಳ್ಳಬಹುದೆಂದು ಬಿನ್ನವಿಸಿದರಂತೆ.ಅದರಂತೆ ದೇವರು ಮರುದಿನ ಬರುವಾಗ ಕೆಳಗೆ ಕೇಪುಳಗಿಡದ ಬುಡದಲ್ಲಿ ಉದ್ಬವವಾಯಿತೆಂಬ ಪ್ರತೀತಿ ಇದೆ.

ತುಳಸಿಗುಡ್ಡೆಯ ಮೇಲ್ಗಡೆ ದೇವರಗುಡ್ಡೆಯಿದೆ. ಈ ಗುಡ್ಡೆಯು ಭೀಮನು ದಾರಂದ ಕೆರೆ ನಿರ್ಮಾಣ ಸಂದರ್ಭ ಒಂದು ಹಾರೆ ಮಣ್ಣು ಬಿದ್ದ ಜಾಗ ದೇವರಗುಡ್ಡೆಯಾಗಿಯೂ,ಅದರಲ್ಲಿ ಸ್ವಲ್ಪ ಮಣ್ಣು ಬಿದ್ದ ಜಾಗ ತುಳಸಿಗುಡ್ಡೆ.ಈಗಲೂ ದಾರಂದಕೆರೆ ಇದೆ. ಹಾಗೂ ಅದರ ಪಕ್ಕದಲ್ಲಿ ಕುದುರೆಕಟ್ಟುವ ಕಲ್ಲೂ ಇದೆ. ಹೀಗೆ ಐತಿಹಾಸ ಹಿನ್ನೆಲೆಯಿರುವ ಈ ದೇವಸ್ಥಾನದ ಸುತ್ತುಪೌಳಿ,ನಮಸ್ಕಾರ ಮಂಟಪ,ಎರಡೂ ದೇವರ ಗರ್ಭಗುಡಿಯು ಶಿಥಿಲಾವಸ್ಥೆಗೆ ತಲುಪಿದೆ. ಆದರೂ ದೇವರಿಗೆ ನಿತ್ಯ ಪೂಜೆ ನಡೆಯುತ್ತಿದೆ. ದೇವಸ್ಥಾನದ ಅನುವಂಶೀಯ ಮೊಕ್ತೇಸರ ಜನೇಶ್ ಭಟ್ ಅವರೇ ಪೂಜೆ ನಡೆಸುತ್ತಿದ್ದಾರೆ. ಈ ದೇವಸ್ಥಾನಲ್ಲಿ 20 ವರ್ಷಗಳಿಂದ ಸಾಮೂಹಿಕ ಶಿವರಾತ್ರಿ ಉತ್ಸವ ನಡೆಯುತ್ತಿದೆ.

ಅವಳಿ‌ ಶಿವ ಸಾನಿಧ್ಯಗಳು

ದೇವಸ್ಥಾನಕ್ಕೆ ಸಂಬಂಧಪಟ್ಟಂತೆ ಉಪದೇವರಾದ ಶಾಸ್ತಾರ, ವೀರಭದ್ರ ಗುಡಿ ಇದೆ.ದೈವಗಳಾದ ವ್ಯಾಘ್ರ ಚಾಮುಂಡಿ,ರಾಜನ್ ದೈವ,ಕಾಸ್ಪಾಡಿ ದೈವಗಳ ಸಾನಿದ್ಯವಿದೆ.

ಹಲವು ಐತಿಹಾಸಿಕ ಹಿನ್ನೆಲೆಯುಳ್ಳ ದೇವಸ್ಥಾನದ ಜೀರ್ಣೋದ್ದಾರಕ್ಕೆ ಊರವರು ಚಿಂತನೆ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಫೆ.21ರಂದು ಶಿವರಾತ್ರಿ ದಿನ ಜೀರ್ಣೋದ್ದಾರ ಸಂಕಲ್ಪ ವಿಧಿನಡೆಯಲಿದೆ. ದೇವಸ್ಥಾನ ಜೀರ್ಣೋದ್ದಾರವಾಗಬೇಕೆಂಬುದು ಹಲವು ವರ್ಷಗಳ ಕನಸು. ಎಲ್ಲಾ ಪಂಚಲಿಂಗೇಶ್ವರ ಹಾಗೂ ಕೇಪುಳೇಶ್ವರ ದೇವರು ನಡೆಸುತ್ತಾರೆ ಎಂಬ ನಂಬಿಕೆ ಇದೆ.

-ಜನೇಶ್ ಭಟ್ ಬರೆಪ್ಪಾಡಿ, ಅನುವಂಶೀಯ ಮೊಕ್ತೇಸರರು. ಬರೆಪ್ಪಾಡಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ

ಲೇಖನ : ಪ್ರವೀಣ್ ಚೆನ್ನಾವರ

error: Content is protected !!
Scroll to Top
%d bloggers like this: