ಬೇಸನ್ ಲಾಡು ಮಾಡಲು ಜಾಸ್ತಿ ಪದಾರ್ಥಗಳು ಬೇಕಿಲ್ಲವಾದರೂ ಇದು ತುಂಬಾ ಶ್ರಮ ಬೇಡುವ ಅಡುಗೆ. ಕಡಲೆ ಹಿಟ್ಟಿನ ಆಯ್ಕೆ, ತುಪ್ಪದಲ್ಲಿ ರೋಸ್ಟ್ ಮಾಡುವ ವಿಧಾನ, ನಿರಂತರ ಕಲಸುತ್ತಾ ಇರಬೇಕಾದ ಶ್ರಮ – ತಾಳ್ಮೆಮತ್ತು ಕೊನೆಯಲ್ಲಿ ತಣಿಸಿ ಸಕ್ಕರೆಯ ಪುಡಿಯನ್ನು ಹಾಕಿ ಉಂಡೆಗಟ್ಟಿಸುವ ಇತ್ಯಾದಿ ಪರಿಣತಿ ಬೇಡುವ ಅಡುಗೆ.
ಕಡಲೆ ಹಿಟ್ಟು ಫ್ರೆಶ್ ಆಗಿರಬೇಕು. ಇಲ್ಲದೆ ಹೋದರೆ ಬೇಸನ್ ಲಾಡು ಕಹಿಯಾಗಿ ನಿಮಗೆ ಬೇಸರ ತರಿಸಬಹುದು. ಕಡಲೆ ಹಿಟ್ಟನ್ನು ಜರಡಿ ಹಾಕುವುದು ತುಂಬಾ ಮುಖ್ಯವಾಗುತ್ತದೆ. ಕಡಲೆ ಹಿಟ್ಟನ್ನು ತುಪ್ಪದಲ್ಲಿ ರೋಸ್ಟ್ ಮಾಡುವಾಗ, ಕಡಿಮೆ ರೋಸ್ಟ್ ಆದರೆ ಕಡಲೆ ಹಿಟ್ಟಿನ ರಾ ಸ್ಮೆಲ್ ಬರುತ್ತದೆ, ಜಾಸ್ತಿ ಆದರೆ ಕಹಿಯಾಗಿ ಲಾಡು ಕಂದು ಬಣ್ಣಕ್ಕೆ ತಿರುಗಬಹುದು. ಒಂದು ಸಲ ಸರಿಯಾಗಿ ಟೆಕ್ಸ್ಚರ್ ಮತ್ತು ರುಚಿ ಬರದೇ ಹೋದರೆ ಪರವಾಗಿಲ್ಲ. ಬರುವ ವಾರ ಮತ್ತೊಮ್ಮೆ ಟ್ರೈ ಮಾಡಿದರಾಯ್ತು. ಎನಿ ವೇ, ಬೆಸ್ಟ್ ವಿಷಸ್.
ಬೇಕಾಗುವ ಸಾಮಾನುಗಳು:
1) ಕಡಲೆ ಹಿಟ್ಟು : 1/4 ಕೆಜಿ
2) ತುಪ್ಪ : 60 ಮಿಲಿ ಲೀ ( ಸ್ವಲ್ಪ ಹೆಚ್ಚು ಹಾಕಿದರೆ ನಡೆಯುತ್ತದೆ)
3) ಸಕ್ಕರೆ ಪುಡಿ : 125 ಗ್ರಾಂ ( ಸ್ವಲ್ಪ ಹೆಚ್ಚು ಕಮ್ಮಿನಡೆಯುತ್ತದೆ.)
4) ಏಲಕ್ಕಿ ಪುಡಿ : ಸ್ವಲ್ಪ
5) ಗೋಡಂಬಿ-ಬಾದಾಮಿ : ಅಲಂಕಾರಕ್ಕೆ
ಮಾಡುವ ವಿಧಾನ:
1) ದಪ್ಪ ತಳದ ಪಾತ್ರೆಯನ್ನು ತೆಗೆದುಕೊಳ್ಳಿ.
2) ಅದಕ್ಕೆ ಮೇಲೆ ಹೇಳಿದ ತುಪ್ಪದಲ್ಲಿ ಅಂದಾಜು ಅರ್ಧ ಭಾಗವನ್ನು ಹಾಕಿ ತುಪ್ಪವನ್ನು ಸಣ್ಣ ಉರಿಯಲ್ಲಿಟ್ಟು ಬಿಸಿ ಮಾಡಿ.
3) ನಂತರ ಕಡಲೆ ಹಿಟ್ಟನ್ನು ಅದಕ್ಕೆ ಹಾಕಿ. ನಿರಂತರ ಮರದ ಸಟ್ಟುಗ/ಸೌಟಿನಿಂದ ಕಲಸುತ್ತಿರಿ. ಇದು ನಿರಂತರ ಕಲಕುವ ಪ್ರಕ್ರಿಯೆ. ಈ ರೊಸ್ಟಿಂಗ್ ಹೆಚ್ಚು ಕಮ್ಮಿ 25 ನಿಮಿಷ ತೆಗೆದುಕೊಳ್ಳುತ್ತದೆ. ಆದ್ದರಿಂದ ತಾಳ್ಮೆ ಬಹಳ ಮುಖ್ಯ. ನೀವು ಅಡುಗೆ ಮಾಡುವಾಗ ನಿಮ್ಮ ಸಹಾಯಕ್ಕೆ ಬೇರೊಬ್ಬರು ಇರುವುದು ಒಳ್ಳೆಯದು.ನಿಧಾನವಾಗಿ ಕಡಲೆ ಹಿಟ್ಟಿನ ಬಣ್ಣವು ಬದಲಾಗುತ್ತಾ ಹೋಗುತ್ತದೆ. ಮತ್ತು ಸ್ವಲ್ಪ ರೊಸ್ಟಿಂಗ್ ಆಗುತ್ತಿರುವಂತೆ ಒಳ್ಳೆಯ ಘಮ ಬರಲು ಶುರುವಾಗುತ್ತದೆ.
4) ಆಗ ಉಳಿದ ತುಪ್ಪ ಹಾಕಿ ಕಲಸುವಿಕೆಯನ್ನು ಮುಂದುವರಿಸಿ. ಈ ಸಮಯದಲ್ಲಿ ಕಡಲೆ ಹಿಟ್ಟು ಗಂಟು ಕಟ್ಟಿಕೊಳ್ಳಬಹುದು. ಡೋಂಟ್ ವರಿ. ಸ್ವಲ್ಪ ಸಮಯ ಮಿಕ್ಸ್ ಮಾಡುತ್ತಿರುವಂತೆ ನಿಧಾನವಾಗಿ ಗಂಟು ಬಿಟ್ಟುಕೊಂಡು ಪೇಸ್ಟ್ ಥರ ಆಗುತ್ತದೆ.
5) ರೊಸ್ಟಿಂಗ್ ಮುಂದುವರಿಸುತ್ತಿದ್ದಂತೆ ಮಿಶ್ರಣವು ಗೋಲ್ಡ್ ಕಲರ್ ಗೆ ತಿರುಗುತ್ತದೆ ಮತ್ತು ಮನೆಯ ತುಂಬಾ ಪರಿಮಳ ಹರಡಿಕೊಳ್ಳುತ್ತದೆ. ಅದು ರೊಸ್ಟಿಂಗ್ ಎಂಡ್ ಪಾಯಿಂಟ್ ತಲುಪಿದ ಲಕ್ಷಣ.
6) ಆನಂತರ ಸ್ಟವ್ ಆಫ್ ಮಾಡಿ ಪಾತ್ರೆಯನ್ನು ಇಳಿಸಿ ಕೆಳಗಿಡಿ. ಹಾಗೆಯೇ ಆರಲು ಬಿಡಿ. ಇಳಿಸಿದ ನಂತರ ಕೂಡ ಕಳಸುತ್ತಿರಿ. ಏಕೆಂದರೆ ಪಾತ್ರೆಯಲ್ಲಿ ಈಗಾಗಲೇ ಉಳಿದಿರುವ ಉಷ್ಣ ( ರೆಸಿಡ್ವಲ್ ಹೀಟ್) ನಿಂದಾಗಿ ಕರಟಿ ಹೋಗುವ ಸಂಭವವಿರುತ್ತದೆ.
7) ಮಿಶ್ರಣ ಆರುವ ಮೊದಲೇ ಏಲಕ್ಕಿ ಪುಡಿ ಹಾಕಿ ಮಿಶ್ರ ಮಾಡಿ.
8) ಬೇಸನ್ ಮಿಶ್ರಣ ಪೂರ್ತಿ ಆರಿದ ಮೇಲೆ ಅದಕ್ಕೆ ಸಕ್ಕರೆಯ ಪುಡಿಯನ್ನೇ ಸೇರಿಸಿ. ಅಲ್ಪಸ್ವಲ್ಪ ಬಿಸಿ ಇರುವಾಗ ಸಕ್ಕರೆ ಸೇರಿಸಿದರೆ ಸಕ್ಕರೆ ಕರಗಿ ನಿಮಗೆ ಉಂಡೆ ಕಟ್ಟಲಾಗದೆ ಪೇಚಾಡಬೇಕಾಗುತ್ತದೆ.
9) ಸಂಪೂರ್ಣ ಆರಿದ ಮೇಲೆ ಕೈಗೆ ಸ್ವಲ್ಪ ತುಪ್ಪ ಸವರಿಕೊಂಡು ಉಂಡೆ ಕಟ್ಟಿ
10) ಹುರಿದ ಗೋಡಂಬಿ ಮತ್ತು ಬಾದಾಮಿಗಳನ್ನೂ ಒಂದನ್ನು ಈ ತುದಿಯಲ್ಲಿ, ಇನ್ನೊಂದನ್ನು ಆ ತುದಿಯಲ್ಲಿ ಲಡ್ಡುವಿನ ಒಳಗೆ ನುಗ್ಗಿಸಿ. ಅಥವಾ ಬೇರಿನ್ನಾವುದೇ ಆಹಾರ ವಸ್ತುವಿನಿಂದ ನಿಮಗಿಷ್ಟವಾದ ಅಲಂಕಾರ ಮಾಡಿ. ಇದಕ್ಕೆ ನಿಮ್ಮ ಸೃಜನಶೀಲತೆಯನ್ನು ಉಪಯೋಗಿಸಿಕೊಳ್ಳಿ.
ಒಂದು ಅದ್ಭುತ ಬೇಸನ್ ಲಾಡು ಈಗ ಮನೆ ಮಂದಿಗೆ ಸವಿಯಲು ರೆಡಿ. ಇದು ಸ್ವೀಟ್ ಸ್ಟಾಲ್ ನಿಂದ ತರುವ ಸಿಹಿತಿಂಡಿಗಿಂತ ಯಾವತ್ತಿಗೂ ಉತ್ತಮವಾಗಿರುತ್ತದೆ. ಯಾಕೆಂದರೆ ಇದು ನಿಮ್ಮವರ ಕೈಯಡುಗೆ !
ಚೇತನಾ ಈಶ್ವರ್, ಹಳೆ ಚಂದಾಪುರ