ಜೀರ್ಣೋದ್ದಾರ ಸಂಭ್ರಮದಲ್ಲಿ ಸರ್ವೆ ಶ್ರೀಸುಬ್ರಾಯ ದೇವಸ್ಥಾನ

ಸವಣೂರು : ಸರ್ವೆ ಗ್ರಾಮದ ಶ್ರೀಸುಬ್ರಾಯ ದೇವಸ್ಥಾನವು ಜೀರ್ಣೋದ್ದಾರದ ಸಂಭ್ರಮದಲ್ಲಿದ್ದು ಈಗಾಗಲೇ ಅಭಿವೃದ್ದಿ ಕಾಮಗಾರಿಗಳು ಭರದಿಂದ ಸಾಗುತ್ತಿದೆ.ಸುಮಾರು ೪೦೦ ವರ್ಷಗಳಿಗೂ ಅನೇಕ ವರ್ಷಗಳ ಇತಿಹಾಸವಿರುವ ಈ ದೇವಾಲಯದ ಜಾತ್ರೋತ್ಸವಗಳು ಬಹಳ ಹಿಂದಿನಿಂದಲೂ ವಿಜೃಂಬಣೆಯಿಂದ ನಡೆಯುತ್ತಿತ್ತು ಎಂಬುದಕ್ಕೆ ಸರ್ವೆ ಗೌರಿ ನದಿಯಲ್ಲಿರುವ ಜಳಕದ ಗುಂಡಿ ಹಾಗೂ ದೇವರ ಉತ್ಸವ ಮೂರ್ತಿಗಳು ಸಾಕ್ಷಿಯಾಗಿದೆ.

80ರ ದಶಕದಲ್ಲಿ ದಿ.ಸೀತಾರಾಮ ಶೆಟ್ಟಿ ಸೊರಕೆ ಹಾಗೂ ದಿ.ರಾಮಯ್ಯ ರೈ ಬೊಟ್ಯಾಡಿಗುತ್ತು ಅವರ ನೇತೃತ್ವದಲ್ಲಿ , 2007 ರಲ್ಲಿ ದಿ.ಗೋರ್ವನ ಹೆಗ್ಡೆ ಅವರ ನೇತೃತ್ವದಲ್ಲಿ ಗರ್ಭಗುಡಿಯ ಮೇಲ್ಚಾವಣಿ,ಸುತ್ತುಪೌಳಿಯ ಛಾವಣಿ, ತೀರ್ಥ ಮಂಟಪ ದುರಸ್ತಿಯಾಗಿ ಬ್ರಹ್ಮಕಲಶ ನಡೆದು ತದನಂತರ ದೇವಸ್ಥಾನದಲ್ಲಿ ಚಂಪಾ ಷಷ್ಟಿ, ಸತ್ಯನಾರಾಯಣ ಪೂಜೆ,ಪ್ರತಿಷ್ಠಾ ವಾರ್ಷಿಕೋತ್ಸವ, ರಂಗಪೂಜೆ, ತಿಂಗಳ ಷಷ್ಟಿ ಪೂಜೆ, ದುರ್ಗಾಪೂಜೆ, ಸಂಕ್ರಮಣದ ಭಜನಾ ಕಾರ್ಯಕ್ರಮಗಳು ನಿರಂತರವಾಗಿ ನಡೆದುಕೊಂಡು ಬರುತ್ತಿದೆ.

ನಂತರ ಕರ್ನಾಟಕ ಧಾರ್ಮಿಕ ದತ್ತಿ ಇಲಾಖೆಯ ಆದೇಶದಡಿ 2017 ರಲ್ಲಿ ಹೊಸ ವ್ಯವಸ್ಥಾಪನ ಸಮಿತಿಯು ನಿಯುಕ್ತಿಗೊಂಡಿದ್ದು,ಅದರ ನೇತೃತ್ವದಲ್ಲಿ ಅನ್ನಛತ್ರಕ್ಕೆ ದೇವಸ್ಥಾನದ ಸುತ್ತಲೂ ಇಂಟರ್‌ಲಾಕ್, ದೇವಾಲಯಕ್ಕೆ ಶೃಂಗಾರ,ದೇವರಿಗೆ ಬೆಳ್ಳಿಯ ಪ್ರಭಾವಳಿ, ಬೆಳ್ಳಿಯ ಕವಚ ಮತ್ತು ಪಾಣಿಪೀಠವನ್ನು ಭಕ್ತರ ಸಹಕಾರದಲ್ಲಿ ಮಾಡಲಾಗಿದೆ.ಭಕ್ತಾದಿಗಳ ಸಹಕಾರದಲ್ಲಿ ವಾರ್ಷಿಕೋತ್ಸವ ಹಾಗೂ ಇತರ ಉತ್ಸವಗಳನ್ನು ಮಾಡಲಾಗುತ್ತಿದೆ. 75ಸೆಂಟ್ಸ್ ಜಾಗವನ್ನು ಸರಕಾರದಿಂದ ಮಂಜೂರುಮಾಡಿಸಿದ್ದು ಪಹಣಿಪತ್ರದ ಕಾರ್ಯಗಳು ಪ್ರಗತಿಯಲ್ಲಿದೆ.

ಬ್ರಹ್ಮಕಲಶೋತ್ಸವ ನಡೆದು 12 ವರ್ಷ ಕಳೆದಿದರಿಂದ ಹಿರಿಯರ ಸಲಹೆಯಂತೆ ದೈವಜ್ಞರ ಮೂಲಕ ನಡೆಸಲಾದ ತಾಂಬೂಲ ಪ್ರಶ್ನೆ, ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡುಬಂದಂತೆ ದೇವಾಲಯದ ಗರ್ಭಗುಡಿ 400 ವರ್ಷಗಳ ಪುರಾತನವಾದದ್ದು.

ಅಜೀರ್ಣಾವಸ್ಥೆಯಲ್ಲಿರುವ ಗರ್ಭಗುಡಿ, ನಮಸ್ಕಾರ ಮಂಟಪ ಹಾಗೂ ಸುತ್ತು ಪೌಳಿಯ ಪುನರ್‌ನಿರ್ಮಾಣ ಮಾಡಬೇಕೆಂದು ಕಂಡುಬಂದಿದ್ದು,ಈ ಹಿಂದೆ ಗರ್ಭಗುಡಿ, ನಮಸ್ಕಾರ ಮಂಟಪ, ಸುತ್ತು ಪೌಳಿಯ ದುರಸ್ತಿ ಮಾತ್ರ ಮಾಡಲಾಗಿತ್ತು.ದೇವಸ್ಥಾನದ ಜೀರ್ಣೋದ್ದಾರ ಕಾರ್ಯಗಳನ್ನು ಶೀಘ್ರವಾಗಿ ನಡೆಸಿ,ದೇವರ ಪ್ರತಿಷ್ಟಾಷ್ಟಬಂಧ ಹಾಗೂ ಬ್ರಹ್ಮಕಲಶವನ್ನು ಶೀಘ್ರದಲ್ಲಿ ನಡೆಸಿದಲ್ಲಿ ಗ್ರಾಮಸ್ಥರಿಗೆ ಕ್ಷೇಮ ಎಂದು ಕಂಡು ಬಂದ ಪ್ರಕಾರ ಪ್ರಧಾನ ದೇವರಾದ ಸುಬ್ರಹ್ಮಣ್ಯನ ಗರ್ಭಗುಡಿ, ನೈರುತ್ಯದಲ್ಲಿ ಗಣಪತಿ ಗುಡಿ, ವಾಯುವ್ಯದಲ್ಲಿ ಆಂಜನೇಯನೂ, ಪೂರ್ವಗೋಪುರ ಆಗ್ನೇಯದಲ್ಲಿ ಉತ್ತರಾಭಿಮುಖವಾಗಿ ವ್ಯಾಘ್ರ ಚಾಮುಂಡಿಯನ್ನೂ ಪ್ರತಿಷ್ಠಾಪಿಸಬೇಕೆಂದೂ, ನೈರುತ್ಯ ಭಾಗದಲ್ಲಿ ಈಗಾಗಲೇ ಇರುವ ಶಿರಾಡಿ, ಪಂಜುರ್ಲಿ, ಕಲ್ಲುರ್ಟಿ, ಕಲ್ಕುಡ ಮತ್ತು ಬೊಟ್ಟಿ ಬೂತ ದೈವಸ್ಥಾನವನ್ನು ಪುನರ್‌ನಿರ್ಮಾಣ ಮಾಡಿ ಪ್ರತಿಷ್ಠಾಪಿಸಬೇಕೆಂದೂ ಕಂಡು ಬಂದಿದೆ.

ಪ್ರಶ್ನೆ ಚಿಂತನೆಯಲ್ಲಿ ಕಂಡುಬಂದಂತೆ ಭಕ್ತಾದಿಗಳ ಸಮ್ಮುಖದಲ್ಲಿ ಜೀರ್ಣೋದ್ಧಾರ ಮಾಡುವುದೆಂದು ತೀರ್ಮಾನಿಸಿ ಜೀರ್ಣೋದ್ದಾರ ಮಾಡಲಾಗುತ್ತಿದೆ. ಈ ದೇವಸ್ಥಾನಕ್ಕೆ ಗುರುಪೀಠವೂ ಶ್ರೀಕಾಣಿಯೂರು ಮಠವೆಂದು ಪ್ರಶ್ನೆ ಚಿಂತನೆಯಲ್ಲಿ ಕಂಡುಬಂದಂತೆ ಕಾಣಿಯುರು ಮಠಾಧೀ ಶರ ಮುಖೇನ ಶಿಲಾನ್ಯಾಸ ನಡೆಸಲಾಗಿದೆ. ದೇವರ ಬಿಂಬವು ಲಿಂಗ ಸ್ವರೂಪಿಯಾಗಿರುವುದರಿಂದ ಶ್ರೀಸುಬ್ರಹ್ಮಣ್ಯೇಶ್ವರ ದೇವಸ್ಥಾನವೆಂದು ಪುನರ್‌ನಾಮಕರಣ ಮಾಡಬೇಕೆಂದು ದೈವಜ್ಞರು ಸಲಹೆ ನೀಡಿದ್ದಾರೆ.

Leave A Reply

Your email address will not be published.