ಕಡಬ:ಆಸಿಡ್ ದಾಳಿ ಪ್ರಕರಣ: ಪೊಲೀಸರಿಂದ ಕರ್ತವ್ಯ ಲೋಪ, ಕಡಬ ಎಎಸೈ ಅಮಾನತು

ಕಡಬ:ಆಸಿಡ್ ದಾಳಿ ಪ್ರಕರಣ: ಪೊಲೀಸರಿಂದ ಕರ್ತವ್ಯ ಲೋಪ, ಕಡಬ ಎಎಸೈ ಅಮಾನತು

ಕಡಬ : ಕೋಡಿಂಬಾಳದಲ್ಲಿ ಮಹಿಳೆ ಮತ್ತು ಮಗುವಿನ ಮೇಲೆ ಆಸಿಡ್  ಎರಚಿದ್ದ ಪ್ರಕರಣದಲ್ಲಿ ಕಡಬ ಪೊಲೀಸರು  ಕರ್ತವ್ಯ ಲೋಪ ಎಸಗಿದ್ದಾರೆ ಎಂದು  ಪುತ್ತೂರು  ಉಪ ವಿಭಾಗದ ಡಿವೈಎಸ್‌ಪಿ  ದಿನಕರ ಶೆಟ್ಟಿಯವರು  ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಂ.ಲಕ್ಷ್ಮೀಪ್ರಸಾದ್‌ರವರಿಗೆ ವರದಿ ಸಲ್ಲಿಸಿದ್ದು,ಇದರಂತೆ ಕಡಬ ಎಎಸೈ ಚಂದ್ರಶೇಖರ ಅವರನ್ನು ಅಮಾನತು ಮಾಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆದೇಶಿಸಿದ್ದಾರೆ. ಆರೋಪಿ ಜಯಾನಂದ ಕೊಟ್ಟಾರಿ ತನ್ನ ನಾದಿನಿಯಾಗಿರುವ ಸಪ್ನಾರವರಿಗೆ ನಿರಂತರ ಕಿರುಕುಳ ನೀಡುತ್ತಿದ್ದರೂ, ಪೊಲೀಸರು ಸಕಾಲಕ್ಕೆ   ಕ್ರಮ ಕೈಗೊಂಡಿಲ್ಲ  ಎಂದು ಡಿವೈಎಸ್‌ಪಿಯವರು ತನ್ನ ತನಿಖಾ ವರದಿಯಲ್ಲಿ ಉಲ್ಲೇಖಿಸಿದ್ದು,ಈ ವರದಿ ಆಧರಿಸಿ ಕಡಬ ಪೊಲೀಸರ ವಿರುದ್ಧ ಎಸ್.ಪಿ.ಯವರು  ಈ ಕ್ರಮ ತೆಗೆದುಕೊಂಡರು. ಆಸಿಡ್ ದಾಳಿ ಪ್ರಕರಣ  ನಡೆಯುವ ಮೊದಲು  ಸಪ್ನಾರವರು ತನಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಪೊಲೀಸರಿಗೆ ವಿಷಯ ತಿಳಿಸಿದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ.  

 ಪೊಲೀಸರ ನಿರ್ಲಕ್ಷ್ಯದಿಂದಾಗಿ ಸಪ್ನಾರವರು ಆಸಿಡ್ ದಾಳಿಗೆ ಒಳಗಾಗುವಂತಾಗಿತ್ತು.   ಆಸಿಡ್ ದಾಳಿಯಾದ ಕೂಡಲೇ ಸಪ್ನಾರವರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದಾಗಲೂ ಪೊಲೀಸರು ಅದನ್ನು ಗಂಭೀರವಾಗಿ  ಪರಿಗಣಿಸದೆ ಪೊಲೀಸ್ ಠಾಣೆಗೆ ಬಂದು ದೂರು ನೀಡಿ ಎಂದು ಹೇಳಿದ್ದರು.  

ಜೀವನ್ಮರಣ ಸ್ಥಿತಿಯಲ್ಲಿ ಸಪ್ನಾ ಮತ್ತು ಅವರ ಮಗಳು   ವಾಹನದ ಮೂಲಕ ಠಾಣೆಗೆ ಬಂದು ಬಳಿಕ ಆಸ್ಪತ್ರೆಗೆ ದಾಖಲಾಗಿದ್ದರು.   ಈ ಪ್ರಕರಣದಲ್ಲಿ ಕಡಬ ಠಾಣೆ ಪೊಲೀಸರು ಲೋಪ ಎಸಗಿದ್ದಾರೆ ಎಂದು ಹಲವು ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದಲ್ಲದೆ, ಆರೋಪಿ ವಿರುದ್ಧ ಕಠಿಣ ಕಾನೂನು ಕ್ರಮ ಜರಗಿಸುವಂತೆಯೂ ಆಗ್ರಹ ವ್ಯಕ್ತಪಡಿಸಿದ್ದವು.  

ಅಲ್ಲದೆ ಸಚಿವರು, ಹಲವು ಪ್ರಮುಖರು ಮಂಗಳೂರು ಆಸ್ಪತ್ರೆಗೆ ಭೇಟಿ ನೀಡಿ ಸಂತ್ರಸ್ತೆಗೆ   ಸಾಂತ್ವನ ಹೇಳಿದ್ದರಲ್ಲದೆ ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸುವಂತೆ ಸೂಚಿಸಿದ್ದರು.   ಬಳಿಕ ಘಟನೆ ಕುರಿತು ವಿಚಾರಣೆ ನಡೆಸಿ ವರದಿ ನೀಡುವಂತೆ  ದಕ್ಷಿಣ ಕನ್ನಡ ಎಸ್‌ಪಿ ಲಕ್ಷ್ಮಿಪ್ರಸಾದ್‌ರವರು ಪುತ್ತೂರು ಉಪ ವಿಭಾಗದ ಡಿವೈಎಸ್‌ಪಿ ದಿನಕರ ಶೆ ಟ್ಟಿಯವರಿಗೆ ಸೂಚಿಸಿದ್ದರು.  ಸಂತ್ರಸ್ತ ಮಹಿಳೆಯನ್ನು ತೀವ್ರ ನಿಗಾ ಘಟಕದಿಂದ ವಾರ್ಡ್‌ಗೆ ಸ್ಥಳಾಂತರಿಸಿದ ಬಳಿಕ ಡಿವೈಎಸ್‌ಪಿ ಹೇಳಿಕೆ ದಾಖಲಿಸಿಕೊಂಡಿದ್ದಾರೆ.

` ಸಂತ್ರಸ್ತೆಯು ನಿರಂತರವಾಗಿ ಪೊಲೀಸರ ನೆರವು ಕೋರಿದ್ದರು.   ದೌರ್ಜನ್ಯ ಆಗುತ್ತಿರುವ ಕುರಿತು ಮೊದಲೇ ಮಾಹಿತಿ ನೀಡಿದ್ದರು. ಪೊಲೀಸರು ಅವರ ಮನವಿಗೆ ಸ್ಪಂದಿಸಿರಲಿಲ್ಲ.  ಬದಲಾಗಿ ಠಾಣೆಗೆ ಬರುವಂತೆ ಸೂಚಿಸುತ್ತಿದ್ದರು. ಆಸಿಡ್ ದಾಳಿ ಘಟನೆಯ ಬಳಿಕ ಮಹಜರು  ಪ್ರಕ್ರಿಯೆಯಲ್ಲೂ  ಪೊಲೀಸರು ಲೋಪ ಎಸಗಿದ್ದಾರೆ. ಅಲ್ಲದೆ, ಆರೋಪಿಯು ಆಸಿಡ್ ದಾಳಿಗೂ ಮುನ್ನ ಲೈಂಗಿಕ ಸುಖಕ್ಕಾಗಿ ಪೀಡಿಸುತ್ತಿದ್ದ ಎಂದು ಡಿವೈಎಸ್‌ಪಿಯವರು ತನಿಖಾ ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಕಡಬ ಠಾಣೆಯ  ಪೊಲೀಸರು ಮೊದಲು ದಾಖಲಿಸಿದ್ದ ಪ್ರಥಮ ವರ್ತಮಾನ ವರದಿಯಲ್ಲಿ ಲೈಂಗಿಕ ದೌರ್ಜನ್ಯ ಸಂಬಂಧಿಸಿದ ವಿಷಯವನ್ನೇ ಪ್ರಸ್ತಾಪಿಸಿರಲಿಲ್ಲ. ಅತಿಕ್ರಮ ಪ್ರವೇಶ,  ಶಾಂತಿ ಕದಡುವ ಉದ್ದೇಶದಿಂದ ನಿಂದನೆ, ಜೀವ ಬೆದರಿಕೆ ಮತ್ತು ಆಸಿಡ್ ದಾಳಿಯ ಆರೋಪಗಳಷ್ಟೇ ಎಫ್‌ಐಆರ್‌ನಲ್ಲಿ ಇತ್ತು.  ಪೊಲೀಸರ ವಿರುದ್ಧ ಕರ್ತವ್ಯ ಲೋಪದ ಆರೋಪ ಕೇಳಿಬಂದ ಬಳಿಕ ಎಫ್‌ಐಆರ್ ಪರಿಷ್ಕರಿಸಲಾಗಿದ್ದು, ಮಹಿಳೆಯ  ವ್ಯಕ್ತಿತ್ವಕ್ಕೆ ಕುಂದು ತರುವ ಯತ್ನ(ಐಪಿಸಿ ಸೆಕ್ಷನ್ ೫೦೯) ಮತ್ತು ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ (ಐಪಿಸಿ ಸೆಕ್ಷನ್ ೩೫೪ಎ) ಅಡಿಯಲ್ಲೂ ಆರೋಪ ದಾಖಲಿಸಲಾಗಿದೆ‌

Leave A Reply

Your email address will not be published.