ಮಂಗಳೂರಿಂದ ಬೆಂಗಳೂರಿಗೆ ಕೇವಲ ನಾಲ್ಕುವರೆ ತಾಸಿನೊಳಗೆ ಅಂಬ್ಯುಲೆನ್ಸ್ ತಲುಪಿಸಿದ ಚಾಲಕ ಹನೀಫ್ ಬಳಂಜ: 40 ದಿನಗಳ ಹಿಂದೆ ಜನಿಸಿದ್ದ ಪುಟ್ಟ ಮಗುವಿನ ಹೃದಯದ ಶಸ್ತ್ರಚಿಕಿತ್ಸೆ ಹಿನ್ನೆಲೆ

ಮಂಗಳೂರಿಂದ ಬೆಂಗಳೂರಿಗೆ ಕೇವಲ ನಾಲ್ಕುವರೆ ತಾಸಿನೊಳಗೆ ಅಂಬ್ಯುಲೆನ್ಸ್ ತಲುಪಿಸಿದ ಚಾಲಕ ಹನೀಫ್

40 ದಿನಗಳ ಹಿಂದೆ ಜನಿಸಿದ್ದ ಪುಟ್ಟ ಮಗುವಿನ ಹೃದಯದ ಶಸ್ತ್ರಚಿಕಿತ್ಸೆ ಹಿನ್ನೆಲೆ

ಚಾಲಕ ಹನೀಫ್

ಮಂಗಳೂರು : 40 ದಿನಗಳ ಹಿಂದೆ ಜನಿಸಿದ್ದ ಪುಟ್ಟ ಮಗುವೊಂದರ ಹೃದಯದ ಶಸ್ತ್ರಚಿಕಿತ್ಸೆಗಾಗಿ ಮಂಗಳೂರಿನಿಂದ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಆ್ಯಂಬುಲೆನ್ಸ್ ಮೂಲಕ ಸಾಗಿಸುವ ಹಿನ್ನೆಲೆಯಲ್ಲಿ ಮಂಗಳೂರಿನಿಂದ ಬೆಂಗಳೂರಿಗೆ ಝೀರೋ ಟ್ರಾಫಿಕ್ ವ್ಯವಸ್ಥೆ ಮಾಡಿ, ನಾಲ್ಕುವರೆ ಗಂಟೆಗಳ ಒಳಗೆ ಬೆಂಗಳೂರಿಗೆ ತಲುಪಿಸಿದ ಅಂಬ್ಯುಲೆನ್ಸ್ ಚಾಲಕ ಹನೀಫ್ ಈಗ ಎಲ್ಲರ ಅಭಿನಂದನೆಗೆ ಪಾತ್ರರಾಗಿದ್ದಾರೆ.

ಅಭಿನಂದನೆ ಸ್ವೀಕರಿಸಿದ ಹನೀಫ್ ಬಳಂಜ

ಮಂಗಳೂರಿನಿಂದ ಬೆಳಗ್ಗೆ 11.50ಕ್ಕೆ ಹೊರಟು ಬಿ.ಸಿ.ರೋಡ್, ಕಲ್ಲಡ್ಕ, ಉಪ್ಪಿನಂಗಡಿ, ನೆಲ್ಯಾಡಿ, ಸಕಲೇಶಪುರ, ಹಾಸನ, ನೆಲಮಂಗಲ ಮಾರ್ಗವಾಗಿ ಬೆಂಗಳೂರಿಗೆ ತಲುಪಿಸಲಾಯಿತು. ಮಂಗಳೂರಿನ ಫಾದರ್ ಮುಲ್ಲರ್ಸ್ ಆಸ್ಪತ್ರೆಯಲ್ಲಿ40 ದಿನಗಳ ಹಿಂದೆ ಜನಿಸಿ ಹೃದಯ ಸಂಬಂದಿ ಸಮಸ್ಯೆಯಿಂದ ತೀವ್ರ ನಿಗಾ ಘಟಕದಲ್ಲಿದ್ದ ಸೈಫುಲ್ ಅಝ್ಮಾನ್ ಎಂಬ ಮಗುವನ್ನು ಶಸ್ತ್ರ ಚಿಕಿತ್ಸೆಗಾಗಿ ಮಂಗಳೂರಿನಿಂದ ಬೆಂಗಳೂರಿಗೆ ತಲುಪಿಸುವ ಮಹತ್ತರವಾದ ಜವಾಬ್ದಾರಿಯನ್ನು ಕೆಎಂಸಿಸಿ ಸಂಸ್ಥೆಯ ಆ್ಯಂಬುಲೆನ್ಸ್ ವಿಭಾಗಕ್ಕೆ ವಹಿಸಲಾಗಿತ್ತು.

ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ಅಂಬ್ಯುಲೆನ್ಸ್ ಹಾದು ಹೋಗುವ ದಾರಿಯಲ್ಲಿ ಝೀರೋ ಟ್ರಾಫಿಕ್ ವ್ಯವಸ್ಥೆ ಮಾಡಲಾಗಿತ್ತು. ಸೂಕ್ತ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಿದ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಕಾರ್ಯವೈಖರಿಗೂ ಶ್ಲಾಘನೆ ವ್ಯಕ್ತವಾಗಿದೆ.

ಅಲ್ಲದೆ ಸಾರ್ವಜನಿಕರಿಗೆ ಸಾಮಾಜಿಕ ಜಾಲತಾಣದ ಮೂಲಕ ಮಾಹಿತಿ ನೀಡಲಾಗಿತ್ತು.ಅಲ್ಲದೆ ದಾರಿಯುದ್ದಕ್ಕೂ ನೂರಾರು ಸಮಾಜಮುಖಿ ಸಂಘಟನೆಗಳ ಸದಸ್ಯರು ಹಾಜರಿದ್ದು ,ಶೀಘ್ರವಾಗಿ ಬೆಂಗಳೂರಿಗೆ ತಲುಪಿ ಮಗು ಕ್ಷೇಮವಾಗಿರಲಿ ಎಂದು ಹಾರೈಸುತ್ತಿದ್ದರು.

ಈಗ ಆ್ಯಂಬುಲೆನ್ಸ್ ಮೂಲಕ ಶೀಘ್ರವಾಗಿ ತಲುಪಿಸಿದ ಡ್ರೈವರ್ ಹನೀಫ್ ಅವರಿಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ. ಜಯದೇವ ಆಸ್ಪತ್ರೆಯ ಬಳಿ ಜಮಾಯಿಸಿದ ನೂರಾರು ಸಾರ್ವಜನಿಕರು ಹನೀಫ್ ಅವರನ್ನು ಅಭಿನಂದಿಸಿದರು.

ಅಭಿನಂದನೆ ಸ್ವೀಕರಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಹನೀಫ್ ಬಳಂಜ ಅವರು,ಪೊಲೀಸ್ ಇಲಾಖೆಯ ಸಹಕಾರ ಹಾಗೂ ಜನರ ಹಾರೈಕೆಯಿಂದ 5 ಗಂಟೆಯಲ್ಲಿ ತಲುಪಬಹುದೆಂಬ ನಿರೀಕ್ಷೆ ಇದ್ದರೂ 4 ಗಂಟೆ 20 ನಿಮಿಷದಲ್ಲಿ ತಲುಪುವಂತಾಯಿತು ಎಂದರು.

ಪುಟ್ಟ ಕಂದಮ್ಮ ಸೈಫುಲ್ ಅಝ್ಮಾನ್ ಶೀಘ್ರ ಚೇತರಿಸಿಕೊಳ್ಳಲಿ ಎಂಬುದೇ ನಮ್ಮ ಹಾರೈಕೆ

Leave A Reply

Your email address will not be published.