ಆನ್ ಲೈನ್ ಶಾಪಿಂಗ್ ಸಂಸ್ಥೆಯ ಹೆಸರಿನಲ್ಲಿ ದೋಖಾ! ಕಾಣಿಯೂರಿನ ಸುಂದರಣ್ಣಗೆ 15 ಸಾವಿರ ಲುಕ್ಸಾನ್!
ಆನ್ ಲೈನ್ ಶಾಪಿಂಗ್ ಸಂಸ್ಥೆಯ ಹೆಸರಿನಲ್ಲಿ ದೋಖಾ! ಕಾಣಿಯೂರಿನ ಸುಂದರಣ್ಣಗೆ 15 ಸಾವಿರ ಲುಕ್ಸಾನ್!
ಪುತ್ತೂರು:ಮೋಸ ಹೋಗುವವರು ಎಲ್ಲಿ ತನಕ ಇರುತ್ತಾರೋ ಅಲ್ಲಿ ತನಕ ಮೋಸ ಮಾಡುವವರೂ ಇರುತ್ತಾರೆ. NAPTOL ಆನ್ ಲೈನ್ ಶಾಪಿಂಗ್ ಸಂಸ್ಥೆ ಯ ಹೆಸರಿನಲ್ಲಿ ಬಂದ 14 ಲಕ್ಷದ 90 ಸಾವಿರ ರೂಪಾಯಿ ಮೊತ್ತದ ಬಹುಮಾನದ ಘೋಷಣೆಯ ಪತ್ರವೊಂದಕ್ಕೆ ಮನಸೋತ ಕಾಣಿಯೂರಿನ ನಾಗಲೋಕದ ಸುಂದರ ಎಂಬವರು 14,900 ₹ ಗಳನ್ನು ನಷ್ಟ ಮಾಡಿ ಕೊಂಡಿದ್ದಾರೆ.
ಅಂದ ಹಾಗೆ ಸುಂದರ ಅವರು ಜ.30ರಂದು ಹಣ ಜಮೆ ಮಾಡಿದ್ದಾರೆ.ಅದರ ನಂತರದ ಒಂದು ವಾರದಲ್ಲಿ ತಾನು ಮೋಸ ಹೋಗಿರುವುದಾಗಿ ಗಮನಕ್ಕೆ ಬಂದಿದೆ.
ಕೂಲಿ ಕೆಲಸ ಮಾಡುತ್ತಿರುವ ಸುಂದರ ಅವರಿಗೆ NAAPTOL ಕಂಪೆನಿಯ ಹೆಸರಿನಲ್ಲಿ ನಕಲಿ ಪತ್ರವೊಂದು ಇವರ ವಿಳಾಸಕ್ಕೆ ಬಂದಿತ್ತು. ಅದರಲ್ಲಿ ಕೂಪನ್ ಒಂದನ್ನು ನೀಡಿದ್ದು, ಅದನ್ನು scratch ಮಾಡಿದಾಗ 14,90,000 ರೂಪಾಯಿ ಗೆದ್ದಿರುವುದಾಗಿ ನಮೂದಾಗಿತ್ತು. ಅಲ್ಲದೆ ಸಿದ್ದಾರ್ಥ್ ಹೆಸರಿನಲ್ಲಿ ಕರೆ ಮಾಡಿದ ಅಪರಿಚಿತ ವ್ಯಕ್ತಿ 14 ಲಕ್ಷದ ತೊಂಭತ್ತು ಸಾವಿರ ಇರುವ ಚೆಕ್ ಒಂದನ್ನು ಕಳುಹಿಸಿ , ಈ ಹಣದ ಶೇ.1 ರಷ್ಟು ಹಣವನ್ನು ಖಾತೆಯೊಂದಕ್ಕೆ ಜಮೆ ಮಾಡುವಂತೆ ತಿಳಿಸಿದ್ದಾರೆ.
ಆದರೆ NAAPTOL ಸಂಸ್ಥೆ ಇಂತಹ ಯಾವುದೇ ಆಫರ್ ನೀಡುವುದಿಲ್ಲ.ಇದು ಸಂಸ್ಥೆಯ ಹೆಸರು ಹಾಕಿ ಮೋಸ ಮಾಡುವ ಜಾಲ ಎಂದು NAAPTOL ತಿಳಿಸಿದೆ.
ಆನ್ ಲೈನ್ ಮೂಲಕ ಕೆಲ ವಸ್ತು ಖರೀದಿ ಮಾಡಿದ ಕಾರಣ ಹಾಗೂ ಟಿ.ವಿಯಲ್ಲಿ ಬರುವ ಜಾಹಿರಾತಿನ ಮೂಲಕ ಕಂಪೆನಿಯ ಹೆಸರನ್ನು ನಂಬಿ ಅಧಿಕ ಮೊತ್ತದ ಹಣದ ಸಿಗುವ ನಿರೀಕ್ಷೆಯಲ್ಲಿ ಸುಂದರ ಅವರು ಕಾಣಿಯೂರಿನ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ನಲ್ಲಿ 14,900 ರೂಪಾಯಿ ಜಮೆ ಮಾಡಿದ್ದಾರೆ.
ಹಣ ಪಾವತಿಸಿದ ಬಳಿಕ ಅಪರಿಚಿತ ವ್ಯಕ್ತಿ ಹಣವು ಈಗ ರಿಸರ್ವ್ ಬ್ಯಾಂಕ್ ಗೆ ಬಂದಿದೆ, ಎಂದು ಕರೆ ಮಾಡಿದಲ್ಲದೆ, ಹಣ ಬಂದಿರುವ ನಕಲಿ ಪತ್ರವನ್ನೂ ಕಳುಹಿಸಿ , ಹಣವನ್ನು ಭಾರತೀಯ ರಿಸರ್ವ್ ಬ್ಯಾಂಕ್ ತಡೆಹಿಡಿದಿದ್ದು, 44, 700 ಕೂಡಲೇ ಪಾವತಿಸುವಂತೆ ತಿಳಿಸಿದ್ದಾನೆ.
ಕಡಬದಲ್ಲಿ ಯುವಕನೊಬ್ಬನಿಗೆ ಕಾರು ಆಫರ್ ಹೆಸರಿನಲ್ಲಿ ಯಾನಾರಿಸಲು ಯತ್ನಿಸಿದ ಸುದ್ದಿಯನ್ನು ಮಾಧ್ಯಮಗಳಲ್ಲಿ ಗಮನಿಸಿದ ಸುಂದರ ಅವರಿಗೆ ತಾನು ಮೋಸದಿಂದ ಹಣ ಕಳೆದುಕೊಂಡೆ ಎಂಬುದು ಗಮನಕ್ಕೆ ಬಂದಿದೆ. ಹಣದ ಆಫರ್ ಬಂದಿರುವ ವಿಚಾರ ಬೇರೆಯವರಲ್ಲಿ ತಿಳಿಸಿ ಮುಂದುವರಿಯುತ್ತಿದ್ದರೆ ಮೋಸ ಹೋಗುವ ಪ್ರಮೇಯ ಬರುತ್ತಿರಲಿಲ್ಲ..ಈಗ ಕಾಣಿಯೂರು ತುಂಬಾ ಸುಂದರಣ್ಣ ಅವರದೇ ವಿಷಯ ಪರಸ್ಪರ ಮಾತಾಡಿಕೊಳ್ಳುತ್ತಿದ್ದಾರೆ. ಸೌಮ್ಯ ಸ್ವಭಾವದ ವ್ಯಕ್ತಿ ಸುಂದರ ಅವರಿಗೆ ಮೋಸವಾಗಬಾರದಿತ್ತು ಎಂಬುದು.
ಆದರೆ ಮೋಸ ಮಾಡುವ ಜಾಲ ಮೀನಿಗೆ ಗಾಳ ಹಾಕಿ ಕೂತಂತೆ ಎಲ್ಲೆಡೆ ಇದೆ.ಗಾಳಕ್ಕೆ ಸಿಕ್ಕ ಕೂಡಲೇ ಬ್ಲೇಡ್ ಇಲ್ಲದೆ ಸಂಪೂರ್ಣವಾಗಿ ಬೋಳಿಸಿ ಬಿಡುತ್ತಾರೆ. ಇದು ಎಲ್ಲರಿಗೂ ಎಚ್ಚರಿಕೆಯ ಸಂದೇಶವಾಗಲಿ ಎಂಬುದು ಈ ವರದಿಯ ಉದ್ದೇಶ. ಇದೀಗ ಹಣ ಕಳೆದುಕೊಂಡ ಸುಂದರ ಅವರು ಪೊಲೀಸ್ ದೂರು ನೀಡಲು ಮುಂದಾಗಿದ್ದಾರೆ.