ಮನೆ ಮಾರಾಟಕ್ಕಿದೆ, ದೆವ್ವಗಳೇ ಎಚ್ಚರಿಕೆ !

0 147

ನಮ್ಮ ಕುರಿಗಳು ಸಾರ್ ಕುರಿಗಳು ಖ್ಯಾತಿಯ, ಬಿಗ್ ಬಾಸ್ ಸ್ಪರ್ಧಿ ಕುರಿ ಪ್ರತಾಪ್ ನಟನೆಯ ಹಾಸ್ಯ ಚಿತ್ರ ‘ಮನೆ ಮಾರಾಟಕ್ಕಿದೆ’ ನವೆಂಬರ್ 15 ಕ್ಕೆ ರಂಜಿಸಲು ಬರಲಿದೆ. ಚಿತ್ರತಂಡ ಆದಷ್ಟು ಬೇಗ ಚಿತ್ರ ರಿಲೀಸ್ ಮಾಡಲು ಉದ್ದೇಶಿಸಿದ ಪರಿಣಾಮ ಇನ್ನು ಹದಿನೈದು ದಿನದಲ್ಲಿ ತೆರೆಯ ಮೇಲೆ ಸಿಗಲಿದೆ. ಚಿತ್ರದಲ್ಲಿ ನಾಯಕಿಯಾಗಿ ಶ್ರುತಿ ಹರಿಹರನ್; ಸಾಧು ಕೋಕಿಲ,ಡಾ.ರವಿಶಂಕರ್, ಚಿಕ್ಕಣ್ಣ ಮತ್ತು ಕಾರುಣ್ಯ ರಾವ್ ಅವರು ನಟಿಸಿದ್ದಾರೆ. ಇದು ಪಕ್ಕಾ ಕಾಮಿಡಿ ಮತ್ತು ಹಾರರ್ ಮಿಳಿತ ಚಿತ್ರ.
ಮಂಜು ಸ್ವರಾಜ್ ರವರು ನಿರ್ದೇಶಿಸುತ್ತಿರುವ ಈ ಚಿತ್ರದ ನಿರ್ಮಾಪಕರು ತೆಲುಗಿನ ಎಸ್ .ವಿ.ಬಾಬು ರವರು.
ಬಜೆಟ್ ಚಿಕ್ಕದಾಗಿದ್ದರೂ, ಸ್ಟಾರ್ ಕಾಮಿಡಿ ಸೆಲೆಬ್ರಿಟಿಗಳಿರುವುದರಿಂದ ಚಿತ್ರದ ಮೇಲೆ ವಿಶ್ವಾಸ ಇಡಬಹುದು. ಕುರಿ ಪ್ರತಾಪ್ ಬಿಗ್ ಬಾಸ್ ಮನೆಯಲ್ಲಿರುವುದೂ ಕೂಡಾ ಚಿತ್ರದ ಒಂದು ಪ್ಲಸ್ ಪಾಯಿಂಟ್ ! ಈಗಾಗಲೇ ಲಕ್ಷಾಂತರ ಮಂದಿ ಬಿಗ್ ಬಾಸ್ ನೋಡುತ್ತಿದ್ದಾರಾದ್ದರಿಂದ ಈ ಗಳಿಗೆಯನ್ನು ಬಳಸಿಕೊಳ್ಳಲು ಚಿತ್ರತಂಡ ಪ್ಲಾನ್ ಹಾಕಿಕೊಂಡಿದೆ.


‘ಮನೆ ಮಾರಾಟಕ್ಕಿದೆ‘ ಚಿತ್ರದ ಸಬ್ ಟೈಟಲ್ ಏನು ಗೊತ್ತಾ ?
‘ದೆವ್ವಗಳೇ ಎಚ್ಚರಿಕೆ’
ಈ ಥರ ‘ದೆವ್ವಗಳೇ ಎಚ್ಚರಿಕೆ’ ಎಂದು ಬೋರ್ಡು ಹಾಕಿ ಮನೆ ಮಾರಾಟಕ್ಕಿಟ್ಟರೆ ಯಾರಾದ್ರೂ ಮನೇನ ಕೊಂಡ್ಕೋತಾರ? ಮನೇಲಿ ದೆವ್ವಗಳಿವೆ ಎಂಬುದು ಪಕ್ಕಾ ಆಗುತ್ತದಲ್ಲ? ಅಷ್ಟಕ್ಕೂ, ದೆವ್ವಗಳಿಗೆ ಯಾಕೆ ಎಚ್ಚರಿಕೆ ಕೊಡಬೇಕು? ಮನೆ ಮಾರಾಟವಾದರೆ ಮನುಷ್ಯರು ಬರುತ್ತಾರೆ ವಾಸಕ್ಕೆ. ನೀವು ಜಾಗ ಖಾಲಿ ಮಾಡಿ, ಮನುಷ್ಯರು ನಿಮಗಿಂತ ಡೇಂಜರಸ್,ನಿಮಗೆ ತೊಂದರೆ ಕೊಡಬಹುದೆಂದಾ? ಅಂದರೆ ಈಗ ಆ ಮನೆಯಲ್ಲಿ ಯಾರು ಕೂಡ ವಾಸಿಸುತ್ತಿಲ್ಲವಾ?
ಅಥವಾ, ಮನೆಯನ್ನು ಮಾರುತ್ತಿದ್ದಾರೆ. ದೆವ್ವಗಳು ಅದರಲ್ಲಿ ಈಗಾಗೇ ವಾಸಿಸುತ್ತಿವೆ. ಮಾರಾಟವಾಗಲು ಬಿಡಬೇಡಿ ದೆವ್ವಗಳೇ, ಎಂದು ದೆವ್ವಗಳಿಗೆ ಎಚ್ಚರಿಕೆ ಕೊಡುವುದಕ್ಕ?
ಅಥವಾ, ನಮ್ಮ ‘ಸಾಧು’ ಥರದ, ‘ಕುರಿ’ ಥರದ ಅಥವಾ ‘ಚಿಕ್ಕಣ್ಣ’ ಥರದ ಜಗತ್ ಕಿಲಾಡಿಗಳು ಒಂದು ವೇಳೆ ಮನೆ ಕೊಂಡುಕೊಂಡ್ರೆ, ದೆವ್ವಗಳಿಗೆ ತೊಂದರೆ ಗ್ಯಾರಂಟಿ. ರಾತ್ರಿ ಇಡೀ ಲೈಟ್ ಆನ್ ಮಾಡ್ಕೊಂಡು ಎಣ್ಣೆ ಬಿಟ್ಕೋತಿದ್ದರೆ, ಪಾಪ ದೈವಗಳೆಲ್ಲ ಏನು ಕೆಲಸ ಮಾಡಲಿ? ಇದೆಲ್ಲ ತರಲೆ ಆಲೋಚನೆಗಳು ಈಗಾಗಲೇ ನಮ್ಮ ತಲೆಯಲ್ಲಿ ದೆವ್ವದಂತೆ ಹೊಕ್ಕಿವೆ. ಇದನ್ನು ಕ್ಲಿಯರ್ ಮಾಡಕ್ಕಾದ್ರೂ ಒಮ್ಮೆ ಚಿತ್ರ ನೋಡಿ ಬರಲೇ ಬೇಕು.

ಸುದರ್ಶನ್ ಬಿ.ಪ್ರವೀಣ್, ಬೆಳಾಲು

Leave A Reply