ಇಂಟೆರೆಸ್ಟಿಂಗ್ ಇತಿಹಾಸ । ಹಿಟ್ಲರನ ಕಳೆದು ಹೋದ ಬಾಲ್ಯವು ಕೋಟಿ ಮರಣ ಬೇಡಿತ್ತು !

0 11

ಹಿಟ್ಲರನ ಬಗ್ಗೆ ಬರೆಯಲು ಕುಳಿತರೆ ಕೈಕಟ್ಟುತ್ತದೆ. ಮನಸ್ಸು ಮೂಕವಾಗುತ್ತದೆ. ಇದೆಂತಹ ಮನಸ್ಥಿತಿ? ಯಾಕಾಗಿ ಇಷ್ಟು ಜನಾಂಗೀಯ ದ್ವೇಷ? ಎಂದು ಮನಸ್ಸು ಕೇಳಿಕೊಳ್ಳುತ್ತದೆ. ಯಾಕೆಂದರೆ ಆ ದಿನ ಸತ್ತು ಹೋದ ಜನಸಂಖ್ಯೆ 6 ಮಿಲಿಯನ್ ಯಹೂದಿಗಳು ಮತ್ತು ಮತ್ತು ಉಳಿದ 4 ಮಿಲಿಯನ್ ಜನರು.
ಮಿಲಿಯನ್ ಅಂದರೆ ನೂರು ಸಾವಿರ ಅಲ್ಲವಲ್ಲ. ಒಂದು ಮಿಲಿಯನ್ ಅಂದರೆ ಹತ್ತು ಲಕ್ಷ. ಅಂದರೆ ಒಟ್ಟು ಸಾವಿನ ಸಂಖ್ಯೆ 1 ಕೋಟಿ.

ಆತ ನಿಮಗೆ ಇಷ್ಟವಾಗದೆ ಇರೋದಕ್ಕೆ ಸಾವಿರ ಸಾವಿರ ಕಾರಣಗಳಿವೆ. ಆತನೊಬ್ಬ ಮನುಷ್ಯ ದ್ವೇಷಿ. ಮನುಕುಲ ದ್ವೇಷಿಸುವ ಅಂತಹ ವ್ಯಕ್ತಿತ್ವ ಆತನದು.
ನಮ್ಮದು ಇವತ್ತು ಬದುಕನ್ನು ಜರಡಿ ಹಿಡಿಯುವ ಕೆಲಸ. ಫಿಲ್ಟರ್ ಮಾಡುತ್ತ ಮಾಡುತ್ತಲೇ ಪೂರ್ತಿ ಕಸವೆಂದು ನಾವು ನಂಬಿರುವ ವಸ್ತುವಿನಲ್ಲೂ ಕೊನೆಗೆ ಒಂದಿಷ್ಟು ಗಟ್ಟಿಯಾದ, ಘನವಾದ, ಪರ್ಫೆಕ್ಟ್ ಶುದ್ಧ ಚಿನ್ನ, ಆವಿಷ್ಕರಿಸಲ್ಪಡುತ್ತದೆ. ತೆಗೆದು ಕಸವನ್ನು ಮೂಲೆಗೆ ಬಿಸಾಕಿ ಶುದ್ಧ ಚಿನ್ನವನ್ನು ಜೇಬಿಗಿಳಿಸಿಕೊಳ್ಳುವುದಷ್ಟೇ ನಮ್ಮ ಕೆಲಸ.

ಹಿಟ್ಲರ್ ನ ಕ್ರೌರ್ಯದ ಭಾಗವನ್ನು ಹೊರಗಿಟ್ಟು ನೋಡಿದರೆ ಆತನೊಬ್ಬಮಹಾನ್ ಚಿಂತಕ. ಕಲೆಯಲ್ಲಿ ವಿಪರೀತ ಆಸಕ್ತಿ ಇದ್ದ ಮನುಷ್ಯ. ಚಿಕ್ಕವಯಸ್ಸಿನಲ್ಲೇ ಆತನ ತಂದೆ ಅಲೋಯ್ಸನು ಹಿಟ್ಲರ್ ಕಲೆಯಲ್ಲಿನ ಮುಂದಿನ ಕಲಿಕೆಯನ್ನು ವಿರೋಧಿಸುತ್ತಾನೆ. ತಾಯಿಯ ಮರಣದ ನಂತರ ಆತ ವಿಯೆನ್ನಾಗೆ ತೆರಳುತ್ತಾನೆ. ಅದು 1907ರ ಏಳರ ಸಮಯ. ವಿಯೆನ್ನಾದಲ್ಲಿ ಮತ್ತೆ ಫೈನ್ ಆರ್ಟ್ ಅಕಾಡೆಮಿಯೊಂದಕ್ಕೆ ಅರ್ಜಿ ಹಾಕುತ್ತಾರೆ ಹಿಟ್ಲರ್. ಅದು ಎರಡೆರಡು ಬಾರಿ ತಿರಸ್ಕರಿಸಲ್ಪಡುತ್ತದೆ. ಅಲ್ಲಿನ ನಿರ್ದೇಶಕರೊಬ್ಬರ ಸಲಹೆಯಂತೆ ಆರ್ಕಿಟೆಕ್ಚರ್ ಸ್ಕೂಲಿಗೆ ಅಪ್ಲೈ ಮಾಡುತ್ತಾನೆ. ಆದರೆ ಸರಿಯಾಗಿ ಹೈಸ್ಕೂಲನ್ನೂ ಮುಗಿಸದ ಕಾರಣ ಕನಿಷ್ಟ ಅರ್ಹತೆಗಳೂ ಆತನಿಗಿರುವುದಿಲ್ಲ. ಹತಾಶೆ ಹಿಟ್ಲರ್ ನಲ್ಲಿ ಮನೆಮಾಡುತ್ತದೆ.
1900 ಇಸವಿಯವರೆಗೆ ಎಲ್ಲವೂ ಸರಿಯಾಗಿಯೇ ಇತ್ತು. ತಂದೆ ಪದೇಪದೇ ಕೋಪಿಸಿಕೊಂಡು ಹೊಡೆಯುತ್ತಿದ್ದರೂ ಹಿಟ್ಲರ್ ನಲ್ಲಿ ಒಂದು ನೆಮ್ಮದಿಯಿತ್ತು. ಎಂಥದ್ದೋ ಭರವಸೆಯಿತ್ತು. ಮನಸ್ಸು ಬಿಚ್ಚಿ ಆಡಲು, ಮಾತನಾಡಲು ತಮ್ಮನಿದ್ದ. ಸಾಂತ್ವನ ಹೇಳಲು ಅಮ್ಮ ಕ್ಲಾರ ಇದ್ದಳು. ಆದರೆ ಅಕಸ್ಮಾತಾಗಿ ಸಾವಿರದ ಒಂಬೈನೂರರಲ್ಲಿ ತಮ್ಮ ಎಡ್ಮಂಡ್ ದಡಾರ ರೋಗ ಬಂದು ತೀರಿ ಹೋಗುತ್ತಾನೆ. ಆಗ ಹಿಟ್ಲರ್ ನಿಗೆ ಹನ್ನೊಂದರ ವಯಸ್ಸು. ತಂದೆಯಿಂದ ನೊಂದು ಹೋಗಿದ್ದ ಮನಸ್ಸು ತನ್ನ ತಮ್ಮನ ಅಕಾಲಿಕ ಮರಣ ನೋಡಿ ಮತ್ತಷ್ಟು ಮುದುಡಿ ಹೋಗುತ್ತದೆ. ಹಿಟ್ಲರ್ ಅಂತರ್ಮುಖಿಯಾಗಿ ಬದಲಾಗುತ್ತಾನೆ.

1907 ರಲ್ಲಿ ಅಮ್ಮ ಕ್ಲಾರಾ ಬೆಸ್ಟ್ ಕ್ಯಾನ್ಸರ್ ಗೆ ಬಲಿಯಾಗುತ್ತಾಳೆ. ಆಕೆಯನ್ನು ಉಳಿಸಿಕೊಳ್ಳಲು ಅಷ್ಟಿಷ್ಟು ಪ್ರಯತ್ನಿಸುತ್ತಾನೆ ಹಿಟ್ಲರ್. ಅದು ಸಾಧ್ಯವಾಗುವುದಿಲ್ಲ. ಆಗ ಆತನಿಗೆ 18 ರ ವಯಸ್ಸು. ಆವಾಗಲೇ, ಸಾವಿರದ ಒಂಬೈನೂರ ಮೂರರಲ್ಲಿ ಅಪ್ಪ ಅಲೋಯ್ಸ್ ಹಿಟ್ಲರ್ ತೀರಿಹೋಗಿದ್ದ. ಅಷ್ಟು ಸಣ್ಣ ಪ್ರಾಯದಲ್ಲಿ, ಬೇರೆ ಯಾರ ಸಹಾಯವೂ ಇಲ್ಲದೆ, ಅಪ್ಪನಿಲ್ಲದೆ, ಅಟ್ ಲೀಸ್ಟ್ ಮನೆಯಲ್ಲಿ ಬೇರೆ ಯಾರೊಬ್ಬರೂ ಇಲ್ಲದೆ ಆತ ತಾನೇ ಏನು ಮಾಡಲು ಸಾಧ್ಯವಿತ್ತು? ವಿಧಿ ಆತನ ಪಾಲಿಗೆ ಅತ್ಯಂತ ಕ್ರೂರಿಯಾಗಿತ್ತು. ತನ್ನನ್ನು ಪ್ರೀತಿಸುವ ತನ್ನ ಸರ್ವಸ್ವವಾಗಿದ್ದ ಅಮ್ಮನೂ ಕೂಡ ಇಲ್ಲ ಈ ದಿನ. ಹೀಗೆ ಸಾಲು ಸಾಲು ಸೋಲು-ನೋವುಗಳಿಂದ ಜರ್ಜರಿತನಾದ ಆತನಿಗೆ ಈಗ ಯಾರೂ ಸಹಾಯ ಮಾಡುವವರಿಲ್ಲ. ಬದುಕು ನಡೆಸುವುದೇ ದುಸ್ತರವಾಗುತ್ತದೆ.

ಆಗ ಆತ ಹೊರಡುವುದು ವಿಯೆನ್ನಾಗೆ. ವಿಯನ್ನಾದಲ್ಲಿ ಕೂಲಿ ಕೆಲಸ ಪೈಂಟಿಂಗ್ ಸಹಾಯಕನ ಕೆಲಸ ಮಾಡುತ್ತಾ, ವಾಸಕ್ಕೆ ಸರಿಯಾದ ಜಾಗವಿಲ್ಲದೆ ಬದುಕಬೇಕಾದ ಅನಿವಾರ್ಯತೆ ಉಂಟಾಯಿತು. ಇಂತಹ ಸಂದರ್ಭಗಳಲ್ಲಿ ಕೂಡ ಕಲೆಯ ಮೇಲಿನ ಆಸಕ್ತಿ ಆತನ ಆಸಕ್ತಿ ಕುಗ್ಗಲಿಲ್ಲ. ಆವಾಗಾವಾಗ ಸುತ್ತಮುತ್ತ ನಡೆಯುತ್ತಿದ್ದ ನಾಟಕಗಳನ್ನು ನೋಡಿ ಬರುತ್ತಿದ್ದನಾತ. ಅಷ್ಟಕ್ಕೇ ನೊಂದ ಮನಸ್ಸೊಂದು ಸ್ವಲ್ಪ ತಣ್ಣಗಾಗುತ್ತಿತ್ತು.

ಆವಾಗ ವಿಯೆನ್ನಾದಲ್ಲಿ ಜನಾಂಗೀಯ ಕಲಹ ಮತ್ತು ಅವನ್ನು ಎನ್ ಕ್ಯಾಶ್ ಮಾಡಿಕೊಳ್ಳುವ ರಾಜಕೀಯ ಪರಿಸ್ಥಿತಿಗಳು ಇದ್ದವು. ಹಿಟ್ಲರ್ ವಾಸವಿದ್ದ ಪ್ರದೇಶದಲ್ಲಿ ಜರ್ಮನ್ ರಾಷ್ಟ್ರೀಯತೆಯ ಭಾವನೆ ಪ್ರಬಲವಾಗಿತ್ತು. ಹಿಟ್ಲರ್ ನಲ್ಲಿ ಜನಾಂಗ ದ್ವೇಶದ ಮೊದಲ ಮೊಳಕೆಯಲ್ಲಿ ಮೊಳೆತದ್ದು ವಿಯನ್ನಾದಲ್ಲಿ. ಅದನ್ನು ಮುಂದೆ ಜೈಲಿನಲ್ಲಿದ್ದಾಗ ಬರೆದ ತನ್ನ ‘ ಮೈ ಕೆಂಫ್ ‘ ನಲ್ಲಿ ದಾಖಲಿಸಿದ್ದಾನೆ. 1914 ರಲ್ಲಿ ಹಿಟ್ಲರ ನು ಆಸ್ಟ್ರೋ ಹಂಗರಿಯ ಆರ್ಮಿ ಸೇರಲು ಬಯಸುತ್ತಾನೆ. ಆದರೆ ಆತನನ್ನು ‘ ಮೆಡಿಕಲ್ ಎನ್ ಫಿಟ್ ‘ ಎಂಬ ಟ್ಯಾಗ್ ನೊಂದಿಗೆ ರಿಜೆಕ್ಟ್ ಮಾಡುತ್ತಾರೆ. ಸಾಲು ಸಾಲು ಸೋಲಿನಿಂದ ಆತ ಕಂಗೆಡು ತ್ತಾನೆ. ಆತನಿಗೆ ಆಗ 25 ವರ್ಷ ವಯಸ್ಸು. ಬೇಸರದಿಂದಲೇ ಮ್ಯೂನಿಚ್ ಗೆ ಹಿಂದಿರುಗುತ್ತಾನೆ ಹಿಟ್ಲರ್.

ಆದರೆ 1914 ರಲ್ಲಿ ಮೊದಲ ಮಹಾಯುದ್ಧವು ಬಿರಿದುಕೊಂದಾಗ ಮ್ಯೂನಿಚ್ ನಲ್ಲಿ ಬವೇರಿಯನ್ ಆರ್ಮಿಗೆ ಸೇರಿಕೊಳ್ಳುತ್ತಾನೆ ಹಿಟ್ಲರ್. ಮೂಲತ: ಆಸ್ಟ್ರಿಯಾದವನಾದ ಹಿಟ್ಲರನಿಗೆ ಅಲ್ಲಿ ಸೇರಿಸಿಕೊಳ್ಳುವ ಚಾನ್ಸ್ ಇರಲಿಲ್ಲ. ಆದರೆ ಯಾವುದೋ ಆಡಳಿತಾತ್ಮಕ ತಪ್ಪಿನಿಂದಾಗಿ ಹಿಟ್ಲರ್ ಬವೇರಿಯನ್ ಆರ್ಮಿಯಲ್ಲಿ ಸೇರಿಕೊಳ್ಳುತ್ತಾನೆ.
ಅಷ್ಟೇ ! ಸಿಕ್ಕ ಅವಕಾಶವನ್ನು ಬಿಡದೆ ಬಾಚಿಕೊಳ್ಳುತ್ತಾನೆ ಹಿಟ್ಲರ್. ಆರ್ಮಿಯಲ್ಲಿ ಆತನಿಗೆ ನೀಡಿದ್ದು ಯುದ್ಧದಲ್ಲಿ ಪಾಲ್ಗೊಳ್ಳುವ ಸೈನಿಕರಿಗೆ ಆಹಾರ ಸರಂಜಾಮು ಸಾಗಿಸುವ ಕೆಲಸ. ಉತ್ಸಾಹಿ ಯುವಕ ತುದಿಗಾಲಿನಲ್ಲಿ ನಿಂತು ಕೆಲಸ ಪೂರೈಸುತ್ತಾನೆ. ಆತನ ಕೆಲಸ ನೋಡಿದ ಆತನ ಮೇಲಧಿಕಾರಿಗಳು ಆತನಿಗೆ ‘ಸೆಕೆಂಡ್ ಕ್ಲಾಸ್ ಕ್ರಾಸ್’ ನೀಡಿ ಗೌರವಿಸುತ್ತಾರೆ.

ಇದರ ಮಧ್ಯೆ 1916 ಶೆಲ್ಲೊಂದರಿಂದ ಸಿಡಿದ ಗುಂಡು ಆತನ ಎಡ ತೊಡೆಗೆ ತಗುಲಿ ಆತ ಆಸ್ಪತ್ರೆ ಸೇರಬೇಕಾಯಿತು. ಎರಡು ತಿಂಗಳು ಆಸ್ಪತ್ರೆಯಲ್ಲಿದ್ದು ಮತ್ತೆ ಸೈನ್ಯ ಸೇರಿಕೊಳ್ಳುತ್ತಾನೆ. ಮತ್ತೆ ಮೊದಲ ಮೆಡಲ್ಲು ಸಿಕ್ಕ ನಾಲ್ಕು ವರ್ಷಗಳ ನಂತರ 1918 ನ ಆಗಸ್ಟ್ ತಿಂಗಳಲ್ಲಿ ‘ಫಸ್ಟ್ ಕ್ಲಾಸ್ ಕ್ರಾಸ್’ ಮೆಡಲ್ಲು ಪಡೆದುಕೊಳ್ಳುತ್ತಾನೆ ಹಿಟ್ಲರ್. ಅದೇ ವರ್ಷ ಮೇ ತಿಂಗಳಿನಲ್ಲಿ ಮತ್ತೆ ‘ ಬ್ಲ್ಯಾಕ್ ವೂನ್ಡ್ ಬ್ಯಾಡ್ಜು’ ಗಳಿಸುತ್ತಾನೆ. 1918 ರಲ್ಲಿ ಮಸ್ಟರ್ಡ್ ಗ್ಯಾಸ್ ಗೆ ಬಲಿಯಾಗಿ ತಾತ್ಕಾಲಿಕವಾಗಿ ಅಂಧನಾಗಿ ಹೋಗುತ್ತಾನೆ ಹಿಟ್ಲರ್. 1918 ನವಂಬರ್ ಹನ್ನೊಂದಕ್ಕೆ ಮೊದಲ ಮಹಾಯುದ್ಧ ಕೊನೆಗೊಳ್ಳುತ್ತದೆ. ಆ ಸಮಯದಲ್ಲಿ ಆತ ಆಸ್ಪತ್ರೆಯಲ್ಲಿರುತ್ತಾನೆ. ತೀವ್ರ ಗಾಯಗೊಂಡಿದ್ದ ಹಿಟ್ಲರನಿಗೆ ಜರ್ಮನಿಗೆ ಯುದ್ಧದಲ್ಲಿ ಸೋಲಾಗಿದೆ ಆನಂತರ ತಿಳಿದು ವಿಪರೀತ ದುಃಖವಾಗುತ್ತದೆ.

ಜರ್ಮನಿಯು ಯುದ್ಧದಲ್ಲಿ ಸೋತು ಹೋಗಿದ್ದರೂ ಯುದ್ಧವು ಆತನಿಗೆ ಬಹುದೊಡ್ಡ ಅನುಭವವನ್ನು ಕಲಿಸಿತ್ತ. ಯುದ್ಧದಲ್ಲಿ ಆತ ತೊಡಗಿಕೊಂಡ ರೀತಿಗೆ ಎಲ್ಲೆಡೆಯಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿತ್ತು. ಆತನ ಧೈರ್ಯದ ಬಗ್ಗೆ ಎಲ್ಲರೂ ಮಾತನಾಡಲು ಪ್ರಾರಂಭಿಸಿದ್ದರು. ಕೊರಳಲ್ಲಿ ಕೇವಲ ನಾಲ್ಕು ವರ್ಷಗಳಲ್ಲಿ ಮೂರು ಸಾಧನೆಯ ಬ್ಯಾಡ್ಜುಗಳು ನೇತಾಡಲಾರಂಭಿಸಿತ್ತು. ಹತಾಶೆ ಸೋಲಿನಿಂದ ಮುಳುಗಿದ್ದ ಹಿಟ್ಲರನಿಗೆ ಹುಲ್ಲುಕಡ್ಡಿಯೊಂದು ದೊರೆತ್ತಿತ್ತು.

ಅದುವೇ ಯುದ್ಧ !

ಯುದ್ಧ ಮತ್ತು ಅದರಿಂದ ಸೇರಿಕೊಂಡ ಜರ್ಮನ್ ರಾಷ್ಟ್ರೀಯತೆಯ ಪರಿಕಲ್ಪನೆ ಮತ್ತು ಯುದ್ಧದಲ್ಲಿ ಆತ ಕಲಿತ ಪಾಠ ಮತ್ತು ವಿಯೆನ್ನಾದಲ್ಲಿ ಕಂಡ ರಾಜಕೀಯ ವಾತಾವರಣ ಆತನಲ್ಲಿ ಒಂದು ಹೊಸ ರಾಜಕೀಯ ಸಿದ್ಧಾಂತಕ್ಕೆ ದಾರಿ ಮಾಡಿಕೊಟ್ಟಿದ್ದು. ಆ ಕಾಲಕ್ಕೆ ಜರ್ಮನ್ನರ ಯುದ್ಧದ ಸೋಲಿಗೆ ಕಾರಣಗಳೇನು ಎಂಬುದರ ಬಗ್ಗೆ ಚರ್ಚೆ ನಡೆಯುತ್ತಿತ್ತು. ಉಳಿದ ಜರ್ಮನ್ ರಾಷ್ಟ್ರೀಯವಾದಿಗಳಂತೆಯೇ ಹಿಟ್ಲರನೂ ಬಲವಾಗಿ ನಂಬಿದ್ದ : ಯುದ್ಧದ ಸೋಲಿಗೆ ಜರ್ಮನರ ಸೈನ್ಯದಲ್ಲಿದ್ದ ಯಹೂದಿಗಳು ಮತ್ತು ಕೆಲವರು ಕಾರಣ. ಅವರು ಬೆನ್ನ ಹಿಂದೆ ಮಾಡಿದ ‘ ಸ್ಟ್ಯಾಬ್ ಇನ್ ದಿ ಬ್ಯಾಕ್ ‘ ಎಂದು. ಆ ನಂಬಿಕೆ ಬಲವಾಗುತ್ತಲೇ ಯಹೂದಿಗಳ (Jewವರ ) ಬಗ್ಗೆ ತೀವ್ರ ತೆರನಾದ ದ್ವೇಷ ಹಿಟ್ಲರನಲ್ಲಿ ಮೂಡಿತ್ತು.

ಮೊದಲ ಮಹಾಯುದ್ಧದ ನಂತರ ಮ್ಯೂನಿಚ್ಗೆ ಹಿಂದಿರುಗಿದ ಹಿಟ್ಲರ್ ನು ತನ್ನ ಎಂದಿನ ಸೈನ್ಯದಲ್ಲಿ ಕಾರ್ಯನಿರ್ವಹಿಸಲಾರಂಬಿಸಿದನು. ಆತನಿಗೆ ಆ ಸಮಯದಲ್ಲಿ ಸಹ ಸೈನಿಕರನ್ನು ಹುರಿದುಂಬಿಸಿ ಜರ್ಮನ್ ವರ್ಕರ್ಸ್ ಪಾರ್ಟಿ ಗೆ ( DAP ) ಸೇರಿಸುವ ಕೆಲಸವನ್ನು ವಹಿಸಲಾಯಿತು. 1919 ರ ಸೆಪ್ಟೆಂಬರ್ 12 ರಂದು ನಡೆದ DAP ಸಭೆಯೊಂದರಲ್ಲಿ ಹಿಟ್ಲರ್ ನ ಮಾತಿನ ಮೋಡಿಗೆ ಒಳಗಾದ ಪಾರ್ಟಿಯ ಅಧ್ಯಕ್ಷರಾಗಿದ್ದ ಆಂಟನ್ ಡ್ರೆಕ್ಸ್ಲರ್ ನು ಹಿಟ್ಲರ್ ನ ಕೈಗೊಂಡು ಕರಪತ್ರವನ್ನಿಟ್ಟು ಅದರ ಪ್ರಚಾರಕ್ಕೆ ತೊಡಗುವಂತೆ ಕೋರಿಕೊಂಡ. 1919 ರ ಸೆಪ್ಟೆಂಬರಿನಲ್ಲಿ ಮೊದಲ ಬಾರಿಗೆ ಯಹೂದಿಗಳನ್ನು ಪೂರ್ತಿ ತೊಡೆದು ಹಾಕುವುದೇ ತಮ್ಮ ಗುರಿ ಎಂದು ಘೋಷಿಸಿಬಿಟ್ಟ ಹಿಟ್ಲರ್. ಹಿಟ್ಲರ್ ನಿಗೆ ಆಗ ಪಾರ್ಟಿಯ ಸ್ಥಾಪಕರಲ್ಲೊಬ್ಬನಾದ ಎಕಾರ್ಟ್ ನ ಮೆಂಟರಿಂಗ್ ಸಿಕ್ಕಿತ್ತು. ವಿಫುಲ ಅವಕಾಶಗಳ ಬಾಗಿಲು ಆತನಿಗೆ ತೆರೆದು ಕೊಂಡಿತು. ಮುಂದೆ ಮಿಲಿಟರಿ ಬಿಟ್ಟ ಹಿಟ್ಲರ್ ನು ಪೂರ್ಣ ಪ್ರಮಾಣದಲ್ಲಿ ಪಾರ್ಟಿಯ ಕಾರ್ಯಕ್ರಮದಲ್ಲಿ ಪಾಲ್ಗೊಂಡ. ಪಾರ್ಟಿಯ ಬ್ಯಾನರನ್ನು ಸ್ವತ: ಕುಳಿತು ಡಿಸೈನ್ ಮಾಡಿದ. ನಮ್ಮ ಸ್ವಸ್ತಿಕ್ ಸಿಂಬಲ್ ಅನ್ನು ಬ್ಯಾನರನ ಲೋಗೋ ಆಗಿಸಿದ. ಅದಕ್ಕೆ ಆತನಲ್ಲಿದ್ದ ಸಹಜ ಕಲಾ ಪ್ರತಿಭೆ ಸಹಾಯ ಮಾಡಿತ್ತು.

ಹಿಟ್ಲರ್ ದಿ ಕ್ರೌಡ್ ಪುಲ್ಲರ್

ಇಷ್ಟರಲ್ಲಾಗಲೇ ಜನರ ನಾಡಿಮಿಡಿತ ಹಿಟ್ಲರನಿಗೆ ಅರ್ಥವಾಗಿ ಹೋಗಿತ್ತು. ಜನರ ಭಾವನೆಗಳನ್ನು ಎನ್ ಕ್ಯಾಶ್ ಮಾಡುವುದರಲ್ಲಿ ಆತ ನಿಷ್ಣಾತನಾಗಿದ್ದ. ಆತನ ಭಾಷಣಗಳು ಜನರನ್ನು ಹುಚ್ಚೆಬ್ಬಿಸಿತ್ತಿದ್ದವು. 1921 ರಲ್ಲಿ ಹಿಟ್ಲರ್ ಮತ್ತು ಆತನ ಮೆಂಟರ್ ಎಕಾರ್ಟ್ ಪಾರ್ಟಿಗೆ ಧನ ಸಹಾಯ ಪಡೆದುಕೊಳ್ಳಲು ಬರ್ಲಿನ್ ಗೆ ತೆರಳಿದ್ದ ಸಮಯದಲ್ಲಿ ಪಾರ್ಟಿಯಲ್ಲಿ ಆಂತರಿಕ ಭಿನ್ನಮತ ಉಂಟಾಗಿ ಪಾರ್ಟಿಯ ಹಲವು ಸದಸ್ಯರುಗಳು ತಮ್ಮವಿರೋಧಿ ಬಣವಾದ ಜರ್ಮನ್ ಸೋಷಲಿಸ್ಟ್ ಪಾರ್ಟಿಯ ಜತೆ ವಿಲೀನಕ್ಕೆ ಒತ್ತಾಯಿಸಿದ್ದರು. ಮನ ನೊಂದ ಹಿಟ್ಲರ್ ಕೋಪದಲ್ಲಿ ರಾಜೀನಾಮೆ ನೀಡಿ ಪಾರ್ಟಿಯಿಂದ ಹೊರಬಂದ. ಆದರೆ ಆ ವೇಳೆಗಾಗಲೇ ಹಿಟ್ಲರ್ನಲ್ಲಿರುವ ನಾಯಕನನ್ನು ಗುರುತಿಸಿತ್ತು NSDAP ( ಹಿಂದೆ DAP ಆಗಿತ್ತು ). ಇದು ಈಗ ತಾನೇ ಕಣ್ಣು ಬಿಡುತ್ತಿರುವ ಪಾರ್ಟಿ. ಇಂತಹ ಸಮಯದಲ್ಲಿ ಪಾರ್ಟಿಯನ್ನು ಬೆಳೆಸಬಲ್ಲ ಆಯಸ್ಕಾಂತೀಯ ಗುಣಗಳಿರುವ ವ್ಯಕ್ತಿಯನ್ನು ಕಳೆದುಕೊಳ್ಳುವುದು ಯಾರಿಗೂ ಇಷ್ಟವಿರುವುದಿಲ್ಲ. ಆದರೆ ಹಿಟ್ಲರನು ಸುಮ್ಮನೆ ವಾಪಸ್ಸು ಬರಲು ಒಪ್ಪಿಕೊಳ್ಳುವುದಿಲ್ಲ. ಪಾರ್ಟಿಯ ಅಧ್ಯಕ್ಷನನ್ನಾಗಿ ಮಾಡಿದರೆ ತಾನು ಪಾರ್ಟಿಗೆ ವಾಪಸ್ಸು ಬರುತ್ತೇನೆಂದು ದೊಡ್ಡ ಬೇಡಿಕೆಯನ್ನೇ ಇಡುತ್ತಾನೆ ಹಿಟ್ಲರ್. ಆತನ ಅದೃಷ್ಟ ಖುಲಾಯಿಸಿತ್ತು. ಪಾರ್ಟಿ ಅದನ್ನು ಒಪ್ಪಿಕೊಳ್ಳುತ್ತದೆ. ಮುಂದಿನದ್ದು ಬಹುದೊಡ್ಡ ಇತಿಹಾಸಕ್ಕೆ ಮುನ್ನುಡಿಯಾಗುತ್ತದೆ. ಮನುಷ್ಯ ಕುಲ ಕಂಡು ಕೇಳರಿಯದ ಮಾರಣಹೋಮಕ್ಕೆ ನಾಂದಿಯಾಗುತ್ತದೆ.

ಇಷ್ಟಕ್ಕೂನಾನು ಬರಲು ಹೊರಟದ್ದು ಆತನ ಕ್ರೌರ್ಯದ ಬಗ್ಗೆ ಅಲ್ಲ. ಆ ಕ್ರೌರ್ಯದ ಹಿಂದಿರುವ ಕಾರಣವನ್ನು ಹುಡುಕುವ ಪ್ರಯತ್ನ ಮತ್ತು ಆತನಲ್ಲಿ ಇರಬಹುದಾದ ಪಾಸಿಟಿವ್ ಮನಸ್ಸತ್ವವನ್ನು ತಿಳಿದುಕೊಳ್ಳುವ ಪ್ರಯತ್ನ.

ಬಾಲ್ಯದಲ್ಲಿಯೇ ಘಾಸಿಗೊಂಡ ಮನಸ್ಸಿನಿಂದ ಆಗಿ ಆತ ಅಂತರ್ಮುಖಿ ಬದಲಾಗಿದ್ದ. ತನ್ನ ತಂದೆಯಿಂದ ಸರಿಯಾದ ಪ್ರೀತಿಯನ್ನು ಪ್ರೀತಿ ಇಲ್ಲದೆ ವಂಚಿತಗಿದ್ದ. ಅಂತಹಾ ಅಪ್ಪ ಬಹು ಬೇಗನೆ ತೀರಿ ಹೋಗಿದ್ದ. ಅಪ್ಪನ ಹಿಂದೆನೇ ತನ್ನ ತಮ್ಮಎಡ್ಮ೦ಡ್ ಕಾಲವಾಗಿ ಹೋಗಿದ್ದ. ತಮ್ಮನನ್ನ ಅನುಸರಿಸಿ ಅಮ್ಮ ಕ್ಯಾನ್ಸರ್ ಗೆ ಬಲಿಯಾಗಿದ್ದಳು. ಬಾಲ್ಯದಿಂದಲೇ ಘಾಸಿಗೊಂಡ ಮನಸ್ಸಿನಿಂದಾಗಿ ಆತ ಅಂತರ್ಮುಖಿಯಾಗಿ ಬದಲಾಗಿದ್ದ. ಆದ್ದರಿಂದ ಡಿಸ್ಟರ್ಬ್ಡ್ ಚೈಲ್ಡ್ ಹುಡ್ ಆತನದಾಗಿತ್ತು.
ಅಸ್ಥಿರ ಬಾಲ್ಯ ಆತನಲ್ಲಿ ಸಿನಿಕತನವನ್ನು ಹುಟ್ಟುಹಾಕಿತ್ತು. ಯಾವುದನ್ನು ಮಾಡಿದರೂ ಅದನ್ನು ಎಸ್ಟ್ರೀಮ್ ಆಗಿ ಮಾಡುತ್ತಿದ್ದ. ಗುರಿ ಮಾತ್ರವೇ ಮುಖ್ಯ, ಸಾಗುವ ದಾರಿಯಲ್ಲವೆಂದು ಆತ ನಂಬಿದ್ದ. ತಾನು ನಂಬಿದ್ದನ್ನು ಪರಿಪೂರ್ಣವಾಗಿ ಆಚರಣೆಗೆ ತರುತ್ತಿದ್ದ.
ಅತ್ಯಂತ ಚಿಕ್ಕ ವಯಸ್ಸಿಗೇ, ಅಂದರೆ ತನ್ನ 25 ನೆಯ ಚಿಕ್ಕವಯಸ್ಸಿನಲ್ಲಿಯೇ, ಒಂದನ್ನಂತೂ ಆತ ಅರ್ಥ ಮಾಡಿಕೊಂಡಿದ್ದ. ಅದು ‘ ಯಾರು ಯುವಕರ ಮನಸ್ಸನ್ನು ಗೆಲ್ಲುತ್ತಾರೋ ಅಥವಾ ಭವಿಷ್ಯವನ್ನು ಗೆಲ್ಲುತ್ತಾರೆ ‘ ಎಂದು ಅರ್ಥಮಾಡಿಕೊಂಡಿದ್ದ. ಆತನಿಗೆ ಡಿಫೆನ್ಸಿವ್ ಆಗಿ ಆಡುವುದು ಗೊತ್ತಿರಲಿಲ್ಲ. ಡಿಫೆನ್ಸಿವ್ ದೌರ್ಬಲ್ಯವೆಂದು ಆತನ ಅನಿಸಿಕೆಯಾಗಿತ್ತು. ಆಕ್ರಮಣಶೀಲತೆಯನ್ನು ತನ್ನ ಮೊದಲ ಆಯ್ಕೆಯಾಗಿ ತೆಗೆದುಕೊಂಡಿದ್ದ. ಮಾತಿನ ಮಹತ್ವ ಆತನಿಗೆ ಬಹುಬೇಗ ಅರ್ಥವಾಗಿತ್ತು. ಮಾತನ್ನು ಬಹಳ ಸಮಯೋಚಿತವಾಗಿ ಮತ್ತು ಪ್ರಖರ ಆಯುಧವಾಗಿ ಬಳಸುತ್ತಿದ್ದ. ಪದಗಳೇ ಹೊಸ ದಿಗಂತಕ್ಕೆ ನೆಗೆಯಲು ಸೇತುವೆಗಳು ಎಂದು ಆತ ಹೇಳುತ್ತಿದ್ದ. ಸುಳ್ಳನ್ನು ಪದೇ ಪದೇ ಹೇಳಿದರೆ, ಜೋರಾಗಿ ಒತ್ತಿ ಒತ್ತಿ, ಮತ್ತೆ-ಮತ್ತೆ, ದೊಡ್ಡದಾಗಿ ಹೇಳಿದರೆ ಅದನ್ನು ಜನ ನಂಬುತ್ತಾರೆ ಎಂದು ತನ್ನ ಜೀವನದಲ್ಲಿ ಪ್ರಯೋಗ ಮಾಡಿ ತಿಳಿದುಕೊಂಡಿದ್ದ. ಒಂದು ದೊಡ್ಡ ಸುಳ್ಳನ್ನು ದೊಡ್ಡ ಸಮುದಾಯ ಬಹಳ ಬೇಗ ನಂಬುತ್ತದೆ ಸಣ್ಣ ಜನರ ಜನರ ಗುಂಪಿಗಿಂತ ಎನ್ನುವುದು ಆತನ ಖಚಿತ ನಂಬಿಕೆಯಾಗಿತ್ತು.

ಇಷ್ಟೆಲ್ಲಾ ಪ್ರಕಾರ ಬುದ್ಧಿಮತ್ತೆ, ಅದನ್ನು ಮಾತಾಗಿಸಿಕೊಳ್ಳುವ ಕಲೆ, ಮಾತಿಗೆ ಭಾವನೆಗಳನ್ನು ಮಿಳಿತಗೊಳಿಸಿ ಅದನ್ನು ಜನರೊಂದಿಗೆ ರಿಲೇಟ್ ಮಾಡುವ ಪರಿಣತಿ, ಭಾವನೆಗಳನ್ನೇ ಜೀವಿಸಿ ಮಾತಾಡುವ ಕಲೆ, ಎಲ್ಲ ಇದ್ದೂ ಅಷ್ಟೊಂದು ಪ್ರಮಾಣದ ಜನ ಸಮುದಾಯದ ಬೆಂಬಲ – ಮನಸ್ಸು ಗೆದ್ದುಕೊಂಡಿದ್ದರೂ ಆತನದನ್ನು ಒಳ್ಳೆಯದಕ್ಕೆ ಬಳಸಲಿಲ್ಲ. ಆತನಿಗೆ ಒಳ್ಳೆಯ ಸಜೆಶನ್ ನೀಡುವ ಗೆಳೆಯರ ಅಭಾವವಿತ್ತು. ಕೊಟ್ಟ ಸಲಹೆಗಳನ್ನು ಬ್ಯಾಲೆನ್ಸ್ಡ್ಆಗಿ ತೂಗಿ ನೋಡುವ ವ್ಯವಧಾನ ಆತನಲ್ಲಿ ಮಾಯವಾಗಿತ್ತು.

ಯಾಕೆಂದರೆ ಆತನಿಗೆ ಅರ್ಜೆಂಟಾಗಿ ಜಗತ್ತನ್ನೇ ಗೆಲ್ಲಬೇಕಿತ್ತು. ಅದು ಒಂದು ಕೋಟಿ ಜನರ ಮರಣವನ್ನು ಬೇಡಿತ್ತು ! ಮುಂದುವರೆಯುವುದು…….

ಸುದರ್ಶನ್ ಬಿ. ಪ್ರವೀಣ್, ಬೆಳಾಲು

Leave A Reply