ಇಂದು ಸಂಜೆ ಶಬರಿಮಲೆಯಲ್ಲಿ ಮಕರ ಜ್ಯೊತಿ ದರ್ಶನ | ವೀಕ್ಷಣೆಗೆ 9 ಕೇಂದ್ರ | ಪೊಲೀಸ್ ಸರ್ಪಕೋಟೆ

ಶಬರಿಮಲೆ : ದಕ್ಷಿಣ ಭಾರತದ ಪ್ರಸಿದ್ಧ ಯಾತ್ರಾ ಸ್ಥಳ ಕೇರಳದ ಶಬರಿಮಲೆಯಲ್ಲಿ ಮಕರ ಜ್ಯೋತಿ ದರ್ಶನಕ್ಕೆ ಕ್ಷಣಗಣನೆ ಆರಂಭವಾಗಿದೆ.ಭಕ್ತರ ಗಡಣವೇ ಎದ್ದು ಕಾಣುತ್ತಿದೆ. ಸನ್ನಿಧಾನ ಸುತ್ತ ಪೊಲೀಸ್ ಪಹರೆ ಬಿಗುಗೊಳಿಸಲಾಗಿದೆ.

ಮಕರ ಜ್ಯೋತಿ ದರ್ಶನಕ್ಕೆ ಶಬರಿಮಲೆ  ಸನ್ನಿಧಾನದ ಆಸುಪಾಸಿನ 9 ಕೇಂದ್ರಗಳಲ್ಲಿ ಮಕರಜ್ಯೋತಿ ವೀಕ್ಷಣೆಗೆ ಭಕ್ತರು ಸೇರಿದ್ದಾರೆ.ಬುಧವಾರ ಸಂಜೆ ಜ್ಯೋತಿ ದರ್ಶನವಾಗುವುದಾದರೂ ಮುಂಜಾನೆಯೇ ಈ ಸ್ಥಳಗಳಲ್ಲಿ ಭಕ್ತರು  ತುಂಬಿಕೊಂಡಿದ್ದಾರೆ.ಸನ್ನಿಧಾನದಲ್ಲಿರುವ ವಾವರ ಸ್ವಾಮಿಯ ನಡೆಯಲ್ಲಿ, ಅಗ್ನಿಕುಂಡದ ಸಮೀಪ,ಅಪ್ಪ-ಅರವಣ ವಿತರಣಾ ಕೌಂಟರ್ ಸಮೀಪ , ಅನ್ನದಾನ ಮಂಟಪದ ಬಳಿ,ಮರಕ್ಕೂಟಂನಲ್ಲಿ, ಮಾಳಿಗಪುರತ್ತಮ್ಮ ದೇವಸ್ಥಾನದಲ್ಲಿ, ಇನ್ಸಿನೇಟರ್ ಕೇಂದ್ರ, ಶರಮ್ ಗುತ್ತಿ, ಪಾಂಡಿತ್ತಾವಳ ದಲ್ಲಿ ಅಯ್ಯಪ್ಪ ಸ್ವಾಮಿ ಭಕ್ತರು ಮಕರಜ್ಯೋತಿ ವೀಕ್ಷಿಸಲಿದ್ದಾರೆ. 

ಪಿಳ್ಳಂಪಲ್ಲಿ,ನೀಲಕ್ಕಲ್,ಗಣೇಶ ಬೆಟ್ಟ ಪ್ರದೇಶದಲ್ಲೂ ಭಕ್ತರು ಸೇರಿಕೊಂಡಿದ್ದಾರೆ.ಅಪಾಯ ಎದುರಾಗುವ ಹಿನ್ನೆಲೆಯಲ್ಲಿ  ಬಹು ಮಹಡಿ ಕಟ್ಟಡಗಳ ಮೇಲೆ ಹಾಗೂ ಪಂಪಾ ನದಿಯ ಸನಿಹವಿರುವ ಹಿಲ್​ಟಾಪ್​ನಲ್ಲಿ ಮಕರ ಜ್ಯೋತಿ ವೀಕ್ಷಣೆಗೆ ಇಲ್ಲಿನ ಪೊಲೀಸರು ನಿರ್ಬಂದ ಹೇರಿದ್ದಾರೆ.

ಶಬರಿಮಲೆ ಶ್ರೀಅಯ್ಯಪ್ಪ ಸನ್ನಿಧಾನದಲ್ಲಿ ಮಕರಜ್ಯೋತಿ ವೀಕ್ಷಣೆಗೆ ತಯಾರಿ ಪೂರ್ತಿಗೊಂಡಿದ್ದು, ಭಕ್ತರು ಭಾರಿ ಪ್ರಮಾಣದಲ್ಲಿ ಕ್ಷೇತ್ರಕ್ಕೆ ಬಂದು ಸೇರುತ್ತಿದ್ದಾರೆ.
ಜ.15 ರಂದು ಪ್ರಾತಃ 2.09 ಕ್ಕೆ ಮಕರ ಸಂಕ್ರಮಣ ಪೂಜೆ ನಡೆಸಲಾಯಿತು.ಈ ಹಿನ್ನೆಲೆಯಲ್ಲಿ ಜ.14 ರ ತಡರಾತ್ರಿವರೆಗೂ ಅಯ್ಯಪ್ಪ ಸ್ವಾಮಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಜ.15 ರ ಬುಧವಾರ ಪ್ರಾತಃಕಾಲ 2.09 ಕ್ಕೆ ಸೂರ್ಯನು ಧನುರಾಶಿಯಿಂದ ಮಕರ ರಾಶಿಗೆ ಪ್ರವೇಶಿಸಿದಾಗ ಮಕರ ಸಂಕ್ರಮಣ ಪೂಜೆ ಮತ್ತು ಸಂಕ್ರಮಣಾಭಿಷೇಕ ನಡೆಸಲಾಯಿತು. 

ತಿರುವನಂತಪುರಂನ ಕಾವಾಡಿಯಾರ್ ಅರಮನೆಯ ವಿಶೇಷ ತುಪ್ಪವನ್ನು ಸನ್ನಿಧಾನಕ್ಕೆ ತರಲಾಗಿದೆ. ಸಂಕ್ರಮಣ ಪೂಜೆ ಹಾಗೂ ಸಂಕ್ರಮಣ ಅಭಿಷೇಕ ನಡೆದ ಬಳಿಕ ಹರಿವರಾಸನಂ ಹಾಡಿನೊಂದಿಗೆ ಗರ್ಭಗುಡಿ ಬಾಗಿಲು ಮುಚ್ಚಲಾಯಿತು.
ಪಂದಳ ಅರಮನೆಯಿಂದ ಜ.13 ರ ಸೋಮವಾರ ಹೊರಟ ಪವಿತ್ರ ತಿರುವಾಭರಣಂಗಳನ್ನು ಹೊತ್ತುಕೊಂಡ ಮೆರವಣಿಗೆ ಜ.15 ರ ಬುಧವಾರ ಮಧ್ಯಾಹ್ನ ಪಂಪಾಗೆ  ತಲುಪಲಿದ್ದು, ಅಲ್ಲಿಂದ ಪಂದಳ ಅರಮನೆಯ ರಾಜಪ್ರತಿನಿಧಿಗಳ ಅನುಮತಿಯೊಂದಿಗೆ ಪಂಪಾ ಗಣಪತಿ ಸನ್ನಿಧಾನದ ಸಮೀಪ ದಾಟಿ ನೀಲಿಮಲೆ ಬೆಟ್ಟವನ್ನು ಏರಲಿದೆ.

ಕನ್ನಿ ಸ್ವಾಮಿಗಳು ತರುವ ಶರಗಳನ್ನು ಇಡುವ ಸ್ಥಳವಾದ ಶರಮ್‌ಗುತ್ತಿಯಲ್ಲಿ ಕೇರಳ ಸರಕಾರದ ಅಧೀನದ ತಿರುವಾಂಕೂರ್ ದೇವಸ್ವಂ ಬೋರ್ಡ್‌ನ ಅಧಿಕಾರಿಗಳು ತಿರುವಾಭರಣಂ ಮೆರವಣಿಗೆಯನ್ನು ಎದುರುಗೊಂಡು ಸ್ವಾಗತಿಸಿ, ಶಬರಿಮಲೆಯ ಅಯ್ಯಪ್ಪನ  ಸನ್ನಿಧಾನಕ್ಕೆ ಒಯ್ಯುತ್ತಾರೆ. ಸಂಜೆ 5.30ಕ್ಕೆ ಅಯ್ಯಪ್ಪ ಸ್ವಾಮಿಯ ಯೋಗಮುದ್ರಾ ವಿಗ್ರಹಕ್ಕೆ ತಿರುವಾಭರಣಂ ಗಳನ್ನು ತೊಡಿಸಿ, ವಿಶೇಷ ಅಲಂಕಾರಗಳನ್ನು ಮಾಡಿ ಸಂಜೆ 6.30 ರಿಂದ ದೀಪಾರಾಧನೆ ಹಾಗೂ ವಿವಿಧ ವೈಧಿಕ ಕಾರ್ಯಗಳು ನಡೆಯಲಿದೆ. ಸಂಜೆ 6.45 ರ ನಂತರ ಪೊನ್ನಂಬಲ ಬೆಟ್ಟದಲ್ಲಿ ಮಕರಜ್ಯೋತಿ ಕಾಣಿಸಿಕೊಳ್ಳಲಿದೆ.ಶಬರಿಮಲೆ ಸನ್ನಿದಾನದ ವಿರುದ್ಧ ದಿಕ್ಕಿನಲ್ಲಿರುವ ಪೊನ್ನಂಬಲಮೇಡು ಗಿರಿಯಲ್ಲಿ ಮಕರಜ್ಯೋತಿಯು ಮೂರು ಬಾರಿ ದೀಪ್ಯಮಾನವಾಗಿ ಮಿಣುಗಿ ಅದೃಶ್ಯವಾಗುತ್ತದೆ.

ಕಳೆದ ವರ್ಷಕ್ಕಿಂತ ಅಧಿಕ ಸಂಖ್ಯೆಯಲ್ಲಿ ಭಕ್ತಾದಿಗಳು ಶಬರಿಮಲೆಗೆ ಆಗಮಿಸಿರುವ ಹಿನ್ನೆಲೆಯಲ್ಲಿ ಕೇರಳ ಸರಕಾರ ಮುನ್ನೆಚ್ಚರಿಕೆ ಕ್ರಮವಾಗಿ ಭಾರೀ ಬಂದೋಬಸ್ತ್ ಮಾಡಿದೆ.

ಪೊಲೀಸ್ ಸರ್ಪಕೋಟೆ ರಚನೆ

ಜ್ಯೋತಿ ದರ್ಶನ ಹಿನ್ನೆಲೆಯಲ್ಲಿ ಬಿಗಿಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಯಾವ ಕಡೆ ನೋಡಿದರೂ ಪೊಲೀಸರದ್ದೇ ಗುಂಪು ಕಾಣಸಿಗುತ್ತಿದೆ.
ಕೇರಳ‌ ಪೊಲೀಸ್ ಇಲಾಖೆಯ ಸಿಬಂದಿಗಳ ಜತೆ ರಾಪಿಡ್ ಆಕ್ಷನ್ ಫೋರ್ಸ್, ಎನ್.ಡಿ.ಆರ್.ಎಫ್ ಪಡೆಗಳ ಸಿಬಂದಿಗಳು ಭದ್ರತೆ ಹಾಗೂ ಭಕ್ತರ ಸುರಕ್ಷತೆಯ ನಿಟ್ಟಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಹಿರಿಯ ಪೊಲೀಸ್ ಅಧಿಕಾರಿಗಳು ಈಗಾಗಲೇ ಸಿಬಂದಿಗಳಿಗೆ ಕರ್ತವ್ಯ ಹಂಚಿಕೆ ಮಾಡಿದ್ದು, ಮಾರ್ಗದರ್ಶನ ನೀಡಿದ್ದುಯಾವುದೇ ಅಹಿತರ ಘಟನೆ ನಡೆಯದಂತೆ ಬಂದೋಬಸ್ತ್ ಮಾಡಲಾಗಿದೆ.

ಪ್ರವೀಣ್ ಚೆನ್ನಾವರ

Leave A Reply

Your email address will not be published.