ಕಾರ್ಪೊರೇಟ್ ಪ್ರಪಂಚವೆಂಬ ಡೆತ್ ಟ್ರ್ಯಾಪ್

0 133

ಬದುಕಿನ ಹಾದಿಯಲ್ಲಿ ದುಡಿದು ದುಡ್ಡು ಮಾಡಬೇಕೆಂದು ಹೊರಡುವವನು ವಿಪರೀತವಾಗಿ ಕೆಲಸದ ಹಿಂದೆ ಬೀಳುತ್ತಾನೆ. ಹಿಡಿದ ಪ್ರತಿ ಕೆಲಸವನ್ನು ಶ್ರದ್ದೆಯಿಂದ ಮಾಡಿ ಮುಗಿಸುತ್ತಾನೆ. ಹೀಗೆ ವ್ಯಕ್ತಿಯು ಹಂತಹಂತವಾಗಿ ಜೀವನದಲ್ಲಿ ಮುಂದೆ ಬರುತ್ತಾನೆ. ತಾನು ಕೆಲಸ ಮಾಡುತ್ತಿರುವ ಕಂಪನಿಯಲ್ಲಿ ಒಂದೊಂದೇ ಏಣಿಯನ್ನು ಹತ್ತುತ್ತಾ ಹೋಗುತ್ತಾನೆ. ಒಂದು ಮೆಟ್ಟಲು ಏರಿದಾಗಲೂ ಆತನಿಗೆ ಏನೋ ಖುಷಿ. ಒಂದು ಸಾಧನೆಯ ಭಾವ. ಎಂಥದ್ದೋ ಸಾರ್ಥಕ್ಯತೆ!
ಆದ್ರೆ ladder ನ ಪ್ರತಿ ಮೆಟ್ಟಲು ಏರಿದ ಕೂಡಲೇ ಮೊದಲು ಅನುಭವವಾಗುವುದು ‘ಅರೆ,ಈ ಮೆಟ್ಟಿಲು ಹಿಂದಿನ ಮೆಟ್ಟಿಲಿಗಿಂತ ಕಿರಿದಾಗಿದೆ,ಇಳಿಜಾರಾಗಿದೆ ಮತ್ತು ಅಸ್ಥಿರವಾಗಿದೆಯೆಂದು. ಇಂತಹ ಮೆಟ್ಟಲಿನಲ್ಲಿ ಸರಿಯಾಗಿ ನಿಲ್ಲದೆ ಹೋದರೆ ಜಾರಿ ಬೀಳುವ ಸಂಭವ. ಏಣಿ ಏರುವ ತವಕದಲ್ಲಿನ ಮೊದಲ challenge ನೇ ಜಾರಿ ಆಯತಪ್ಪಿ ಬೀಳುವ ಸಂಭವನೀಯತೆ !
ಒಂದು ಸಲ ಏಣಿಯ ಮೆಟ್ಟಿಲ ಮೇಲೆ ಬ್ಯಾಲೆನ್ಸ್ ಮಾಡಲು ಶುರುಮಾಡಿದರೆ ಆಮೇಲೆ ಅದು ಅಭ್ಯಾಸವಾಗುತ್ತದೆ. ಏಣಿಯ ಮೇಲಿನ ಬ್ಯಾಲೆನ್ಸ್ ಎಷ್ಟು ಕಷ್ಟವೋ ಅದು ಕೊಡ ಮಾಡುವ ಅವಕಾಶಗಳು ಕೂಡ ಅಷ್ಟೇ ವ್ಯಾಪಕ. ಪ್ರತಿ ಏಣಿಯ ಕಿರಿದು ಮೆಟ್ಟಲ ಮೇಲೆ ಕಾಲಿಡುತ್ತಿದ್ದಂತೆ, ನಿಮ್ಮ ಕಣ್ಣ ಮುಂದೆ ಹೊಸದಾದ,ಮತ್ತಷ್ಟು ವಿಸ್ತಾರವಾದ,ದಿಗಂತ ತೆರೆದುಕೊಳ್ಳುತ್ತದೆ. ನಮ್ಮನಿಂತ ಜಾಗದಿಂದಲೇ ನಾವು ದೂರದ ದಿಗಂತಕ್ಕೆ ಕೈಯಚಾಚಬಲ್ಲೆವು.
ಹೀಗೆ ಅವಕಾಶಗಳ ಬೇಟೆಯಲ್ಲಿ ತೊಡಗಿಕೊಂಡ ಬೇಟೆಗಾರ ಪೂರ್ತಿ ಅದರಲ್ಲೇ ಲೀನನಾಗಿ ಹೋಗುತ್ತಾನೆ. ಪ್ರತಿ ಏಣಿ ಏರಿದಾಗಲೂ ಮಗದೊಂದು ಏಣಿ ಏರುವ ಆಶೆ. ಬೇಟೆಯ ಬೆನ್ನು ಹತ್ತಿ ಹೋರಾಟ ಬೇಟೆಗಾರ ಒಂದೊಂದೇ ಬಲಿ ಕೆಡವಿಕೊಂಡು ಹಿಂದುರುಗಿ ನೋಡುತ್ತಾನೆ: ಒಹ್, ಇದ್ಯಾವ ಊರು? ಇದ್ಯಾವ ಹೆಜ್ಜೆ ಗುರುತು ಮೂಡದ ಅಮೆಜಾನ್ ಕಾಡು? ಇಷ್ಟು ದೂರ ಹಿಂದಿರುಗಿ ನೋಡದೆ ನಡೆದ ದಾರಿಯ ಹೆಜ್ಜೆ ಗುರುತು ಮಾಸಿ ಹೋಗಿದೆ. ಓಟದ ಭರದಲ್ಲಿ ಮತ್ತೆ ಹಿಂದಿರುಗಲಾರದೆ ದಿಕ್ಕು ತಪ್ಪಿನಿಂತಿದೆ. ಇಂತಹಾ ಸನ್ನಿವೇಶಗಳು ನಮ್ಮ ಕಾರ್ಪೊರೇಟ್ ವಲಯದಲ್ಲಿ ನಾವು ಕಾಣುತ್ತೇವೆ. ಟ್ರೈನಿ ಅಥವಾ ಅಸಿಸ್ಟೆಂಟ್ ಆಗಿ ಕೆಲಸಕ್ಕೆ ಸೇರುವ ಹುಡುಗ,ನಿಧಾನವಾಗಿ ವರ್ಷ ಕಳೆದಂತೆ ಒಂದೊಂದೇ ಲಾಡರ್ ತನಗರಿವಿಲ್ಲದಂತೆಯೇ ಏರಲು ಪ್ರಾರಂಭಿಸುತ್ತಾನೆ. ಅಸಿಸ್ಟೆಂಟ್ ಆಫೀಸರ್ ,ಆಫೀಸರ್,ಅಸಿಸ್ಟೆಂಟ್ ಮ್ಯಾನೇಜರ್, ಡೆಪ್ಯುಟಿ ಮ್ಯಾನೇಜರ್,ಮ್ಯಾನೇಜರ್, AGM, DGM,GM. ಹೀಗೆ. ಮುಂದೆ ಮುಂದುವರಿದು Director, Sr. Director, Associate Vice president, Vice president- ಹೀಗೆ ಮುಂದುವರೆಯುತ್ತದೆ. ಏಣಿಯ ಮೆಟ್ಟಲಿನಿಂದ ಮತ್ತೊಂದು ಮನುಷ್ಯ ಜಿಗಿಯುತ್ತ ಸಾಗುತ್ತಾನೆ. ಆತನ ಗಮ್ಯ ಏನಿದ್ದರೂ ಹುದ್ದೆಯಿಂದ ಹುದ್ದೆಗೆ ಜಿಗಿಯುವುದು. ಮೊದಮೊದಲು ತನಗರಿವಿಲ್ಲದಂತೆಯೇ ಈ ವರ್ತುಲದೊಳಗೆ ಬಂದ ಮನುಷ್ಯ,ಒಂದೆರಡು ಹುದ್ದೆ ಏರಿದ ನಂತರ ತಾನೇ ಸ್ವಯಂಪ್ರೇರಿತನಾಗಿ ಸ್ಪರ್ಧೆಗೆ ಬಿದ್ದು ಏಣಿಯಾಟಕ್ಕೆತೊಡಗುತ್ತಾನೆ. ಪ್ರತಿ ಜಿಗಿತವೂ ಆತನಿಗೆ ಸಂಪತ್ತು, ಅದರ ಜತೆಗೆ ಬರುವ ಅಂತಸ್ತು, ದೊಡ್ಡ ಕಾರು, unlimited facilities !
ಅಷ್ಟರಲ್ಲಿ ಆತನಿಗೆ ನಲವತ್ತಾಗುತ್ತದೆ. ನೋಡನೋಡುತ್ತಿದ್ದಂತೆ ಐವತ್ತಾಗುತ್ತದೆ ಮತ್ತು ಐವತ್ತೆಂಟಾಗಿ retirement ಕೂಡ ಆಗಿಬಿಡುತ್ತದೆ!
ಇತ್ತ ದುಡಿಯುತ್ತಿದ್ದ ಸಂಧರ್ಭದಲ್ಲಿ ಒಂದು ಕ್ವಾಲಿಟಿ ಲೈಫ್ ತನ್ನ ಅಪ್ಪ-ಅಮ್ಮನ ಹತ್ತಿರ ಕಳೆಯಲಿಲ್ಲ. ಮೊಬೈಲು ಕೈಯಲ್ಲಿ ಇಲ್ಲದೆ, ನಿರ್ಮಾನುಷ್ಯ ತೀರದಲ್ಲಿ ಮೀನು ಹಿಡಿಯಲಿಲ್ಲ. ತನ್ನ ಆಹಾರ ತಾನು ಬೆಳೆದುಕೊಳ್ಳಲಿಲ್ಲ. ಜೀವನದಲ್ಲಿ ಒಂದು ಗಿಡ ಕೂಡ ನೆಡಲಿಲ್ಲ. ತನಗಿಷ್ಟವಾದ ಯಾವುದನ್ನೋ ತಾನು ಮಾಡಲಿಲ್ಲ. ಸಡನ್ ಆಗಿ ಒಂದು ದಿನ ಆತನಿಗೆ ಅರ್ಥವಾಗಿ ಹೋಗುತ್ತದೆ: I lost ಅಂತ !
ತಾನಿಷ್ಟು ದಿನ ದುಡಿದಿದ್ದು,ತನ್ನಮನೆಯ ಬಾಡಿಗೆಗೆ, ಕಾರಿನ ಲೋನಿಗೆ,ಮಗಳ ಓದಿಗೆ,ಮಗನ ಶೋಕಿಗೆ, ಹೆಂಡತಿಯ ಅನಗತ್ಯ ಆಸೆಗಳಿಗೆ ಮತ್ತು ತನ್ನ ಡಯಾಬಿಟೀಸಿ ನ ಟ್ಯಾಬ್ಲೆಟ್ ಗೆ- ಹೀಗೆ ಹರಿದು ಹಂಚಿ ಹೋಗಿರುತ್ತದೆ. ಇಷ್ಟರತನಕ ಹುಚ್ಚು ಕುದುರೆಯ ಹಿಂದೆ ತಿರುಗಿ ನೋಡದೆ ಓಡಿದವನಿಗೆ ಅಲ್ಲಿ ನೋಡಿದರೆ ಏನಿದೆ?. ಅನಾಮತ್ತಾಗಿ ತಿರುಗಿ ನೋಡಿದರೆ ಅಲ್ಲೇನಿದೆ? ಕುದುರೆಯೇ ಮಾಯ. ಇಷ್ಟು ದಿನ ಗಳಿಸಿದ ಯಶಸ್ಸು ಒಂದು ಫೇಕ್ ಯಶಸ್ಸೆಂದು, ಇದು ಫೇಕ್ ವರ್ಲ್ಡ್ ಎಂದು ಅನ್ನಿಸುವಷ್ಟರಲ್ಲಿ ಕಾಲ ಮಿಂಚಿ ಹೋಗಿರುತ್ತದೆ .ಇಷ್ಟರಲ್ಲಾಗಲೇ ಆತ ಕಳೆದುಕೊಂಡಿರುವುದು ತನ್ನ 80% ಆಯುಷ್ಯವನ್ನು!
ಈ ಕಾರ್ಪೊರೇಟ್ ಜನರನ್ನುಕಂಡಾಗ ಅಯ್ಯೋ ಅನ್ನಿಸುತ್ತದೆ. ಇಲ್ಲಿರುವವರೆಲ್ಲರೂ ನಿಯತ್ತಾಗಿ ಕೆಲಸಮಾಡುವವರು. ಪ್ರತಿಯೊಬ್ಬರೂ ದುಡಿದು ದೇಶದ ಜಿಡಿಪಿಯ ವೃದ್ಧಿಗೆ ಸಹಕರಿಸುವವರೇ. ಇವರು ಸಾಮಾನ್ಯರಿಗಿಂತ ಜಾಸ್ತಿ ಇನ್ ಕಾಮ್ ಟ್ಯಾಕ್ಸ್ ಕಟ್ಟುತ್ತಾರೆ. ನಮ್ಮ ದೇಶದ ಎಕ್ಸ್ಪೋರ್ಟ್ ನಲ್ಲಿದೆ ಇವರ ದೊಡ್ಡ ಪಾಲು. ಇವರೆಲ್ಲರೂ ದೊಡ್ಡ ಓದು ಓದಿಕೊಂಡವರು. ತುಂಬಾ ಬುದ್ಧಿವಂತರು. ಎಲ್ಲ ವಿಷಯಗಳ ಬಗ್ಗೆಯೂ ತಕ್ಷಣದ ಅಪ್ಡೇಟ್ ಉಳ್ಳವರು. ಆದರೂ ಯಾಕೆ ಇವರಿಗೆ ವಾಸ್ತವ ಕೊನೆಯ ತನಕ ಅರ್ಥವಾಗಲಿಲ್ಲವೆಂದು ಬಲ್ಲಿರಾ?
ಮೊದಲನೆಯದಾಗಿ ಕಾರ್ಪೊರೇಟ್ ವ್ಯಕ್ತಿತ್ವಗಳು ಮಟೀರಿಯಾಲಿಸ್ಟಿಕ್ ಜನರು. ಭೌತಿಕ ವಸ್ತು ಸುಖಗಳೆಂದರೆ ಇವರಿಗೆ ಬಲು ಪ್ರಿಯ. ನಿಜಕ್ಕೂ ಇವರೆಲ್ಲ ಮೊದಲು ಈ ರೀತಿ ಇರಲಿಲ್ಲ. ಇವರೆಲ್ಲರಿಗೂ ಮೊದಲೆಲ್ಲ ತಮ್ಮ ಹಳ್ಳಿ, ತಮ್ಮ ಊರು,ತಮ್ಮ ಊರಿನ ಆಹಾರ ಪದ್ಧತಿ, ವರ್ಷಕ್ಕೊಮ್ಮೆ ನಡೆಯುವ ಊರ ಜಾತ್ರೆ-ಎಲ್ಲದರ ಬಗ್ಗೆಯೂ ಪ್ರೀತಿ ಇತ್ತು. ಆದರೆ ಬರಬರುತ್ತ ಇವರ ಸಂಬಳ ಜ್ವರದಂತೆ ಏರಿತು. ಸಂಬಳಕ್ಕೆ ತಕ್ಕಂತೆ ಕ್ರೆಡಿಟ್ಟು-ಕ್ರೆಡಿಟ್ಟು ಕಾರ್ಡು ಬಳಕೆ ಹೆಚ್ಚಿತು. ಜತೆಗೆ ಉನ್ನತ ಹುದ್ದೆಗೆ ಸ್ಪರ್ಧೆ ಹುಟ್ಟಿತು. ಇದು ಆತ/ಆಕೆ ತನ್ನ ಸುತ್ತಲ ಪರಿಸರದಿಂದ ಕಲಿತ ಪಾಠ. ಮನಸ್ಸು conditioning ಗೆ ಒಳಪಟ್ಟಿತು. ಒಬ್ಬನನ್ನು ನೋಡಿ ಇನ್ನೊಬ್ಬ.ಆತನನ್ನು ನೋಡಿ ಮತ್ತೊಬ್ಬ.ತನ್ನ ಜೊತೆಗಾರ/ಗಾರ್ತಿ ಉನ್ನತ ಹುದ್ದೆಗೆ ಪ್ರಯತ್ನ ಮಾಡುವಾಗ ಸಹಜವಾಗಿ ಉದ್ರೇಕಕ್ಕೆ ಒಳಗಾದ ಮನಸ್ಸು competition ಗೆ ಮೊದಲಾಗುತ್ತದೆ. ನೋಡನೋಡುತ್ತಲೇ ತಾನೇ ಹೆಣೆದ ಬಲಿಷ್ಠ ಬಲೆಯ ಒಳಗೆ ಜೇಡ ತಾನೇ ಬಂಧಿ.
ಕಾರ್ಪೊರೇಟ್ ವ್ಯಕ್ತಿಗಳು ಏನು ಮಾತಾಡಿದರು ಅದು ಯಾವಾಗಲೂ ತಮ್ಮ ತಮ್ಮ ವೃತ್ತಿ ಸಂಬಂಧಿತ ವಿಷಯಗಳ ಬಗ್ಗೆ ಮಾತ್ರ ಮಾತಾಡುತ್ತಿರುತ್ತಾರೆ.
“ಹರೀಶ್ ಐಬಿಎಂ ಬಿಟ್ರಂತೆ. ಬಾಷ್ ಸೇರಿದ್ರಂತೆ”
“ಹೀ ಐಸ್ ಇನ್ ಆ ಬಿಗ್ ಪೊಸಿಷನ್ ನೌ”
“ಹೀ ಜಾಯಿನ್ಡ್ ಆಸ್ ವೈಸ್ ಪ್ರೆಸಿಡೆಂಟ್”
“ಮೊನ್ನೆ ಎಂ ಡಿ ಜತೆ ಗೆಟ್ ಟುಗೆದರ್ ಇತ್ತು” ಹೀಗೆ ಒಬ್ಬೊಬ್ಬರ ಬಗ್ಗೆ ಮಾತು ಶುರುವಾಗುತ್ತದೆ. ಕಂಪನಿಯ ಬಾಟಮ್ ಲೈನ್,ಟಾಪ್ ಲೈನ್,ಮಾರ್ಜಿನ್,ಅಬಿಟಾ (EBITA),ಗ್ರೋಥ್,ಪೊಸಿಷನ್,ಪ್ಯಾಕೇಜ್,ಇನ್ಕ್ರಿಮೆಂಟ್,ಪ್ರಮೋಷನ್,ಅಪ್ಪ್ರೈಸಲ್,LTA ,ಇತ್ಯಾದಿ ವೊಕ್ಯಾಬ್ಯುಲರಿಗಳಿಲ್ಲದೆ ಅವರ ಮಾತು ಶುರುವಾಗುವುದಿಲ್ಲ. ಅಥವಾ ಮುಗಿಯುವುದಿಲ್ಲ. They are structured. They are conditioned.
ಇಂತಹುದೇ ಒಂದು ಗುಂಪು ಮಂಗಳೂರಿನ ತಾಜ್ ಮಹಲ್ ಹೋಟೆಲಿನ ಮುಂದು ಒಂದು ಸಂಜೆ ನೆರೆದಿತ್ತು. ಪ್ರತಿಯೊಬ್ಬರೂ ಹೈಲಿ ಕ್ವಾಲಿಫಿಎಡ್ ಜನರು. ವಯಸ್ಸು ೫೦ ದಾಟಿದರೂ ಇನ್ನೂ ಅದ್ಭುತವಾಗಿ ಡ್ರೆಸ್ ಸೆನ್ಸ್ ಮೇಂಟೈನ್ ಮಾಡಿದ್ದಾರೆ. ಲಕ್ಷದಷ್ಟು ಸಂಬಳ ಬರುತ್ತಿದೆ. ಹಾಗೆ ಹೀಗೆ ಲೋಕಾಚಾರ ಮಾತಾಡಿದೆವು. ಸಡನ್ ಆಗಿ ಕೇಳಿದೆ.”Are you happy?”
”ಯಸ್” ಎಲ್ಲರು ಒಕ್ಕೊರಲಿನಿಂದ ಹೇಳಿದರು. ತಮ್ಮ ತಮ್ಮ ಕಥೆ ಹೇಳಿಕೆಯಿಂದರು. ಮಗನ ಬುದ್ದಿವಂತಿಕೆ, ಮಗಳ ಮಾಡುವೆ, ಮಾಡಿದ ಆಸ್ತಿ, ಹಾಕಿಕೊಂಡ ಪ್ರಾಜೆಕ್ಟ್ಸ್… ಎಲ್ಲ.” ನಾನು ಅವರಿಂದ ಇಂತಹಾ ಉತ್ತರ expect ಮಾಡಿರಲಿಲ್ಲ.
“ಫೈನಾನ್ಸಿಯಲ್ ಬಿಟ್ಟು ಬೇರೆ ಏನು ಗೋಲ್ ಇಲ್ಲವೇ ನಿಮಗೆ” “ನಿಮಗೆ ಏನೊಂದೂ ಹಾಬಿ ಇಲ್ಲವಾ. ಏನಾದರೂ ಆರ್ಥಿಕವಲ್ಲದ, ನಿಮ್ಮಮನಸಂತೋಷಕ್ಕೆ ಏನು ಕೂಡ ಮಾಡಬೇಕೆಂದುಕೊಂಡ ಪ್ರಾಜೆಕ್ಟ್ ಬಗ್ಗೆ ಆಸಕ್ತಿ ಇಲ್ಲವ? ಸ್ವಲ್ಪ ಕೆಣಕಿ ಕೇಳಿದೆ.
ಖುಷಿಯಾಗಿ ಬೆಣ್ಣೆ ಹಾಕಿದ ಮಸಾಲಾ ದೋಸೆ ತಿಂದು ನೆಮ್ಮದಿಯಾಗಿ ಮನೆಗೆ ಹೋಗಬೇಕೆಂದುಕೊಂಡ ಬಹುತೇಕರಲ್ಲಿ ಒಂದು ವಿಷಾದದ ಛಾಯೆ.ಯಾರೊಬ್ಬರೂ ತಾನೇನಾಗಬೇಕೆಂದು ಕೊಂಡಿದ್ದರೋ ಅದಾಗಿರಲಿಲ್ಲ. ಇಲ್ಲಿಂದ ಬಿಟ್ಟು ಹೋಗಲಾಗದೆ, ಇರಲೂ ಆಗದೆ ಇಬ್ಬಂದಿಯಲ್ಲಿ ಸಿಕ್ಕಿ ಬದುಕಿರುವವರೇ. ಅವರ ಬದುಕಿನ ಕಥೆ ಕೇಳುತ್ತಿದ್ದರೆ (ಇನ್ನೊಂದು ಸಲ ಅದರ ಬಗ್ಗೆ ಸಾವಕಾಶವಾಗಿ ಮಾತಾಡೋಣ) ಅದು ditto ನನ್ನ ಜೀವನವನ್ನೇ ಹಂಗಿಸುವಂತಿತ್ತು. ಭವಿಷ್ಯ ಭಯಪಡಿಸುವಂತಿತ್ತು. ಸೂರ್ಯ ಬೇಸರದಿಂದಲೇ ಪಶ್ಚಿಮದ ಸಮುದ್ರದಲ್ಲಿ ಮುಳುಗಲು ಅವಸರಿಸುತ್ತಿದ್ದ. ಅವರ ಆ ಸಂಜೆಯನ್ನು ಹಾಳುಮಾಡಿದ ಪಾಪ ಹೊತ್ತುಕೊಂಡು ನಾನು ಅಲ್ಲಿಂದ ತೆರಳಿದೆ.
ಮುಕ್ತಾಯ:
ಮನುಷ್ಯ ಕ್ಯಾಲ್ಕುಲೇಟರ್ ನ ತರಹ ಬದುಕುವುದು ಎಷ್ಟು ಸರಿ ಅನ್ನುವುದಷ್ಟೇ ಇಲ್ಲಿನ ಪ್ರಶ್ನೆ. ಬೆಳಿಗ್ಗೆ ಒಂದು ವಾಕಿಂಗ್, ಮತ್ತೆ ದಿನವಿಡೀ stressful ಕೆಲಸ. ರಾತ್ರಿ ನಿಯಮಿತವಾಗಿ ಉಂಡು ಮಲಗಿದರೂ ತಕ್ಕಮಟ್ಟಿಗೆ ಆರೋಗ್ಯವನ್ನಿಟ್ಟುಕೊಳ್ಳಬಹುದೇನೋ. ಆದರೆ ಪರಿಪೂರ್ಣ ಅರೋಗ್ಯ ಹೊಂದಲು ಸಾಧ್ಯವಾ?ನಾವುಗಳೆಲ್ಲ ನಾವೇ ಹಾಕಿಕೊಂಡ ಆರ್ಥಿಕ ಬೇಲಿಯ ಒಳಗೆ ಬಂಧಿಯಾಗಿ ಜೀವಿಸಿ ಆಯುಸ್ಸು ಕಳೆಯಬೇಕಾ?
ಒಟ್ಟಾರೆ ಪ್ರಕೃತಿಯ ಭಾಗವಾಗಿರಬೇಕು ನಮ್ಮ ಕ್ರಿಯೆಗಳು. ಬೆಳಿಗ್ಗೆ ಎದ್ದು ಮಾಡುವ ಜಿಮ್ ಒಳ್ಳೆಯದೇ ಇರಬಹುದು. ಅದಕ್ಕಿಂತಲೂ ಅತ್ಯುತ್ತಮವಾದುದು ಪ್ರಕೃತಿ ಸಹಜ ಕ್ರಿಯೆಗಳಾದ ಕೃಷಿ ಕೆಲಸಗಳಲ್ಲಿ ತೊಡಗುವಿಕೆ, ನಡಿಗೆ, ಆಟೋಟ ಸ್ಪರ್ಧೆಗಳಲ್ಲಿ ಭಾಗವಹಿಸುವಿಕೆ. ಒಟ್ಟಾರೆ ಏಕತಾನತೆಯನ್ನು ಮುರಿಯುವುದೇ ಅರೋಗ್ಯ-ನೆಮ್ಮದಿಯ ಗುಟ್ಟು!
ಆಹಾರವಿಲ್ಲದೆ ಇದ್ದರೂ ನಾವು ದೀರ್ಘಾಯುಷಿಯಾಗಿ ನೆಮ್ಮದಿಯಾಗಿ ಬಾಳಬಹುದು. ಡಯಟೀಷಿಯನ್ನರು ಬರುವ ಮೊದಲೇ ಜನರು ನೆಮ್ಮದಿಯ ಜೀವನ ನಡೆಸುತ್ತಿದ್ದರು. ಯಾವಾಗ ಕಾರ್ಪೊರೇಟ್ ಕೊಡುಗೆಯಾದ ಚಿಂತೆಯೆಂಬುದು ಮನುಷ್ಯನ ದಿನಚರಿಯ ಭಾಗವಾಗುತ್ತಿದೆಯೋ, ಆವಾಗ ಬದುಕು,ಆರೋಗ್ಯ ನೆಮ್ಮದಿ ಖಲ್ಲಾಸ್.
ಮನಸ್ಸನ್ನು ಅನಗತ್ಯ ಕಟ್ಟುಪಾಡುಗಳ ಸಂಕೋಲೆಯಿಂದ ಬಂಧಿಸಿಕೊಳ್ಳದೆ,ಯಾವುದೇ ಬಿಗಿ ಷೆಡ್ಯೂಲಿಗಳಲ್ಲಿ ನಮ್ಮನ್ನು ನಾವು ಬಿಗಿಸಿಕೊಂಡ ನಡೆಯದೆ, ಬದುಕನ್ನ As is -ಹೇಗಿದೆಯೋ ಹಾಗೆ ಬದುಕುವುದರ ಬಗ್ಗೆ ಒಂದಷ್ಟು ಚಿಂತಿಸಿ. ಹಾಗೆಯೇ “ಸೋಮಾರಿಯಾಗಿರಿ, ಬಹುಕಾಲ ಜೀವಿಸಿ” ಪುಸ್ತಕ ಓದಿ.

ಸುದರ್ಶನ್ ಬಿ.ಪ್ರವೀಣ್ ,ಬೆಳಾಲು

Leave A Reply