ತುಳುನಾಡು ಸ್ಪೆಷಲ್ ರಿಸೀಪಿ । ದೇಜಮ್ಮಕ್ಕನ ಟೀಮ್ ನ ಒರಿಜಿನಲ್ ಅಕ್ಕಿ ರೊಟ್ಟಿ

ಇದು ಮಂಗಳೂರಿನ ಜನಪದರು ಮಾಡುವ ಒರಿಜಿನಲ್ ಅಕ್ಕಿ ರೊಟ್ಟಿಯ ರಿಸೀಪಿ.

ಇದನ್ನು ಮಾಡಲು, ಥರಾವರಿ ಐಟಂಗಳು ಬೇಕಾಗಿಲ್ಲ. ಅದು ಹಾಕು, ಇದು ಮಿಕ್ಸ್ ಮಾಡು, ಆದನ್ನು ಇಷ್ಟು ತಗೋ, ಇದನ್ನು ಅಷ್ಟು ಬಳಸು- ನಥಿಂಗ್ ನಥಿಂಗ್. ಇದಕ್ಕೆ ಅಕ್ಕಿ, ಉಪ್ಪು ಮತ್ತು ನೀರು ಅಷ್ಟೇ ಬೇಕಾದದ್ದು.

ಆದರೆ ಈ ರೊಟ್ಟಿಯನ್ನು ಮಾಡಲು ಕೆಲವು ಅರ್ಹತೆಗಳು ಬೇಕಾಗಿದೆ. ಅದು ತೋಳಿನಲ್ಲಿ ಬಲ ಮತ್ತು ಒಂದು ರುಚಿಕಟ್ಟಾದ ಹಳ್ಳಿ ರುಚಿಯನ್ನು ಅನುಭವಿಸುತ್ತ ಮಾಡಿ ನೆಂಟರಿಗೆ ಬಡಿಸಿ ಎಂಚ ? ಅಂತ ಹೇಳುವ ಮನಸ್ಸು!

ಅಷ್ಟೇ. ಇದನ್ನು ನಾನು ಯಾಕೆ ಹೇಳುತ್ತಿದ್ದೇನೆಂದರೆ, ನಾನು ಹೇಳಿದ ಮಾದರಿಯಲ್ಲಿಯೇ ಇದನ್ನು ಮಾಡಬೇಕು. ಇಲ್ಲ, ನಾನು ಬೇರೆ ರೀತಿ ಮಾಡ್ತೇನೆ ; ಅದಕ್ಕೆ ಕೊತ್ತಂಬರಿ ಹಾಕ್ತೇನೆ, ಕ್ಯಾರಟ್ ಒಳ್ಳೇದು, ಮಕ್ಳು ಹಾಗಾದ್ರೂ ತರಕಾರಿ ತಿನ್ಲಿ…. ನೋ…ಅದೆಲ್ಲ ಏನೂ ಬೇಕಾಗಿಲ್ಲ. ನೀವು ಏನು ಬೇಕಾದರೂ ಸೇರಿಸಿದರೆ ಅದು ಒರಿಜಿನಲ್ ಅಕ್ಕಿ ರೊಟ್ಟಿ ಆಗುವುದಿಲ್ಲ. ಅದು ದೋಸೆ, ಕ್ಯಾರಟ್ ದೋಸೆ, ಮತ್ತಿನ್ನೇನೋ ಆಗತ್ತೆ. ನಮ್ಮದೇಜಮ್ಮಕ್ಕನ ಟೀಮು ತನ್ನ 70 ವರ್ಷ ಪ್ರಾಯದಲ್ಲೂ ತಟ್ಟಿ ಕೊಡುವ ರೊಟ್ಟಿ ಅದಾಗಲಾರದು.

ಈ ರೊಟ್ಟಿಯ ಬಗ್ಗೆ ಹೇಳುವ ಮೊದಲು ನಿಮಗೆ ಇವರದೊಂದು ಗ್ಯಾಂಗಿನ ಬಗ್ಗೆ ನಾನು ಹೇಳಲೇ ಬೇಕು. ಅವರು ಏಳೆಂಟು ಜನ ಇದ್ದಾರೆ. ದೇಜಮ್ಮ, ಚೇಚಕ್ಕ, ವಾರಿಜ, ಪೊನ್ನಕ್ಕ, ಜಾನಕಿ, ರಾಜೀವಿ ಮತ್ತು ಪ್ರೇಮ. ದೇಜಮ್ಮಫ್ರಮ್ ಬೆಳಾಲು, ಚೇಚಕ್ಕ (ಸೇಸಮ್ಮ) ಫ್ರಮ್ ಕೊಂತೂರು, ವಾರಿಜ ಫ್ರಮ್ ಕೊಕ್ಕಡ, ಪೊನ್ನಕ್ಕ ಫ್ರಮ್ ಪಿಲವೂರು, ಜಾನಕಿ ಫ್ರಮ್ ಕಾಣಿಯೂರು, ರಾಜೀವಿ ಫ್ರಮ್ ಅಜೀರ್ ಮಜಲ್, ಮತ್ತು ಪ್ರೇಮ ಫ್ರಮ್ ಮೂಡಾಯೂರು. ಎಲ್ಲರೂ ಅಕ್ಕತಂಗಿಯರು.

ಹಬ್ಬದ ದಿನ ಎಲ್ಲರೂ ಒಂದು ಕಡೆ ಸೇರಿದರೆಂದರೆ ಮುಗಿಯಿತು. ಒಂದು ಮುಡಿ ಅಕ್ಕಿ ಖಾಲಿ. ಕೊಟ್ಟಿಗೆಯಲ್ಲಿನ ಭೀಮಗಾತ್ರದ ಎರಡು ಕಡೆಯುವ ಕಲ್ಲಿದೆ. ಪ್ರತಿಯೊಂದು ಕಲ್ಲಿನ ಎದುರಾ ಬದುರು ಇಬ್ಬರು ಕೂರುತ್ತಾರೆ. ಒಬ್ಬರು ಕಂಜಿ (ಅರೆಯುವ ಕಲ್ಲು) ತಿರುಗಿಸಿದರೆ, ಮತ್ತೊಬ್ಬಳು ಅವಳ ಕೈಯ ಮೇಲೆ ಒಂದಷ್ಟು ಸಪೋರ್ಟ್ ಕೊಡುತ್ತಾಳೆ. ಇಬ್ಬರೂ ಆ ಕಡೆಯಿಂದ ಈ ಕಡೆಗೆ ಬಂದ ಹಿಟ್ಟನ್ನು ಕೂಟಿ ಕೊಡುತ್ತಾರೆ. ಹಾಗೆ ಎರಡು ಕಲ್ಲಿನಲ್ಲಿ, ನಾಲ್ಕು ಜನ ಅಡಿ ಮೇಲು ಮಾಡುತ್ತಿರುತ್ತಾರೆ. ಕಡೆಯುವುದರಲ್ಲಿ ಮಾತ್ರ ಅವರು ನಿಸ್ಸೀಮರಿಂದುಕೊಳ್ಳಬೇಡಿ. ಮಾತು ಶುರುವಿಟ್ಟರೆ ಟಿವಿಯ ಎಲ್ಲ ಬ್ರೇಕಿಂಗ್ ನ್ಯೂಸ್ ಕೊಡುವ ಚಾನಲ್ಲುಗಳೂ ಎಕಕಾಲದಲ್ಲಿ ಆನ್ ಮಾಡಿಟ್ಟಂತೆ. ಬಹುಶ: ಶ್ರಮ ಬೇಡುವ ಕೆಲಸದ ಸುಲಭದ ನಿರ್ವಹಣೆಗೆ ಮಾತು ಮಾಧ್ಯಮವಾಗಿರಬಹುದು. ಮಧ್ಯೆ ಮಧ್ಯೆ ಅವರ ಕಟಿ ಪಿಟಿ. ಏನೇ ಇದ್ದರೂ ಅವರು ಮಾಡುವ ಅದ್ಭುತ ರೊಟ್ಟಿಯ ಮುಂದೆ ಅವರ ಕೈಯಿಂದ ಬಯ್ಸಿಕೊಳ್ಳುವುದು ವರ್ಥ್ !

ಬೇಕಾಗುವ ಪದಾರ್ಥಗಳು :

1 ) ಲೋಕಲ್ಲಾಗಿ ಬೆಳೆದ ಕಜೆ ಅಕ್ಕಿ( ಒರಿಜಿನಲ್ ಕುಚ್ಚುಲಕ್ಕಿ)

2 ) ರುಚಿಗೆ ತಕ್ಕಷ್ಟು ಉಪ್ಪು

ಅಡುಗೆಗೆ ಬೇಕಾಗುವ ಕಾವಲಿ : ಬಲವಿನ ಕಾವಲಿ ( ಒಂದು ವಿಧದ ಗ್ರಾನೈಟ್ ಥರದ, ಆದ್ರೆ ಗ್ರಾನೈಟ್ ಅಲ್ಲ. ಅದು ಮಂಗಳೂರು ಆಸುಪಾಸಿನಲ್ಲಿ ಅಂಗಡಿಗಳಲ್ಲಿ ಸಿಗುತ್ತದೆ.)

ಮಾಡುವ ವಿಧಾನ :

ಅಕ್ಕಿಯನ್ನು 4 ಗಂಟೆ 6 ಗಂಟೆ ನೆನೆಸಿಡಿ. ರಾತ್ರಿ ಮಲಗುವಾಗ ನೆನೆಹಾಕಿಟ್ಟರೂ ಮುಂಜಾನೆ ರುಬ್ಬಲು ಸರಿಯಾಗುತ್ತದೆ.
ಉಪ್ಪು ಹಾಕಿ ಗಟ್ಟಿಯಾಗಿ ಹಿಟ್ಟು ರುಬ್ಬಿಕೊಳ್ಳಿ. ಎಷ್ಟು ಗಟ್ಟಿಯಾಗಿ ನಿಮಗೆ ರುಬ್ಬಲಾಗುತ್ತೋ ಅಷ್ಟು ಒಳ್ಳೆಯದು. ಯಾವುದೇ ಕಾರಣಕ್ಕೋ ನೀರು ನೀರಾಗಿರಬಾರದು. ತುಂಬಾ ನುಣ್ಣಗೆ ರುಬ್ಬಬಾರದು. ಹಿಟ್ಟು ಸ್ವಲ್ಪ ಸ್ವಲ್ಪ ತರಿ ತರಿಯಾಗಿರಬೇಕು.
ಈಗ ರೊಟ್ಟಿ ತಟ್ಟುವ ಸಮಯ. ಇಲ್ಲಿ ಎರಡು ರೀತಿಯ ತಯಾರಿಕಾ ವಿಧಾನವಿದೆ.
A ) ತಕ್ಷಣದ ಉಪಯೋಗಕ್ಕೆ: ನೀವು ತಯಾರಿಸಿದ ರೊಟ್ಟಿಯನ್ನು ಅವಾಗಾವಾಗಲೇ ತಿನ್ನುತ್ತೀರಾದರೆ ಒಂದು ವಿಧಾನ
B ) ಸ್ಟೋರೇಜ್ ಉಪಯೋಗಕ್ಕೆ: ರೊಟ್ಟಿಯನ್ನು ಒಣಗಿಸಿ, ಪ್ಯಾಕ್ ಮಾಡಿ ನಿಮಗೆ ಬೇಕಾದಾಗ ತಿನ್ನುತ್ತೀರಾದಲ್ಲಿ ಇನ್ನೊಂದು ವಿಧಾನ

A) ತಕ್ಷಣದ ಉಪಯೋಗಕ್ಕೆ:

1 ) ಸೌದೆ ಒಲೆಯ ಮೇಲೆ ಬಲವಿನ ಕಾವಲಿ ಇಟ್ಟು ಕಾವಲಿಯನ್ನು ಚೆನ್ನಾಗಿ ಬಿಸಿಯಾಗಲು ಬಿಡಿ. ಗ್ಯಾಸಿನಲ್ಲಿ ಆಗುವುದಿಲ್ಲ. ಕೆಲವೊಮ್ಮೆಗ್ಯಾಸಿನಲ್ಲಿ ಮಾಡುವಾಗ ಕಾವಲಿ ಒಡೆದು ಬೀಳುವುದಿದೆ.
2 ) ಬರಿಗೈಯಿಂದ ಅಕ್ಕಿ ಹಿಟ್ಟು ತೆಗೆದುಕೊಂಡು ಕಾವಲಿಯ ಮಧ್ಯೆ ಹಾಕಿ ನಂತರ ಅದನ್ನು ಪ್ಲಾಟ್ ಆಗಿ ತಟ್ಟಿ. ರೊಟ್ಟಿಯು 75 ಪೇಜಿನ ಪುಸ್ತಕದಷ್ಟು ದಪ್ಪವಿರಬೇಕು. ಮೊದಮೊದಲು ರೊಟ್ಟಿ ದುಂಡಗೆ ಬರುವುದಿಲ್ಲ. ಮಾಡುತ್ತಾ ಮಾಡುತ್ತಾ ಪ್ರಾಕ್ಟೀಸ್ ಆಗುತ್ತದೆ. ರೊಟ್ಟಿ ಮಾಡುವಾಗ ಬೆ೦ಕಿಯ ಶಾಖ ಮೊಣಕೈಗೆ ಸಿಗದಂತೆ ಯಾವುದಾದರೂ ವಸ್ತುವನ್ನು ಅಡ್ಡಲಾಗಿಟ್ಟುಕೊಳ್ಳಿ. ವಿವರಗಳಿಗೆ ಯು ಟ್ಯೂಬ್ ವಿಡಿಯೋ (ಶೀಘ್ರದಲ್ಲಿ ಬಿಡುಗಡೆ ) ನೋಡಿ.
3 ) ಮುಚ್ಚಳ ಮುಚ್ಚಿ ಬೇಯಲು ಬಿಡಿ. ಉರಿ ಜೋರಾಗಿದ್ದರೂ ಏನೂ ತೊಂದರೆಯಿಲ್ಲ. ರೊಟ್ಟಿ ಬೇಯುತ್ತಿರುವಂತೆ, ಅದು ನಿಧಾನವಾಗಿ ತನ್ನ ಪಾಡಿಗೆ ತಳ ಬಿಟ್ಟುಕೊಳ್ಳಲು ಪ್ರಾರಂಭಿಸುತ್ತದೆ. ಇನ್ನೇನು ರೋಸ್ಟ್ ಆಗಲಿದೆ ಅನ್ನುವಾಗ ಸಟ್ಟುಗದಿಂದ ಎಬ್ಬಿಸಿ ತೆಗೆಯಿರಿ.

ಸುಡು ಸುಡುತ್ತಿರುವಾಗಲೇ, ಸ್ಪೆಷಲ್ ಚಟ್ನಿಯ ಜತೆ ತಿನ್ನಿ. (ಚಟ್ನಿಯ ರಿಸಿಪಿ ಶೀಘ್ರದಲ್ಲಿ ). ಈ ರೊಟ್ಟಿ ತಿನ್ನಲು ಚಟ್ನಿಯೇ ಆಗಬೇಕಾಗಿಲ್ಲ. ಬಿಸಿ ಬಿಸಿ ರೊಟ್ಟಿಗೆ ಬೆಣ್ಣೆ ಹಾಕಿ ಅದು ಕರಗುತ್ತ ಇರುವುದನ್ನೇ ನೋಡುತ್ತಾ ತಿಂದರೆ ಆ ರುಚಿಗೆ ಸಾಟಿಯೆಲ್ಲಿ ? ಏನು ಕೂಡಾ ಇಲ್ಲದೆ ಇದನ್ನು ಚಹಾದ ಜತೆ ತಿನ್ನಬಹುದು. ಅಷ್ಟು ರುಚಿಯಾಗಿರುತ್ತದೆ. ಈ ರೊಟ್ಟಿ ಎಷ್ಟು ತಾಜಾ ಮತ್ತು ನಾಟಿ ಅಂದರೆ, ಅದಕ್ಕೆ ಯಾವುದೇ ಸಾರು ಸಾಂಬಾರು, ನಾಟಿ ಕೋಳಿ ಸಾರು, ತರಕಾರಿ ಪಲ್ಯ- ಎಲ್ಲದರ ಜತೆನೂ ಫ್ರೆಂಡ್ ಶಿಪ್ ಮಾಡಿಕೊಳ್ಳುವ ಘಾಟಿ ಇದು.

B ) ಸ್ಟೋರೇಜ್ ಉಪಯೋಗಕ್ಕೆ :

1 ) ಸೌದೆ ಒಲೆಯ ಮೇಲೆ ಬಲವಿನ ಕಾವಲಿ ಇಟ್ಟು ಕಾವಲಿಯನ್ನು ಚೆನ್ನಾಗಿ ಬಿಸಿಯಾಗಲು ಬಿಡಿ.
2 ) ಬರಿಗೈಯಿಂದ ಅಕ್ಕಿ ಹಿಟ್ಟು ತೆಗೆದುಕೊಂಡು ಕಾವಲಿಯ ಮಧ್ಯೆ ಹಾಕಿ ನಂತರ ಅದನ್ನು ಪ್ಲಾಟ್ ಆಗಿ ತಟ್ಟಿ. ರೊಟ್ಟಿಯು 75 ಪೇಜಿನ ಪುಸ್ತಕದಷ್ಟು ದಪ್ಪವಿರಬೇಕು. ಮೊದಮೊದಲು ರೊಟ್ಟಿ ದುಂಡಗೆ ಬರುವುದಿಲ್ಲ. ಮಾಡುತ್ತಾ ಮಾಡುತ್ತಾ ಪ್ರಾಕ್ಟೀಸ್ ಆಗುತ್ತದೆ. ಮಾಡುವಾಗ ಬೆ೦ಕಿಯ ಶಾಖ ಮೊಣಕೈಗೆ ಸಿಗದಂತೆ ಯಾವುದಾದರೂ ವಸ್ತುವನ್ನು ಅಡ್ಡಲಾಗಿಟ್ಟುಕೊಳ್ಳಿ. ವಿವರಗಳಿಗೆ ಯು ಟ್ಯೂಬ್ ವಿಡಿಯೋ (ಶೀಘ್ರದಲ್ಲಿ ಬಿಡುಗಡೆ) ನೋಡಿ.
3 ) ಮುಚ್ಚಳ ಮುಚ್ಚುವುದು ಬೇಡ. ಹಾಗೆ ಬೇಯಲು ಬಿಡಿ. ಉರಿ ಜೋರಾಗಿದ್ದರೂ ಏನೂ ತೊಂದರೆಯಿಲ್ಲ. ರೊಟ್ಟಿ ಬೇಯುತ್ತಿರುವಂತೆ, ಅದು ನಿಧಾನವಾಗಿ ತನ್ನ ಪಾಡಿಗೆ ತಳ ಬಿಟ್ಟುಕೊಳ್ಳಲು ಪ್ರಾರಂಭಿಸುತ್ತದೆ. ಆಗ 2 ಟೀ ಚಮಚದಷ್ಟು ಅಕ್ಕಿಹಿಟ್ಟನ್ನು ರೊಟ್ಟಿಯ ಮೇಲೆ ಹಾಕಿ ಸ್ವಲ್ಪ ನೀರು ಘಾಕಿ ಅಕ್ಕಿಯ ಮೇಲೆ ಹಿಟ್ಟು ಸಾರಿಸಿ. ಈಗ ರೊಟ್ಟಿಯನ್ನು ಎಬ್ಬಿಸಿ ಉಲ್ಟಾ ಮಾಡಿ ಇನ್ನೊಂದು ಬದಿ ಬೇಯಲು ಬಿಡಿ. ( ಸುಮಾರು ಒಂದರಿಂದ ಎರಡು ನಿಮಿಷ).

ಇನ್ನೇನು ರೋಸ್ಟ್ ಆಗಲಿದೆ ಅನ್ನುವಾಗ ಸಟ್ಟುಗದಿಂದ ಎಬ್ಬಿಸಿ ತೆಗೆಯಿರಿ. ಹೀಗೆ ತೆಗೆದ ರೊಟ್ಟಿಯನ್ನು ಒಲೆಯ ಬದಿಗೆ, ಸುಮಾರು ಮುಕ್ಕಾಲರಿಂದ ಒಂದು ಫೀಟು ದೂರದಲ್ಲಿ ಬೆಂಕಿಯ ಶಾಖ ತಾಗುವಂತೆ ಲಂಬವಾಗಿ ಪೇರಿಸಿಡಿ. ( ಪೇರಿಸಲು ಸೌದೆ ಅಥವಾ ಇನ್ನ್ಯಾವುದೋ ಸಲಕರಣೆಗಳನ್ನು ಬಳಸಿಕೊಳ್ಳಿ). ಈ ರೀತಿ ಶಾಖ ಕೊಡುವುದರಿಂದ ಅಕ್ಕಿ ರೊಟ್ಟಿಯು ಮೇಲ್ಮೈ ಗಟ್ಟಿಯಾಗಿದ್ದಂತೆ ಕಂಡರೂ ಮುರಿಯಲು ಗರಿಮುರಿಯಾಗುತ್ತದೆ (brittle). ಇದುವೇ ಮಂಗಳೂರಿನ ಒರಿಜಿನಲ್ ಕೋಳಿ-ರೊಟ್ಟಿ / ಕೋರಿ-ರೊಟ್ಟಿ !

ಇಂತಹ ರೊಟ್ಟಿಯನ್ನು ಹಲವು ತಿಂಗಳುಗಳ ಕಾಲ ಸ್ಟೀಲ್ ಅಥವಾ ಪ್ಲಾಸ್ಟಿಕ್ ಡಬ್ಬದಲ್ಲಿ ಹಾಕಿಡಬಹುದು. ಬೇಕಾದಾಗ ಬಳಸಿಕೊಳ್ಳಿ. ಬ್ಯಾಚುಲರ್ ಗಳಿಗೆ ಇದು ಒಳ್ಳೆಯದು. ಅರ್ಜೆಂಟಾಗಿ ಒಂದು ಸಾರು ಮಾಡಿಕೊಂಡು ಅಥವಾ ಪಕ್ಕದ ಮೆಸ್ಸ್ ನಿಂದ ತಂದುಕೊಂಡು ಇನ್ ಸ್ಟಂಟ್ ಆಗಿ ಊಟ ಮಾಡಬಹುದು.

ಇದಕ್ಕೆ ವಿಸ್ಪೋಟಕ ಕಾಂಬಿನೇಷನ್ ಆಗಿರುವುದು ಮಂಗಳೂರಿನ ನಾಟಿ ಕೋಳಿ ಸಾರು. ಈ ರೊಟ್ಟಿಯನ್ನು ನಾಟಿ ಕೋಳಿಯ ಸಾಂಬಾರಿನ ಜತೆ, ಊರ ದನದ ತುಪ್ಪ ಸುರಿದುಕೊಂಡು ಮೆಲ್ಲುವ ರುಚಿಯನ್ನು ವಿವರಿಸಿ ಹೇಳಲಾಗುವುದಿಲ್ಲ. ಅದನ್ನು ಸವಿದೇ ಅನುಭವಿಸಬೇಕು. (ನಾಟಿ ಕೋಳಿಯ ಸಾರಿನ ಪಿನ್ ಟು ಪಿನ್ ರಿಸೀಪಿ ವಿವರ ಇನ್ನೆರಡು ದಿನಗಳಲ್ಲಿ )

ಶಾಖಾಹಾರಿಗಳಿಗೆ ಆಲೂಗಡ್ಡೆ- ಕಪ್ಪು ಅಲಸಂದೆ ಬೀಜ ಸಾರು ಇದಕ್ಕೆ ಒಳ್ಳೆಯ ಕಾಂಬಿನೇಷನ್.

ಸುದರ್ಶನ್ ಬಿ. ಪ್ರವೀಣ್, ಬೆಳಾಲು

Leave A Reply

Your email address will not be published.