ಕವನ । ಎರಡು ಜುಟ್ಟು

0 149

ಇಲ್ಲ ನನಗೆ
ಅಮ್ಮನಿಟ್ಟ ಮುತ್ತ ನೆನಪು
ಚಂದ್ರನ ತೋರಿ ಕೊಟ್ಟ
ತುತ್ತ ನೆನಪು
ಯಾಕೋ ಆಗುತ್ತಲೇ ಇರುತ್ತದೆ
ತಲೆ ತುಂಬಾ ಎಣ್ಣೆ ಹೊಯ್ದು,
ಮಧ್ಯೆ ಬೈತಲೆ ನೆಟ್ಟು,
ಬಾಚಿ ಹೆಣೆದು ಹಾಕುತ್ತಿದ್ದ
ಚಂದದೆರಡು ಜುಟ್ಟ ನೆನಪು.

ಜುಟ್ಟ ಮೇಲಿಟ್ಟ ತಾವರೆ
ಅರೆ ಕಪ್ಪು ಕಪ್ಪು.
ದಿನಾ ಕೂರುತ್ತಿದ್ದ ಅದೇ
ಮುರಿದ ಮೆಟ್ಟಿಲು
ಕಾಯುತ್ತಲೇ ಇದೆ ಮನ
ಮತ್ತೆ ಮೆಟ್ಟಿಲ ಮುಟ್ಟಲು
ಅಮ್ಮ ಅತ್ತು, ನಾನೂ ಅತ್ತು
ಬದುಕ ಬೆಳಕಿನ ಕನಸ ಹೊತ್ತು
ಹೋದದ್ದು ಗೊತ್ತಿದೆಯೆ ಹೊತ್ತು ಗೊತ್ತು
ಬೇಡವೆಂದರೂ ಪೆಟ್ಟು ಕೊಟ್ಟು
ಬೇಡವೆಂದರೂ ಜಡೆಯ ಹೆಣೆದು
ಬೇಡವೆಂದರೂ ಹೂವ ಮುಡಿಸಿ
ಬಯಲು, ಕೆರೆ, ನದಿಯ ದಾಟಿ
ಕೊರಪಲುವಿನಿಂದ, ಕೊರಗಜ್ಜನವರೆಗೆ
ಕಥೆಯು ಸಾಗಿ
ಮತ್ತೆ ಬದುಕು, ಮತ್ತೆ ಜುಟ್ಟು
ಕೊನೆಗೆ ಅದೇ ಉದ್ಗಾರ
ಈ ಅಮ್ಮನಿಗೆ ಎಷ್ಟೆಲ್ಲಾ ಗೊತ್ತು!

ಹೆಣೆಯುತ್ತಾಳವಳು
ಜಡೆಯಂತೆಯೇ ಕಥೆಯ
ಕಥೆಯಂತೆಯೇ ಬದುಕ
ಬದುಕಂತೆಯೇ ಭಾವನೆಗಳ
ಜಡೆ ಎರಡೇ ನೆನಪು !!

ನಿಶ್ಮಿತಾ ಪಳ್ಳಿ

Leave A Reply