ಕೋರೋನಾ ಕಷ್ಟಗಳ ನಡುವೆಯೇ ಪ್ರಾಮಾಣಿಕತೆ | ದಿನಸಿ ಕಿಟ್ ನಲ್ಲಿ ಸಿಕ್ಕಿದ ಚಿನ್ನದ ಉಂಗುರ ಹಿಂತಿರುಗಿಸಿದ ಬಾಲಕ | ಆತನ ಮನೆಗೆ ತೆರಳಿ ಸನ್ಮಾನಿಸಿದ ಶಾಸಕ ಸಂಜೀವ ಮಠಂದೂರು

ಪುತ್ತೂರು, ಎ.16 : ಲಾಕ್‌ಡೌನ್ ನ ಈ ಕಷ್ಟದ ಸಂದರ್ಭದಲ್ಲಿ ಕೂಡಾ ಕುಟುಂಬವೊಂದು ಪ್ರಾಮಾಣಿಕತೆ ಮೆರೆದ ಘಟನೆಗೆ ಪುತ್ತೂರು ಸಾಕ್ಷಿಯಾಗಿದೆ.
ಸಂಕಷ್ಟದಲ್ಲಿರುವವರಿಗೆ ಶಾಸಕರ ವಾರ್ ರೂಂ ಮೂಲಕ ಅಗತ್ಯ ವಸ್ತುಗಳ ಆಹಾರ ಸಾಮಗ್ರಿ ವಿತರಿಸುವ ಕಾರ್ಯಕ್ರಮ ಬಗ್ಗೆ ಎಲ್ಲರಿಗೂ ತಿಳಿದೇ ಇದೆ. ಹೀಗೆ ವಿತರಿಸಲಾದ ಆಹಾರದ ಕಿಟ್‌ನಲ್ಲಿ ಸಿಕ್ಕಿದ ಚಿನ್ನದ ಉಂಗುರವೊಂದು ಪುತ್ತೂರಿನ ಬಾಲಕನೋರ್ವನಿಗೆ ಸಿಕ್ಕಿತ್ತು.

ಆತ ಅದನ್ನು  ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾನೆ. ಪುತ್ತೂರಿನ ಕರ್ಮಲ ನಿವಾಸಿ  ಹನೀಫ್ ಎಂಬವರ ಪುತ್ರ 12 ವರ್ಷದ ಹುಕಾಸ್ ಎಂಬವನೇ ಈ ಬಾಲಕ.

ಪುತ್ತೂರಿನ ಬಂಟರ ಸಂಘದ ವತಿಯಿಂದ ನೀಡಲಾದ ಆಹಾರದ ಕಿಟ್ ಅನ್ನು ಹನೀಫ್‌ರ ಮನೆಗೆ ವಾರದ ಹಿಂದೆ ಶಾಸಕರ ವಾರ್ ರೂಂ ಮುಖಾಂತರ ತಲುಪಿಸಲಾಗಿದೆ. ಈ ಕಿಟ್ ಪ್ಯಾಕ್ ಮಾಡುವ ಸಂದರ್ಭದಲ್ಲಿ ರಾಮಚಂದ್ರ ಘಾಟೆ ಎಂಬವರ ಚಿನ್ನದ ಉಂಗುರವೊಂದು ಎಲ್ಲೋ ಕಳೆದು ಹೋಗಿತ್ತು. ಆದರೆ ಆ ಚಿನ್ನದ ಉಂಗುರ ಬೇರೆಲ್ಲೂ ಕಳೆದುಹೋಗದೆ ಮೊನ್ನೆ ವಿತರಿಸಿದ ಕಿಟ್ ನಲ್ಲಿ ಸೇರಿಕೊಂಡಿತ್ತು. ಮನೆಯಲ್ಲಿ ಕಿಟ್ ತೆರೆದ ಸಂದರ್ಭ ಹುಕಾಸ್‌ಗೆ ಈ ಉಂಗುರ ಸಿಕ್ಕಿತ್ತು.

ಆತ aa ಕೂಸ್ಥಳೀಯ ನಗರಸಭಾ ಸದಸ್ಯೆ ಪ್ರೇಮಲತಾ ನಂದಿಲ ಅವರಿಗೆ ಮಾಹಿತಿ ನೀಡಿದ್ದಾನೆ. ಹಾಗೆಯೇ ಅವರ ಮೂಲಕ ಉಂಗುರದ ವಾರಸುದಾರರನ್ನು ಪತ್ತೆ ಹಚ್ಚಿ ಉಂಗುರವನ್ನು ವಾರಸುದಾರರಾದ ರಾಮಚಂದ್ರ ಘಾಟೆಯವರಿಗೆ  ಹಿಂದಿರುಗಿಸಲಾಯಿತು.

ಈ ಪ್ರಾಮಾಣಿಕತೆ ಮೆರೆದ ಘಟನೆ ಬೆಳಕಿಗೆ ಬರುತ್ತಿದ್ದಂತೆ ಶಾಸಕ ಸಂಜೀವ ಮಠಂದೂರು ಗುರುವಾರ ಆತನ ನಿವಾಸಕ್ಕೆ ಕೃತಜ್ಞತೆ ಸಲ್ಲಿಸಲು ತೆರಳಿದರು. ಶಾಲು ಹೊದಿಸಿ, ಮಾಲಾರ್ಪಣೆ ಮಾಡಿ, ಆಹಾರ ಕಿಟ್ ವಿತರಿಸಿ ಸನ್ಮಾನಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ನಗರಸಭಾ ಸದಸ್ಯೆ ಪ್ರೇಮಲತಾ ನಂದಿಲ, ಬಿಜೆಪಿ ನಗರ ಮಂಡಲ ಉಪಾಧ್ಯಕ್ಷ ರಾಧಾಕೃಷ್ಣ ನಂದಿಲ, ರಾಮದಾಸ್ ಹಾರಾಡಿ ಮತ್ತಿತರ ಗಣ್ಯರು ಮತ್ತು ನೆರೆಕರೆಯವರು ಉಪಸ್ಥಿತರಿದ್ದರು.

Comments are closed.