ಈ ಅಮ್ಮನ ಕಣ್ಣೀರ ಕೂಗು ನಿಮ್ಮ ಕರುಣಾರ್ದ್ರ ಹೃದಯಕ್ಕೆ ತಟ್ಟಲಿ । ಜೈ ಭಜರಂಗಿ !

ಲೇ : ಯಶವಂತ್ ಬಪ್ಪಳಿಗೆ, ಪುತ್ತೂರು

ಹುಟ್ಟಿದ ಮಗುವಿನ ಅಮ್ಮನ ಎದೆಯಲ್ಲಿ ಹಾಲು ಬತ್ತಿ ಹೋದರೆ ನಿಮಗೆ ನಾನು ಬೇಕು. ನಿಮ್ಮ ಮಗು ಸ್ವಲ್ಪ ದೊಡ್ಡದಾಗಿ ಬೆಳೆಯುತ್ತಿದ್ದಂತೆ ನಿಮ್ಮ ಪೋಷಕಾಂಶ ತುಂಬಿಕೊಡಲು ನಾನು ಬೇಕು. ಬೆಳ್ಳಂಬೆಳಿಗ್ಗೆ ಏಳುತ್ತಿದ್ದಂತೆ ನಿಮ್ಮ ಚಾ-ಕಾಫಿಗೆ ಹಾಲು, ರೊಟ್ಟಿಗೆ ಬೆಣ್ಣೆ, ಅಡುಗೆಗೆ ಮೊಸರು, ದೇವರ ನೈವೇದ್ಯಕ್ಕೆ ತುಪ್ಪ, ಖೋವಾ, ಪನ್ನೀರ್. ತಟ್ಟಿದರೆ ಬೆರಣಿಯಾದೆ. ಕಲಸಿ ಹಾಕಿದರೆ ಸ್ಲರಿಯಾದೆ, ಜೀವಾಮೃತವಾದೆ. ಕೊನೆಗೆ ನಿಮ್ಮ ಅಂತಿಮ ಯಾತ್ರೆಯಲ್ಲಿ ಬೆಂಕಿಗೆ ಒಂದಿಷ್ಟು ತುಪ್ಪ ಕೂಡಾ ಬೇಕಾಗುತ್ತದೆ. – ಹೇಳಿ, ನಾನಿಲ್ಲದೆ ಯಾವ ನಿಮ್ಮ ದಿನ ಶುರುವಾಗುತ್ತದೆ ? ಪೂರ್ತಿಯಾಗುತ್ತದೆ ?

ನನ್ನ ಕೆಚ್ಚಲು ಕೂಡ ನೋಯುತ್ತದೆ. ನನ್ನಲ್ಲೂ ಇದೆ ಕಣ್ಣೀರು. ನನ್ನ ಕೈ ಕಾಲು ಆಡಿಸದಂತೆ, ಒಂದು ಮಷೀನ್ ನಂತೆ ಒಂದೇ ಕಡೆ ಕಟ್ಟಿ ಹಾಕಿ ಬಕೆಟ್ಗಟ್ಟಲೆ ಹಾಲು ಹಿಂಡಿ ಹಾಕಿ. ನನಗೇನೂ ಬೇಜಾರಿಲ್ಲ. ನನಗೆ ಖುಷಿನೇ. ನಾನು ನನ್ನ ರಕ್ತ ಬಸಿದು ಹಾಕಿ ಹಾಲು ನೀಡುತ್ತೇನೆ. ನನ್ನ ಕಂದನಿಗೆ ನನ್ನ ಕೆಚ್ಚಲಿಗೆ ಬಾಯಿ ಹಾಕುವ, ಆತನ ತಲೆಯನ್ನು ನೇವರಿಸುವ ಆಸೆ ನನಗೂ ಇದೆ. ಆದರೂ ಅದನ್ನು ನಾನು ಸಹಿಸಿಕೊಳ್ಳುತ್ತೇನೆ. ನನ್ನ ಮಗು ಹೇಗೋ ಹುಲ್ಲು ತಿಂದು ಬದುಕಿಕೊಳ್ಳುತ್ತಾನೆ. ಅವನಿಗೆ ನಿಮ್ಮ ಮಗುವಿನ ಥರ ಅಷ್ಟೆಲ್ಲ ಆರೈಕೆ ಬೇಕಿಲ್ಲ. ಯಾಕೆಂದರೆ ನಾವು ದೇವರ ಸೃಷ್ಟಿ. ಅವನು ಬೇರೆ ದೇವರಲ್ಲ. ಅದೇ, ನೀವು ದಿನಾ ಕೈಮುಗಿಯುವ ದೇವರು. ಅದೇ, ಅಲ್ಲಿ ಊರಲ್ಲಿ ನೀವೆಲ್ಲ ದುಡ್ಡು ಹೊಂದಿಸಿ ಲಕ್ಷಾಂತರ ಖರ್ಚುಮಾಡಿ ಬ್ರಹ್ಮಕಲಶ ಮಾಡುತ್ತೀರಲ್ಲ, ಅದೇ ಗರ್ಭ ಗುಡಿಯ ದೇವರು !
ಇದೆಲ್ಲ ನಾನು ನಿಮಗೆ ಮಾಡುವ ಉಪಕಾರವಲ್ಲ. ಇದು ನನ್ನ ಕರ್ತವ್ಯ. ದೇವರು ನನ್ನ ಇಲ್ಲಿಗೆ ಕಳಿಸಿದ್ದೇ ನಿಮ್ಮ ಚಾಕರಿ ಮಾಡಲು. ಅದನ್ನು ನಾನು ಆದಷ್ಟು ನಿಷ್ಠೆಯಿಂದ ಮಾಡುತ್ತಿದ್ದೇನೆ.

ಈಗ ನಿಮ್ಮಲ್ಲಿ ನನ್ನದೊಂದು ಬೇಡಿಕೆಯಿದೆ. ನಂಗೆ ಬೇರೇನೂ ಬೇಡ. ನಮಗೊಂದು ನೆಮ್ಮದಿಯ ಸಹಜ ಸಾವು ಕೊಡಿ. ನನ್ನ ಮಗು ಹೆಣ್ಣಾದರೆ ಹೇಗೋ ಅವಳು ನನ್ನ ಥರ ಅಮ್ಮನಾಗಿ, ಈ ದಿನ ನಿಮಗೆ ನಾನು ಮಾಡುತ್ತಿರುವ ಚಾಕರಿಯನ್ನು ಶ್ರದ್ದೆಯಿಂದ ಮಾಡುತ್ತಾಳೆ. ಒಂದು ವೇಳೆ ಗಂಡಾದರೆ ? ಮಗು ಗರ್ಭದಲ್ಲಿರುವಾಗಲೇ ನಾನು ದೇವರನ್ನು ಕ್ಷಣ ಕ್ಷಣಕ್ಕೂ ಪ್ರಾರ್ಥಿಸುತ್ತೇನೆ. ನಂಗೆ ಹೆಣ್ಣೇ ಮಗು ಹುಟ್ಟಲಪ್ಪಾ ಎಂದು. ಎಷ್ಟೋ ಸಾರಿ ದೇವರು ನನ್ನ ಕರುಳಿನ ಕೂಗನ್ನು ಕೇಳಿಸಿಕೊಳ್ಳುವುದಿಲ್ಲ. ಗಂಡು ಮಗು ಹುಟ್ಟೇ ಬಿಡುತ್ತಾನೆ.

ಒಂದು ವೇಳೆ ಮಗು ಗಂಡಾದ ಕೂಡಲೇ ಆತನನ್ನು ಸಾಕಲಾಗಲಿಲ್ಲವಾದರೂ ಪರವಾಗಿಲ್ಲ. ಆದರೆ, ದಯವಿಟ್ಟು ಆತನನ್ನು ಕಟುಕರಿಗೆ ಕೊಡಬೇಡಿ. ನಿಮ್ಮ ಕಷ್ಟ ಕೂಡಾ ನನಗೆ ಅರ್ಥವಾಗುತ್ತದೆ. ಸುಮ್ಮನೆ ದಂಡಕ್ಕೆ ಯಾಕೆ ಸಾಕಬೇಕು ‘ ಇದನ್ನು ‘ ಅಂತ ನೀವಂದುಕೊಂಡಿರಬಹುದು. ಕಟ್ಟಿ ಹಾಕಿ ಸಾಕಲು ನಿಮ್ಮಲ್ಲೂ ಸ್ಥಳಾವಕಾಶ ಇಲ್ಲದೆ ಇರಬಹುದು. ಮೇಯಲು ಬಿಡಲು ಸ್ಥಳವಿಲ್ಲದೆ ಇರಬಹುದು. ಎಲ್ಲ ನಿಜ. ನನಗೆ ನಿಮ್ಮ ಪರಿಸ್ಥಿತಿಯ ಅರಿವು ಇದೆ. ಅದಕ್ಕಾಗೇ ನಿಮ್ಮಲ್ಲೊಂದೇ ಒಂದು ವಿನಂತಿ ನನ್ನದು : ನನ್ನ ಮಗುವನ್ನು ದಯವಿಟ್ಟು ಗೋ ಬಂಧು ಶಾಲೆಗೇ ಕಳಿಸಿ. ಕಷ್ಟಾನೋ ಸುಖಾನೋ ಆತ ಹೇಗೋ ಬದುಕಿಕೊಳ್ಳುತ್ತಾನೆ.

ನನಗೂ ಪ್ರಕೃತಿ ಸಹಜವಾಗಿ ವಯಸ್ಸಾಗುತ್ತದೆ. ಆಗ ನನ್ನನ್ನೂ ಅದೇ ಶಾಲೆಗೆ ಕಳಿಸಿ. ಕಟುಕರಿಗೆ ದಯವಿಟ್ಟು ಮಾರಬೇಡಿ. ನಮ್ಮನ್ನು ನೋಡಿಕೊಳ್ಳು ಖರ್ಚೆಂದು ಬಹುಶಃ 1000 ರೂಪಾಯಿ ಅವರು ನಿಮ್ಮಿಂದ ಪಡಕೊಳ್ಳುತ್ತಾರೆ. ಎಷ್ಟೋ ಎಲ್ಲೆಲ್ಲೋ ಖರ್ಚುಮಾಡುತ್ತೀರಿ. ಹೇಗೋ ಹೊಂದಿಸಿಕೊಳ್ಳಿ. ನಾನು ನನ್ನ ಪೂರ್ತಿ ಜೀವನವನ್ನು ನಿಮಗಾಗಿ ನೀಡುತ್ತಿದ್ದೇನೆ ; ನನಗಾಗಿ 1000 ರೂಪಾಯಿ ಹೊಂದಿಸಲಾರದಷ್ಟು ಕಟುಕರಲ್ಲ ನೀವು. ಒಟ್ಟಾರೆಯಾಗಿ ನಮ್ಮನ್ನು ಸಹಜವಾಗಿ ಸಾಯಲು ಬಿಡಿ.

ನನ್ನನ್ನು ಉಳಿಸಿಕೊಳ್ಳಲು ಭಜರಂಗದಳದವರು ತಮ್ಮ ಕೈಲಾದ ಪ್ರಯತ್ನ ಮಾಡುತ್ತಿದ್ದಾರೆ. ನಿಮ್ಮ ಸಹಕಾರವಿಲ್ಲದೆ ಈ ಕಾರ್ಯ ಅಪೂರ್ಣ. ಮತ್ತೊಮ್ಮೆ ಕೊರಳೊಡ್ಡಿ ಬೇಡಿಕೊಳ್ಳುತ್ತಿದ್ದೇನೆ, ನಮಗೂ ಕೊಡಿ ಸಹಜವಾಗಿ ಸಾಯುವ ಹಕ್ಕು !

ಹೀಗೊಂದು ‘ಗೋ ಬಂಧು’ ಚಳವಳಿ !

ಹೀಗೊಂದು ಗೋ ಬಂಧು ಯೋಜನೆ । ಗೋ ಬಂಧು ಯೋಜನೆಯಲ್ಲಿ ತೊಡಗಿಕೊಳ್ಳುವುದು ಹೇಗೆ ?

ನನ್ನ ಮನೆ, ನನ್ನ ತೋಟ, ನನ್ನ ಕಾರು, ನನ್ನ ಫೋನ್ ಇದ್ದ ಹಾಗೆಯೇ ನನ್ನ ಗೋವು ಅಂತ ಒಂದು ಬೇಕು. ಉಳಿದದ್ದು ಇಲ್ಲವಾದರೂ ಇದು ಅಗತ್ಯವಾಗಿ ಬೇಕಾಗಿರುವಂತದ್ದು. ಹಾಗೆ ನನ್ನ ಗೋವು ಅಂತ ಒಂದು ಇರಲಿ ಎಂಬ ಕಾರಣಕ್ಕೆ ಗೋಬಂಧು ಯೋಜನೆ ಇದೆ. ಗೋವನ್ನು ಸ್ವತಃ ಪಾಲನೆ ಪೋಷಣೆ ಮಾಡಲಾಗುವುದಿಲ್ಲ ಅನ್ನುವ ವಾತಾವರಣ ಅನೇಕರಿಗೆ ಇರುತ್ತದೆ. ಆದರೆ ಗೋಪಾಲನೆಯ ಮನಸ್ಸು ಇರುತ್ತದೆ. ಅವರಿಗೆ ಗೋಶಾಲೆಗಳಲ್ಲಿ ಸಹಜವಾಗಿಯೇ ಪಾಲನೆಯಾಗುತ್ತಿರುವ ಗೋವುಗಳ ಜತೆಗೆ ಬಾಂಧವ್ಯ; ಅಂದರೆ ನಿರ್ಧಿಷ್ಠವಾದ ಗೋವಿನ ಜತೆಗೆ ಬಾಂಧವ್ಯ ಬೆಳೆಸುವಂತಹದ್ದು ಗೋಬಂಧು ಯೋಜನೆಯ ಉದ್ದೇಶವಾಗಿದೆ.

ಗೋಶಾಲೆಯಲ್ಲಿ ಆ ಗೋವಿನ ಯೋಗಕ್ಷೇಮದ ಬಗ್ಗೆ ಪತ್ರಗಳು ಬರುವಂತಹದು, ಆಮಂತ್ರಣಗಳು ಬರುವಂತಹದು, ಆ ಗೋವಿನ ಜನ್ಮದಿನವನ್ನು ಆಚರಣೆ ಮಾಡುವಂತಹದು, ಇವರ ಜನ್ಮದಿನವನ್ನೂ ಅಲ್ಲಿ ಹೋಗಿ ಆಚರಣೆ ಮಾಡುವಂತಹದ್ದು, ಗೋವಿನ ಆರೋಗ್ಯ ಅನಾರೋಗ್ಯದ ಬಗ್ಗೆಯೂ ಪತ್ರಗಳು ಬರುವಂತಹದು. ಹೀಗೆ ಪರಸ್ಪರ ಬಾಂಧವ್ಯ ಗೋವಿಗೂ ವ್ಯಕ್ತಿಗೂ ಬೆಳೆಸುವುದು ಯೋಜನೆಯ ಪ್ರಧಾನ ಉದ್ದೇಶ. ಹಾಗೆಯೇ ಅವನು ಎಲ್ಲಿದ್ದರೂ ಒಂದು ಗೋವಿನ ಜವಾಬ್ದಾರಿ ತೆಗೆದುಕೊಳ್ಳುವುದು ಮಹತ್ತರವಾದ ಉದ್ದೇಶ. ಇದರಲ್ಲಿ ಯಾರು ಯಾರಿಗೆ ಗೋಬಂಧುವಾಗುವ ಇಚ್ಛೆ ಇದೆಯೋ ಎಲ್ಲರಿಗೂ ಯಾವ ಬೇದವೂ ಇಲ್ಲದೆ ಅವಕಾಶವಿದೆ.

ಈ ಯೋಜನೆಯಲ್ಲಿ ತೊಡಗಿಕೊಳ್ಳುವುದರಿಂದ ನಮಗೆ ಆಗುವ ಪ್ರಯೋಜನಗಳು ಏನು ?

ಗೋವುಗಳು, ನಾವು ಹುಟ್ಟುತ್ತಲೇ ನಮಗೆ ಹಾಲುಕೊಟ್ಟು ನಮ್ಮನ್ನು ಕ್ಯಾಲ್ಸಿಯಂ ಮತ್ತಿತರ ಅಗತ್ಯ ಪೋಷಣೆ ಮಾಡಿ ಗಟ್ಟಿಗೊಳಿಸುವುದರ ಜತೆಗೇನೇ, ನಾವು ಸಾಯುವ ತನಕ ಒಂದಿಲ್ಲೊಂದು ರೀತಿಯಲ್ಲಿ ನಮ್ಮನ್ನು ಸಲಹುತ್ತವೆ. ನಮಗೆ ಉಪಕಾರ ಮಾಡಿದುದಕ್ಕೆ ಒಂದಿಷ್ಟು ಪರೋಪಕಾರ ಮತ್ತು ಸಾರ್ಥಕತೆ ; ಒಂದು ಗೋವಿನ ಜವಾಬ್ದಾರಿ ನಾನು ತೆಗೆದುಕೊಂಡಿದ್ದೇನೆ. ಒಂದು ಗೋವಿನ ಉಳಿವಿಗೆ ನಾನು ಕಾರಣನಾಗಿದ್ದೇನೆ. ಒಂದು ಗೋವು ನನ್ನ ಸೇವೆಯಿಂದಾಗಿ ಮೇವನ್ನ, ನೀರನ್ನ, ಕಾಣ್ತಾ ಇದೆ ಅನ್ನೋದಿದೆಯಲ್ಲಾ ದೊಡ್ಡ ಸಾರ್ಥಕತೆ ಅದು. ಮತ್ತೆ ಪುಣ್ಯದ ಲೆಕ್ಕ ಹಾಕಿದರೆ ಅದು ಬೆಲೆ ಕಟ್ಟಲಾರದ ಪುಣ್ಯ. ಯಾವ ಜೀವವನ್ನಾದರೂ ಪೋಷಣೆ ಮಾಡಿದರೆ ಮುಖ್ಯ ಇದೆ. ಆದರೆ ಗೋವನ್ನು ಪೋಷಣೆ ಮಾಡಿದರೆ ಅಪಾರವಾದ ಪುಣ್ಯ ಇದೆ. ಮತ್ತೆ ಮನಃಶಾಂತಿ, ನೆಮ್ಮದಿ, ತುಂಬಾ ದೊಡ್ಡ ನೆಮ್ಮದಿ ಸಿಗುತ್ತದೆ. ಒಂದು ಗೋವನ್ನು ನಾವು ನೋಡಿಕೊಳ್ಳುತ್ತೇವೆ ಎಂಬುದು ಮನಸ್ಸಿಗೆ ದೊಡ್ಡ ನೆಮ್ಮದಿಯನ್ನು ಕೊಡುತ್ತದೆ ಮತ್ತು ಗೋಶಾಲೆಗೆ ಸಮಯ ಸಮಯಕ್ಕೆ ಹೋಗಿ ಅಲ್ಲಿ ನಾವು ಕೆಲವು ಆಚರಣೆಗಳನ್ನು ಮಾಡುವುದರಿಂದ ಅದು ಇನ್ನಷ್ಟು ನೆಮ್ಮದಿಯನ್ನು ಕೊಡುತ್ತದೆ. ಸಂತೋಷವನ್ನು ಕೊಡುತ್ತದೆ. ಮತ್ತೆ ಚಿಕ್ಕವರಿಗೆ ಮನೆಯಲ್ಲಿರುವ ಮುಂದಿನ ಪೀಳಿಗೆಗೆ ದೊಡ್ಡ ಆದರ್ಶನವನ್ನು ನಾವು ಹಾಕಿಕೊಟ್ಟಂತಾಗುತ್ತದೆ.

ಎಲ್ಲಿಯೋ ದೂರದ ಗೋಶಾಲೆಯಲ್ಲಿ ಗೋವನ್ನು ಇಟ್ಟು ನಾವು ಸಂಭ್ರಮ ಪಡುವುದು ಹೇಗೆ ?

ಇದೂ ವೃದ್ದಾಶ್ರಮದಲ್ಲಿ ಪೋಷಕರನ್ನು ಸೇರಿಸಿದಂತಾಗುವುದಲ್ಲವೇ? ಮನೆಯಲ್ಲೇ ಗೋವನ್ನು ಇಟ್ಟುಕೊಳ್ಳಬಹುದು. ಆದರೆ ಮನೆಯಲ್ಲಿ ಇಟ್ಟುಕೊಳ್ಳಲು ತಾಂತ್ರಿಕವಾಗಿ ಆಗದಿದ್ದಾಗ, ಮಾನಸಿಕವಾಗಿ ತಯಾರಿದ್ದಾಗಲೂ ಬೇರೆ ಕಾರಣಕ್ಕೆ ಆಗದಿದ್ದ ಸಂದರ್ಭ ಈ ಆಯ್ಕೆ. ವೃದ್ದಾಶ್ರಮಕ್ಕೂ ಇದಕ್ಕೂ ಹೋಲಿಕೆ ಮಾಡಲು ಸಾಧ್ಯವಿಲ್ಲ. ಯಾಕೆಂದರೆ ವೃದ್ದಾಶ್ರಮ ಮನೆಯಲ್ಲಿರುವ ತಂದೆ ತಾಯನ್ನು ತೆಗೆದುಕೊಂಡು ಹೋಗಿ ಎಲ್ಲೋ ಬಿಟ್ಟು ಬರುವಂತಹದು. ಎಷ್ಟೋ ಬಾರಿ ಕಾಳಜಿಯೂ ಇಲ್ಲದ ಜಾಗದಲ್ಲಿ ಬಿಟ್ಟು ಬರುವುದು, ಮತ್ತೆ ಇವರು ಹೋಗದೇ ಇರುವಂತಹದು, ಅದರ ರೀತಿಯೇ ಬೇರೆ. ಆದರೆ ಗೋಶಾಲೆಯಲ್ಲಿ ಹಾಗಲ್ಲ. ವೃದ್ಧಾಶ್ರಮ ಎನ್ನುವಾಗ ಜೀವನದ ಭಾಗವಾಗಿದ್ದ, ತಂದೆತಾಯಿರನ್ನು ಹೊರಗೆ ಹಾಕುವಂತಹದು. ಗೋ ಬಂಧು ಹಾಗಲ್ಲ ಈವರೆಗೆ ಜೀವನದ ಭಾಗವಾಗಿಲ್ಲದ ಗೋವುಗಳನ್ನು ಜೀವನದ ಭಾಗ ಮಾಡಿಕೊಳ್ಳುವುದು. ಹಾಗಾಗಿ ಇದಕ್ಕೂ ಅದಕ್ಕೂ ತುಂಬಾ ವ್ಯತ್ಯಾಸ ವಿದೆ.

ಗೋ ಬಂಧು ಯೋಜನೆ ಮೂಲಕ ಈ ತನಕ ಆಗಿರುವ ಕಾರ್ಯಸಾಧನೆ ಏನು?

ಇದುವರೆಗೆ ಗೋಬಂಧುಗಳಾದವರ ಅಂಕಿ ಅಂಶ ಈ ರೀತಿ ಇದೆ. ವತ್ಸ ಬಂಧು – 121 ಮಕ್ಕಳು. ಧೇನು (ಗೋ) ಬಂಧು – 30 ಜನರು. ಸವತ್ಸ ಬಂಧು – 29 ಜನರು. ನಂದಿ ಬಂಧು – 3 ಜನರು. ವಿಶೇಷ ಬಂಧು – 2 ಜನರು ಇದರಿಂದ ಸಮಾಜಕ್ಕೆ ತುಂಬ ಪ್ರೇರಣೆ ಸಿಕ್ಕಿದೆ. ತುಂಬಾ ಜನ ಗೋಬಂಧುವಾಗಲು ಮುಂದೆ ಬರುತ್ತಿದ್ದಾರೆ. ಜೊತೆಗೆ ಮಕ್ಕಳು ವತ್ಸಬಂಧುವಾಗಲು ಮುಂದೆ ಬರುತ್ತಿದ್ದಾರೆ. ಕರುವನ್ನು ದತ್ತು ತೆಗೆದುಕೊಳ್ಳಲು ಮಕ್ಕಳು ಮುಂದೆ ಬರುತ್ತಿದ್ದಾರೆ. ಪ್ರೇರಣೆ ತುಂಬಾ ಸಿಕ್ಕಿದೆ ಸಮಾಜಕ್ಕೆ.

ಗೋ ಬಂಧು ಯೋಜನೆಯಡಿ ಸಂಗ್ರಹಿತವಾದ ನಿಧಿಯು ಯಾವ ರೀತಿಯಲ್ಲಿ ವಿನಿಯೋಗವಾಗುತ್ತದೆ ?

ಗೋ ಬಂಧು ಯೋಜನೆಯಡಿ ಸಂಗ್ರಹಿತವಾದ ನಿಧಿಯು ಗೋವಿನ ನಿತ್ಯ ನಿರ್ವಹಣೆಗಾಗಿ, ಗೋವಿನ ಮೇವು, ನೀರು, ಆರೋಗ್ಯ, ಅನಾರೋಗ್ಯಕ್ಕೆ ಇರಬಹುದು, ಗೋವನ್ನು ಪಾಲನೆ ಮಾಡುವ ಸಲುವಾಗಿ ವಿನಿಯೋಗವಾಗುತ್ತದೆ.

ಆಗಿರುವ ಕಾರ್ಯ ಚಿಕ್ಕದಿದೆ. ಇವತ್ತು ನಾವು ಬಿತ್ತುವ ನಗಣ್ಯ ತೂಕದ ಬೀಜವು ಮುಂದೆ ಬಹುದೊಡ್ಡ ಮರವಾಗಿ ಬೆಳೆಯಬಲ್ಲುದು. ನೀವೊಬ್ಬರು ಹಠ ಕಟ್ಟಿ ಗೋ ಬಂಧುಗಳಾಗಿ. ನಿಮಗೆ ಸಾಕಲಾಗದ ಗೋವುಗಳನ್ನು ಕಟುಕರಿಗೆ ಮಾರದೆ ಗೋ ಸಂರಕ್ಷಕರಿಗೆ ನೀಡಿ.

ಇತೀ ನಿಮ್ಮ, ಯಶವಂತ್ ಬಪ್ಪಳಿಗೆ, 97438 30699

Leave A Reply

Your email address will not be published.