ಮಹಾಪತನ । ಸಿದ್ದರಾಮಯ್ಯನವರು ಪವರ್ ಪಾಲಿಟಿಕ್ಸ್ ನಿಂದ ನೇಪಥ್ಯಕ್ಕೆ?

ಒಂದು ಕಾಲದಲ್ಲಿ ಸಿದ್ದರಾಮಯ್ಯ ಅಂದರೆ ಅವರ ಮಾತಿಗೊಂದು ತೂಕ ಇತ್ತು. ಅವರು ಸುಖಾ ಸುಮ್ಮನೆ ಮಾತಾಡುತ್ತಿರಲಿಲ್ಲ. ಹೇಳಿದಂತೆ ನಡೆಯುತ್ತಿದ್ದರು. ಅವತ್ತು ದೇವೇಗೌಡರು ತಮ್ಮ ಪುತ್ರವಾತ್ಸಲ್ಯದ ಮುದ್ದು ಕೂಸು ಕುಮಾರನನ್ನು ಮುಖ್ಯಮಂತ್ರಿ ಮಾಡಲಿಕ್ಕಾಗಿ ಸಿದ್ದರಾಮಯ್ಯನವರನ್ನು ಜೆಡಿಎಸ್ ನ ಮನೆ ಬಾಗಿಲಲ್ಲಿ ನಿಲ್ಲಿಸಿ ಸಡನ್ ಆಗಿ ಹೊರ ನೂಕಿದ್ದರು. ಆಗ ಪಕ್ಷಾತೀತವಾಗಿ ಸಿದ್ದು ಮೇಲೆ ಅನುಕಂಪ ಮೂಡಿತ್ತು. ಅಲ್ಲಿಂದ ಒದೆಸಿಕೊಂಡು ಅವರು ಬಿದ್ದದ್ದು ನೇರ ಕಾಂಗ್ರೆಸ್ ನ ಅಂಗಳಕ್ಕೆ. ಅಲ್ಲಿ ಅವರು ಕಾಂಗ್ರೆಸ್ಸ್ ನಿಂದ ನಿಂತು ಮುಖ್ಯಮಂತ್ರಿಯಾದಾಗ ಮತ್ತೊಮ್ಮೆ ಇಡೀ ರಾಜ್ಯ ಪಕ್ಷಾತೀತವಾಗಿ, ಜಾತ್ಯಾತೀತವಾಗಿ ಖುಷಿಪಟ್ಟಿತ್ತು. ಸಿದ್ದರಾಮಯ್ಯನವರಿಂದ ಏನೇನೋ ನಿರೀಕ್ಷೆಗಳನ್ನು ರಾಜ್ಯ ಬಯಸಿತ್ತು. ಯಾಕೆಂದರೆ ಅವರೊಬ್ಬ ಮುತ್ಸದ್ಧಿ ನಾಯಕರಾಗಿದ್ದರು.

ಆದರೆ ಎಂತಹ ದುರದೃಷ್ಟ ನೋಡಿ. ಅಧಿಕಾರ ಎನ್ನುವುದು ಮನುಷ್ಯನ ವಿವೇಚನೆಯನ್ನು ಹೇಗೆಲ್ಲ, ಇಡಿ ಇಡಿಯಾಗಿ ತಿಂದು ಬಿಡುತ್ತದೆನ್ನುವುದಕ್ಕೆಸಿದ್ದುವಿಗಿಂತ ಬೇರೆ ಉದಾಹರಣೆ ಬೇಕಾ? ಗೃಹಮಂತ್ರಿಯಾಗಿ ಕೂಡ ಸಕ್ಸಸ್ ಆಗಿದ್ದ ಸಿದ್ದರಾಮಯ್ಯ ಯಾಕೆ ಮುಖ್ಯಮಂತ್ರಿಯಾಗಿ ಸಕ್ಸಸ್ ಆಗಲಿಲ್ಲ, ಯಾಕೆ ಸಿದ್ದು ತಾನು ಹಿಂದೆ ಹಲವು ದಶಕಗಳಿಂದ ಗಳಿಸಿಕೊಂಡು ಬಂದಂತಹ ಒಳ್ಳೆಯ ಹೆಸರನ್ನು, ಕೇವಲ ಐದೇ ವರ್ಷದಲ್ಲಿ ನೀರಿನಲ್ಲಿ ತೊಳೆದು ಬಿಟ್ಟಂತೆ ಕಳಕೊಂಡರು. ವಿಶ್ಲೇಷಣೆ ಕಷ್ಟ .

ಆದರೂ ಕೆಲವಂತೂ ಸಂಗತಿಗಳು ಸತ್ಯಗಳು ನಮ್ಮಕಣ್ಣಿಗೆ ಹಾಗೇ ರಾಚುತ್ತಿವೆ.
ಅಧಿಕಾರ ಪಡೆದುಕೊಂಡ ಯಾರೇ ಆಗಲಿ, ಆತನಿಗೆ ಒಂದಷ್ಟು ಸ್ವಂತ ಸಮಯ ಇರಬೇಕು. ಆ ಸಮಯ ಆತನ ಸ್ವಂತದ್ದು. ಅಲ್ಲಿ ತನ್ನ ಮಂತ್ರಿಗಳಿರುವುದಿಲ್ಲ. ಪದೇ ಪದೇ ಕಿವಿ ಕಚ್ಚಿ ಕೊಡುವ ಪಿಎ ಇರುವುದಿಲ್ಲ. ಸೈನು ಹಾಕಿಸಲು ಬರುವ ಹೆಂಡತಿಯ ಕಡೆಯ ನೆಂಟರಿರುವುದಿಲ್ಲ. ಅವರನ್ನು ಕರೆತರುವ ಹೆಂಡತಿ ಇಲ್ಲ. ಬಾಮೈದನಿಗೆ ಅಲ್ಲಿ ಜಾಗವಿಲ್ಲ. ಆ ದಿನ ಯಾವುದೇ ಕೆಲಸದ ಒತ್ತಡ ಇರುವುದಿಲ್ಲ. ಅವತ್ತು ಮೀಟಿಂಗು ನಿಷೇಧ. ಏನೇನೂ ಇಲ್ಲದ ದಿನವದು.

ಇಟ್ಸ್ ಎ ಬ್ಲ್ಯಾಂಕ್ ಸ್ಪೇಸ್ ! ಅಂತಹ ನಿರ್ವಾತ ಸಮಯವನ್ನು ನಾಯಕನಾದವನು ಆಗಿಂದಾಗ್ಗೆ ಸೃಷ್ಟಿಸಿಕೊಳ್ಳಬೇಕು.
ಆ ದಿನ ನಿಜಕ್ಕೂಇನ್ನು ಆರು ತಿಂಗಳು ತಾನು ನಡೆದು ಹೋಗಬೇಕಾದ ದಾರಿ ಹುಡುಕುವ ಪ್ರಯತ್ನವಾಗಬೇಕಾದ ದಿನ. ಅದು ದಿನನಿತ್ಯದ ಬಿಡುವಿಲ್ಲದ ದಿನಗಳಲ್ಲಿ ತಿರುಗಿ ನೋಡುವ ದಿನ. ಆತ್ಮವಿಮರ್ಶೆ ಮಾಡಿಕೊಳ್ಳುವ ಗಳಿಗೆ. ಎಡವಿದ ಗಾಯಕ್ಕೆ ಮುಲಾಮು ಹಚ್ಚಿ ಮುಂದಿನ 6 ತಿಂಗಳು ಎಡವದಂತೆ ಪ್ಲಾನು ಮಾಡುವ ಸಮಯ. ಉಂಟಾಗಬಹುದಾದ ಡೇಂಜರಸ್ ವ್ಯಾಕ್ಯುಮ್ ಅನ್ನು ತುಂಬುವ ಪ್ರಯತ್ನ. ಆತ್ಮಾವಲೋಕನ ಜೀವನದ ಪ್ರತಿ ಹಂತದಲ್ಲೂ ಬೇಕು. ಬಹುಶ: ಸಿದ್ದರಾಮಯ್ಯ ಅದನ್ನು ಮಾಡಲಿಲ್ಲ.

ಆನಂತರದ್ದು, ವ್ಯಕ್ತಿಯೊಬ್ಬ ಅಧಿಕಾರಕ್ಕೇರುತ್ತಾನೆ. ಆತನ ಜತೆ ಒಂದು ದೊಡ್ಡ ಗುಂಪು ಸೇರಿಕೊಳ್ಳುತ್ತದೆ. ಆ ಗುಂಪು ಆತನ ಸುತ್ತ ಒಂದು ದೊಡ್ಡ ವರ್ತುಲದಂತೆ, ಒಂದು ದೊಡ್ಡ ಪ್ರಭಾವಲಯದಂತೆ, ಮೊಬೈಲು ಟವರನ್ನು ಕೇಂದ್ರೀಕರಿಸಿ ಸುತ್ತುವರಿದು ಹರಡಿರುವ ನೆಟ್ ವರ್ಕ್ ವಲಯದಂತೆ ಆತನ ಸುತ್ತಲೇ ಇರುತ್ತದೆ. ಹೊರಗಿನಿಂದ ಯಾರೇ ಒಳಬರಬೇಕಿದ್ದರೂ ಆ ವಲಯವನ್ನು ದಾಟಿಯೇ ಒಳಗೆ ಹೋಗಬೇಕು. ಆದರೆ ಅದು ಅಷ್ಟು ಸುಲಭದ ಕೆಲಸವಲ್ಲ. ಆದುದರಿಂದ ಯಾವುದೇ ‘ ಕನ್ಸ್ಟ್ರಕ್ಟಿವ್ ಐಡಿಯಾ ‘ ಒಳ ನುಸುಳಿ ‘ರಾಜ’ ನನ್ನು ತಲುಪಲು ಸಾಮಾನ್ಯವಾಗಿ ಸಾಧ್ಯವಾಗುವುದಿಲ್ಲ.

ಸಿದ್ದರಾಮಯ್ಯನವರ ಕೇಸಿನಲ್ಲಿಯೂ ಅದೇ ಆಗಿದೆ. ಸುತ್ತಲೂ ಹೊಗಳು ಭಟರೇ ತುಂಬಿದ್ದರೆ ಹೇಗೆ ತಾನೇ ಸಿದ್ದುವಿಗೆ ಒಳ್ಳೆಯ ಫೀಡ್ ಬ್ಯಾಕ್ ಸಿಗಲು ಸಾಧ್ಯ ? ‘ ಸಾರ್, ಬಾಸ್, ಗುರೂ, ದೇವ್ರು, ಅಣ್ಣಾ ‘ ಮುಂತಾಗಿ ಕರೆದು ತಮ್ಮ ಕೆಲಸ ಮಾಡಿಸಿಕೊಳ್ಳುವ ಒಂದು ವರ್ಗವೇ ಸೃಷ್ಟಿಯಾಗುತ್ತದೆ.

” ಅಣ್ಣ, ನೋಡಣ್ಣ ಅವ್ರು ನಿಮ್ಮ ಮೇಲೆ ಹೀಗಂತಿದ್ದಾರೆ, ನೀವೆಲ್ಲಿ ಅಣ್ಣಾ, ಅವನೆಲ್ಲಿ ? ಕೊಡಣ್ಣಾ ಒಂದು ಕೌಂಟರ್ ? ” ಅಂತ ಆ ಸುತ್ತಲಿನ ವ್ಯಕ್ತಿಯೊಬ್ಬ ಹೇಳ್ದಾ ಅಂದ್ಕೊಳ್ಳಿ. ‘ ರಾಜ ‘ ನ ಇಗೋ ಸಡನ್ ಆಗಿ ಎದ್ದುಬಿಡುತ್ತದೆ. ಹರ್ಟ್ ಮಾಡಿಕೊಳ್ಳುತ್ತದೆ. ಅಟ್ಯಾಕ್ ಗೆ ಹೊರಡುತ್ತದೆ. ಸಿದ್ದು ಕೂಡ ವಿನಾಕಾರಣ, ಅಗತ್ಯವಿಲ್ಲದೆ ಕಾಮೆಂಟ್ ಮಾಡಲು ಶುರುಮಾಡಿದರು. ಬಾಯಿ ಚಪಲಕ್ಕಾಗಿ ಮಾತಾಡಲು ಶುರುವಿಟ್ಟರು.

ಅದು ಎಲ್ಲಿಯ ತನಕ ಹೋಯಿತೆಂದರೆ, ಮೊದಲು ಮೋದಿಯನ್ನು, ಅವರಪ್ಪನ ಆಣೆಗೆ ಪಿಎಮ್ ಆಗಲ್ಲ ಅಂದರು. ಮೋದಿಯನ್ನು ಸುಳ್ಳುಗಾರ ಎಂದು ಜರೆದರು. ಆದರೆ ಮೋದಿ ನಿರಾಯಾಸವಾಗಿ ಪಿಎಮ್ ಸೀಟಿನಲ್ಲಿ ಕೂತರು. ಮತ್ತೆ ಕುಮಾರಸ್ವಾಮಿ, ಅವರಪ್ಪನಾಣೆ ಮುಖ್ಯಮಂತ್ರಿ ಆಗೋಲ್ಲ ಅಂತ ದೇವೇಗೌಡರ ಮೇಲೆ ಆಣೆ ಮಾಡಿದರು. ಆದರೆ ಇದೇ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಹೋಗಿ, 224 ರಲ್ಲಿ 37 ಮಾರ್ಕು ತಗೊಂಡು ಫೇಲ್ ಆಗಿ ಮೂಲೆಯಲ್ಲಿ ಅಳುತ್ತ ಕೂತಿದ್ದ ಅದೇ ಕುಮಾರಸ್ವಾಮಿಯ ಕಾಲಬುಡಕ್ಕೆ ಚಿನ್ನದ ತಟ್ಟೆಯಲ್ಲಿ ಅಧಿಕಾರವನ್ನು ಕೊಟ್ಟು ಮುಖ್ಯಮಂತ್ರಿ ಮಾಡಿತು. ಯಡಿಯೂರಪ್ಪ ಅವ್ರಪ್ಪನಾಣೆ ಮುಖ್ಯಮಂತ್ರಿ ಆಗೋಲ್ಲ ಅಂತ ಸಿದ್ದು ಇನ್ನೊಂದು ಸಲ ಭವಿಷ್ಯ ನುಡಿದಿದ್ದರು. ಈಗ ಸರಕಾರ ಬೀಳಿಸಿ, ಏನಕೇನ ಪ್ರಕಾರೇಣ ಮುಖ್ಯಮಂತ್ರಿಯಾಗಿದ್ದಾರೆ ಯಡಿಯೂರಪ್ಪನವರು. ಸಿದ್ದುವಿನ ಭವಿಷ್ಯ ಮೂರನೆಯ ಬಾರಿ ಸುಳ್ಳಾಗಿದೆ.

ಯಾರಾದ್ರೂ ತನ್ನಪ್ಪನ ಮೇಲೆ ಆಣೆ ಮಾಡಿ ಪ್ರಮಾಣ ಮಾಡುವುದನ್ನು ನಾವು ಕಂಡಿದ್ದೇವೆ. ಇದೇನು, ವಿರೋಧಿಗಳ ಅಪ್ಪನ ಮೇಲೆ ಸಿದ್ದು ಆಣೆ ಮಾಡುವುದು? ಇದು ಆಣೆಯ ಇತಿಹಾಸದಲ್ಲಿ ಹೊಸತು ! ಬಹುಶ: ಏನಾದ್ರೂ ಹೆಚ್ಚು ಕಮ್ಮಿಆಗಿ ವಿರೋಧಿ ಮುಖ್ಯಮಂತ್ರಿ ಅಥವಾ ಪ್ರಧಾನಮಂತ್ರಿ ಆದರೂ, ಆಣೆಯ ಶಾಪ ನನಗಾಗಲೀ ನನ್ನಪ್ಪನಿಗಾಗಲೀ ಯಾಕೆ ತಟ್ಟಬೇಕು, ವಿರೋಧಿಯ ಅಪ್ಪನಿಗೇ ತಟ್ಟಲಿ ಎಂದಿರಬಹುದೇನೋ ? ತಾನು ಆಣೆಯಲ್ಲಿ ಸೋತು ಹೋದರೂ, ಡ್ಯಾಮೇಜ್ ಎದುರಿನವರಿಗೆ ಆಗಬೇಕು ; ಚೆನ್ನಾಗಿದೆ ಸಿದ್ದು ಸ್ಟ್ರಾಟೆಜಿ !!
ಯಡಿಯೂರಪ್ಪ ಮತ್ತು ಮೋದಿಯವರ ಅಪ್ಪ ತೀರಿಕೊಂಡಿದ್ದಾರೆ. ಬಹುಶ: ಅವರ ಪಿತೃಶಾಪ ಸಿದ್ದರಾಮಯ್ಯನವರಿಗೆ ತಟ್ಟಿರಲಿಕ್ಕೂ ಸಾಕು. ಕುಮಾರಸ್ವಾಮಿಯ ಅಪ್ಪ ದೇವೇಗೌಡರ ಶಾಪವಂತೂ ತುಂಬಾ ಖಾರ. ಅದು ಖಂಡಿತ ಸಿದ್ದುವಿಗೆ ದಿನನಿತ್ಯ ತೊಂದರೆ ಕೊಡುತ್ತಿದೆ.

ಅವರ ರಾಜಕೀಯ ವಿರೋಧಿ ಯಡಿಯೂರಪ್ಪ ಅದನ್ನು ಯಾವತ್ತೂ ಮಾಡಲಿಲ್ಲ. ಸಿದ್ದುವಿಗಿಂತ ಕೋಪಿಷ್ಠ, ಯಾವತ್ತೂ ನಗದ, ತಮಾಷೆ ಮಾಡಲು ಮತ್ತು ಅನುಭವಿಸಲು ಬಾರದ ಯಡಿಯೂರಪ್ಪನವರು ರಾಜಾಕೀಯವಾಗಿ ಎಷ್ಟು ಬ್ಯಾಲೆನ್ಸ್ಡ್ಆಗಿ ಇರುತ್ತಾರೋ, ಅದರ ಅರೆಪಾವು ಕೂಡ ಸಿದ್ದುವಿನಿಂದ ಸಾಧ್ಯವಾಗಲಿಲ್ಲ.

ಸಿದ್ದುವಿನ ಮಾತು ಒರಟು. ಆದರೂ ಅವರ ಮನಸ್ಸು ಒಳ್ಳೆಯದು, ಅವರು ಒಳ್ಳೆಯವರು. ಇದು ಅವರ ಬಗ್ಗೆ ಇದ್ದ ಸಾಮಾನ್ಯ ಅಭಿಪ್ರಾಯ. ಆದರೆ ಅಧಿಕಾರ ಸಿಗುತ್ತಲೇ, ಆ ಒರಟುತನ ಅತಿಯಾಯಿತು. ಭಂಡತನ ಇರಬೇಕು, ಅದೇ ಆಭರಣವಾಗಬಾರದು. ಅದಕ್ಕೆ ಸರಿಯಾಗಿ ಅವರನ್ನು ‘ ಟಗರು ‘ ಅಂತ ಜನ ಮತ್ತು ಮಾಧ್ಯಮದವರು ಕರೆಯಲಾರಂಭಿಸಿದರು. ಸಿದ್ದು ಕೂಡಾ ಅದನ್ನು ನಂಬಲಾರಂಭಿಸಿದರು. ಸಿದ್ದು ಬರಬರುತ್ತಾ ಸುತ್ತಲ ಸಮಾಜದಿಂದ ದೂರವಾದರು ; ಅಂದರೆ, ನಮ್ಮ ಸುತ್ತಲ ಸಮಾಜ ಹೇಗೆ ಚಿಂತಿಸುತ್ತದೋ, ಯಾವುದನ್ನು ಪ್ರಯಾರಿಟಿ ಅಂತ ತೆಗೆದುಕೊಳ್ಳುತ್ತದೋ ಅದು ಸಿದ್ದರಾಮಯ್ಯನವರ ಅವಗಾಹನೆಗೆ ಬರುತ್ತಿರಲಿಲ್ಲ. ಬಹುಶ: ಅವರು ಪೇಪರು ಓದುವುದನ್ನು ಬಿಟ್ಟುಬಿಟ್ಟಿರಬೇಕು. ಟಿವಿಗಳಲ್ಲಿ ಅವರ ಬಗ್ಗೆ ಬರುತ್ತಿರುವ ಫೀಡ್ ಬ್ಯಾಕ್ ಅನ್ನು ನೋಡುತ್ತಿರಲಿಕ್ಕಿಲ್ಲ. ಹಿ ವಾಸ್ ಡಿ-ಕಪಲ್ಡ್ ಫ್ರಮ್ ಪಬ್ಲಿಕ್. ಅದು ಸಿದ್ದುವಿನ ರಾಜಕೀಯ ಪತನಕ್ಕೆ ಮೂಲ ಕಾರಣವಾಯಿತು.

ಇತ್ತ ಎಂ ಬಿ ಪಾಟೀಲರ ಮಾತು ಕೇಳಿ ಹಿಂದೂ ಧರ್ಮವನ್ನೇ ಒಡೆಯಲು ಹೋಗಿ ಕೈಗೆ ಮೈಗೆ ತರಚು ಗಾಯಮಾಡಿಕೊಂಡರು. ಅದರಿಂದ ಒಂದಷ್ಟು ನಷ್ಟ ನೇರವಾಗಿ ಆದರೆ, ಬಿಜೆಪಿಯವರು ಅದನ್ನೇ ಚುನಾವಣೆಯಲ್ಲಿ ಪ್ರಯೋಗಿಸಿ ಮತ್ತೊಂದಷ್ಟು ಓಟು ಜೇಬಿಗಿಳಿಸಿಕೊಂಡರು.
ಸಿದ್ದರಾಮಯ್ಯ ಓವ್ರ ಲೀಡರ್ ಥರ ಪಕ್ಷದೊಳಗೆ ವರ್ತಿಸಲಿಲ್ಲ. ತನ್ನ ಮಾತು ಕೇಳುವವರನ್ನು ಮಾತ್ರ ಜತೆಗಿಟ್ಟುಕೊಂಡರು. ಉಳಿದವರನ್ನು ಮೂಲೆಗುಂಪುಮಾಡಿದರೆ. ಹಿರಿಯರಾದ, ತಮ್ಮದೇ ಕುರುಬ ಸಮಾಜದ ಎಚ್ ವಿಶ್ವನಾಥ್, ಶ್ರೀನಿವಾಸ್ ಪ್ರಸಾದ್ ಮುಂತಾದವರು ಆವಾಗಲೇ ಅವರಿಂದ ದೂರವಾದರು. ಆಪ್ತವಲಯದಲ್ಲಿದ್ದ ಎಂಟಿಬಿ ನಾಗರಾಜ್, ಭೈರತಿ ಬಸವರಾಜ್, ಎಸ್ ಟಿ ಸೋಮಶೇಖರ್, ಎಚ್ ಕೆ ಮುನಿಯಪ್ಪ…. ಕೊನೆಗೆ ಯಾರನ್ನುಳಿಸಿಕೊಂಡರು. ಅತ್ತ ಖರ್ಗೆ ಸಿದ್ದುವಿನಿಂದ ಮಾನಸಿಕವಾಗಿ ದೂರ. ಇತ್ತ ಡಿಕೆ ಶಿವಕುಮಾರ್ ದಾರಿ ಕೂಡ ಬೇರೆಯೇ. ತನ್ನ ಪಕ್ಷದೊಳಗೆ ಇಷ್ಟು ವಿರೋಧಿಗಳನ್ನು ಸುಮ್ಮನೆ ಕಟ್ಟಿಕೊಂಡದ್ದು ಒಂದೆಡೆಯಾದರೆ, ಅತ್ತ ಸಿದ್ದುವನ್ನು ತಿಂದು ಮುಗಿಸಲು ಡೇಗೆಗಳ ಹಾಗೆ ಕಾದು ಕೂತಿರುವ ಜೆಡಿಎಸ್ ನ ಆಲ್ವೇಸ್ ಅತೃಪ್ತ ಅಪ್ಪ ಮಕ್ಕಳು.

ಇತ್ತ , ಬಿಜೆಪಿ ತನ್ನ ಸಂಘಟನಾತ್ಮಕ ಮತ್ತು ಹಿಂದುತ್ವದ ಪರ ಧೋರಣೆಯಿಟ್ಟುಕೊಂಡು ಸಿದ್ದುವನ್ನು ಲಾಕ್ ಮಾಡಲು ಹೊಂಚಿ ಕುಳಿತ ಬಿಜೆಪಿ. ಇಂತಹ ಸಂದರ್ಭದಲ್ಲಿ, ದಿನೇಶ್ ಗುಂಡೂರಾವ್ ತರದ ಯೂಸ್ ಲೆಸ್ ಕ್ಯಾಂಡಿಡೇಟ್ ಅನ್ನು ತಮ್ಮ ಜತೆಗಿಟ್ಟುಕೊಂಡರು.
ಇದರ ಜತೆಗೆ, ಅವರ ಮಗ ದುರ್ದೈವವಶಾತ್ ದೂರದ ಬೆಲ್ಜಿಯಂ ನಲ್ಲಿ ತೀರಿಕೊಂಡರು. ಅದು ಆಕಸ್ಮಿಕ ಮರಣವಾಗಿರಲಿಲ್ಲ. ಅತೀವ ಶೋಕಿ ಮಾಡುವ ವ್ಯಕ್ತಿಯಾಗಿದ್ದ ಸಿದ್ದರಾಮಯ್ಯನವರ ಮಗ ರಾಕೇಶ್ ಬಾರೊಂದರಲ್ಲಿ ಮಿಸ್ ಬಿಹೇವ್ ಮಾಡಿದ್ದ. ಅದಕ್ಕಾಗಿ ಬೌನ್ಸರ್ ಗಳು ಆತನನ್ನು ಸರಿಯಾಗಿ ಬಡಿದು ಹಾಕಿದ್ದರು. ಪೆಟ್ಟು ಹೊಟ್ಟೆಗೆ ಜೋರಾಗಿ ಬಿದ್ದು ಆತ ಮರಣಿಸಿದ್ದ. ಮಗನ ಬಗ್ಗೆ ಸಿದ್ದು ಬಹಳಷ್ಟು ಭರವಸೆಯಿಟ್ಟಿದ್ದರು. ಮಗನ ಸಾವು ಕೂಡಾ ಸಿದ್ದರಾಮಯ್ಯನವರನ್ನು ವಿಚಲಿತರನ್ನಾಗಿಸಿತ್ತು.

ದುರ್ದೈವದ ಮತ್ತು ಸ್ವಯಂಕೃತಾಪರಾಧದ ಪರಿಣಾಮ ಸಿದ್ದುವನ್ನು ಇವತ್ತು ಇಲ್ಲಿ ತಂದು ನಿಲ್ಲಿಸಿದೆ. ಇವತ್ತು ಸಿದ್ದರಾಮಯ್ಯನವರು ಕಾಂಗ್ರೆಸ್ ಶಾಶಕಾಂಗ ಪಕ್ಷದ ನಾಯಕನ ಸ್ಥಾನಕ್ಕೆ ಮತ್ತು ಸಿ ಡಬ್ಲ್ಯೂ ಸಿ ರಾಜೀನಾಮೆ ನೀಡಬೇಕಾಗಿ ಬಂದು ರಾಜೀನಾಮೆ ನೀಡಿದ್ದಾರೆ.

ಸಿದ್ದುವಿಗೆ ಈಗ 71 ವರ್ಷ ವಯಸ್ಸು. ಯಡಿಯೂರಪ್ಪ ತಮ್ಮ76 ನೆಯ ವಯಸ್ಸಿನಲ್ಲಿ ಮತ್ತೆ ಹಠಕ್ಕೆ ಬಿದ್ದು ಮುಖ್ಯಮಂತ್ರಿಯಾದಂತೆ, ಸಿದ್ದರಾಮಯ್ಯನವರಿಗೆ ಆಗುವ ಯಾವ ಅವಕಾಶಗಳೂ, ಸಂಭವನೀಯತೆಗಳೂ ಇಲ್ಲ. ಇದು ಕರ್ನಾಟಕ ರಾಜಕೀಯದಲ್ಲಿ ಸಿದ್ದರಾಮಯ್ಯನವರ ಪವರ್ ರಾಜಕೀಯ ಅನ್ ಅಫೀಶಿಯಲೀ ಕೊನೆಯಾದ ಗಳಿಗೆ.

ಈ ರಾಜ್ಯದ ಅತ್ಯುನ್ನತ ಹುದ್ದೆಯಾದ ಮುಖ್ಯಮಂತ್ರಿ ಪದವಿಯನ್ನು 5 ಭರ್ತಿ ವರ್ಷಗಳಷ್ಟು ಸುಧೀರ್ಘವಾಗಿ ಅನುಭವಿಸಿದವರು ಸಿದ್ದರಾಮಯ್ಯನವರು. ಮತ್ತೆ ರಾಜಕೀಯ ಅಧಿಕಾರದ ದುರಾಸೆ ನಿಮಗೆ ಬೇಡ ಸಿದ್ದು ಸರ್. ನಿಮ್ಮ ಕುಟುಂಬ ಕೂಡ ಈಗ ಸೆಟ್ಲ್ ಆಗಿದೆ. ಬೇಕಾದರೆ ಮಗ ಯತೀಂದ್ರನ ರಾಜಕೀಯ ಔನ್ನತ್ಯಕ್ಕೆ ತಳಪಾಯ ಹಾಕಿ. ನಿಮಗೆ ಇಷ್ಟು ಸಾಕು. ಹಾವೇ ಎ ಹ್ಯಾಪಿ ಅಂಡ್ ಹೆಲ್ದಿ ಲೈಫ್ ಸಿದ್ದು ಸರ್.
ನಿಮ್ಮವನು,

ಸುದರ್ಶನ್ ಬಿ. ಪ್ರವೀಣ್, ಬೆಳಾಲು

Leave A Reply

Your email address will not be published.