ಫೆ .7 ,8 : ಶ್ರೀ ದೈಪಿಲ ಶಿರಾಡಿ ರಾಜನ್ ದೈವದ ನೇಮೋತ್ಸವ – ಸಂತಾನ ದೋಷ, ಅನಾರೋಗ್ಯ, ಉದ್ಯೋಗ, ಕೋರ್ಟು ಕಛೇರಿ ವ್ಯವಹಾರ, ಕಳವು, ಮೋಸ, ವಂಚನೆಗಳಿಗೆ ದೈವದಿಂದ ಪರಿಹಾರ

ಫೆ .7 ,8 : ಶ್ರೀ ದೈಪಿಲ ಶಿರಾಡಿ ರಾಜನ್ ದೈವದ ನೇಮೋತ್ಸವ ಸಂತಾನ ದೋಷ, ಅನಾರೋಗ್ಯ, ಉದ್ಯೋಗ, ಕೋರ್ಟು ಕಛೇರಿ ವ್ಯವಹಾರ, ಕಳವು, ಮೋಸ, ವಂಚನೆಗಳಿಗೆ ದೈವದಿಂದ ಪರಿಹಾರ

ಸವಣೂರು : ಕಾರಣಿಕ ಶಕ್ತಿಗಳ ಸಾನಿಧ್ಯವಿರುವ ದೈಪಿಲ ಕ್ಷೇತ್ರಕ್ಕೆ 800 ವರ್ಷಗಳ ಇತಿಹಾಸ ಇದೆ. ಶ್ರೀ ಶಿರಾಡಿ ಗ್ರಾಮ ದೈವವು ದೈಪಿಲ ಅಲ್ಲದೆ ಅಂಕದ ಕೂಟೇಲುವಿನಲ್ಲಿಯೂ ದೈವದ ನೇಮ ಹಿಂದಿ ನಿಂದಲೂ ನಡೆದು ಬಂದಿದೆ. ಇತ್ತೀಚಿನ ವರ್ಷಗಳಲ್ಲಿ ಕೊಪ್ಪದ ಭಂಡಾರದ ಮನೆಯಲ್ಲಿ ವರ್ಷಂಪ್ರತಿ ನೇಮ ನಡೆಯುತ್ತಿದೆ. ತುಳು ತಿಂಗಳಿನ ಪೊನ್ನಿಯಲ್ಲಿ ದೈಪಿಲದಲ್ಲಿ, ಸುಗ್ಗಿ ತಿಂಗಳಿನಲ್ಲಿ ಕೊಪ್ಪದಲ್ಲಿ, ಪಗ್ಗು ತಿಂಗಳಿನಲ್ಲಿ ಅಂಕದ ಕೂಟೇಲುವಿನಲ್ಲಿ ಸುಸೂತ್ರವಾಗಿ ನೇಮ ನಡೆಯುತ್ತದೆ.

ಫೆ.7, 8 ವರ್ಷಾವಧಿ ನೇಮ

ದೈಪಿಲ ಕ್ಷೇತ್ರದಲ್ಲಿ ಫೆಬ್ರವರಿ 7, 8ರಂದು ನೇಮೋತ್ಸವ ನಡೆಯುತ್ತದೆ. ಈ ದೈವವು ಚಾರ್ವಾಕ ಗ್ರಾಮದ ಕೊಪ್ಪ ಎಂಬಲ್ಲಿ ಪಾಜೊವುತಡ್ಕ ಮಾಲ್ಯದಲ್ಲಿ ಮೂಲ ನೆಲೆಹೊಂದಿದ್ದು. ದೈವದ ಭಂಡಾರದ ಮನೆ ಕೊಪ್ಪದಲ್ಲಿದೆ.

ನಾಲ್ಕು ಮನೆತನಗಳ ಮೂಲಕ ದೈವಸ್ಥಾನದ ಆಡಳಿತ

ದೈವಸ್ಥಾನದ ಆಡಳಿತವು 1.ಅರುವ ಗುತ್ತಿನ ಮನೆ 2.ಕುಂಬ್ಲಾಡಿ 3.ತಿರ್ತಕೇರಿ 4.ಖಂಡಿಗ ಮನೆತನಗಳ ಮೂಲಕ ನಡೆಯುತ್ತಿದ್ದು ದೈವದ ಪೂಜಾರಿಗಳಾಗಿ ಅಂಬುಲ ಮತ್ತು ಕೊಪ್ಪದ ಮನೆತನದವರು ಸೇವೆ ಸಲ್ಲಿಸುತ್ತಿದ್ದಾರೆ. ದೈವದ ನೇಮ ನಡವಳಿಕೆಗಳು ವಂತಿಗೆ ವಗೈರೆಗಳನ್ನು (ಪಡೆಚ್ಚಿಲು) 13 ವರ್ಗ ನಡೆಸಿಕೊಂಡು ಬರುತ್ತಿದೆ.

ಭೂತ ಕಟ್ಟುವವರು ಕಾಪೆಜಾಲುವಿನ ಅಜಿಲಾಯರು ಹಾಗೂ ಪಲ್ಲಕ್ಕಿ ಹೊರಲು ಕೊಪ್ಪದ ಜನರು ಮತ್ತು ಮಡಿವಾಳ ಸೇವೆ ಮಾಡಲು ಮಡಿವಾಳ ಪಾಲಿನ ಮಡಿವಾಳರು. ದೈಪಿಲದಲ್ಲಿ ಮಾತ್ರ ಶಿರಾಡಿ ದೈವದ ಜೊತೆಗೆ ಕೊಡಮಣಿತ್ತಾಯ ದೈವದ ನೇಮವು ನಡೆಯುತ್ತದೆ. ಇದರ ಭೂತ ಕಟ್ಟುವವರು ಮರಕ್ಕಡದ ಪರವರು. ಪುರಾತನ ಕಾಲದಲ್ಲಿ ಸಂಪ್ರದಾಯ ರೀತಿಯಲ್ಲಿ ನೇಮೋತ್ಸವ ನಡೆಯುತ್ತಿತ್ತು.

ಅರುವಗುತ್ತಿನ ದಿ| ಕುಕ್ಕಪ್ಪ ಗೌಡರ ಕಾಲದಿಂದ ನೇಮವು ಉಛ್ರಾಯ ಸ್ಥಿತಿಯಲ್ಲಿ ಜರಗುತ್ತಿತ್ತು. ಅರುವಗುತ್ತಿನ ದಿ| ಸಿ.ಕೆ. ಪದ್ಮಯ್ಯ ಗೌಡರ ಕಾಲದಲ್ಲಿ ಹೆಚ್ಚು ಜನಪ್ರಿಯತೆ ಪಡೆದು ದಿ.ಸಿ.ಪಿ. ಜಯರಾಮ ಗೌಡರ ನೇತೃತ್ವದಲ್ಲಿ ಎಲ್ಲರ ಸಹಕಾರದೊಂದಿಗೆ ವಿಜ್ರಂಭಣೆಯಿಂದ ನೇಮೋತ್ಸವವು ನಡೆಯುತ್ತಿತ್ತು.ಈಗ ಅವರ ಧರ್ಮಪತ್ನಿ ಚಂದ್ರಕಲಾ ಜಯರಾಮ್ ಅವರ ನೇತೃತ್ವದಲ್ಲಿ ನಡೆಯುತ್ತಿದೆ.

ಊರ-ಪರ ಊರ ಭಕ್ತರಿಂದ ಹರಕೆ ಮಹಾಪೂರ

ಈ ದೈವಗಳಿಗೆ ಊರ-ಪರವೂರ ಸಾವಿರಾರು ಭಕ್ತರು ಹರಕೆ ಕಾಣಿಕೆ ಒಪ್ಪಿಸುತ್ತಾರೆ. ಮದುವೆ, ಸಂತಾನ ದೋಷ, ಅನಾರೋಗ್ಯ, ಉದ್ಯೋಗ, ಕೋರ್ಟು ಕಛೇರಿ ವ್ಯವಹಾರ, ಕಳವು, ಮೋಸ, ವಂಚನೆ ಇಂತಹ ಸಮಸ್ಯೆಗಳಿಗೆ ಒಳಗಾದ ಭಕ್ತರು ಇಲ್ಲಿಗೆ ಹರಕೆ ಒಪ್ಪಿಸಿ ತಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ಪ್ರತೀತಿ. ನೇಮೋತ್ಸವದಂದು ಸುಮಾರು 5000 ಜನರಿಗೆ ಅನ್ನಸಂತರ್ಪಣೆ ನಡೆಯುತ್ತದೆ. ದೈವಕ್ಕೆ ಹರಕೆ ಒಪ್ಪಿಸುವವರು ಆರಂಭದಲ್ಲಿ ಅರುವಕ್ಕೆ ಬಂದು ದೂರು ನೀಡಬೇಕು. ಅದಕ್ಕೆ ಬೇಕಾದ ಪರಿಹಾರ ಕ್ರಮವನ್ನು ಅರುವ ಮನೆಯಲ್ಲಿ ನಾಲ್ಕು ಮನೆಯವರು ಸೇರಿ ತೀರ್ಮಾನ ಕೈಗೊಳ್ಳುವುದು ವಾಡಿಕೆ.

ದೈಪಿಲ ಕ್ಷೇತ್ರ

ಆಮೇಲೆ ದೈವದ ನೇಮದ ನಡೆಯಲ್ಲಿ ಒಪ್ಪಿಸಿಕೊಳ್ಳುವ ಸಂಪ್ರದಾಯ ನಡೆದು ಬರುತ್ತದೆ. ಪರವೂರಿನಿಂದ ಹರಕೆ ಒಪ್ಪಿಸಲು ಬರುವವರು ಅರುವದಲ್ಲಿ ಬಂದು ಹೇಳಿಕೊಂಡು ಬರುತ್ತಿರುವ ಸಂಪ್ರದಾಯ ಈಗಲೂ ನಡೆದುಬರುತ್ತಿದೆ. ಹೀಗೆ ಊರಿನೊಳಗಿನ ಸಮಸ್ಯೆಗಳನ್ನು ಕೂಡ ಅರುವ ಮನೆಯಲ್ಲಿ ನಾಲ್ಕು ಮನೆಯವರು ಸೇರಿ ಪರಿಹರಿಸಿಕೊಳ್ಳುವ ಸಂಪ್ರದಾಯ ಈಗಲೂ ಇದೆ.

Leave A Reply

Your email address will not be published.