ಚೆನ್ನೈನ ಹವ್ಯಾಸಿ ವಿಜ್ಞಾನಿ ಷಣ್ಮುಗ ಸುಬ್ರಮಣ್ಯಂ ಕೈಗೆ ಸಿಕ್ಕಿಬಿದ್ದ ವಿಕ್ರಮ್ ಲ್ಯಾ೦ಡರ್ !

ಸೆಪ್ಟೆಂಬರ್ 7 ರ ನಸುಕಿನ ಮುಂಜಾವಿನಂದು ಭಾರತದ ಮಹತ್ವಾಕಾಂಕ್ಷೆಯ ಚಂದ್ರಯಾನ ಪ್ರಾಜೆಕ್ಟಿನ ವಿಕ್ರಮ್ ಲ್ಯಾಂಡರ್ ಇನ್ನೇನು ಒಂದು ಕಿಲೋಮೀಟರು ಕ್ರಮಿಸಿ ತಲುಪುವಷ್ಟರಲ್ಲಿ ಹಾರ್ಡ್ ಲಾಂಡಿಂಗ್ ಆಗಿ ಸಂಪರ್ಕ ಕಳೆದುಕೊಂಡಿತ್ತು. ಇಡೀ ವಿಶ್ವವೇ ಆ ಕ್ಷಣದಲ್ಲಿ ನಿದ್ದೆಗೆಟ್ಟು ಎಚ್ಚರವಾಗಿದ್ದು ವಿಕ್ರಮನ ಪ್ರತಿ ಕ್ಷಣದ ನಡೆಯನ್ನು ಗಮನಿಸುತ್ತಿತ್ತು. ನಮ್ಮ ಪ್ರಧಾನಿ, ತೀರಾ ಬೆಂಗಳೂರಿನ ಇಸ್ರೋ ಕಚೇರಿಗೇ ಬಂದು ಅದನ್ನು ವೀಕ್ಷಿಸುತ್ತಿದ್ದರು. ಚಂದ್ರನ ಶೀತಲ ದಕ್ಷಿಣ ಧ್ರುವದಲ್ಲಿ ಇನ್ನೇನು ಇಳಿಯುವ ಹಂತದಲ್ಲಿ ನಿಯಂತ್ರಣ ತಪ್ಪಿದ ಲಾಂಡರ್ ಕಣ್ತಪ್ಪಿಸಿಕೊಂಡಿತ್ತು.

ಅದಾದ ಮೇಲೆ ಏನೇನು ಮಾಡಿದರೂ ವಿಕ್ರಮನ ಕಡೆಯಿಂದ ಒಂದೂ ಮಾಹಿತಿ ಬಂದಿರಲಿಲ್ಲ. ಕೊನೆಗೆ ಅಪಘಾತವಾದ ಸ್ಥಳವಾಗಲಿ, ಅದರ ಅವಶೇಷಗಳಾಗಲೀ ಪತ್ತೆಯಾಗಿರಲಿಲ್ಲ.
ಇದೀಗ ನಮ್ಮ ಭಾರತದ ಹವ್ಯಾಸಿ ವಿಜ್ಞಾನಿ, 33 ವರ್ಷದ ಚೆನ್ನೈನ ಷಣ್ಮುಗ ಸುಬ್ರಮಣ್ಯಂ ವಿಕ್ರಮ್ ಲಾಂಡರ್ ನ ಅವಶೇಷವನ್ನು ಪತ್ತೆ ಹಚ್ಚಿದ್ದಾರೆ. ಅದನ್ನು ಅಮೇರಿಕಾದ ಬಾಹ್ಯಾಕಾಶ ಸಂಸ್ಥೆ ನಾಸಾ ಖಚಿತಪಡಿಸಿದೆ.

ವಿಕ್ರಮ್ ಅವಶೇಷದ ಜಾಗ

ಮೂಲತಃ ಆತ ಮೆಕ್ಯಾನಿಕಲ್ ಇಂಜಿನೀಯರ್. ವೃತ್ತಿಯಲ್ಲಿ ಕಂಪ್ಯೂಟರ್ ಇಂಜಿನೀಯರ್. ಲೆನ್ನಾಕ್ಸ್ ಇಂಡಿಯಾ ಟೆಕ್ನೋಲೊಜಿ ಸೆಂಟರಿನಲ್ಲಿ ಆಪ್ ಡೆವಲಪ್ ಮಾಡುವ ಕೆಲಸ. ಆತನಲ್ಲಿ ಬಾಹ್ಯಾಕಾಶ ಅಧ್ಯಯನಕ್ಕೆ ಬೇಕಾದ ಏನೇನೂ ಉಪಕರಣಗಳಿರಲಿಲ್ಲ. ಆತನಲ್ಲಿದ್ದುದು ಎರಡು ಹಳೆಯ ಕಂಪ್ಯೂಟರುಗಳು. ಆದರೆ ಎಲ್ಲ ವೈಜ್ಞಾನಿಕ ಸಲಕರಣೆಗಳು, ಕೈಯಳತೆಯಲ್ಲಿ ಸವಲತ್ತುಗಳು, ಸಲಹೆ ನೀಡಲು ದೊಡ್ಡ ವಿಜ್ಞಾನಿಗಳು – ಯಾವುದೂ ಇಲ್ಲದಿದ್ದರೂ ಆತನಲ್ಲಿ ಬಾಹ್ಯಾಕಾಶದೆಡೆಗೆ ಬಾಲ್ಯದಿಂದಲೂ ಬೆಳೆಸಿಕೊಂಡು ಬಂದ ಕುತೂಹಲವಿತ್ತಲ್ಲ ?! ಮತ್ತು, ನಾವು ನೀವೆಲ್ಲ ಟಿವಿ ನೋಡುತ್ತಾ ವೃಥಾ ಕಳೆದುಕೊಳ್ಳುವ ಸಮಯವಿತ್ತಲ್ಲ. ಆತನಿಗೆ ಅಷ್ಟು ಸಾಕಿತ್ತು. ಆತ ದಿನದ ಆರರಿಂದ ಎಂಟು ಗಂಟೆಗಳನ್ನು ವಿಕ್ರಮ್ ಲಾಂಡರ್ ನ ಹುಡುಕಾಟಕ್ಕಾಗಿ ಹೂಡಿಕೆ ಮಾಡಿದ್ದ !

ಬಾಹ್ಯಾಕಾಶಕ್ಕೆ ಗಿರಕಿ ಹೊಡೆಯುತ್ತಿರುವ ಹಳೆಯ ಆರ್ಬಿಟರ್ ಗಳು ಕಳಿಸಿದ್ದ ಫೋಟೋಗಳು ಮತ್ತು ವಿಕ್ರಮ್ ಪತನದ ನಂತರದ ಫೋಟೋಗಳನ್ನು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಆತ ಕಂಪೇರ್ ಮಾಡತೊಡಗಿದ. ಅಂತಹಾ ಫೋಟೋಗಳನ್ನು ಆತ ನಾಸಾ ಅವಾಗಾವಾಗ ಬಿಡುಗಡೆ ಮಾಡುತ್ತಿದ್ದ ವೆಬ್ ಸೈಟ್ ನಿಂದ ಪಡೆದುಕೊಂಡಿದ್ದ. ಅಸ್ಪಷ್ಟವಾಗಿ ಒಂದೆರಡು ಕಿಲೋಮೀಟರುಗಳ ವ್ಯಾಪ್ತಿಯಲ್ಲಿಯೇ ಲಾಂಡರ್ ಬಿದ್ದಿರಬಹುದೆಂದು ಯಾರೂ ಕೂಡಾ ಗೆಸ್ ಮಾಡುವಂತೆ ಷಣ್ಮುಗಂ ಕೂಡ ಅಂದುಕೊಂಡಿದ್ದ. ಯಾಕೆಂದರೆ ವಿಕ್ರಂ ಒಂದು ಕಿಲೋಮೀಟರ್ ನ ಒಳಗೆ ಸಂಪರ್ಕ ತಪ್ಪಿ ಬಿದ್ದಿದ್ದ. ಆದುದರಿಂದ ಅದರೊಳಗಿನ ವ್ಯಾಪ್ತಿಯ ಎರಡೂ ಫೋಟೋಗಳನ್ನೂ ಒಂದರ ಪಕ್ಕ ಒಂದನ್ನಿಟ್ಟು ಅವುಗಳ ಪಿಕ್ಸೆಲ್ ಟು ಪಿಕ್ಸೆಲ್ ಅನಲೈಸ್ ಮಾಡಿದ. ಕೆಲವು ಕಡೆ ಜಾಸ್ತಿ ಪಿಕ್ಸೆಲ್ ಬಂದ ಕೂಡಲೇ, ಅದು ವಿಕ್ರಮನ ಅವಶೇಷ ಅಂದುಬಿಡುವುದಕ್ಕೆ ಆಗುತ್ತಿರಲಿಲ್ಲ. ಯಾಕೆಂದರೆ ಚಂದ್ರನ ಮೇಲೆ ಸಿಗುವ ಕಲ್ಲು ಬಂಡೆಗಳೂ, ಈತನ ಅನಾಲಿಸಿಸ್ ಗೆ ಕಲ್ಲು ಹಾಕುವ ಭಯವಿತ್ತು. ಸೈನ್ಸ್ ನ ಭಾಷೆಯಲ್ಲಿ ಹೇಳುವುದಾದರೆ, ಇಂತಹಾ ‘ ನೋಯ್ಸ್ ( noise ) ‘ ಅನ್ನು ಕೂಡ ಪರಿಗಣನೆಗೆ ತೆಗೆದುಕೊಳ್ಳಬೇಕಾಗುತ್ತಿತ್ತು.

ಬರೋಬ್ಬರಿ ನಲ್ವತ್ತು ನಲ್ವತ್ತೈದು ದಿನಗಳಲ್ಲಿ ತನಿಖೆಯ ಗುರಿ ಒಲಿದಿತ್ತು. ಆತ ತನ್ನ ತಾನು ಕಂಡುಕೊಂಡದ್ದನ್ನು ನಾಸಾ ಗೆ ಟ್ವೀಟ್ ಮಾಡಿದ. ಮತ್ತಷ್ಟು ದಿನದ ನಂತರ ಅದನ್ನು ನಾಸಾ ಗೆ ಮೈಲ್ ಕೂಡ ಮಾಡಿದ.
ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ ನಾಸಾ ನಿನ್ನೆ ಡಿಸೆಂಬರ್ ಮೂರರಂದು ಷಣ್ಮುಗ ಸುಬ್ರಮಣ್ಯನ ಸಂಶೋಧನೆಗೆ ಸಹಮತ ಗೂಡಿಸಿ,” ವಿಕ್ರಂ ಲ್ಯಾಂಡರ್ ನ ಅವಶೇಷದ ಮೊಟ್ಟಮೊದಲ ಕುರುಹು ” ಎಂದು ಪ್ರಕಟಿಸಿದೆ. ಇವತ್ತು ಹವ್ಯಾಸಿ ವಿಜ್ಞಾನಿ ಇಂಟರ್ನ್ಯಾಷನಲ್ ಆಗಿ ಗುರುತಿಸಲ್ಪಡುತ್ತಿದ್ದಾನೆ.

ಷಣ್ಮುಗ ಸುಬ್ರಮಣ್ಯಮ್ ಯಾಕೆ ಇಸ್ರೋ ಗೆ ಮೇಲ್ ಮಾಡಲಿಲ್ಲ?
ಷಣ್ಮುಗ ಸುಬ್ರಮಣ್ಯಮ್ ನಾಸಾ ಮತ್ತು ಇಸ್ರೋ ಎರಡಕ್ಕೂ ಆತ ಟ್ವೀಟ್ ಮಾಡಿದ್ದ. ಆದರೆ ವಿಚಿತ್ರವೆಂದರೆ ಆತನಿಗೆ ಇಸ್ರೋ ದ ಮೈಲ್ ಐಡಿ ಸಿಕ್ಕಿಲ್ಲ. ಹಾಗಂತ ಸುಬ್ರಮಣ್ಯಮ್ ಅಂದಿದ್ದಾನೆ. ಆದರೆ ಇಸ್ರೋದ ಮೈಲ್ ಐಡಿ ವೆಬ್ ಸೈಟಿನಲ್ಲಿದೆ.

ನಾಸಾದಂತೆ ಇಸ್ರೋ ತನ್ನ ಸಂಶೋಧನೆಯ ಭಾಗಗಳನ್ನು ಸಾರ್ವಜನಿಕರ ಜತೆ ಶೇರ್ ಮಾಡಿಕೊಳ್ಳುವುದಿಲ್ಲ. ಇಸ್ರೋ ಇನ್ನಾದರೂ ಹೆಚ್ಚು ಹೆಚ್ಚು ತನ್ನ ಸಂಶೋಧನೆಗಳಿಗೆ ಸಂಬಂಧಿಸಿದ ವಿಷಯಗಳನ್ನು ಸಾರ್ವಜನಿಕರ ಅವಗಾಹನೆಗೆ ತೆರೆದಿಡಬೇಕು. ಯಾರಿಗೆ ಗೊತ್ತು ? ನಮ್ಮ ಗುಂಪಿನೊಳಗೆ ಮತ್ತೆಷ್ಟೋ ವಿಜ್ಞಾನಿಗಳಿರಬಹುದು, ಅವರಿನ್ಯಾವುದಕ್ಕೋ ಪರಿಹಾರ ಸೂಚಿಸಬಹುದು.

ಸುದರ್ಶನ್ ಬಿ. ಪ್ರವೀಣ್, ಬೆಳಾಲು

Leave A Reply

Your email address will not be published.