ಇಂಟೆರೆಸ್ಟಿಂಗ್ ಇತಿಹಾಸ | ಮೂವತ್ತೆರಡಕ್ಕೇ ಮುಗಿದುಹೋಯಿತು ಜಗದೇಕ ವೀರನ ಕಥೆ

ಇದು ಜಗತ್ತನ್ನೇ ಗೆದ್ದ ಅಲೆಕ್ಸ್ ಅಲಿಯಾಸ್ ಅಲೆಕ್ಸಾಂಡರ್ ದ ಗ್ರೇಟ್ ನ ಕಥೆ !

ಆತನದು ಸಾಮ್ರಾಜ್ಯಶಾಹಿಗಳ ವಂಶ. ಅಧಿಕಾರಕ್ಕೆ ಏರುವಾಗ ಆತನಿಗಿನ್ನೂ ಇಪ್ಪತ್ತರ ನಿಗಿ ನಿಗಿ ವಯಸ್ಸು. ವಿದ್ಯಾರ್ಥಿಯಾಗಿರುವಾಗಲೇ ತಂದೆ ಎರಡನೆಯ ಫಿಲಿಪ್ಪನ ಹತ್ಯೆಯಾಗುತ್ತದೆ. ಸಹಜವಾಗಿ ವಿದ್ಯೆಯನ್ನು ಅಲ್ಲಿಗೆ ನಿಲ್ಲಿಸಿ ಬರುತ್ತಾನೆ ಅಲೆಕ್ಸಾಂಡರ್.

ಮುಂದೆ ಕಂಡು ಬರುವುದೇನಿದ್ದರೂ ನಿರಂತರವಾಗಿ ಹಿಂಗಾಲು ಎಗರಿಸಿ ಎದೆಯುಬ್ಬಿಸಿ ಕೆನೆಯುತ್ತಾ ಓಡುವ ಆತನ ಕುದುರೆಯ ಖುರಪುಟದ ಸದ್ದು. ಆತನೊಂದಿಗೆ ಒಮ್ಮನಸ್ಸಿನಿಂದ ಹಿಂಬಾಲಿಸುವ ಸೈನ್ಯದ ಘರ್ಜನೆ. ಯುದ್ಧರಂಗದಲ್ಲಿ ಬೀಸುವ ಖಡ್ಗ ಈಟಿಗಳ ಸುಯ್ಲು. ಮತ್ತೆಂದೂ ನಿಲ್ಲದ ನಿರಂತರ ಆಕ್ರಂದನ !

ಅಲೆಕ್ಸಾಂಡರ್ ತಂದೆ ಎರಡನೆಯ ಫಿಲಿಪ್ಪ ಆ ಕಾಲಕ್ಕಾಗಲೇ ಬೃಹತ್ ಸೈನ್ಯದ ಅಧಿಪತಿಯಾಗಿದ್ದ ಅತ್ಯಂತ ಸುರಕ್ಷಿತ ಮತ್ತು ಅನುಭವಸ್ಥ ಸೈನ್ಯ ಕಟ್ಟಿದ್ದ. ತನ್ನ ತಂದೆಯಿಂದ ಅಧಿಕಾರವನ್ನು ಪಡೆಯುತ್ತಲೇ (ಆತನ ಸಾವಿನ ನಂತರ) ತನ್ನ ಸಾಮ್ರಾಜ್ಯ ವಿಸ್ತರಣೆಯ ತೊಡಗುತ್ತಾನೆ. ಆದರೆ ತಂದೆಯ ಸಾವಿನ ನಂತರ ಅಧಿಕಾರ ಪಡೆಯುವುದು ಅಷ್ಟು ಸುಲಭದ್ದಾಗಿರಲಿಲ್ಲ. ಮೆಸಡೋನಿಯನ್ ರಾಜಮನೆತನದಲ್ಲಿ ಬೇರೆ ಸ್ಪರ್ಧಿಗಳಿದ್ದರು. ತನ್ನ ಅಪ್ಪನ ಇನ್ನೊಂದು ಹೆಂಡತಿಯ ಮಗನೂ ಕೂಡ ಇದ್ದ. ಆದ್ರೆ, ಅಲೆಕ್ಸಾ೦ಡರನು ತನಗೆ ಅಡ್ಡಿಯಾಗಬಹುದಾದವರನ್ನು ನಿರ್ದಯವಾಗಿ ಒಬ್ಬೊಬ್ಬರಾಗಿ ಕೊಲ್ಲುತ್ತಾ ಬಂದ. ಹಾಗೆ ತನ್ನ ಅಡೆ ತಡೆಗಳನ್ನು ನಿವಾರಿಸಿದ.

ಅಲೆಕ್ಸ್ ನ ಅಪ್ಪ ಫಿಲಿಪ್ ನ ಬಗ್ಗೆ ಒಂದಷ್ಟು ಮಾತು

ಫಿಲಿಪ್ ನು ಅಸೆಮೆಡಿಸ್ ಸಾಮ್ರಾಜ್ಯದ ದೊರೆ. ಅದು ಪಶ್ಚಿಮ ಏಷ್ಯಾದಲ್ಲಿ ಸಿಪ್ರಸ್ ದೊರೆಯಿಂದ ಮೊದಲು ಸ್ಥಾಪಿಸಲ್ಪಟ್ಟಿದ್ದ ಪ್ರಾಚೀನ ಇರಾನಿಯನ್ ಸಾಮ್ರಾಜ್ಯ. (ಮೊದಲ ಪರ್ಷಿಯನ್ ಸಾಮ್ರಾಜ್ಯವಾಗಿತ್ತು)
ಪ್ರಾಚೀನ ಇತಿಹಾಸಕಾರ ಡಿಯೋಡೊರಸ್ ನ ಪ್ರಕಾರ ಫಿಲಿಪ್ಪ ಮತ್ತು ಪ್ಯಾಸನ್ಯಸ್ ಆಫ್ ಒರೆಸ್ಟಿಸ್ ( ಮುಂದೆ ಇವನನ್ನು ಬರಿಯ ಒರೆಸ್ಟಿಸ್ ಎಂದು ಕರೆಯೋಣ. ಏಕೆಂದರೆ ಮತ್ತೊಬ್ಬಪ್ಯಾಸನ್ಯಸ್ ಹೆಸರಿನವನು ಬರುತ್ತಾನೆ ) ಪರಸ್ಪರ ಪ್ರೀತಿಸುತ್ತಿದ್ದರು. ಗಂಡು ಗಂಡು ಪ್ರೀತಿಸುವುದು ಎಂದು ಆಶ್ಚರ್ಯಪಡಬೇಡಿ. ಈ ದಿನದ “ಗೇ ” ಅಂತ ಕರೆಯಲ್ಪಡುವ ಮನಸ್ಥಿತಿಯವರು ಆ ಕಾಲಕ್ಕೂ, ಕ್ರಿಸ್ತ ಪೂರ್ವ 339 ರ ಸುಮಾರಿಗೂ ಇದ್ದರು. (ಬಹುಶ ಅದರ ಹಿಂದೆನೂ ಇದ್ದಿರಬಹುದು. ಈಗ ಬಿಡಿ ತುಂಬಾ ಜನ ಸಿಗುತ್ತಾರೆ ) ಒರೆಸ್ಟಿಸ್ ಫಿಲಿಪ್ಪನ ಖಾಸಗಿ ಅಂಗರಕ್ಷಕರಲ್ಲಿ ಒಬ್ಬನು. ಕಾಲಾನುಕ್ರಮದಲ್ಲಿ ಫಿಲಿಪ್ಪನು ಒರೆಸ್ಟಿಸ್ ನ ಪ್ರೇಮದಿಂದ ವಿಮುಖನಾಗುತ್ತಾನೆ ಮತ್ತು ಮತ್ತೊಬ್ಬನೊಂದಿಗೆ ಪ್ರೀತಿ ಶುರುವಿಟ್ಟುಕೊಂಡಿದ್ದ. ಆತನ ಹೆಸರು ಕೂಡ ಪ್ಯಾಸನ್ಯಸ್. ಈ ಪ್ಯಾಸನ್ಯಸ್ ನು ಫಿಲಿಪ್ಪ ನ ಸೈನ್ಯದ ಜನರಲ್ ಆಗಿದ್ದ ಅಟ್ಟುಲಸ್ ಗೆ ತುಂಬಾ ಆತ್ಮೀಯ ನಾಗಿದ್ದ.

ತನ್ನ ಪ್ರೀತಿಯನ್ನು ದೂರಮಾಡಿದ ಫಿಲಿಪ್ ನ ಮೇಲೆ ಬೇಸರವೂ ಮತ್ತು ಪ್ಯಾಸನ್ಯಸ್ ನ ಮೇಲೆ ಕೋಪವೂ ಉಂಟಾಗಿತ್ತು ಒರೆಸ್ಟಿಸ್ ಗೆ. ಒಂದು ದಿನ ತುಂಬಿದ ಜನರಿರುವಲ್ಲಿ ಒರೆಸ್ಟಿಸ್ ನು ಫಿಲಿಪ್ಪ ನ ಜೊತೆಗಿನ ಸಂಬಂಧದ ವಿಚಾರವಾಗಿ ಪ್ಯಾಸನ್ಯಸ್ ನ್ನು ನಿಂದಿಸುತ್ತಾನೆ. ಈ ಟೀಕೆಯನ್ನು ಕೇಳಿದ ಪ್ಯಾಸನ್ಯಸ್ ಗೆ ತುಂಬಾ ದುಃಖವಾಗುತ್ತದೆ. ಅಲ್ಲದೆ,ಇದರಿಂದ ತುಂಬಾ ಆತ್ಮೀಯ ಜನರಲ್ ಅಟ್ಲಸ್ ನ ಗೌರವವೂ ಕಡಿಮೆಯಾಗಬಾರದು ಎಂದು ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ.

ತನ್ನ ಆತ್ಮೀಯ ಮಿತ್ರ ಮತ್ತು ಸಹವರ್ತಿ ಪ್ಯಾಸನ್ಯಸ್ ಸಾವಿನಿಂದ ಜನರಲ್ ಅಟ್ಟುಲಸ್ ಕ್ರುದ್ಧನಾಗುತ್ತಾನೆ. ಆದರೆ ಅವಕಾಶಕ್ಕಾಗಿ ಕಾದು ಕುಳಿತುಕೊಳ್ಳುತ್ತಾನೆ. ಒಂದು ದಿನ ದೊರೆ ಫಿಲಿಪ್ಪನು ಕೊಡಮಾಡಿದ ಸಂಭ್ರಮಾಚರಣೆಯ ಸಂದರ್ಭದಲ್ಲಿ ಅಟ್ಟುಲಸ್ ನು ಒರಿಸ್ಟಿಸ್ ನನ್ನ ಕುಡಿದಿದ್ದಾಗ ರೇಪ್ ಮಾಡುತ್ತಾನೆ. ಆದರೆ ಆಶ್ಚರ್ಯ ಏನೆಂದರೆ,ಈ ವಿಷಯ ಫಿಲಿಪ್ಪನ ಗಮನಕ್ಕೆ ಬಂದಿದ್ದರೂ ಅದನ್ನು ಆತ ಗಣನೆಗೆ ತೆಗೆದುಕೊಳ್ಳುವುದಿಲ್ಲ. ತಪ್ಪಿತಸ್ಥರನ್ನು ಶಿಕ್ಷಿಸುವುದಿಲ್ಲ. ಆದರೆ ಒರಿಸ್ಟಿಸನಿಗೆ ಪರಿಹಾರಾರ್ಥವಾಗಿ ಎಂಬಂತೆ – ಸೊಮ್ಯಾಟೊಫಿಲಾಸ್-ಅಂದರೆ ಮುಖ್ಯ ಅಂಗರಕ್ಷಕನ ಸ್ಥಾನ ನೀಡಿ ಪ್ರಮೋಟ್ ಮಾಡುತ್ತಾನೆ.

ಆದರೆ ಮನಸ್ಸುಒರಿಸ್ಟಿಸ್ ನ ಮನಸ್ಸು ಘಾಸಿಗೊಂಡಿರುತ್ತದೆ. ಅದೊಂದು ದಿನ ಫಿಲಿಪ್ಪನ ಮತ್ತು ಒಲಿಂಪಿಯಾಳ ಮಗಳು ಕ್ಲಿಯೋಪಾತ್ರಾಳ ಮದುವೆ ದಿನ ತನ್ನ ಮಾಜಿ ಪ್ರಿಯಕರ, ದೊರೆ ಫಿಲಿಪ್ಪನನ್ನು ಒರಿಸ್ಟಿಸ್ ನು ಹತ್ಯೆ ಮಾಡುತ್ತಾನೆ. ಒರಿಸ್ಟಿಸ್ ಓಡಿಹೋಗಿ ತಪ್ಪಿಸಿಕೊಳ್ಳುವಸ್ತರಲ್ಲಿ ಫಿಲಿಪ್ಪನ ಉಳಿದ ಅಂಗರಕ್ಷಕರು ಬಂದು ಒರಿಸ್ಟಿಸ್ ನನ್ನು ಈಟಿಯಿಂದ ಇರಿದು ಹೊಡೆದು ಸಾಯಿಸುತ್ತಾರೆ.

ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಅಧಿಕಾರ ವಹಿಸಿಕೊಂಡವರು ಅಲೆಕ್ಸಾಂಡರ್. ಅಲೆಗ್ಸಾಂಡರ್ ನಿಗೆ 16 ವರ್ಷವಿರುವಾಗ ಆತನ ಗುರುವಾಗಿದ್ದವನು ಪ್ರಪಂಚದ ಮಹಾ ಗುರುವಾಗಿದ್ದ ದಿ ಗ್ರೇಟ್ ಅರಿಸ್ಟಾಟಲ್. ಕ್ರಿಸ್ತಶಕ 340 ಕಾಲಕ್ಕೆ ವಿಶ್ವಕ್ಕೆ ತತ್ವಜ್ಞಾನ, ಸಮಾಜಶಾಸ್ತ್ರ, ವಿಜ್ಞಾನ ಮುಂತಾದುವುಗಳನ್ನು ಹೇಳಿಕೊಟ್ಟ ಬ್ರಹ್ಮಗುರುವಾತ.

ಅರಿಸ್ಟಾಟಲ್ ಮಹಾಗುರು

ಮಹಾ ಗುರುವಿನಿಂದ ಪಾಠ ಕಲಿತ ಅಲೆಗ್ಸಾಂಡರನಲ್ಲಿ ತನ್ನ ತಂದೆಯನ್ನೂ ಮೀರಿದ ಮಹತ್ವಾಕಾಂಕ್ಷೆ ಇತ್ತು. ತೋಳಿನಲ್ಲಿ ಬಲವಿತ್ತು. ಪ್ರಪಂಚವನ್ನೇ ಗೆಲ್ಲುತ್ತೇನೆಂಬ ಹುಚ್ಚು ಉತ್ಸಾಹವಿತ್ತು.

ಅಲೆಕ್ಸಾಂಡರ್ ಹುಟ್ಟಿದ್ದು ಕ್ರಿಸ್ತಪೂರ್ವ 356 ರಲ್ಲಿ ಗ್ರೀಸ್ ನ ಮೆಸೆಡೊನ್ ಪಟ್ಟಣದಲ್ಲಿ. ಅಲೆಗ್ಸಾಂಡರನಿಗೆ 10 ವರ್ಷ ಪ್ರಾಯವಿರುವಂತೆ ಒಂದು ಸಲ ಕುದುರೆಯ ವ್ಯಾಪಾರಿಯೊಬ್ಬನು ಕುದುರೆಯೊಂದನ್ನು ಮಾರಲು ತಂದಿದ್ದನು. ಆದರೆ ಯಾರ ಕೈಯಲ್ಲೂ ಪಳಗಿಸಿಕೊಳ್ಳಲು ನಿರಾಕರಿಸುತ್ತಿತ್ತು ಆ ಕುದುರೆ. ಆದ್ದರಿಂದ ಕುದುರೆಯನ್ನು ವಾಪಸ್ ಕಳಿಸಲು ನಿರ್ಧರಿಸುತ್ತಾನೆ ದೊರೆ ಫಿಲಿಪ್ಪ. ಅಷ್ಟರಲ್ಲಿ ಕುಶಾಗ್ರಮತಿಯಾದ ಅಲೆಕ್ಸಾಂಡರ್ ನು ಭಯಪಡುವ ಕುದುರೆಯನ್ನು ಪಳಗಿಸಿ ಕುದುರೆಯೇರಿ ಕುಳಿತುಕೊಳ್ಳುತ್ತಾನೆ. ಆತನ ಅಪ್ಪ ದೊರೆ ಫಿಲಿಪ್ಪನ ಎದುರು ಅಲೆಕ್ಸಾಂಡರ್ ನದ್ದು ಪ್ರಥಮ ಪ್ರದರ್ಶನ.
ಮುಂದೆ ಇದೇ ಕುದುರೆ ಆತನ ಫೇವರಿಟ್ ಕುದುರೆಯಾಗುತ್ತದೆ. ಆತನ ಜೀವನದುದ್ದಕ್ಕೂಸಾಥಿಯಾಗಿರುತ್ತದೆ. ಎಂತಹ ಕಠಿಣ ಯುದ್ಧದಲ್ಲಿ ಜತೆಗಾರನಾಗಿ ದುಡಿದಿತ್ತು ಆ ಕುದುರೆ.

ಅದರ ಹೆಸರೇ ಬುಸೆಫಾಲಸ್ !

ಅದು ಅತನ ಎಷ್ಟು ಪ್ರೀತಿಯ ವಾಹನವಾಗಿತ್ತೆಂದರೆ, ಮುಂದೆ ಅದು ತೀರಿಹೋದಾಗ ತಾನು ಗೆದ್ದ ಪಟ್ಟಣಕ್ಕೆ ತನ್ನ ಪ್ರೀತಿಯ ಕುದುರೆಯ ಹೆಸರು ನೀಡುತ್ತಾನೆ.
ತಂದೆ ಪಿಲಿಪ್ ಜೈಜಾಂಟಿಯರ ವಿರುದ್ಧ ಯುದ್ಧಕ್ಕೆ ಹೋದ ಸಂದರ್ಭದಲ್ಲಿ ತನ್ನ ಮಗ ಅಲೆಕ್ಸಾಂಡರನನ್ನು ತನ್ನ ರಾಜ್ಯವನ್ನು ನೋಡಿಕೊಳ್ಳಲು ನೇಮಿಸಿ ಹೋಗುತ್ತಾನೆ. ಅಪ್ಪನ ಅನುಪಸ್ಥಿತಿಯಲ್ಲಿ ತ್ರಾಸಿಯನ್ ಮೈದಿ ದಂಗೆ ಏಳುತ್ತಾನೆ. ಅದಕ್ಕೆ ಕ್ಷಿಪ್ರವಾಗಿ ಪ್ರತಿಕ್ರಿಯಿಸಿದ ಅಲೆಕ್ಸಾಂಡರ್ ಅದಕ್ಕೆ ಕ್ಷಿಪ್ರವಾಗಿ ಅಲೆಕ್ಸಾಂಡರನು ದಂಗೆಯೆದ್ದಷ್ಟೇ ವೇಗದಲ್ಲಿ ದಂಗೆಯನ್ನು ಹತ್ತಿಕ್ಕುತ್ತಾನೆ. ವಾಪಸ್ಸು ಬಂದ ಅಪ್ಪ ಫಿಲಿಪ್ಪ ಮಗನ ಮೇಲೆ ಹೆಮ್ಮೆಪಡುತ್ತಾನೆ. ಅಲೆಗ್ಸಾಂಡರನ ನೇತೃತ್ವದಲ್ಲಿ ಒಂದು ಸೈನ್ಯವನ್ನು ಕಳುಹಿಸಿ ದಕ್ಷಿಣ ಪ್ರಾಂತ್ಯದ ದಂಗೆಯನ್ನು ಹತ್ತಿಕ್ಕಲು ಆದೇಶಿಸುತ್ತಾನೆ. ಹಾಗೆ ದಂಡಯಾತ್ರೆ ಶುರುವಿಟ್ಟ ಅಲೆಗ್ಸಾಂಡರ್ ಮತ್ತೆ ಹಿಂದಿರುಗಿ ನೋಡಲಿಲ್ಲ.

ಅಲೆಕ್ಸಾಂಡರನ ಜೀವನದ ಅಪ್ರತಿಮ ಪ್ರತಿಭೆ ಇರುವುದು ಆತನ ಭವಿಷ್ಯದೆಡೆಗಿನ ವಿಷನ್ ನಲ್ಲಿ. ಆತ ಯಾವುದನ್ನೂ ಚಿಕ್ಕದಾಗಿ ಯೋಚಿಸಲಿಲ್ಲ. ಏನನ್ನು ಸಣ್ಣ ಸ್ಕೇಲ್ ನಲ್ಲಿ ಮಾಡಲಿಲ್ಲ. ಹಾಗಾಗಿ ಬೃಹತ್ ಸೈನ್ಯ ಕಟ್ಟಿದ. ತಾನೆಂದೂ ಊಹಿಸದ ದಿಗಂತದತ್ತ ಯಾತ್ರೆಗೆ ಹೊರಟ.
ಅಂತಹ ದೊಡ್ಡ ಕನಸು ಕಾಣಲು ಕಾರಣಳಾದವಳು ತಾಯಿ ಒಲಿಂಪಿಯ. ಆತನ ಒಲಂಪಿಯ ಆತನಿಗೆ ಚಿಕ್ಕಂದಿನಿಂದಲೇ ‘ನೀನು ದೇವರ ಮಗ ‘ ದೊಡ್ಡದಾಗಿ ರಾಜ್ಯವಾಳಲೆಂದೇ ನಿನ್ನ ಅವತಾರವಾಗಿದೆ ಎಂದು ಆಕೆ ಒತ್ತಿ ಒತ್ತಿ ಹೇಳಿದ್ದಳು. ಆಕೆಯ ಗಂಡ ಫೀಲಿಪ್ಪ ಮತ್ತು ಕುಟುಂಬದ ಉಳಿದೆಲ್ಲರೂ ಹಾಗೆಯೇ ಬಲವಾಗಿ ನಂಬಿದ್ದರು. ಹಾಗೆ ಹುಟ್ಟುತ್ತಲೇ ವಿಪರೀತ ಕಾಂಫಿಡೆನ್ಸಿನಿಂದ ಬೆಳೆದುಬಿಟ್ಟಿದ್ದ ಅಲೆಕ್ಸ್. ಅವನಿಗೆ ಚಿಕ್ಕಂದಿನಿಂದಲೇ ಉತ್ತಮ ವಿದ್ಯಾಭ್ಯಾಸ ದೊರೆತಿತ್ತು. ಮತ್ತು ಜಗದ್ಗುರು ಅರಿಸ್ಟಾಟಲನ ಬೋಧನೆ ಆತನಲ್ಲಿ ಆತ್ಮವಿಶ್ವಾಸ ಮತ್ತಷ್ಟು ಪ್ರಖರವಾಗುವಂತೆ ಮಾಡಿತ್ತು.

ಆತ ನೋಡಲು ಅತ್ಯಂತ ಸುಂದರವಾಗಿದ್ದ. ಗಂಡಸರು ಕೂಡಾ ಒಂದು ಸಲ ತಿರುಗಿ ನೋಡುವಂತಹ ರೂಪು ಅವನದಾಗಿತ್ತು. ಅವನ ದೇಹಾಕೃತಿ ಮಧ್ಯಮವಾಗಿದ್ದರೂ ಆತನ ಬಾಡಿ ಲ್ಯಾಂಗ್ವೆಜ್ ನ ರೂಪ ಮತ್ತು ಕಾಂಫಿಡನ್ಸು ಮಿಳಿತಗೊಂಡು ಆತನ ಅನುಯಾಯಿಗಳನ್ನು ಹಿಂದೆಂದೂ ಕಂಡಿರದ ರೀತಿಯಲ್ಲಿ ಮೋಟಿವೇಟ್ ಮಾಡಬಲ್ಲಂತ ಕಲೆ ಆತನಿಗೆ ಕರಗತವಾಗಿತ್ತು. ಅದು ಅಸಾಧ್ಯವನ್ನುಕೂಡ ಸಾಧ್ಯವಾಗಿಸುವ ಕಲೆ.

ಚಿಕ್ಕ ವಯಸ್ಸಿಗೆ ಆತ ಅದ್ಭುತ ಮೆಚುರಿಟಿ ತೋರಿದ್ದ. ಆತ ಕನಸು ಮಾತ್ರ ಕಾಣಲಿಲ್ಲ. ಕನಸನ್ನು ಪರ್ಫೆಕ್ಟ್ ಅನ್ನಿಸುವಂತೆ ಪ್ಲಾನ್ ಮಾಡುತ್ತಿದ್ದ. ಪ್ಲಾನ್ ಗೆ ಬೇಕಾದ್ದಂತೆ ಸ್ಟ್ರಾಟೆಜಿ ರೂಪಿಸುತ್ತಿದ್ದ. ಮತ್ತು ಲಾರ್ಜ್ ಸ್ಕೇಲ್ ಎಕ್ಸೆಕ್ಯುಷನ್ ಗೆ ಧಾಂಗುಡಿಯಿಡುತ್ತಿದ್ದ. ತನ್ನೆಲ್ಲ ಸೈನಿಕರನ್ನು” ನೀವೆಲ್ಲ ಬಹುದೊಡ್ಡ ಸಾಮ್ರಾಜ್ಯದ ಭಾಗವಾಗಲಿದ್ದೀರಿ ”ಎಂದು ಹುರಿದುಂಬಿಸುತ್ತಿದ್ದ.
ಆತ ಮುಂದೆ ನಿಂತು ಯುದ್ಧ ಮಾಡುತ್ತಿದ್ದ. ಉಳಿದ ಸೈನಿಕರ ಜೊತೆ ಜೊತೆಯಲಿ ನಿಂತು ಕಾದಾಡುತ್ತಿದ್ದ. ಲೀಡಿಂಗ್ ಫ್ರೇಮ್ ದ ಫ್ರಾಂಟ್. ಅದು ಆತನ ಸೈನಿಕರಲ್ಲೊಂದು ಹುಚ್ಚು ಉನ್ಮಾದದಂತಹ ಉತ್ಸಾಹವನ್ನು ಉಂಟುಮಾಡಿದ್ದವು. ಅದೇ ಕಾರಣಕ್ಕೆ ಅಲೆಕ್ಸ್ ಯಾವತ್ತೂ ಆತ ಯುದ್ಧದಲ್ಲಿ ಸೋತುಹೋಗಲಿಲ್ಲ. ಆತ ಯುದ್ಧದ ಮೇಲೆ ಯುದ್ಧ ಮಾಡಿದರೂ ಒಂದೂ ಸೋಲು ಕಾಣದ ಸರದಾರನಾಗಿದ್ದ.

ಅಲೆಕ್ಸಾಂಡರ್ ಗೆದ್ದ ಪ್ರದೇಶ

ಇಷ್ಟೆಲ್ಲ ಪಾಸಿಟೀವ್ ವ್ಯಕ್ತಿತ್ವದ ಅಲೆಕ್ಸಾಂಡರ್ ನು ಕುಡಿದರೆ ಹುಚ್ಚನಾಗುತ್ತಿದ್ದ. ಮದ್ಯ ಆತನ ಬಹುದೊಡ್ಡ ದೌರ್ಬಲ್ಯವಾಗಿತ್ತು. ಅದು ಆತನ ದೊಡ್ಡ ಶತ್ರುವಾಗಿತ್ತು. ಕುಡಿದು ತನ್ನ ಆತ್ಮೀಯ ಗೆಳಯನನ್ನು ಆತ ಭರ್ಜಿಯಿಂದ ಇರಿದು ಕೊಂದಿದ್ದ ಒಂದು ಕ್ಷುಲ್ಲಕ ಕಾರಣಕ್ಕೆ. ಆ ದಿನ, ಅಲೆಕ್ಸ್ ನ ಮಿತ್ರ ಕ್ಲೀಟಸ್‍ನು, ಒಟ್ಟಾರೆ ಯುದ್ಧ ಗೆಲ್ಲಲು ಫಿಲಿಪ್ಪನು ಕಟ್ಟಿದ ಸೈನ್ಯ ಮುಖ್ಯ ಕಾರಣ ಎಂದಿದ್ದ. ಅಲ್ಲದೆ, ಒಂದು ದಿನ ಯುದ್ಧದಲ್ಲಿ ನಾನು ಅಲೆಕ್ಸ್ ನ ಪ್ರಾಣವನ್ನು ಉಳಿಸಿದ್ದೇನೆ ಎಂದು ಪಾರ್ಟಿಯೊಂದರಲ್ಲಿ ಎಲ್ಲರ ಎದುರೇ ಹೇಳಿದ್ದ. ಅಷ್ಟಕ್ಕೇ, ಅವಮಾನವಾದಂತಾಗಿ ಅಲೆಕ್ಸ್ ಆತನನ್ನು ಭರ್ಜಿ ಇಳಿಸಿ ತಿವಿದು ಹಾಕಿದ್ದ.

ಅದು ಆತ ವಿವೇಚನೆಯಿಲ್ಲದೆ ಮಾಡಿದ್ದ ಕೆಲಸ. (ಮುಂದೆ ಅದಕ್ಕಾತ ಊಟ ಬಿಟ್ಟು ಮೂರು ದಿನ ಮಾಡಿದ ತಪ್ಪಿಗೆ ಪಶ್ಚಾತಾಪ ಪಟ್ಟಿದ್ದ ) ಕುಡಿದಾಗ ಇಂತಹ ಯಡವಟ್ಟುಗಳನ್ನಾತ ಮಾಡುತ್ತಿದ್ದ. ಇನ್ನೊಂದು ಸಲ ತನ್ನ ಮಿತ್ರ ಮತ್ತು ಸೈನ್ಯಾಧಿಕಾರಿಯಾದ ಫಿಲೋಟಸ್ ಮತ್ತವನ ಮಗ ಪರ್ಮಿನಿಯೋ ತನ್ನ ಮೇಲೆ ಪಿತೂರಿಮಾಡಿ ಕೊಳ್ಳಲು ಸಂಚು ಮಾಡುತ್ತಿದ್ದಾರೆಂಬ ಸುಳ್ಳು ಆಪಾದನೆಯನ್ನು ಕೇಳಿ, ಸರಿಯಾಗಿ ವಿಚಾರಿಸದೆ ಕೊಂದು ಹಾಕಿದ್ದ
ಅಲೆಕ್ಸಾಂಡರ್.

ನಿರಂತರ ಗೆಲುವು ಗೆಲುವಿನ ಕೊಬ್ಬು ಆತನಲ್ಲಿ ವಿಪರೀತ ಅಹಂಕಾರವನ್ನು ಬೆಳೆಸಿ ಬಿಟ್ಟಿತ್ತು. ಸುತ್ತಲೂ ಹೊಗಳುಭಟ್ಟರು ಸೇರಿ ತುಂಬಿಕೊಂಡಿದ್ದರು. ಯಾರಾದರೂ ಎದುರು ಮಾತನಾಡಿದರೆ, ಸಲಹೆ ನೀಡಿದರೆ ಎಲ್ಲಿ ಕುಡಿದ ಮತ್ತಿನಲ್ಲಿ ಕೊಂದು ಬಿಡುತ್ತಾನೋ ಎಂಬ ಭಯ ಅವರನ್ನು ಕಾಡುತ್ತಿತ್ತು.

ತನ್ನ ಹದಿನಾರನೇ ವಯಸ್ಸಿಗೆ ಪ್ರಾರಂಭವಾದ ಯುದ್ಧ ಪ್ರಯಾಣ ಇಪ್ಪತ್ತನೆಯ ವಯಸ್ಸಾಗುವಷ್ಟರಲ್ಲಿ ಆತನನ್ನು ಪೂರ್ಣ ಪ್ರಮಾಣದ ವಾರಿಯರ್ ಆಗಿ ರೂಪುಗೊಳಿಸಿತ್ತು. ಮುಂದಿನ ಹದಿನಾರು ವರ್ಷಗಳಷ್ಟು ಕಾಲ ಸುಧೀರ್ಘ ದಂಡಯಾತ್ರೆಯಲ್ಲಿ ಕಳೆದ. ಒಂದು ರಾಜ್ಯ ಗೆದ್ದ ಕೂಡಲೇ ಮತ್ತೊಂದು ಗೆಲ್ಲುವ ಉಮ್ಮೇದಿ. ಗೆಲುವಿನ ಬೆನ್ನು ಹತ್ತಿದ ಮನುಷ್ಯ, ಗೆಲುವಿನ ಅಮಲು ಏರಿಸಿಕೊಂಡ ಮನುಷ್ಯ ವಾಸ್ತವವನ್ನು ಮರೆತು ಬಿಡುತ್ತಾನೆ. ಇಷ್ಟೆಲ್ಲಾ ಗೆದ್ದು ಆಗಬೇಕಾದುದಾದರೂ ಏನು ಎಂದಾತ ಯೋಚಿಸಲಿಲ್ಲ. ಗೆದ್ದ ರಾಜ್ಯಗಳಲ್ಲಿ ಒಳ್ಳೆಯ ಆಡಳಿತ ಯಂತ್ರ ಸ್ಥಾಪಿಸಲು ಆತ ಪ್ರಯತ್ನ ಮಾಡಲಿಲ್ಲ. ಅದಕ್ಕೆ ಅವನಿಗೆ ಸಮಯವಾದರೂ ಎಲ್ಲಿತ್ತು? ಆತನಿಗೆ ಯುದ್ಧ ಬಿಟ್ಟು ಬೇರೇನೂ ಗೊತ್ತಿರಲಿಲ್ಲ. ತನ್ನ ಉತ್ತರಾಧಿಕಾರಿ ಬಗ್ಗೆ ಕೂಡ ಯೋಚಿಸಲಿಲ್ಲ. ಆತ ಜಗತ್ತನ್ನೇ ಗೆಲ್ಲಲು ಹೊರಟಿದ್ದ. ಜಗತ್ತೆನ್ನುವುದು ಅದೆಷ್ಟು ವಿಶಾಲವಾದುದು, ವಿಸ್ತೃತವಾದುದು ಎಂಬ ಕಲ್ಪನೆಯೂ ಆತನಲ್ಲಿರಲಿಲ್ಲ. ಜಗತ್ತಿನ ನೀಲ ನಕ್ಷೆ ಆ ಕಾಲಕ್ಕೆ ಲಭ್ಯವಿರಲಿಲ್ಲ.

ಯುದ್ಧವೆಂಬುದು ಒಂದು ಅಭ್ಯಾಸವಾಗಿ, ಹವ್ಯಾಸವಾಗಿ, ಅದೊಂದು ತೀರದ ಬಯಕೆಯಾಗಿ ಕೊನೆ ಕೊನೆಗೆ ಭ್ರಾಂತಿಯಾಗಿ, ಮನುಷ್ಯ ಯಾವತ್ತೂ ತನ್ನ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಾನೋ ಆ ದಿನ ಆತ ಅಲೆಕ್ಸಾಂಡರನಾಗುತ್ತಾನೆ !

ಇಂತಹ ಪ್ರಚಂಡ ಗೆಲುವಿನಲ್ಲಿ ಅಲೆಕ್ಸಾಂಡರ್ ಕಳೆದುಕೊಂಡಿದ್ದು ತನ್ನ ಅಮೂಲ್ಯ ಜೀವನವನ್ನು. ಭಾರತದಲ್ಲಿ ಪುರೂರವನ ನಡೆದ ಯುದ್ಧವೇ ಆತನ ಕೊನೆಯ ಯುದ್ಧವಾಗಿತ್ತು. ಆ ಯುದ್ಧದಲ್ಲಿ ಆತ ವಿಪರೀತವಾಗಿ ಗಾಯಗೊಂಡಿದ್ದ. ಆತನ ಸೈನಿಕರೂ ತುಂಬಾ ದಣಿದಿದ್ದರು. ಸೈನಿಕರು ಮುಂದಕ್ಕೆ ನಡೆಯುವುದಿಲ್ಲವೆಂದು ಹಟ ಹಿಡಿದಿದ್ದರು. ಅದರಲ್ಲೂ ನಂದರ ಸೈನ್ಯಶಕ್ತಿ ಅದ್ಭುತವಾದುದೆಂದು ತಿಳಿದ ಮೇಲೆ, ಮಗಧ ರಾಜ್ಯದ ಮೇಲೆ ಯುದ್ಧ ಮಾಡುವುದಿಲ್ಲವೆಂದು ಸಂಕಲ್ಪಿಸಿ ಹಿಂದಕ್ಕೆ ಹೋಗಬೇಕೆಂದು ಹಟಮಾಡಿದರು. ಕೊನೆಗೆ ಅಲೆಕ್ಸಾಂಡರ್ ಅವರ ಕೋರಿಕೆಗೆ ಒಪ್ಪಬೇಕಾಯಿತು. ಹಿಂದಿರುಗುವಾಗ ಸೂಸ ಪಟ್ಟಣವನ್ನು ಸೇರಿದ. ಕ್ರಿಸ್ತ ಪೂರ್ವ 325 ರಲ್ಲಿ ಸೂಸದಿಂದ ಬ್ಯಾಬಿಲಾನ್ ನಗರಕ್ಕೆ ಹೋದ. ನೆಪಕ್ಕೆ ಅಂತ ಒಂದು ಜ್ವರ, ಹೀಗೆ ಮೂವತ್ತೆರಡರ ಚಿಕ್ಕ ವಯಸ್ಸಿಗೇ ಮುಗಿದು ಹೋಗಿತ್ತು ಜಗದೇಕ ವೀರನ ಕಥೆ.

ಅಲೆಕ್ಸಾಂಡರನ ಯುದ್ಧ ಸಾಧನೆಯ ಸಂಕ್ಷಿಪ್ತ ವಿವರ:

ಮೆಸಡೋನಿನ್ನನ್ನಿ ಸುಭದ್ರ ಆಡಳಿತ ಸ್ಥಾಪಿಸಿದ. ತನ್ನೆಲ್ಲಾ ವಿರೋಧಿಗಳನ್ನು-ಕುಟುಂಬದ ಹೊರಗೆ ಮತ್ತು ಹೊರಗಡೆ ಹಲವು ಪಂಗಡಗಳ ದಂಗೆಯನ್ನಡಗಿಸಿದ.
ಏಷಿಯಾದತ್ತ ಹೊರಡುವು ಮುನ್ನತನ್ನ ಉತ್ತರ ಭೂಭಾಗವನ್ನು ಬಲಪಡಿಸಿಕೊಂಡ.
ಗ್ರೀಸಿನ ಆಡಳಿತವನ್ನು ತನ್ನ ಅನುಯಾಯಿಯಾದ ಅಂಟಿಪೇಟರ್ಗೆ ವಹಿಸಿ, ಸರಿಯಾದ ವ್ಯವಸ್ಥೆ ಮಾಡಿ, ತನ್ನ ಪ್ರಬಲವಾದ ಸೈನ್ಯದೊಡನೆ ಹೆಲೆಸ್ಟಾಂಟ್ ಪ್ರದೇಶಕ್ಕೆ ಹೋದ. ಮೊದಲು ಪುರಾತನವಾದ ಟ್ರಾಯ್ ನಗರವನ್ನು ವಶ ಮಾಡಿಕೊಂಡ.

ಗ್ರಾನಿಕಸ್ ನದಿತೀರದಲ್ಲಿ ಪರ್ಷಿಯನ್ನರು ಅಲೆಕ್ಸಾಂಡರನ ಸೈನ್ಯವನ್ನು ಎದುರಿಸಿದರು. ಪರ್ಷಿಯನ್ನರು ಸಂಪುರ್ಣವಾಗಿ ಸೋತರು. ಏಷ್ಯಮೈನರನ್ನು ಪ್ರವೇಶಿಸಲು ಅಲೆಕ್ಸಾಂಡರನಿಗೆ ಯಾವ ತೊಂದರೆಯೂ ಆಗಲಿಲ್ಲ. ಫಿನಿಷಿಯನ್ನರ ನೌಕೆಗಳನ್ನು ಸೋಲಿಸಿದ. ಸಾರ್ಡಿಸ್ ಮತ್ತು ಇಫಿಸಸ್ ನಗರಗಳನ್ನು ವಶಪಡಿಸಿಕೊಂಡ. ಮಿಲೆಟಸ್ ನಗರವನ್ನು ದೌರ್ಜನ್ಯದಿಂದ ವಶಮಾಡಿಕೊಳ್ಳಬೇಕಾಯಿತು. ಡೇರಿಯಸ್ ಜತೆ ಪ್ರಬಲವಾದ ಸೈನ್ಯದೊಡನೆ ಇಸಸ್ ನಗರದಲ್ಲಿ ಯುದ್ಧವಾಯಿತು. ಡೇರಿಯಸ್ ಭಯಪಟ್ಟು ಓಡಿಹೋದ. ಪರ್ಷಿಯನ್ನರು ದಿಕ್ಕುತೋಚದೆ ಚದರಿದರು.

ಅಲೆಕ್ಸಾಂಡರ್ ಪರ್ಷಿಯ ದೇಶದ ಮೇಲೆ ನುಗ್ಗುವುದಕ್ಕೆ ಮುಂಚೆ ದಕ್ಷಿಣಕ್ಕೆ ತಿರುಗಿ ಸಿರಿಯ ಮತ್ತು ಈಜಿಪ್ಟಿಗೆ ಹೋದ. ಮಧ್ಯದಲ್ಲಿ ಸಿಕ್ಕಿದ ನಗರಗಳು ಇವನ ವಶವಾದವು. ವೈರ್ ನಗರ ಸುಲಭವಾಗಿ ಸ್ವಾಧೀನವಾಗಲಿಲ್ಲ. ಅದು ಒಂದು ದ್ವೀಪ. ಸುತ್ತಲೂ ಭದ್ರವಾದ ಕೋಟೆಯಿತ್ತು. ಅಲೆಕ್ಸಾಂಡರ್ ದಡದಿಂದ ದ್ವೀಪಕ್ಕೆ ಸೇತುವೆಯನ್ನು ರಚಿಸಿ, ಕೋಟೆಗೆ ಲಗ್ಗೆ ಹಾಕಿ ವಶಪಡಿಸಿಕೊಂಡ. ಆದರೆ ಅಲ್ಲಿ ಈತ ಮಾಡಿದ ಅಮಾನುಷ ಕೊಲೆಗಳೂ ಹಿಂಸೆಗಳೂ ಥೀಬ್ಸ್ ನಲ್ಲಿ ಮಾಡಿದ ಅನ್ಯಾಯಗಳಿಗೆ ಯಾವ ರೀತಿಯಲ್ಲೂ ಕಡಿಮೆಯಾಗಿರಲಿಲ್ಲ. 8,000 ಜನರನ್ನು ಕೊಂದು 30,000 ಜನರನ್ನು ಗುಲಾಮರನ್ನಾಗಿ ಮಾಡಿದೊಡನೆ ನಗರ ಕಷ್ಟವಿಲ್ಲದೆ ಅಲೆಕ್ಸ್ ನ ವಶವಾಯಿತು. ಮುಂದಕ್ಕೆ ಪ್ಯಾಲಸ್ತಿನ್ ಮೇಲೆ ದಾಳಿ ಮಾಡಿ, ವಶಪಡಿಸಿಕೊಂಡ. ನಗರದ ರಾಜ್ಯಪಾಲನಾದ ಬೇಟಿಸ್ ಕ್ರೂರವಾದ ಶಿಕ್ಷೆಗೆ ಗುರಿಯಾದ. ಅವನನ್ನು ರಥದ ಹಗ್ಗಕ್ಕೆ ಕಟ್ಟಿ, ಸಾಯುವವರೆಗೂ ಎಳಸಲಾಯಿತು.

ಗಾರ್ಡಿಯನ್ ಗಂಟು ಬಿಚ್ಚಿದ ವೀರ

ಇಸಸ್ ಕದನಕ್ಕೆ ಮುಂಚೆ ಅಲೆಕ್ಸಾಂಡರ್ ಫ್ರಿಜಿಯ ದೇಶದ ಹಿಂದಿನ ರಾಜಧಾನಿಯಾದ ಗಾರ್ಡಿಯಂ ನಗರಕ್ಕೆ ಬಂದ. ಈ ಸ್ಥಳದಲ್ಲಿ ಇದ್ದ ಒಂದು ಪುರಾತನವಾದ ರಥವಿತ್ತು. ರಥದ ಕಂಬಕ್ಕೆ ಫ್ರಿಜಿಯನ್ನರ ಮೊದಲನೆಯ ದೊರೆಯಾದ ಗಾರ್ಡಿಯಸ್ ಕಟ್ಟಿದನೆಂಬ ತೊಗಟೆಯ ಗಂಟನ್ನು ಯಾರು ಬಿಚ್ಚುವರೋ ಅವರು ಏಷ್ಯವನ್ನು ಆಳುವರು ಎಂಬ ನಂಬಿಕೆಯಿತ್ತು. ಅಲೆಕ್ಸಾಂಡರ್ ಕಷ್ಟವಿಲ್ಲದೆ ತನ್ನ ಕತ್ತಿಯಿಂದ ಗಾರ್ಡಿಯನ್ ಗಂಟನ್ನು ಕತ್ತರಿಸಿದಾಗ ಅಕಸ್ಮಾತ್ತಾಗಿ ಉಂಟಾದ ಸಿಡಿಲು ಜ಼್ಯೂಸ್ ದೇವತೆಯ ಒಪ್ಪಿಗೆಯ ಸಂಕೇತ ಎಂದು ಹೇಳಿದರು. ಸಿಲಿಸಿಯ ಪರ್ಷಿಯನ್ನರು ಯುದ್ಧ ಮಾಡದೆ ಹಿಮ್ಮೆಟ್ಟಿದರು. ಚಾರ್ಸಸ್ ನಗರ ವಶವಾಯಿತು.

ಈಜಿಪ್ಟಿನ ದಂಡಯಾತ್ರೆ

ಟೈರ್ ಮುತ್ತಿಗೆಯ ಅನಂತರ ಅಲೆಕ್ಸಾಂಡರ್ ಈಜಿಪ್ಟನ್ನು ಸೇರಿದ. ಈಜಿಪ್ಟ್ ಎರಡು ಶತಮಾನಗಳಿಂದ ಪರ್ಷಿಯ ದೇಶಕ್ಕೆ ಅಡಿಯಾಳಾಗಿ ನೊಂದಿತ್ತು. ಅಲೆಕ್ಸಾಂಡರ್‍ನನ್ನು ಜನ ಹರ್ಷದಿಂದ ಗೌರವಿಸಿದರು. ಈಜಿಪ್ಟ್ ದಂಡಯಾತ್ರೆಯಾದ ಮೇಲೆ ಪ್ರ.ಶ.ಪೂ. 331ರಲ್ಲಿ ಟೈರ್ಗೆ ಬಂದ. ಡೇರಿಯಸ್ ದೊಡ್ಡ ಪರ್ಷಿಯನ್ನರ ಸೈನ್ಯದಲ್ಲಿ 1 ಕೋಟಿ ಕಾಲಾಳುಗಳೂ 40,000 ರಾವುತರೂ ಇದ್ದರು. ಅಲೆಕ್ಸಾಂಡರ್ ಪರ್ಶಿಯನ್ನರನ್ನು ಸೋಲಿಸಿದ. ಡೇರಿಯಸ್ ಮತ್ತೊಮ್ಮೆ ಓಡಿಹೋದ. ಗಾಗ್ಮೇಲ ಕದನದಿಂದ (ಪ್ರ.ಶ.ಪೂ. 331) ಅಲೆಕ್ಸಾಂಡರನಿಗೆ ಅದ್ಭುತ ಜಯವಾಯಿತು.

ಡೇರಿಯಸ್ ಸಂಪೂರ್ಣವಾಗಿ ಸೋತು, ಮೀಡಿಯ ರಾಜಧಾನಿಯಾದ ಎಕ್ಬತಾನ ನಗರದಲ್ಲಿ ಬಚ್ಚಿಟ್ಟುಕೊಂಡ. ಪರ್ಷಿಯನ್ನರ ಸಾಮ್ರಾಜ್ಯ ನುಚ್ಚುನೂರಾಯಿತು. ವಿಜಯಿಯಾದ ಅಲೆಕ್ಸಾಂಡರ್ ಬ್ಯಾಬಿಲೋನಿಯ ಸಾಮ್ರಾಜ್ಯವನ್ನು ಆಕ್ರಮಿಸಿದ. ಪರ್ಷಿಯ ದೇಶದ ರಾಜಧಾನಿಯಾದ ಸೂಸ ನಗರವನ್ನು ವಶಪಡಿಸಿಕೊಂಡ. ಪರ್ಷಿಯ ದೇಶದ ಸೇನಾನಾಯಕನಾದ ಏರಿಯೊಬರ್ಜ಼ನಿಸ್ ಅಲೆಕ್ಸಾಂಡರ್ನನ್ನು ವಿರೋಧಿಸಿದ. ಅಲೆಕ್ಸಾಂಡರ್ ಅವನ ಸೈನ್ಯವನ್ನು ಚದರಿಸಿ ಪರ್ಸಿಪೋಲಿಸ್ ಎಂಬ ಸುಂದರವಾದ ನಗರವನ್ನು ಹಿಡಿದ. ಅಲೆಕ್ಸಾಂಡರ್ ನು ನಂತರ ಬ್ಯಾಕ್ಟ್ರಿಯ (ಉತ್ತರ ಆಫ್ಘಾನಿಸ್ತಾನ) ದೇಶದ ಮೇಲೆ ದಂಡೆತ್ತಿ ಹೋದ. ಬೆಸಸ್ ತಾನೇ ಪರ್ಷಿಯ ದೇಶದ ರಾಜನೆಂದು ಘೋಷಿಸಿ ಅರ್ಟಗ್ಸರ್ಕ್ಸಸ್ ಎಂಬ ಬಿರುದನ್ನು ಇಟ್ಟುಕೊಂಡಿದ್ದ. ಅಲೆಕ್ಸಾಂಡರ್ ಈ ದಂಡಯಾತ್ರೆಯಲ್ಲಿ ಅನೇಕ ದಟ್ಟವಾದ ಗುಡ್ಡಗಾಡುಗಳನ್ನು ದಾಟಿ ಅದ್ಭುತ ಸಾಹಸ ತೋರಿಸಿದ.

ಹಿರತ್ ಮತ್ತು ಕಂ ದಹಾರ್ ಬಳಿ ಹೊಸ ಅಲೆಕ್ಸಾಂಡ್ರಿಯ ಪಟ್ಟಣವನ್ನು ನಿರ್ಮಿಸಿದ. ಚಳಿಗಾಲದಲ್ಲಿ ಹಿಂದೂಕುಷ್ ಪರ್ವತವನ್ನು ದಾಟಿ ಆಕ್ಸಸ್ ನದಿಯನ್ನು ದಾಟಿ ಬೆಸಸ್ನನ್ನು ಅವನ ರಾಜಧಾನಿಯಲ್ಲೇ ಶೂಲಕ್ಕೇರಿಸಿದ. ಬ್ಯಾಕ್ಟ್ರಿಯದಿಂದ ಅಲೆಕ್ಸಾಂಡರ್ ಸೊಗ್ಡಿಯಾನದ (ತುರ್ಕಿಸ್ತಾನದ) ಮೇಲೆ ನುಗ್ಗಿದ. ಈ ಪ್ರಾಂತ್ಯ ಆಕ್ಸಸ್ ನದಿಯ ಆಚೆ ಪರ್ಷಿಯನ್ನರಿಗೆ ಸೇರಿತ್ತು. ಇಲ್ಲಿನ ಸಿಥಿಯನ್ನರು ಭಯಂಕರವಾಗಿ ಹೋರಾಡಿದರು. ಆದರೆ ಅಲೆಕ್ಸಾಂಡರ್ ಅವರನ್ನು ಜಯಿಸಿ ಜಕ್ಸಾರ್ಟಸ್ ನದಿಯ ತೀರವನ್ನು ತನ್ನ ಸಾಮ್ರಾಜ್ಯದ ಎಲ್ಲೆಯಾಗಿ ಗೊತ್ತು ಮಾಡಿದ. ಈ ಪ್ರದೇಶದಿಂದಲೇ ಮಂಗೋಲರ ದಂಗೆಯನ್ನಡಗಿಸಿದ ಅಲೆಕ್ಸಾಂಡರ್.

ನಂತರ ಭಾರತದ ಗಡಿ ಪ್ರದೇಶದಲ್ಲಿದ್ದ ಪುರೋರವನ ಮೇಲೆ ಯುದ್ಧ ಮಾಡಿದ. ಪುರೂರವನ ಗಜಸೈನ್ಯ ಅಲೆಕ್ಸಾಂಡರನನ್ನೇ ಬೆಚ್ಚಿಸಿತ್ತು. ಪುರೂರವನ ಯುದ್ಧದ ನಂತರ ಅಲೆಕ್ಸಾಂಡರ್ ಗಾಯಗೊಂಡಿದ್ದ. ಮಘಡದ ಮೇಲೆ ಯುದ್ಧ ಮಾಡುವುದು ಬೇಡ ಎಂದು ಆತನ ಸೈನಿಕರ ಹಠ ಹಿಡಿದಿದ್ದರು. ಅಲ್ಲದೆ ಅಲೆಕ್ಸಾಂಡರ್ ಪುರೂರವನ ಜೊತೆ ಸೋತನಾ ಗೆದ್ದನಾ ಎಂಬ ಬಗ್ಗೆ ಕೂಡ ಇವತ್ತೀಗೂವ್ ಭಿನ್ನ ಅಭಿಪ್ರಾಯವಿದೆ. ಒಟ್ಟಾರೆ, ಅಲೆಕ್ಸಾಂಡರ್ ಒಬ್ಬನೇ, ಆ ಕಾಲಕ್ಕೆ ಜಗದೇಕವೀರ ಅಂತ ಕರೆಸಿಕೊಂಡಿದ್ದ.

ಸುದರ್ಶನ್ ಬಿ. ಪ್ರವೀಣ್, ಬೆಳಾಲು

Leave A Reply

Your email address will not be published.