ಕರ್ನಾಟಕದ ಪುಕುವೊಕ, ಸಹಜ ಕೃಷಿ ಮಾಂತ್ರಿಕ ದಿ.ವರ್ತೂರು ನಾರಾಯಣರೆಡ್ಡಿ

“ನೀವು ಒಂದರೆ ಗಳಿಗೆ ಖುಷಿಯಾಗಿರಬೇಕೆಂದರೆ ಕುಡಿದು ಬಿಡಿ”
“ನೀವು ಒಂದೆರಡು ವರ್ಷ ಸಂತೋಷವಾಗಿರಬೇಕಾದರೆ ಮದುವೆಯಾಗಿ. ಮೊದಲ ಮೂರು ನಾಲ್ಕು ವರ್ಷ ಖುಷಿಯಾಗಿ ಇರುತ್ತೀರಿ”
“ಆದರೆ ನೀವು ಜೀವನ ಪೂರ್ತಿ ಖುಷಿಯಾಗಿ ಇರಬೇಕೆಂದರೆ ಯೂ ಬಿಕಮ್ ಎ ಫಾರ್ಮರ್ ಆರ್ ಗಾರ್ಡನರ್. ಇದು ಕೃಷಿಯ ಮಹತ್ವ. ಕೃಷಿಯು ನಿಮ್ಮನ್ನು ಸದಾ ಖುಷಿಯಾಗಿ ಮತ್ತು ಸಂತೋಷವಾಗಿಡುತ್ತದೆ.” “ನೆಲದ ಮೇಲೆ ನೀವು ಊರುವ ಬೀಜವು ಏಳು ದಿನಗಳೊಳಗೆ ಮಣ್ಣಿನಿಂದ ಮೂಗುತೂರಿಸಿಕೊಂಡು ಹೊರಬರುತ್ತದೆ. ಆಗ ಸಿಗುವ ಆನಂದಕ್ಕೆ ಬೇರೆ ಯಾವುದೇ ಆನಂದವೂ ಸಮವಲ್ಲ.”

ಹೀಗೆ ಕೃಷಿಯ ಬಗ್ಗೆ ಮಾತನಾಡುವ ನಾರಾಯಣರೆಡ್ಡಿಯವರು ಕರ್ನಾಟಕದ ಫುಕುವೋಕಾ.
ಕಂಚಿನ ಹಂಡೆಗೆ ಠಣ್ ಅಂತ ಹೊಡೆದಂತಹ ಕಂಠ. ಕೆಲವೊಮ್ಮೆ ತಿಳಿಹಾಸ್ಯ, ಮಗದೊಮ್ಮೆ ಕಠೋರ ನಿಲುವಿನ ಉಕ್ಕಿನ ಮನುಷ್ಯ. ಆದರೆ ಪ್ರತಿಬಾರಿಯೂ ಮಾತೃಭೂಮಿಯನ್ನು ಕಂಡು ಅನೈಸರ್ಗಿಕ ಕೃಷಿ ಚಟುವಟಿಕೆಯನ್ನು ನೋಡಿ ಮಮ್ಮಲ ಮರುಗುವ ಮಾತೃ ಹೃದಯ. ಅವರ ಮಾತು ಕೇಳಿಸಿಕೊಳ್ಳುವುದಕ್ಕೆ ಚಂದ. ಮಾತು ಮಾತಾಡುತ್ತಲೇ ಅವರು ನಿಮ್ಮನ್ನಾಕರ್ಷಿಸುತ್ತಾರೆ ನಿಮ್ಮಲ್ಲಿ ಕುತೂಹಲವನ್ನು ಉಂಟು ಮಾಡುತ್ತಾರೆ. ಮತ್ತು ನಿಮ್ಮನ್ನು ಕಾರ್ಯಪ್ರವೃತ್ತರನ್ನಾಗಿಸುವಲ್ಲಿ ಸಫಲರಾಗುತ್ತಾರೆ.

ದುರದೃಷ್ಟವಶಾತ್ ನಾರಾಯಣ ರೆಡ್ಡಿ ಅವರು ಈ ದಿನ ನಮ್ಮೊಂದಿಗಿಲ್ಲ. ಕಳೆದ ಮೇ 2018 ರಂದು ಅವರು ನಮ್ಮನ್ನು ಅಗಲಿ ಹೋದರೂ ಅವರು ಬೋಧಿಸಿದ ವಿಷಯ ಅವರು ತಯಾರು ಮಾಡಿದ ಶಿಷ್ಯವೃಂದ, ಮತ್ತವರ ಸಾರ್ವತ್ರಿಕ ಕೃಷಿ ಅನುಭವವು ನಮ್ಮ ಮುಂದಿದೆ. ಅವನ್ನು ನಮ್ಮ ಓದುಗರಿಗೆ ತಿಳಿಸುವ ಸಾಮಾಜಿಕ ಜವಾಬ್ದಾರಿ ಪತ್ರಿಕೆಯ ಮೇಲಿದೆ.

ನಾರಾಯಣ ರೆಡ್ಡಿ ಅವರ ಕಿರು ಪರಿಚಯ

ಮನೆಯಲ್ಲಿದ್ದುಕೊಂಡು ಓದಿದ್ದು ನಾಲ್ಕನೇ ಕ್ಲಾಸು. ಮೊದಮೊದಲು ಮನೆಯಲ್ಲಿ ಕುರಿ ಕಾಯುವ ಕೆಲಸ ಪುಟ್ಟ ಹುಡುಗನಿಗೆ ರೈಲುಬಂಡಿ ಎಂದರೆ ಅದೇನೋ ಆಕರ್ಷಣೆ. ರೈಲನ್ನು ಹತ್ತಿರದಿಂದ ನೋಡಿ ಕಣ್ಣು ತುಂಬಿಕೊಳ್ಳುವ ಬಯಕೆ. ಒಂದು ದಿನ ಕುರಿ ಕಾಯುತ್ತಾ, ನಂತರ ರೈಲು ನೋಡಿ ಬರುತ್ತೇನೆಂದು ಕಾದಿದ್ದು ಆಮೇಲೆ ತಡವಾಗಿ ಮನೆಗೆ ಬರುತ್ತಾನೆ ಮಗ. ಅಪ್ಪನಿಗೆ ಮೇಲೆ ವಿಪರೀತ ಸಿಟ್ಟು. ನಾಲ್ಕು ಸರಿಯಾ ಬಾರಿಸಿರಬೇಕು. ಹಠವಾದಿ ಹುಡುಗ ಉಟ್ಟ ಬಟ್ಟೆಯಲ್ಲಿಯೇ ಮನೆ ಬಿಟ್ಟು ಹೊರಡುತ್ತಾನೆ. ಹೊರಟು ಬೆಂಗಳೂರೆಂಬ ಮಹಾ ಸಮುದ್ರ ಸೇರುತ್ತಾನೆ.

ಮುಂದಿನದೆಲ್ಲ ಒಂದು ಸಿನಿಮಾಗೆ ಆಹಾರವಾಗುವಷ್ಟು ರೋಚಕ. ಅದು ನಿಯತ್ತಿನ ಕಥೆ. ಸಾಧನೆಯ ಕಥೆ. ಹಾಗೆ ಆ ದಿನ ಮನೆಬಿಟ್ಟು ಬಂದ ಹುಡುಗ ಸೇರಿಕೊಳ್ಳುವುದು ಹೋಟೆಲ್ ಒಂದರಲ್ಲಿ ಕ್ಲೀನರ್ ಆಗಿ ಕೆಲಸಕ್ಕೆ.
ಕೆಲಸಕ್ಕೆ ಸೇರಿದ ಕೇವಲ ಮೂರು ಗಂಟೆಗಳೊಳಗೆ ಪ್ರಮೋಷನ್. ನೇರ ಅಡುಗೆಮನೆಯಲ್ಲಿ ಅಸಿಸ್ಟೆಂಟ್ ಆಗಿ ನೇಮಕ . ಹೀಗೆ ಸ್ವಲ್ಪ ಸಮಯ ಹೋಟೆಲ್ನಲ್ಲಿ ಅಡುಗೆ ಸಹಾಯಕನಾಗಿ ದುಡಿತ. ದುಡಿತ ಪ್ರತಿ ಪೈಸವನ್ನೂ ವ್ಯರ್ಥ ಮಾಡದೆ ಕೂಡಿಡುವಿಕೆ.

ಮುಂದೊಂದು ದಿನ ಟ್ರಾನ್ಸ್ಪೋರ್ಟ್ ಒಂದರಲ್ಲಿ ಹೆಲ್ಪರ್ ಆಗಿ ಕೆಲಸಕ್ಕೆ ಸೇರುತ್ತಾನೆ ಹುಡುಗ. ಕೆಲಸಕ್ಕೆ ಸೇರಿದ ಕೇವಲ ನಾಲ್ಕು ತಿಂಗಳಿಗೆ ಆಫೀಸಿನ ಮ್ಯಾನೇಜರ್ ಆಗಿ ಪ್ರಮೋಷನ್ ! ನೆನೆಸಿಕೊಂಡರೆ ಮೈ ಜುಮ್ಮೆನಿಸುತ್ತದೆ ಆ ಪುಟ್ಟ ಬಾಲಕನ ಕೆಲಸದಲ್ಲಿನ ತೀವ್ರತೆಯನ್ನು ಕಂಡು.
ಹೀಗೆ ಹನ್ನೆರಡು ವರ್ಷಗಳಷ್ಟು ಕಾಲ ಹೊರಗೆ ದುಡಿದು ಆ ಕಾಲಕ್ಕೆ 45,000 ರೂಪಾಯಿಗಳಿಗೆ ಊರಿಗೆ ವಾಪಸ್ಸು ಬಂದು, ಅಪ್ಪನಿಗೆ ಅಂದು ಚಾಲೆಂಜ್ ಹಾಕಿದಂತೆಯೇ ಊರಿನಲ್ಲಿ ಜಮೀನು ಖರೀದಿಸುತ್ತಾನೆ.

ಮುಂದಿನ ಇಪ್ಪತ್ತು ವರ್ಷಗಳಲ್ಲಿ ತೀವ್ರ ತರಹದ ರಾಸಾಯನಿಕ ಕೃಷಿಯಲ್ಲಿ ತೊಡಗಿ ಸಾಧನೆ ಮಾಡಿ ಅಂದಿನ ರಾಷ್ಟ್ರಪತಿ ನೀಲಂ ಸಂಜೀವ ರೆಡ್ಡಿ ಅವರ ಕೈಯಿಂದ ದೇಶದ ಉತ್ತಮ ಕೃಷಿಕ ಪ್ರಶಸ್ತಿ ಪಡೆಯುತ್ತಾರೆ. ಪ್ರಶಸ್ತಿ ವಿಜೇತ ರಾಸಾಯನಿಕ ಕೃಷಿಕರಾಗಿದ್ದ ನಾರಾಯಣ ರೆಡ್ಡಿಯವರು ವ್ಯಾವಹಾರಿಕ ಜ್ಞಾನ ಉಳ್ಳವರು. ಯಾವತ್ತು ತನ್ನ ಹೂಡಿಕೆಗೆ ತಕ್ಕನಾದ ಪ್ರತಿಫಲ ಸಿಗುತ್ತಿಲ್ಲವೆಂದಾದಾಗ ಯಾಕಾದರೂ ಈ ಕೃಷಿ ಕ್ಷೇತ್ರಕ್ಕೆ ಬಂದೆನೋ ಅಂತ ಅವರಿಗೆ ಅನ್ನಿಸುತ್ತದೆ. ಬರುವ ಆದಾಯದ ಮುಂದೆ ಕೃಷಿಗೆ ಮಾಡುವ ಖರ್ಚು ಜಾಸ್ತಿಯಾದಾಗ ಅದೆಷ್ಟೇ ಉತ್ಪತ್ತಿ ಬಂದರೇನು? ಚಿಂತೆಗೆ ಬೀಳುತ್ತಾರೆ ನಾರಾಯಣ ರೆಡ್ಡಿಯವರು.

ಒಂದು ದಿನ ನಾರಾಯಣ ರೆಡ್ಡಿಯವರಿಗೆ ಇಸ್ಕಾನ್ ಮಂದಿರದಲ್ಲಿ ನಾಸಾ ವಿಜ್ಞಾನಿಯೊಬ್ಬರ ಪರಿಚಯವಾಗುತ್ತದೆ. ಅವರ ಮೂಲಕ ಸಹಜ ಕೃಷಿ ಸಾಂಟಾ, ಜಪಾನಿನ ಪುಕುವೋಕಾರ ಬಗ್ಗೆ ತಿಳಿಯುತ್ತದೆ. ಅವರ ಪುಸ್ತಕ ಒಂದು ‘ ಒನ್ ಸ್ಟ್ರಾ ರೆವಲ್ಯೂಷನ್ ‘ ಓದುತ್ತಾರೆ.
ಅವತ್ತು ಶುರುವಾದ ಸಹಜ ಕೃಷಿಯೆಡೆಗಿನ ಅವರ ಪರಿಚಯ ಮುಂದಕ್ಕೆ ಆಸಕ್ತಿಯಾಗಿ ಬೆಳೆದು ಅದನ್ನೇ ತನ್ನ ಸ್ವಂತ ತೋಟದಲ್ಲಿ ಪ್ರಯೋಗಕ್ಕೆ ಒಡ್ಡಿಕೊಳ್ಳುತ್ತಾರೆ ರೆಡ್ಡಿಯವರು. ಅವರ ಪ್ರಯೋಗದ ಅನುಭವ, ಪ್ರಯತ್ನ ಮತ್ತು ಸದಾ ತಿಳಿದುಕೊಳ್ಳುವ ಹಂಬಲದಿಂದಾಗಿ, ಕಲಿಯುವ ಹಂಬಲದಿಂದ ಸಹಜ ಕೃಷಿಯಲ್ಲಿ ಯಶ: ಪಡೆಯುತ್ತಾರೆ ಮತ್ತು ಅವರನ್ನು ಅದೇ ಸಹಜಕೃಷಿ ದೇಶ-ವಿದೇಶಗಳಲ್ಲಿ ಸಹಜ ಕೃಷಿಯ ನೇತಾರನಾಗಿ ರೂಪಿಸುತ್ತದೆ. ಸಹಜ ಕೃಷಿ ಅಥವಾ ಅರಣ್ಯ ಮಾದರಿಯನ್ನು ಜಗತ್ತಿನೆಲ್ಲೆಡೆ ಪ್ರಚುರಪಡಿಸಲು ದೇಶ ವಿದೇಶ ಸುತ್ತುತ್ತಾರೆ ಇಳಿವಯಸ್ಸಿನಲ್ಲೂ ನಿರಂತರ ಕಲಿಕೆಯ ಮತ್ತು ಕಲಿಸುವಿಕೆಯ ಉತ್ಸಾಹ ಅವರಲ್ಲಿ ಬತ್ತುವುದಿಲ್ಲ. ಕೊರಿಯನ್ ಕೃಷಿ ದಿಗ್ಗಜ ಮಾಸ್ಟರ್ ಚೊ ನಿಂದ ಕಲಿತುಕೊಳ್ಳಲು ಕೊರಿಯಾಗೂ ಹೋಗಿ ಬರುತ್ತಾರೆ. ಇದು ನಮ್ಮ ಕರ್ನಾಟಕದ ಫುಕುವೋಕಾ ನಾರಾಯಣ ರೆಡ್ಡಿಯವರ ಬಗೆಗಿನ ಸಂಕ್ಷಿಪ್ತ ಪರಿಚಯ.

ಶ್ರೀನಿವಾಸಪುರದ ಮರಲೇನಹಳ್ಳಿ ಅವರ ಕಾರ್ಯಕ್ಷೇತ್ರ. ಅವರ ಸಾವಯವ ಕೃಷಿ ತೋಟ ಇರುವುದು ಅಲ್ಲಿಯೇ. ತೋಟವಾ ಅದು ಅಥವಾ ಅರಣ್ಯನಾ ಎಂದು ನಿಮಗೆ ಅನುಮಾನವುಂಟಾಗಬಹುದು. ಅದುವೇ ಸಹಜ ಕೃಷಿಯ ಸ್ಪೆಷಾಲಿಟಿ !
ಬರುವ ಜನವರಿ 14, 2019 ಕ್ಕೆ ನಾಡೋಜ ನಾರಾಯಣ ರೆಡ್ಡಿಯವರು ಪ್ರಕೃತಿಯಲ್ಲಿ ಲೀನವಾಗಿ ಒಂದು ವರ್ಷವಾಗುತ್ತದೆ. ಅಷ್ಟರೊಳಗೆ, ರೆಡ್ಡಿಯವರ ಸಮಗ್ರ ಅನುಭವಗಳ ಝಲಕ್ಸ್ ಅನ್ನು ಓದುಗ ಕೃಷಿ ಮಿತ್ರರಿಗೆ ಹಂಚಿಕೊಳ್ಳಲು ನಮಗೆ ಆತುರ.

ಮುಂದೆ ನಾರಾಯಣ ರೆಡ್ಡಿರವರು ಹೇಳುತ್ತಾ ಹೋಗುತ್ತಾರೆ. ಅವರಿಗೆ ಸಂಬಂದಿಸಿದ ಹಲವು ಆಡಿಯೋ, ವಿಡಿಯೋ ಮತ್ತು ಯು ಟ್ಯೂಬ್ ಚಾನಲ್ಲಿನ ಮಾಹಿತಿಗಳನ್ನುಇಲ್ಲಿ ಬಳಸಿಕೊಳ್ಳಲಾಗಿದೆ. ಸಾಂದರ್ಭಿಕವಾಗಿ ಅವರಿಗೆಲ್ಲ ನೆನಕೆಗಳು ಸಲ್ಲುತ್ತವೆ.

ಸಾವಯವ ಕೃಷಿ ಎಂದರೇನು?

ಭೂಮಿತಾಯಿಯನ್ನು ಹರ್ಟ್ ಮಾಡದೆ ಮಣ್ಣಿನಲ್ಲಿರುವ ಜೀವರಾಶಿಗಳನ್ನು ಹಾಳುಗೆಡವದೇ ಮಣ್ಣಿನ ಗುಣಮಟ್ಟವನ್ನು ಫಲವತ್ತತೆಯನ್ನು ಹಾಳುಮಾಡದೆ ಮಾಡುವ ಕೃಷಿ ಸಾವಯವ ಕೃಷಿ. ಮನುಷ್ಯ ಒಂದು ಕಾಲದಲ್ಲಿ ಕಾಡು ಮನುಷ್ಯನಾಗಿದ್ದು ಅಲೆಮಾರಿಯಾಗಿ ಬದುಕುತ್ತಿದ್ದ ಬೇಟೆ ಮತ್ತು ಕಾಡಿನಲ್ಲಿ ಸಿಗುವ ಗೆಡ್ಡೆಗೆಣಸುಗಳು ಮತ್ತು ಹಣ್ಣು ಹಂಪಲುಗಳನ್ನು ತಿಂದು ಹಣ್ಣು-ಹಂಪಲುಗಳು ಅವನ ಆಹಾರವಾಗಿದ್ದವು.

ಪುರಾಣದ ಕಾಲದಲ್ಲಿ ಮನುಷ್ಯ ಕೃಷಿ ಮಾಡುತ್ತಿರಲಿಲ್ಲ ಆತನು ಆಹಾರ ಹುಡುಕುತ್ತಾ ಬೇಟೆಯಾಡುತ್ತಾ ಬಹುದೂರ ಸಾಗುತ್ತಿದ್ದ. ಆವಾಗಲೇ ಕುಟುಂಬ ಪದ್ಧತಿ ಇರುವುದರಿಂದ ಹೆಂಗಸರು ಮಕ್ಕಳು, ಗಂಡಸು ತರಬಹುದಾದ ಆಹಾರಕ್ಕಾಗಿ ಕಾಯುತ್ತಿದ್ದರು. ಕೆಲವೊಮ್ಮೆಗಂಡಸರು ದೂರ ದೂರಕ್ಕೆ ಆಹಾರ ಹುಡುಕುತ್ತ ಹೋಗಿರುವ ಕಾರಣ ವಾಪಸ್ಸು ಬರಲು ವಾರಗಟ್ಟಲೆ ಸಮಯ ಹಿಡಿಯುತ್ತಿತ್ತು. ಹೆಂಡತಿ-ಮಕ್ಕಳು ಅವರನ್ನು ಎದುರು ನೋಡುತ್ತಾ ಕುಳಿತಿದ್ದಾಗ, ಮನೆಯ ಹೆಂಗಸರು ಗಂಡಸರು ತಂದಿದ್ದ ಗಿಡಗಳನ್ನು ಮನೆಯ ಪಕ್ಕದಲ್ಲಿ ಮಣ್ಣಿನಲ್ಲಿ ಹೂತುಬಿಡುತ್ತಿದ್ದರು. ಕಾಲಕ್ರಮೇಣ ಆ ಬೀಜಗಳು ಚಿಗುರಿ, ಬೆಳೆದು ಮನೆಯ ಸುತ್ತಲೇ ಆಹಾರ ತಯಾರಾಗಲಾರಂಭಿಸಿತು. ಹೀಗೆ ಕೃಷಿ ಹುಟ್ಟಿಕೊಂಡಿದ್ದು. ಹೀಗೆ ಕೃಷಿ ಹುಟ್ಟಿದ್ದು ಮಹಿಳೆಯಿಂದ. ಕೃಷಿಗೆ ಇರುವುದು ಪಿತಾ ಮಹಿಳೆ, ಪಿತಾಮಹನಲ್ಲ. ಮುಂದೆ ಗಂಡಸರು ಕೂಡ ಕೃಷಿ ಕಾರ್ಯದಲ್ಲಿ ತೊಡಗಿದರು. ಇವತ್ತಿಗೂ 60 ಪರ್ಸೆಂಟ್ ಗಿಂತ ಅಧಿಕ ಕೃಷಿ ಕಾರ್ಯಗಳನ್ನು ನಡೆಸುವುದು ಹೆಂಗಸರು.

ಗಾಂಧೀಜಿ ಏನು ಹೇಳುತ್ತಿದ್ದರು ಗೊತ್ತಾ? ಮನುಷ್ಯನಿಗೆ ಇರುವುದು ದಿನಕ್ಕೆ ಇಪ್ಪತ್ತನಾಲ್ಕು ಗಂಟೆಗಳು. 24 ಗಂಟೆಗಳಲ್ಲಿ 8 ಗಂಟೆ ನಿದ್ರೆಗೆ ಸಾಕು. 4 ಗಂಟೆಗಳಷ್ಟು ಮಾತ್ರ ಮನುಷ್ಯ ಕೆಲಸ ಮಾಡಬೇಕು. ಉಳಿದ ಹನ್ನೆರಡು ಗಂಟೆಗೆ ಫ್ರೀ ಟೈಮ್. ಅದು ನಿಮ್ಮ ಯಾವುದೇ ಮನೋರಂಜನೆಯ ಸಮಯ. ನೀವು ಬೇಕಾದರೆ ಹಾಡು ಹೇಳಿ. ಇಲ್ಲದೆ ಹೋದರೆ ಡ್ಯಾನ್ಸ್ ಮಾಡಿ.ಓದಿರಿ, ಬರೆಯಿರಿ, ಆತ ಆಡಿರಿ, ಮಕ್ಕಳ ಜತೆ ಕುಣಿಯಿರಿ. ಏನು ಬೇಕಾದರೂ ಮಾಡಿರಿ. ಒಂದು ಕ್ವಾಲಿಟಿ ಲೈಫು ನಿಮ್ಮದಾಗಲಿ. ಇದು ಗಾಂಧೀಜಿಯವರ ನಿಲುವಾಗಿತ್ತು.

ನಾವೆಲ್ಲ ಅದನ್ನು ಎಲ್ಲಿ ಮಾಡುತ್ತಿದ್ದೇವೆ ಇವಾಗ ? ಮನುಷ್ಯನಿಗೆ ಅರುವತ್ತು ವರ್ಷ ದಾಟಿದರೂ ವಿಶ್ರಾಂತಿಯಿಲ್ಲ. ಮೊಮ್ಮಕ್ಕಳ ಜೊತೆ ಆಟವಾಡಲು ಕೂಡ ಅವರಿಗೆ ಸಮಯವಿಲ್ಲ. ರಿಟೈರ್ಡ್ ಆದ ಮೇಲೆ ಕೂಡ ಮತ್ತೂಂದು ಕಡೆ ಹೋಗಿ ದುಡಿಯುವುದು. ಇವತ್ತು ಕಾರ್ಪೊರೇಟ್ ಪ್ರಪಂಚ 12 ರಿಂದ 16 ಗಂಟೆ ದುಡಿಯುತ್ತದೆ. ಆದರೆ ಇಂತಹ ದುಡಿಮೆಯ ಅಗತ್ಯವಾದರೂ ಏನು?ಇವತ್ತು ಇಷ್ಟು ಕಷ್ಟಪಟ್ಟು ದುಡಿದ ದುಡ್ಡಲ್ಲಿ 20% ಮನೆ ಬಾಡಿಗೆಗೆ ಹೋಗುತ್ತದೆ. ಇನ್ನೊಂದಷ್ಟು ಮೆಡಿಸಿನ್ ಗೆ, ಹಾಸ್ಪಿಟಲ್ ಬಿಲ್ಲಿಗೆ ಹೋಗುತ್ತದೆ. ಲೆಕ್ಕಹಾಕಿ ಕೂಡಿ ಕಳೆದರೆ ಸಿಗುವುದು ‘ ನೆಟ್ ಅನ್ ಹ್ಯಾಪ್ಪಿನೆಸ್ಸ್’ ಮಾತ್ರ. ಮುಂದುವರೆಯುವುದು…

Leave A Reply

Your email address will not be published.